Monday, June 17, 2024

ಸತ್ಯ | ನ್ಯಾಯ |ಧರ್ಮ

ಆ ಹೊಣೆ ನಮ್ಮದೇ…

ಮನುಷ್ಯ ಕೇಂದ್ರಿತ ಅಭಿವೃದ್ಧಿ ಯೋಜನೆಗಳು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗುವ ಬದಲು ಅವುಗಳೇ ಸಮಸ್ಯೆಯಾಗುತ್ತಿವೆ. ಮಾನವ ಬೇರೆಲ್ಲ ಜೀವಿಗಳ ಜತೆಗಿರುವ ತನ್ನ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕಿದೆ. ಇವು ಐದು ತಿಂಗಳ ಕಾಲ ವಾರಕ್ಕೊಂದರಂತೆ ಮನುಷ್ಯ ಆನೆ ಮತ್ತು ಇತರ ಜೀವಿಗಳ ಸಹಬಾಳ್ವೆಯ ಕುರಿತು ಪ್ರಸಾದ್‌ ರಕ್ಷಿದಿಯವರು ಬರೆದ ಅಂಕಣದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದ ಅಂಶಗಳು. ಪ್ರಕೃತಿಗೆ ತನಗೆ ಬೇಡವಾದ್ದನ್ನು ನಿವಾರಿಸಿಕೊಳ್ಳುವ ಅಪಾರ ಶಕ್ತಿ ಇದೆ. ಅದು ಮನುಷ್ಯನೇ ಆಗದಿರಲು ನಾವೇ ಪ್ರಯತ್ನ ಪಡಬೇಕು. ರಕ್ಷಿದಿಯವರ ʼಕಾಡುಹೆಜ್ಜೆಯ ಜಾಡು ಹಿಡಿದು ಅಂಕಣದʼ ಕೊನೆಯ ಕಂತು ಇದು.

ಇಷ್ಟೆಲ್ಲ ವಿಚಾರಗಳನ್ನು ಚರ್ಚಿಸದ ನಂತರವೂ ನಾವೇನು ಮಾಡಬೇಕು, ಮತ್ತು ಮಾಡಬಹುದು ಎನ್ನುವ ಪ್ರಶ್ನೆ ಹಾಗೇ ಉಳಿದಿದೆ. ಇದಕ್ಕೆ ಉತ್ತರವನ್ನು ಮನುಷ್ಯನೇ ಹುಡುಕಬೇಕು. ಯಾಕೆಂದರೆ ಪ್ರಕೃತಿಯ ಸಹಜ ಪ್ರಕ್ರಿಯೆಗಳಲ್ಲಿ ಬದಲಾವಣೆಯನ್ನು ತರುವ ಶಕ್ತಿ ಇರುವುದು ಮನುಷ್ಯನಿಗೆ ಮಾತ್ರ. ಅದೂ ಕೂಡಾ ಪ್ರಕೃತಿಯೇ ಅವನಿಗೆ ಕೊಟ್ಟಿದೆ. ಜೊತೆಗೆ ಅಪಾರವಾದ ಸಾಧ್ಯತೆಗಳ  ಮಿದುಳನ್ನೂ ನೀಡಿದೆ. ಆದರೆ ಮನುಷ್ಯ ಜೀವಿ ಈಗ ಹಿಡಿದಿರುವುದು ಖಂಡಿತವಾಗಿಯೂ ವಿನಾಶದ ಹಾದಿ. ನಮ್ಮ ಹಾದಿಯನ್ನು ನಾವೇ ನಿರ್ಧರಿಸಿಕೊಳ್ಳಬೇಕು. ಈ ಎಚ್ಚರ ಮಾತ್ರ ನಮ್ಮನ್ನು ಕಾಪಾಡಬಲ್ಲದೇನೋ.

ಯಾಕೆಂದರೆ ಭೂಮಿಯ ಮೇಲಿನ ಹಲವಾರು ಜೀವ ಪ್ರಬೇಧಗಳು ಮರೆಯಾಗಿ ಹೋಗಿವೆ. ಜೀವ ಸಂಕುಲವನ್ನು ಕೃತಕವಾಗಿ ಉಳಿಸಿಕೊಂಡು “ಸಹಬಾಳ್ವೆ” ನಡೆಸುತ್ತೇವೆ ಎನ್ನುವುದು ಪುಸ್ತಕದ ಬದನೆಕಾಯಿ ಆಗುತ್ತಿದೆ ಎನ್ನುವುದು ಪದೇ ಪದೇ ನಮ್ಮ ಅನುಭವಕ್ಕೆ ಬರುತ್ತಿದೆ. ವಿದೇಶದಿಂದ ತಂದ ಚಿರತೆಗಳು ನಮ್ಮಲ್ಲಿ ಒಂದೊಂದಾಗಿ ಸಾಯುತ್ತಿರುವುದು ಇತ್ತೀಚಿನ ಉದಾಹರಣೆ. ಇದೆಲ್ಲವೂ ನಮಗೆ ಪಾಠವಾಗಬೇಕು.

ಪರಿಸರ ಪ್ರಜ್ಞೆ ನಮ್ಮ ಧರ್ಮವಾಗಬೇಕು, ಜನಾಂದೋಲನವಾಗಬೇಕು. ಇದು ಮನೆಯಿಂದ ಪ್ರಾರಂಭವಾಗಿ  ಶಾಲೆ ಕಾಲೇಜುಗಳ ವರೆಗೆ ನಿರಂತರ ಕಲಿಕೆಯ ವಿಷಯವಾಗಿರಬೇಕು.  ಪ್ರತಿ ಪಂಚಾಯತ್ ಗಳ ಮಟ್ಟದಲ್ಲಿ ಪರಿಸರ ರಕ್ಷಣೆಗಾಗಿಯೇ ಕಾರ್ಯ ಪಡೆ ಇರಬೇಕು. ಇದರ ಜೊತೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಈಗ ಆಗಿರುವ ಅಭಿವೃದ್ಧಿ ಅನಾಹುತಗಳು ಸಾಕು. ಅಂತಹ ಎಲ್ಲ ಯೋಜನೆಗಳನ್ನು ನಿಲ್ಲಿಸಬೇಕು. ಪಕ್ಕದ ಪ್ರದೇಶಗಳಲ್ಲಿ ಪಾರಂಪರಿಕವಾಗಿ ನಡೆಯುತ್ತಿದ್ದ ಕೃಷಿ ಇದ್ದರೆ ಮಾತ್ರ ಅವುಗಳಿಗೆ ಅನುಮತಿ ನೀಡಿ, ಬೇರೆ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಬೇಕು. ಅಲ್ಲಿಂದ ಹೊರ ಬರುತ್ತೇವೆ ಎನ್ನುವ ಕೃಷಿಕರಿಗೆ ಉತ್ತೇಜನ ನೀಡಿ ಸ್ಥಳಾಂತರಿಸಬೇಕು. ಯಾಕೆಂದರೆ ಶತಮಾನಗಳಿಂದಲೂ ಜನರು ಅರಣ್ಯಗಳಲ್ಲಿ ಸಂಘರ್ಷವಿಲ್ಲದೆ ವಾಸವಿದ್ದರು. ಆದರೆ ಆ ಜನರೂ ಬದಲಾಗಿದ್ದಾರೆ. ಅವರಲ್ಲಿಯೂ ಆಧುನಿಕತೆಯ ಎಲ್ಲ ದುಷ್ಪ್ರವೃತ್ತಿಗಳು ಸಾಕಷ್ಟು ಸೇರಿಕೊಂಡಿವೆ. ಇಲ್ಲಿ ಯಾವುದೇ ಭಾವನಾತ್ಮಕತೆಯನ್ನು ಬದಿಗಿಟ್ಟು ಸಾಧ್ಯತೆಗಳ ಬಗೆಗೆ ಪ್ರಾಕ್ಟಿಕಲ್ ಆಗಿ ಯೋಚಿಸಿ, ಯೋಜನೆಗಳನ್ನು ರೂಪಿಸಬೇಕು.

ಹೀಗೆ ಮಾಡುವಾಗಲೂ ಮತ್ತೆ ಇನ್ನೊಂದು ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಅದು ಮತ್ತೆ ನಮ್ಮ ರಾಜಕೀಯ ವಲಯದಿಂದಲೇ. ಕೃಷಿಕರೋ ಆದಿವಾಸಿಗಳೋ ಮುಂತಾದವರನ್ನು ತೆರವುಗೊಳಿಸಿದ ಭೂಮಿಯನ್ನು ಸರ್ಕಾರಗಳು ಯಾವುದೋ ಕೆಲವು ಉದ್ಯಮಿಗಳ ಮಡಿಲಿಗೆ ಹಾಕುವ ಅಪಾಯದ ಬಗ್ಗೆಯೂ ನಾವು ಎಚ್ಚರವಾಗಿರಬೇಕು. ಈಗಾಗಲೇ ಅಂತವು ಸಾಕಷ್ಟು ನಡೆದಿವೆ. ಪರಿಸರ ಮತ್ತು ಪ್ರಾಣಿಗಳು ನಮ್ಮ ಜೀವ ಸಂಕುಲದ ಅವಿಭಾಜ್ಯ ಅಂಗಗಳು. ಇವುಗಳಲ್ಲಿ ಯಾವುದು ಊನವಾದರೂ ಅದರ ನೇರ ಪರಿಣಾಮ ಮನುಷ್ಯನ ಮೇಲೆ ಆಗಿಯೇ ಆಗುತ್ತದೆ, ಮತ್ತು ಆಗಿದೆ ಕೂಡಾ.

ಮತ್ತೆ ಮತ್ತೆ ನಾವು ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ- ಪ್ರಕೃತಿಗೆ ತನಗೆ ಬೇಡವಾದ್ದನ್ನು ನಿವಾರಿಸಿಕೊಳ್ಳುವ ಅಪಾರ ಶಕ್ತಿ ಇದೆ ಎನ್ನುವುದು. ಅದು ಮನುಷ್ಯನೇ ಆಗದಿರಲು ನಾವೇ ಪ್ರಯತ್ನ ಪಡಬೇಕು. ಆ ಹೊಣೆ ಭೂಮಿಯ ಮೇಲಿನ ಬೇರಾವ ಜೀವಿಯದ್ದೂ ಅಲ್ಲ… ನಮ್ಮದೇ.

(ಇಲ್ಲಿಗೆ ʼಕಾಡುಹೆಜ್ಜೆಯ ಜಾಡು ಹಿಡಿದುʼ ಅಂಕಣ ಮುಗಿಯಿತು)

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ.

ಇದನ್ನೂ ಓದಿ-http://ಮಾನವ ಪ್ರಾಣಿ ಸಂಘರ್ಷ | ಸಮಸ್ಯೆಗಳಿಂದ ಸಮಸ್ಯೆಗಳತ್ತ …https://peepalmedia.com/from-problems-to-problems/

Related Articles

ಇತ್ತೀಚಿನ ಸುದ್ದಿಗಳು