Friday, June 14, 2024

ಸತ್ಯ | ನ್ಯಾಯ |ಧರ್ಮ

ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯ: ಡಾ.ಎಸ್. ಜೈಶಂಕರ್

ಹೊಸದಿಲ್ಲಿ: ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯ ವಿಶೇಷ ಸಭೆ ಇಂದಿನಿಂದ ಎರಡು ದಿನಗಳ ಕಾಲ ಮುಂಬೈ ಮತ್ತು ದೆಹಲಿಯಲ್ಲಿ ನಡೆಯಲಿದೆ.

ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ದಿನದ ಸಭೆಯಲ್ಲಿ 26/11ರ ಭಯೋತ್ಪಾದನೆ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಚಿವ ಡಾ. ಎಸ್. ಜೈಶಂಕರ್‌ರವರು, ಮುಂಬೈ ದುರ್ಘಟನೆಗೆ 14 ವರ್ಷಗಳಾಗುತ್ತಿವೆ. ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯವಾಗಿದೆ. ಭಯೋತ್ಪಾದನಾ ಘಟನೆಗಳ ಸಂತ್ರಸ್ತರ ನೋವನ್ನು ಕೇಳಬೇಕಾಗಿದೆ. ಆದರೆ ಅವರಿಗಾದ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂಬೈ ಘಟನೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಸೆರೆ ಹಿಡಿದು ಶಿಕ್ಷೆಗೆ ಒಳಪಡಿಸಲಾಗಿದೆ. ಆದರೆ, ರೂವಾರಿಯನ್ನು ಕರೆತರಲು ಇನ್ನೂ ಸಾಧ್ಯವಾಗಿಲ್ಲ, ಮತ್ತು ಸಂಪೂರ್ಣ ನ್ಯಾಯ ಇನ್ನೂ ದೊರೆತಿಲ್ಲ ಎಂದು ತಿಳಿಸಿದರು.

ಭಯೋತ್ಪಾದನಾ ಸಂಘಟನೆಗಳಿಗೆ ಹಣ ಹಾಗೂ ಸಂಪನ್ಮೂಲ ಅಗತ್ಯವಾಗಿದ್ದು, ಅದಕ್ಕಾಗಿ ಅವು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸಿವೆ. ಅಗತ್ಯ ಹಣಸಂಗ್ರಹಕ್ಕಾಗಿ ವಿಭಿನ್ನ ಧೋರಣೆಗಳೊಂದಿಗೆ ಕೆಲಸ ಮಾಡುತ್ತಿವೆ. ಅಂತಾರಾಷ್ಟ್ರೀಯ ಸಮುದಾಯ ಈ ಸಂಗತಿಗಳ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಭಯೋತ್ಪಾದನೆಗೆ ಸಂಪನ್ಮೂಲ ಸಂಗ್ರಹ ಸ್ಥಗಿತಗೊಳಿಸಲು ಪರಿಣಾಮಕಾರಿ ಸಹಯೋಗ ಅಗತ್ಯವಾಗಿದೆ ಎಂದು ಹೇಳಿದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಭಯೋತ್ಪಾದಕ ಸಂಘಟನೆ, ವ್ಯಕ್ತಿಗಳನ್ನು ಗುರುತಿಸುವುದು ಅಗತ್ಯ. ಭಯೋತ್ಪಾದಕ ನೆಲೆಗಳನ್ನು ಗುರುತಿಸುವುದು, ತರಬೇತಿ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು. ಇದಕ್ಕೆ ಸಹಕಾರ ನೀಡುವ ರಾಜಕೀಯ ಶಕ್ತಿಗಳನ್ನು ಸಹ ಗುರುತಿಸಬೇಕಾಗಿದೆ. ಭಯೋತ್ಪಾದಕ ಕೃತ್ಯಗಳು ಇಂದು ಬಹುಆಯಾಮ ಪಡೆದುಕೊಂಡಿವೆ. ಹೀಗಾಗಿ ಅವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು