ಚುನಾವಣಾ ಆಯೋಗ ಎಸ್‌ಐಆರ್‌ ಹೆಸರಿನಲ್ಲಿ ಮತದಾರರ ಹಕ್ಕುಗಳ ಮೇಲೆ ತೀವ್ರ ಸ್ವರೂಪದ ಆಕ್ರಮಣ ನಡೆಸುತ್ತಿದೆ: ಸಂಸದ ತೇಜಸ್ವಿ ಸೂರ್ಯ ಆರೋಪ

ಬೊಮ್ಮನಹಳ್ಳಿ ಕ್ಷೇತ್ರದ ಎಚ್‌ಎಸ್‌ಆರ್ ಲೇಔಟ್ (ವಾರ್ಡ್-174) ವ್ಯಾಪ್ತಿಯಲ್ಲಿ ನಡೆದಿರುವುದು ಸಾಮಾನ್ಯ ಅಕ್ರಮವಲ್ಲ, ಬದಲಾಗಿ ನಾಗರಿಕರ ಮೂಲಭೂತ ಮತದಾನದ ಹಕ್ಕಿನ ಮೇಲೆಯೇ ನಡೆದಿರುವ ತೀವ್ರ ಸ್ವರೂಪದ ಆಕ್ರಮಣವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಭೌತಿಕ ತನಿಖೆ ಅಥವಾ ಸ್ಥಳ ಪರಿಶೀಲನೆ ನಡೆಸದೆ, ರಾಜಕೀಯ ಪಕ್ಷಗಳ ಬಿಎಲ್‌ಎ-2 (BLA-2) ಏಜೆಂಟರಿಗೆ ಕನಿಷ್ಠ ಮಾಹಿತಿಯನ್ನೂ ನೀಡದೆ, ಎಲ್ಲೋ ಕುಳಿತ ಅಧಿಕಾರಿಗಳು ಒಂದೇ ಏಟಿಗೆ 13,000ಕ್ಕೂ ಹೆಚ್ಚು ಅರ್ಹ ಮತದಾರರನ್ನು ‘ಯುಇಎಫ್ – ಶಾಶ್ವತವಾಗಿ ಸ್ಥಳಾಂತರಗೊಂಡವರು’ (UEF – Permanent Shifting) ಎಂದು ವರ್ಗಾಯಿಸಿ ಪಟ್ಟಿಯಿಂದಲೇ ಕೈಬಿಟ್ಟಿದ್ದಾರೆ.

ಇದು ಮತದಾರರ ಪಟ್ಟಿ ಪರಿಶೀಲನೆಯೋ ಅಥವಾ ಪ್ರಜಾಪ್ರಭುತ್ವದ ಹಗಲು ದರೋಡೆಯೋ ಎಂಬುದನ್ನು ರಾಜ್ಯ ಚುನಾವಣಾ ಆಯೋಗವು ತಕ್ಷಣವೇ ಸ್ಪಷ್ಟಪಡಿಸಬೇಕಿದೆ ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಮನೆಗಳಿಗೆ ಕಡ್ಡಾಯವಾಗಿ ಹಚ್ಚಬೇಕಿದ್ದ ‘ಎನ್ಯುಮರೇಷನ್ ಸ್ಟಿಕ್ಕರ್‌ಗಳು’ ಎಲ್ಲಿ ಹೋದವು ಮತ್ತು ಇದಕ್ಕೆ ಜಿಪಿಎಸ್ ಆಧಾರಿತ ಫೋಟೋ ಸಾಕ್ಷ್ಯಾಧಾರ ಎಲ್ಲಿದೆ ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು ಇಂತಹ ಸುಳ್ಳು ವರದಿಯನ್ನು ಸಿದ್ಧಪಡಿಸಿರುವುದು ಕೇವಲ ತಳಮಟ್ಟದ ಸಿಬ್ಬಂದಿಯ ಬೇಜವಾಬ್ದಾರಿಯಲ್ಲ, ಬದಲಾಗಿ ಅಧಿಕಾರದಲ್ಲಿರುವವರ ಕುಮ್ಮಕ್ಕಿನಿಂದ ನಡೆದಿರುವ ಬೃಹತ್ ಚುನಾವಣಾ ಅಕ್ರಮವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಲಕ್ಷಾಂತರ ಜನರ ಪ್ರಜಾಪ್ರಭುತ್ವದ ಹಕ್ಕನ್ನು ಕದಿಯುವ ಧೈರ್ಯ ತೋರಿದ ಪ್ರಭಾವಿ ಶಕ್ತಿಗಳ ವಿರುದ್ಧ ತಕ್ಷಣವೇ ಉನ್ನತ ಮಟ್ಟದ ತನಿಖೆಯಾಗಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಸುಳ್ಳು ವರದಿ ನೀಡಿ ಜನರಿಗೆ ವಂಚಿಸಿದ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ. ಇದರೊಂದಿಗೆ, ಅಕ್ರಮವಾಗಿ ಹಾಗೂ ಕಾನೂನುಬಾಹಿರವಾಗಿ ಪಟ್ಟಿಯಿಂದ ಕೈಬಿಡಲಾದ ಎಲ್ಲಾ 13,000ಕ್ಕೂ ಹೆಚ್ಚು ಅರ್ಹ ಮತದಾರರ ಮಾಹಿತಿಯನ್ನು ತಕ್ಷಣವೇ ಮರು-ಪರಿಶೀಲಿಸಿ, ಮತದಾರರ ಪಟ್ಟಿಗೆ ಮರು ಸೇರ್ಪಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು