Friday, June 14, 2024

ಸತ್ಯ | ನ್ಯಾಯ |ಧರ್ಮ

ತೇಜಸ್ವಿಯ ಹಾದಿಯಲ್ಲಿ ಅಂಬೆಗಾಲಿಡುತ್ತಾ..

ಒಂದು ತಲೆಮಾರನ್ನು ಎಚ್ಚರಿಸಿ ಅವರನ್ನು ಇನ್ನಿಲ್ಲದಂತೆ ಪ್ರಭಾವಿಸಿದ, ಪರಿಸರ ಪ್ರೀತಿಯಿಂದ ಈ ನೆಲದ ಕೌತುಕಗಳನ್ನು ಸರಳವಾಗಿ ಬರೆದು ಬರೆದಂತೆ ಬದುಕಿದವರು ತೇಜಸ್ವಿಯವರು. ಪರಿಸರ ಹಾಗೂ ಮಾನವ ಸಂಬಂಧಗಳ ನಡುವಿನ ಎಳೆಗಳನ್ನು ನಮಗೆ ಮನದಟ್ಟು ಮಾಡಿಸಿದ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಪೂರ್ಣಚಂದ್ರ ತೇಜಸ್ವಿಯವರು ಇಂದು ನಮ್ಮೊಡನಿದ್ದಿದ್ದರೆ ಅವರ 84 ರ ವಸಂತವನ್ನು ನಾವು ಸಂಭ್ರಮಿಸುತ್ತಿದ್ದೆವು. ನಿಜ. ಇಂದು ಸೆ. 8. ಪೂರ್ಣಚಂದ್ರ ತೇಜಸ್ವಿಯವರ ಜನ್ಮ ದಿನ. ಈ ಸಂಧರ್ಭದಲ್ಲಿ ಪೀಪಲ್‌ ಮೀಡಿಯಾ ತೇಜಸ್ವಿಯವರನ್ನು ಪ್ರೀತಿ ಮತ್ತು ಗೌರವದಿಂದ ನೆನಪಿಸಿಕೊಳ್ಳುತ್ತಿದೆ. ಈ ಪ್ರಯುಕ್ತ ಮಹಾ ಸಾಹಿತಿಯ ಸಹಜವಾದ ಒಳನೋಟವೊಂದನ್ನು ʼಪೀಪಲ್‌ ಮೀಡಿಯಾʼಕ್ಕೆ ಮೊಗೆದು ಕೊಟ್ಟಿದ್ದಾರೆ ಅವರ ಪರಿಸರದ ಹಾದಿಯಲ್ಲಿ ಅಂಬೆಗಾಲಿಡುತ್ತಿರುವ ಕೃಷಿಕ ಲೇಖಕ, ನರೆಂದ್ರ ರೈ ದೇರ್ಲ.

ಸರ್, ನಮಗೂ ನಿಮಗೂ ಇರುವ ಒಂದು ವ್ಯತ್ಯಾಸ ಅಂದರೆ ಸೇತುವೆ ದಾಟುವ ಪ್ರಸಂಗ ಬಂದಾಗ ನಾವು ನೇರವಾಗಿ ದಾಟಿ ಊರು ಸೇರುತ್ತೇವೆ. ನೀವು ಹಾಗಲ್ಲ, ಸೇತುವೆ ಮೇಲೆ ನಿಂತು ಕೆಳಗಿಳಿಯುತ್ತೀರಿ. ನೀರೊಳಗಿನ ಮೀನು ಏಡಿ ಕಪ್ಪೆಗಳನ್ನು ಗಮನಿಸುವಿರಿ. ಅವುಗಳ ಬದುಕಿನ ಬಗೆಯನ್ನು ಅವಲೋಕಿಸುವಿರಿ. ಈ ದೃಷ್ಟಿಯನ್ನು ನೀವು ಹೇಗೆ ರೂಢಿಸಿಕೊಂಡಿದ್ದೀರಿ ಎಂಬುದು ನನ್ನ ಪ್ರಶ್ನೆ ಅಲ್ಲ. ನಮ್ಮಲ್ಲಿ ನಮ್ಮ ಮುಂದಿನ ಮಕ್ಕಳಿಗೆ ಈ ಆಸಕ್ತಿ ಇಲ್ಲವಲ್ಲ ಎಂಬ ವ್ಯಥೆ ನನ್ನದು. ಇದರ ಪರಿಣಾಮ ಏನಾಗಬಹುದು?- ಇದು ತೇಜಸ್ವಿ ಅವರಿಗೆ ನಾನು ಅಂದು ಕೇಳಿದ್ದ ಒಂದು ಪ್ರಶ್ನೆ .ಅದಕ್ಕೆ ತೇಜಸ್ವಿ ಕೊಟ್ಟ ಉತ್ತರವೇ ಒಂದು ಲೇಖನವಾಗುವಷ್ಟು ಇದೆ. ಆ ಉತ್ತರದ ಭಾಗ ನಮ್ಮ ಇವತ್ತಿನ ಅನೇಕ ಮಕ್ಕಳಿಗೆ ಅವರ ಹೆತ್ತವರಿಗೆ ದಿಕ್ಸೂಚಿ ಆಗಬಹುದು.

