Home ವಿದೇಶ ಈದ್ ಹಬ್ಬದ ಮಧ್ಯೆ ಯುದ್ಧ ವಿರಾಮ: ಅಫ್ಘಾನ್–ಪಾಕ್ ಕದನಕ್ಕೆ ತಾತ್ಕಾಲಿಕ ಬ್ರೇಕ್

ಈದ್ ಹಬ್ಬದ ಮಧ್ಯೆ ಯುದ್ಧ ವಿರಾಮ: ಅಫ್ಘಾನ್–ಪಾಕ್ ಕದನಕ್ಕೆ ತಾತ್ಕಾಲಿಕ ಬ್ರೇಕ್

0

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ನಡುವೆಯೇ, ಪವಿತ್ರ ರಮಜಾನ್ ತಿಂಗಳಲ್ಲಿಯೂ ಕಾಬೂಲ್‌ನ ಮಾದಕವಸ್ತು ಪುನರ್ವಸತಿ ಕೇಂದ್ರದ ಮೇಲೆ ನಡೆದ ಭೀಕರ ಬಾಂಬ್ ದಾಳಿ ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ. ಈ ದಾಳಿಯಲ್ಲಿ ಸುಮಾರು 400 ಮಂದಿ ಮೃತಪಟ್ಟಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಈ ಹಿನ್ನೆಲೆಯಲ್ಲೇ, ಈದ್-ಅಲ್-ಫಿತರ್ ಹಬ್ಬದ ಪ್ರಯುಕ್ತ ಎರಡೂ ದೇಶಗಳು ತಾತ್ಕಾಲಿಕ ಕದನ ವಿರಾಮ ಘೋಷಿಸಿವೆ. ಹಬ್ಬ ಮುಗಿಯುವವರೆಗೆ ಪರಸ್ಪರ ಮಿಲಿಟರಿ ದಾಳಿಗಳನ್ನು ನಿಲ್ಲಿಸುವುದಾಗಿ ತಿಳಿಸಿವೆ.

ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ತಮ್ಮ ಅಧಿಕೃತ X ಖಾತೆಯ ಮೂಲಕ ಈ ವಿಷಯವನ್ನು ಪ್ರಕಟಿಸಿದ್ದು, “ಈದ್ ಹಬ್ಬದ ಗೌರವಕ್ಕಾಗಿ ಇಸ್ಲಾಮಾಬಾದ್ ಸೇನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುತ್ತಿದೆ. ಈ ನಿರ್ಧಾರವು ಪಾಕಿಸ್ತಾನದ ಸ್ವಯಂಪ್ರೇರಿತ ಕ್ರಮವಾಗಿದ್ದು, ಜೊತೆಗೆ ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ದೇಶಗಳ ಮನವಿಯ ಮೇರೆಗೆ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ. ಈ ವಿರಾಮವು ಮಾರ್ಚ್ 18ರ ಮಧ್ಯರಾತ್ರಿಯಿಂದ ಜಾರಿಗೆ ಬಂದು, ಮಾರ್ಚ್ 23ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ.

ಅವರು ಮತ್ತಷ್ಟು ಎಚ್ಚರಿಕೆ ನೀಡುತ್ತಾ, “ಈ ಅವಧಿಯಲ್ಲಿ ಅಫ್ಘಾನಿಸ್ತಾನದಿಂದ ಯಾವುದೇ ಗಡಿಯಾಚೆಗಿನ ದಾಳಿ, ಡ್ರೋನ್ ದಾಳಿ ಅಥವಾ ಭಯೋತ್ಪಾದಕ ಚಟುವಟಿಕೆಗಳು ನಡೆದರೆ, ಪಾಕಿಸ್ತಾನ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಮತ್ತಷ್ಟು ತೀವ್ರವಾಗಿ ಪುನರಾರಂಭಿಸುತ್ತದೆ” ಎಂದಿದ್ದಾರೆ.

ಇದೇ ವೇಳೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವೂ ಈದ್ ಹಬ್ಬದ ಹಿನ್ನೆಲೆಯಲ್ಲಿ ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಿದೆ. ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಪ್ರತಿಕ್ರಿಯಿಸಿ, “ಸೌದಿ ಅರೇಬಿಯಾ, ಟರ್ಕಿ ಮತ್ತು ಕತಾರ್ ದೇಶಗಳ ಕೋರಿಕೆಯ ಮೇರೆಗೆ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತಿದೆ. ಆದರೆ ಪಾಕಿಸ್ತಾನದಿಂದ ಯಾವುದೇ ದಾಳಿ ನಡೆದರೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಪಾಕಿಸ್ತಾನ ದಾಳಿಗಳ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ಒಟ್ಟು 707 ಮಂದಿ ಸಾವನ್ನಪ್ಪಿದ್ದಾರೆ ಎಂದು ತರಾರ್ ತಿಳಿಸಿದ್ದಾರೆ. ಆದರೆ, ಕಾಬೂಲ್ ದಾಳಿಗೂ ಮುನ್ನ ನಡೆದ ಹಿಂಸಾಚಾರಗಳಲ್ಲಿ 76 ಮಂದಿ ಸಾವನ್ನಪ್ಪಿ, 213 ಮಂದಿ ಗಾಯಗೊಂಡಿದ್ದು, ಇವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ವಿಶ್ವಸಂಸ್ಥೆಯ ಅಫ್ಘಾನಿಸ್ತಾನ ಸಹಾಯ ಮಿಷನ್ (UNAMA) ಮಾಹಿತಿ ನೀಡಿದೆ.

You cannot copy content of this page

Exit mobile version