Friday, June 14, 2024

ಸತ್ಯ | ನ್ಯಾಯ |ಧರ್ಮ

ಪಠ್ಯಪುಸ್ತಕ ಪರಿಷ್ಕರಣೆ ; ಸಾವರ್ಕರ್, ಹೆಡಗೇವಾರ್, ಸೂಲಿಬೆಲೆ ಪಾಠಗಳಿಗೆ ಗೇಟ್ ಪಾಸ್

ಹಲವಷ್ಟು ವಿವಾದಕ್ಕೆ ಕಾರಣವಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರ ಅಂತೂ ಇಂದು ಒಂದು ತಾತ್ವಿಕ ಹಂತಕ್ಕೆ ಬಂದು ನಿಂತಿದೆ. ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತನ್ನ ಸ್ಪಷ್ಟ ನಿಲುವನ್ನು ಹೊರಹಾಕಿದೆ. ಅದರಂತೆ ಇನ್ನು 15 ದಿನಗಳಲ್ಲಿ ಪಠ್ಯ ಪರಿಷ್ಕರಣೆಯ ತಜ್ಞರ ಸಮಿತಿ ರಚಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವಷ್ಟು ಮಹತ್ವದ ನಿರ್ಧಾರಕ್ಕೆ ಬಂದಿದೆ. ಅದರಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿದ್ದು ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ.

ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದನ್ನು ಈಗ ಸ್ವತಃ ಶಿಕ್ಷಣ ಸಚಿವರೇ ಕನ್ಫರ್ಮ್ ಮಾಡಿದ್ದಾರೆ. ಮಧು ಬಂಗಾರಪ್ಪ ಸ್ಪಷ್ಟಪಡಿಸಿದಂತೆ ಬಾರೀ ವಿವಾದಕ್ಕೆ ಕಾರಣವಾಗಿದ್ದ RSS ಸರಸಂಚಾಲಕ ಹೆಡ್ಗೇವಾರ್ ಅವರ ಕುರಿತಾದ ಪಠ್ರಕ್ಕೆ ತುರ್ತು ಬ್ರೇಕ್ ಹಾಕಿ, ಕಳೆದ ಬಾರಿಯ ಪರಿಷ್ಕರಣೆಯಲ್ಲಿ ತಗೆದು ಹಾಕಿದ್ದ ಅಂಬೇಡ್ಕರ್ ಅವರ ಪದ್ಯವನ್ನು ಪುಸ್ತಕಕ್ಕೆ ಸೇರಿಸುವ ನಿರ್ಧಾರಕ್ಕೆ ಬರಲಾಗಿದೆ. ಹಾಗೆಯೇ ಕಳೆದ ಬಾರಿ ಪಠ್ಯಪುಸ್ತಕದಿಂದ ತಗೆಯಲಾಗಿದ್ದ ಸಾವಿತ್ರಿಬಾಯಿ ಫುಲೆ ಕುರಿತಾದ ಪಠ್ಯ, ಅಂಬೇಡ್ಕರ್ ಮತ್ತು ನೆಹರೂ ಕುರಿತಾದ ಪಠ್ಯ ಕೂಡಾ ಮರು ಸೇರ್ಪಡೆ ಆಗಲಿದೆ.

ಅದೇ ರೀತಿ RSS ಮೂಲದ ಕೆ.ಬಿ. ಹೆಡ್ಗೆವಾರ್, ಗಾಂಧಿ ಹತ್ಯೆ ಪ್ರಕರಣದಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬಂದಿದ್ದ ವಿನಾಯಕ ದಾಮೋದರ ಸಾವರ್ಕರ್ ಮತ್ತು ವಿವಾದಿತ ಬಾಷಣಕಾರ ಚಕ್ರವರ್ತಿ ಸೂಲಿಬೆಲೆ ಪಠ್ಯಗಳು ಮಕ್ಕಳ ಪುಸ್ತಕದಿಂದ ಹೊರಬೀಳಲಿವೆ. ಇದರ ಜೊತೆಗೆ ಮುಂದಿನ ಕೆಲವೇ ದಿನಗಳಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಲು ಮಹತ್ವದ ನಿರ್ಧಾರ ತಗೆದುಕೊಳ್ಳಲಾಗುವುದು. ಆ ಮೂಲಕ ವಿವಾದಿತ ವ್ಯಕ್ತಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಯಾದ ಬಹುತೇಕ ಪಠ್ಯಕ್ಕೆ ಬ್ರೇಕ್ ಬೀಳುವ ಮುನ್ಸೂಚನೆ ಸಿಕ್ಕಿದೆ.

ಪ್ರಮುಖವಾಗಿ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯದಲ್ಲಿ 6 ರಿಂದ 10 ನೇ ತರಗತಿ ವರೆಗೆ, ಒಂದು ಸಪ್ಲಿಮೆಂಟರಿ ಪುಸ್ತಕ ಕಳಿಸುವ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ತಗುಲುವ ವೆಚ್ಚ ಅಂದಾಜು 10 ಲಕ್ಷ. ಅದನ್ನು ತುರ್ತಾಗಿ ಎಲ್ಲಾ ಶಾಲೆಗಳಿಗೂ ಕಳಿಸುವ ಕೆಲಸ ಪ್ರಗತಿಯ ಹಂತದಲ್ಲಿದೆ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯ ಅಧ್ಯಕ್ಷತೆ ವಹಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿಯ ಕಡೆಯಿಂದ ಅಂದಾಜು 250 ಕೋಟಿ ವೆಚ್ಚ ತಗುಲಿತ್ತು. ಇದೀಗ ರಾಜ್ಯ ಸರ್ಕಾರ ಪಠ್ಯಪುಸ್ತಕವನ್ನು ತಾತ್ಕಾಲಿಕ ಪರಿಷ್ಕರಣೆ ಮಾಡಿದೆ. ಆದರೆ ಇದಕ್ಕೆಲ್ಲಾ ಹಿಂದಿನ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂಬುದು ಕಾಂಗ್ರೆಸ್ ಸರ್ಕಾರದ ಆರೋಪ. ಮುಖ್ಯವಾಗಿ ರೋಹಿತ್‌ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಲು ಹಲವರು ಒತ್ತಾಯ ಮಾಡಿದ್ದಾರೆ. ಇದರ ಜೊತೆ ಹಲವು ಜನಪರ ಹೋರಾಟಗಾರರ ಒತ್ತಾಯದಂತೆ ರೋಹಿತ್‌ ಚಕ್ರತೀರ್ಥ ಮತ್ತು ಸಮಿತಿ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿವೆ. ಅದರಂತೆ ಅವರ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬಹುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಹೊರಬಿದ್ದಿಲ್ಲ.

Related Articles

ಇತ್ತೀಚಿನ ಸುದ್ದಿಗಳು