ಪೂರ್ಣಚಂದ್ರ ತೇಜಸ್ವಿ

ತೇಜಸ್ವಿ ಕೊಟ್ಟ ಉತ್ತರವನ್ನು ಒಮ್ಮೆ ಗಮನಿಸಿ .”ನೀವು ಊರು ಸೇರುವ ಉದ್ದೇಶ ಇಟ್ಟುಕೊಂಡು ಹೊರಡುತ್ತೀರಿ. ನನಗೆ ಆ ಉದ್ದೇಶವೇ ಇರುವುದಿಲ್ಲ. ಈ ಅರ್ಥದಲ್ಲಿ ನಾನು ಒಂದು ರೀತಿ ಹರಾಮಿ ಮನುಷ್ಯ. ಈ ಮನುಷ್ಯ ಪ್ರಾಣಿ ಪ್ರಕೃತಿಯ ಉದ್ದೇಶ ಪೂರ್ವಕ ಸೃಷ್ಟಿ ಎಂಬುದೇ ಸುಳ್ಳು. ಉದ್ದೇಶಗಳೆಲ್ಲ ನಾವೇ ಆರೋಪಿಸಿಕೊಂಡಿರುವುದು. ಈ ಮಿಥ್ಯಾರೋಪವನ್ನು ನೀವು ಬಿಟ್ಟ ಮಾರನೆಯ ಕ್ಷಣವೇ ನಿಮಗೊಂದು ವಿಶ್ವರೂಪ ಗೋಚರವಾಗುತ್ತದೆ. ನನ್ನ ಹೇಳಿಕೆಯ ಸತ್ಯಾಂಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರಯೋಗ ಮಾಡಿ ಪರೀಕ್ಷಿಸ ಬಹುದು. ನಮ್ಮ ಮಕ್ಕಳಲ್ಲಿ ಈ ದೃಷ್ಟಿ ಇಲ್ಲವಲ್ಲ ಎಂದು ನೀವು ಹೇಳುವುದು ಸರ್ವಥಾ ತಪ್ಪು. ಈ ದೃಷ್ಟಿ ಯಾರಲ್ಲಾದರೂ ಇವತ್ತಿಗೂ ಇದ್ದರೆ ಅದು ನಮ್ಮ ಮಕ್ಕಳಲ್ಲಿ ಮಾತ್ರ. ಪ್ರತಿಯೊಬ್ಬ ಮಗುವನ್ನು ಹಿರಿಯರೇ, ಹಿರಿಯರು ಕಟ್ಟಿರುವ ನಾಗರಿಕತೆಯೇ ಹಾಳು ಮಾಡುತ್ತಿರುವುದು. ದೊಡ್ಡವರು ತಮ್ಮ ಹುಚ್ಚಿನ ಅಚ್ಚಿಗೆ ತಕ್ಕಂತೆ ಮಕ್ಕಳನ್ನು ಎರಕಹೊಯ್ಯಲು ಪ್ರಯತ್ನಿಸುತ್ತಿದ್ದಾರೆ .ಇಂಥ ಅಪ್ಪ ಅಮ್ಮಂದಿರನ್ನು ಪರಕಾಯ ಪ್ರವೇಶ ಮಾಡಲೆಸಗುವ ಬೆಂತರಗಳಿಗೆ ಹೋಲಿಸಬಹುದು .ತಮ್ಮ ಹಿಂಗದ ಆಸೆ ಅಭೀಕ್ಷೆಗಳಿಗೆ ಮಕ್ಕಳಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ .ಹೀಗಾಗಿ ಮಕ್ಕಳು ತಮ್ಮ ಸ್ವಾಭಾವಿಕ ಬದುಕನ್ನು ಬದುಕದೆ ಅವರು ದೊಡ್ಡವರಾಗುವ ಹೊತ್ತಿಗೆ ಇನ್ನೊಂದು ಪರಾಕಾಯ ಪ್ರವೇಶ ಮಾಡಲೆಸಗುವ ಬೆಂತರಗಳಾಗಿಯೇ ರೂಪುಗೊಳ್ಳುತ್ತಾರೆ. ಎಷ್ಟೆಷ್ಟು ಮಕ್ಕಳಿಗೆ ಹಿಂಸೆ ಕೊಡುತ್ತಾರೆ, ಎಷ್ಟೆಷ್ಟು ಮಕ್ಕಳನ್ನು ಹೋಮ್‌ವರ್ಕಿನ ಹೆಣ ಭಾರದಲ್ಲಿ ಹುಗಿಯುತ್ತಾರೆ, ಎಷ್ಟೆಷ್ಟು ಟೈ ಕಟ್ಟಿಸಿ ಬೂಟ್ಸ್ ಹಾಕಿಸಿ ಗೋಳಾಡಿಸುತ್ತಾರೆ ಅಷ್ಟಷ್ಟು ಆ ಶಾಲೆಗಳನ್ನು ಅತ್ಯುತ್ತಮ ಶಾಲೆಗಳೆಂದು ಪರಿಗಣಿಸಲಾಗುತ್ತದೆ. ಅಂತಹ ಶಾಲೆಗೆ ಹೆಚ್ಚಿನ ಕ್ಯಾಪಿಟೇಶನ್ ಶುಲ್ಕವು ದೊರೆಯುತ್ತದೆ. ಇಂಥ ಪೀಳಿಗೆಯ ಪರಿಣಾಮ ಏನಾಗಬಹುದೆಂದು ನೀವೇ ಊಹಿಸಿ”- ಇದು ತೇಜಸ್ವಿ ನನಗೆ ಕೊಟ್ಟ ಸುದೀರ್ಘ ಉತ್ತರ.

ಹೌದು, ನಾವಿವತ್ತು ನಮ್ಮ ಮಕ್ಕಳಿಗೆ ಮನೆಯಂಗಳದಲ್ಲಿರುವ ಒಂದು ಮಾವಿನ ಮರದ ತುದಿಗೆ ಬೀಳುವ ಮಳೆ ನೀರು ಎಲೆಯಿಂದ ಎಲೆಗೆ ಪಲ್ಟಿ ಹೊಡೆದು ರೆಂಬೆಯಿಂದ ರೆಂಬೆಗೆ ಜಾರಿ, ಕೊಂಬೆಯಿಂದ ಕೊಂಬೆಗೆ ಜಿನುಗಿ ಬುಡಕ್ಕೆ ತಲುಪಲು ಎಷ್ಟು ಹೊತ್ತು ಬೇಕು ಎಂದು ಹೇಳಿಕೊಡುವುದಿಲ್ಲ. ಅದು ತರಗೆಲೆಯ ಹಾಸಿಗೆಯ ಅಡಿಯಲ್ಲಿ ಇಂಗಿ ಅಂತರ್ಜಲವನ್ನು ಹೇಗೆ ವೃದ್ಧಿಸುತ್ತದೆ ಎಂಬುದನ್ನು ಕಲಿಸಿಕೊಡುವುದಿಲ್ಲ. ಕುದುರೆ ಕನ್ನಡಕ ಹಾಕಿ ಮೊಬೈಲ್ ಟಿವಿ ಮುಂತಾದವುಗಳಿಗೆ ಅಂಟಿಕೊಳ್ಳುವ ಚಟದಿಂದ ಖಂಡಿತವಾಗಿಯೂ ನಮ್ಮ ಮಕ್ಕಳು ಬೆಂತರಗಳಾಗುತ್ತಿವೆ ಹೊರತು ಮನುಷ್ಯರಾಗುವುದಿಲ್ಲ. ಶಿವರಾಮ ಕಾರಂತರ ‘ಬಾಲವನ’ ತೇಜಸ್ವಿಯವರ ‘ನಿರುತ್ತರ’ ತೆರೆದಿಟ್ಟ ಒಂದು ಪುಸ್ತಕದ ಹಾಗೆಯೇ. ಯಾವುದೋ ಮರಕ್ಕೆ ಅಂಟಿದ ಇನ್ಯಾವುದೋ ಜಾತಿಯ ಬಳ್ಳಿ ಮರತಬ್ಬಿ ತುದಿ ಏರಿದ ಪರಿಯನ್ನು ಗಮನಿಸುವ ಶಕ್ತಿ ನಾವು ಕಳಕೊಂಡಾಗ ನಾವು ಜೀವನದಲ್ಲಿ ಖಂಡಿತಾ ಪಳಗಲಾರೆವು. ತೇಜಸ್ವಿ ಆರಂಭದ ಹಂತದಲ್ಲಿ ಕಥೆ, ಕಾದಂಬರಿ, ಕವನಗಳನ್ನು ಹೆಚ್ಚು ಹೆಚ್ಚು ಬರೆದವರು .ಕೊನೆ ಕೊನೆಗೆ ಅವರು ಪೂರ್ಣ ತೊಡಗಿಕೊಂಡದ್ದು, ಹೆಚ್ಚು ಹೆಚ್ಚು ಬಗೆದು ಬರೆದು ಕೊಟ್ಟದ್ದು ಪ್ರಕೃತಿ ಪರಿಸರದ ಬಗ್ಗೆ. ಅವರು ಹೀಗೆ ಅಭಿವ್ಯಕ್ತಿ ಮಾಧ್ಯಮವನ್ನು ಬದಲಾಯಿಸಿಕೊಂಡ ಬಗ್ಗೆ ನಾನೊಮ್ಮೆ ಅವರನ್ನು ಪ್ರಶ್ನಿಸಿದ್ದೆ. ತೇಜಸ್ವಿ ಕೊಟ್ಟ ಉತ್ತರ ಇವತ್ತಿನ ಎಲ್ಲಾ ಅಸಂಗತಗಳಿಗೆ ಸಮರ್ಪಕವಾಗಿ ಉತ್ತರ ಕೊಡಬಲ್ಲದು. ಕಾವ್ಯ, ನಾಟಕ,, ಸಂಗೀತ, ಕಲೆ ಇವೆಲ್ಲವೂ ನಮ್ಮ ಮೆದುಳಿನ ಚಿಂತನಾ ವ್ಯವಸ್ಥೆಯ ಕೆನೆ ಪದರ. ತಲೆ- ಮೆದುಳು ಉಳಿಯಬೇಕಾದರೆ, ಅದು ಸುಲಲಿತವಾಗಿ ಕ್ರಿಯಾಶೀಲವಾಗಿ ಸೃಜನಶೀಲವಾಗಿ ಇರಬೇಕಾದರೆ ತಲೆಯ ಕೆಳಗಡೆ ಇರುವ ಜೀವ ಉಳಿಯಬೇಕು. ಈ ಜೀವ ಉಳಿಯಬೇಕಾದರೆ ಗಾಳಿ ನೀರು ಮಣ್ಣು ಸುಸ್ಥಿರವಾಗಿರಬೇಕು. ಈಗ ಅದಕ್ಕೆ ಕಂಟಕ ಬಂದಿದೆ. ಕೆನೆ ಪದರ, ಸೃಜನಶೀಲತೆ, ಸೃಷ್ಟಿಶೀಲತೆ ಅವೆಲ್ಲ ಅನಂತರದ್ದು. ಈಗ ನಾವು ಜೀವ ಉಳಿಸುವ ಪ್ರಕೃತಿಯ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ನಿಸರ್ಗ ಕೊಂಡಿಗಳನ್ನು ಅಧ್ಯಯನ ಮಾಡಬೇಕು ಎಂದು ಉತ್ತರಿಸಿದ್ದರು. ನಾನು ತೇಜಸ್ವಿಯ ದಾರಿಯಲ್ಲಿ ಅಂಬೆಗಾಲಿಡುವುದಕ್ಕೆ ತೇಜಸ್ವಿಯವರ ಈ ಉತ್ತರವೇ ಕಾರಣ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ನರೆಂದ್ರ ರೈ ದೇರ್ಲ
ಕೃಷಿಕ ಲೇಖಕರು

Related Articles

ಇತ್ತೀಚಿನ ಸುದ್ದಿಗಳು