Friday, December 12, 2025

ಸತ್ಯ | ನ್ಯಾಯ |ಧರ್ಮ

ಆಂಧ್ರಪ್ರದೇಶ: ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಭೀಕರ ಬಸ್ ದುರಂತ: 15 ಮಂದಿ ದುರ್ಮರಣ

ಚಿಂತೂರು (ಆಂಧ್ರಪ್ರದೇಶ): ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಚಿಂತೂರು–ಮರೇದುಮಿಲ್ಲಿ ಘಾಟ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಖಾಸಗಿ ಟ್ರಾವೆಲ್‌ ಬಸ್ ನಿಯಂತ್ರಣ ತಪ್ಪಿ ಆಳವಾದ ಕಣಿವೆಗೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಅಪಘಾತ ಸಂಭವಿಸುವ ಸಮಯದಲ್ಲಿ ಬಸ್‌ನಲ್ಲಿ 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ಹೊರತೆಗೆದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರು. ಗಂಭೀರವಾಗಿ ಗಾಯಗೊಂಡಿರುವವರ ಚಿಕಿತ್ಸೆಗೆ ಭದ್ರಾಚಲಂ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಪ್ರಾಥಮಿಕ ತನಿಖೆ ಪ್ರಕಾರ, ಬಸ್‌ನಲ್ಲಿ ಇದ್ದವರು ಮೂಲತಃ ಚಿತ್ತೂರು ಜಿಲ್ಲೆಯ ನಿವಾಸಿಗಳು. ಅವರು ದೇವಾಲಯಗಳಿಗೆ ಭೇಟಿ ನೀಡುವ ಸಲುವಾಗಿ ಭದ್ರಾಚಲಂನಿಂದ ಅನ್ನಾವರಂ ಕಡೆಗೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್‌ ನಂಬರ್ AP 39 UM 6543 ಎಂದು ಗುರುತಿಸಲಾಗಿದೆ.

ಘಟನೆಯ ಬಗ್ಗೆ ವಿವರ ನೀಡಿದ ಜಿಲ್ಲಾಧಿಕಾರಿ ದಿನೇಶ್ ಕುಮಾರ್, “ಚಿಂತೂರು ಮತ್ತು ಭದ್ರಾಚಲಂ ನಡುವಿನ ಘಾಟ್ ರಸ್ತೆಯಲ್ಲಿ ಬಸ್ ಪಲ್ಟಿಯಾಗಿ ಕಣಿವೆಗೆ ಬಿದ್ದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ,” ಎಂದು ತಿಳಿಸಿದ್ದಾರೆ.

ಅಪಘಾತ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿಯಾದ ಎನ್. ಚಂದ್ರಬಾಬು ನಾಯ್ಡು ಆತಂಕ ವ್ಯಕ್ತಪಡಿಸಿದ್ದಾರೆ. “ಚಿತ್ತೂರು ಜಿಲ್ಲೆಯ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್‌ ದುರಂತವು ಹೃದಯವಿದ್ರಾವಕ. ಹಲವಾರು ಜೀವಗಳು ಕಳೆದುಹೋಗಿರುವುದು ತುಂಬಾ ದುಃಖಕರ. ಅಧಿಕಾರಿಗಳೊಂದಿಗೆ ಮಾತನಾಡಿ ಸಂತ್ರಸ್ತರಿಗೆ ನೀಡಲಾಗುತ್ತಿರುವ ನೆರವು ಮತ್ತು ಚಿಕಿತ್ಸೆಯ ಕುರಿತು ಮಾಹಿತಿ ಪಡೆದಿದ್ದೇನೆ. ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ನೆರವು ಲಭ್ಯವಾಗುವಂತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಾಯ ದೊರೆಯುತ್ತದೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page