ವಿಶಾಖಪಟ್ಟಣ ಸ್ಟೀಲ್ ಪ್ಲಾಂಟ್ ನಲ್ಲಿ ಭೀಕರ ದುರಂತ – 8 ಜನರ ದುರ್ಮರಣ

ವಿಶಾಖಪಟ್ಟಣ : ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರದ ವಿಜಾಗ್ ಸ್ಟೀಲ್ ಪ್ಲಾಂಟ್ ನಲ್ಲಿ ಸೋಮವಾರ ಸಂಭವಿಸಿದ ಭೀಕರ ಕೈಗಾರಿಕಾ ಅವಘಡದಲ್ಲಿ ಕನಿಷ್ಠ 8 ಕಾರ್ಮಿಕರು ಮೃತಪಟ್ಟಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಉಕ್ಕು ಕರಗಿಸುವ ಘಟಕದಲ್ಲಿ ಕ್ರೇನ್ ಮೂಲಕ ಸಾಗಿಸಲಾಗುತ್ತಿದ್ದ ಸುಮಾರು 1,600 ಡಿಗ್ರಿ ಸೆಲ್ಸಿಯಸ್ ತಾಪಮಾನದ ಕರಗಿದ ಲೋಹ ಇದ್ದ ಬಕೆಟ್ (ಲ್ಯಾಡಲ್) ಏಕಾಏಕಿ ಉರುಳಿ ಬಿದ್ದಿದೆ. ಪರಿಣಾಮವಾಗಿ ಬೃಹತ್ ಪ್ರಮಾಣದ ಕರಗಿದ ಲೋಹ ಕಾರ್ಮಿಕರ ಮೇಲೆ ಹರಿದು ಈ ದುರಂತ ಸಂಭವಿಸಿದೆ.

ಘಟನೆಯ ನಂತರ ತಕ್ಷಣವೇ ಅಗ್ನಿಶಾಮಕ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಗಾಯಗೊಂಡ ಕಾರ್ಮಿಕರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಇದೇ ಉಕ್ಕು ಸ್ಥಾವರದಲ್ಲಿ 2012ರಲ್ಲಿ ಆಮ್ಲಜನಕ ಘಟಕದಲ್ಲಿ ಸಂಭವಿಸಿದ್ದ ಭಾರೀ ಸ್ಫೋಟದಲ್ಲಿ 16ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದರು. ಇತ್ತೀಚಿನ ದುರಂತದ ಹಿನ್ನೆಲೆಯಲ್ಲಿ ಕಾರ್ಮಿಕರ ಸುರಕ್ಷತೆ ಮತ್ತು ಕೈಗಾರಿಕಾ ಭದ್ರತಾ ಕ್ರಮಗಳ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿವೆ.ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದ್ದು, ಸುರಕ್ಷತಾ ಲೋಪಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು