Friday, June 14, 2024

ಸತ್ಯ | ನ್ಯಾಯ |ಧರ್ಮ

ಇಡಿ ಸಮನ್ಸ್ ನೀಡಿದ ದಲಿತ ರೈತರ ಖಾತೆಯಲ್ಲಿದ್ದ ಮೊತ್ತವೆಷ್ಟು ಗೊತ್ತಾ?

ತಮಿಳುನಾಡಿನ ಸೇಲಂ ಜಿಲ್ಲೆಯ ಅತ್ತೂರಿನಲ್ಲಿ ವಾಸಿಸುತ್ತಿರುವ 70ರ ಹರೆಯದ ಇಬ್ಬರು ಹಿರಿಯ ದಲಿತ ಸಮುದಾಯದ ರೈತರಾದ ಕನ್ನೈಯನ್ ಮತ್ತು ಅವರ ಸಹೋದರ ಕೃಷ್ಣನ್ 2023 ರ ಜುಲೈನಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಸಮನ್ಸ್ ಜಾರಿ ಮಾಡಲಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಬಹಿರಂಗಗೊಂಡ ಈ ಪ್ರಕರಣ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು

ಈ ಸಂಬಂಧ ದೇಶದ ಕೆಲವು ಪ್ರಮುಖ ಮಾಧ್ಯಮಗಳಿಗೆ ಸಿಕ್ಕ ದಾಖಲೆಗಳು ಈಗ ಎಲ್ಲರ ಹುಬ್ಬೇರೀಸುವಂತೆ ಮಾಡಿದೆ ಅಷ್ಟೆ ಅಲ್ಲ, ಕೇಂದ್ರ ಸರ್ಕಾರದ ಅತ್ಯಂತ ಶಿಸ್ತಿನ ಸಂಸ್ಥೆಯಾದ ಜಾರಿ ನಿರ್ದೇಶನಾಲಯದ ಕಾರ್ಯ ವೈಖರಿ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಅಂದಹಾಗೆ ತಮ್ಮ ಗ್ರಾಮದಲ್ಲಿ 6.5 ಎಕರೆ ಕೃಷಿ ಭೂಮಿ ಹೊಂದಿರುವ ದಲಿತ ಸಹೋದರರನ್ನು ಇಡಿ ಏಕೆ ಕರೆದಿದೆ ಎಂಬ ಅಂಶ ಎಲ್ಲಾ ಕಡೆಗಳಲ್ಲೂ ಕುತೂಹಲ ಹೆಚ್ಚಿಸಿತ್ತು. ಅಷ್ಟೆ ಅಲ್ಲದೆ ಇಡಿ ನೀಡಿದ ಸಮನ್ಸ್‌ನ ಲಕೋಟೆಯಲ್ಲಿ ರೈತರ ಜಾತಿಯನ್ನು ‘ಹಿಂದೂ ಪಾಲರ್‌ಗಳು’ ಎಂದು ನಮೂದಿಸಿರುವುದು ಹೆಚ್ಚಿನ ಆಕ್ರೋಶಕ್ಕೆ ಕಾರಣವಾಗಿದೆ.

ಇಡಿ ಜಾರಿಗೊಳಿಸಿದ ಸಮನ್ಸ್ ಪ್ರಕಾರ ವೃದ್ಧ ರೈತರ ವಿರುದ್ಧ ತನಿಖಾಧಿಕಾರಿ (IO) ರಿತೇಶ್ ಕುಮಾರ್, ಕಾಯಿದೆ, 2002 ರ ಅಡಿಯಲ್ಲಿ ಮನಿ ಲಾಂಡರಿಂಗ್ ತಡೆಗಟ್ಟುವಿಕೆಯ ನಿಬಂಧನೆಗಳ ಅಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಮತ್ತು ಜುಲೈ 5, 2023 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ಕನ್ಐಯನ್ ಮತ್ತು ಕೃಷ್ಣನ್ ಅವರಿಗೆ ಸೂಚಿಸಲಾಗಿತ್ತು.

ರೈತರು ತಮ್ಮ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌ನ ಪ್ರತಿ, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ತಮ್ಮ ತೆರಿಗೆ ರಿಟರ್ನ್ಸ್‌ನ ಪ್ರತಿಗಳು ಮತ್ತು ಅವರ ಕುಟುಂಬ ಸದಸ್ಯರ ದಾಖಲೆಗಳು, ಮಾಡಿದ ಹೂಡಿಕೆಯ ವಿವರಗಳು, ಅವರು ಮತ್ತು ಅವರ ಕುಟುಂಬದ ಸದಸ್ಯರು, ಅವರ ಹೆಸರಿನಲ್ಲಿ ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಸ್ಥಿರಾಸ್ತಿಗಳ ವಿವರಗಳು, ಬ್ಯಾಂಕ್ ಖಾತೆಗಳ ವಿವರಗಳು, ಅವರ ಹೆಸರಿನಲ್ಲಿ ಸ್ಥಿರ ಠೇವಣಿ ಮತ್ತು ಕುಟುಂಬದ ಸದಸ್ಯರ ಹೆಸರುಗಳು, ಕೃಷಿ ಭೂಮಿಯ ವಿವರಗಳು ಮತ್ತು ಬೆಳೆ ಉತ್ಪಾದನೆಯ ವಿವರಗಳನ್ನು ತರಲು ತಿಳಿಸಲಾಗಿತ್ತು.

ಆದರೆ ಪ್ರಕರಣದ ಅಸಲಿ ವಿಚಾರ ಏನೆಂದರೆ ದಲಿತ ಸಮುದಾಯದ ವೃದ್ಧರಿಗೆ 6.5 ಎಕರೆ ಕೃಷಿ ಭೂಮಿ ಹೊರತುಪಡಿಸಿ, 1,000 ರೂ ಮಾಸಿಕ ಪಿಂಚಣಿ ಅಷ್ಟೆ ಅವರ ಜೀವನದ ಏಕೈಕ ಆದಾಯದ ಮೂಲ ಎಂದು ತಿಳಿದು ಬಂದಿದೆ. ಇನ್ನು ಇಡಿ ಸಂಸ್ಥೆಯ ಸಮನ್ಸ್ ನ ಹಿನ್ನೆಲೆ ಬಗ್ಗೆ ಮಾಧ್ಯಮ ಸಂಸ್ಥೆಗಳು ಬೆನ್ನತ್ತಿದಾಗ ತಿಳಿದ ವಿಚಾರ ಏನೆಂದರೆ, 2020 ರಿಂದ ದಲಿತ ವೃದ್ಧ ಸಹೋದರರು ತಮ್ಮ ಜಮೀನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಪಕ್ಷದ ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿಯಾಗಿರುವ ಗುಣಶೇಖರ್ ಎಂಬ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ಅತ್ತೂರಿನಲ್ಲಿರುವ ತಮ್ಮ 6.5 ಎಕರೆ ಜಮೀನನ್ನು ಅಕ್ರಮವಾಗಿ ಕಬಳಿಸಲು ಬಿಜೆಪಿ ಮುಖಂಡರು ಯತ್ನಿಸಿದ್ದಾರೆ ಎಂದು ದಲಿತ ಸಹೋದರರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಡಿ ರೈತರಿಗೆ ಸಮನ್ಸ್ ನೀಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ರೈತರನ್ನು ಬೆದರಿಸುವ ಮೂಲಕ ಬಿಜೆಪಿ ಕಾರ್ಯಕಾರಿಣಿಗೆ ಇಡಿ ಸಹಾಯ ಮಾಡಲು ಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.  ಈಗಾಗಲೇ ಇಡಿ ಸಂಸ್ಥೆ ಕೇಂದ್ರ ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂಬ ಆರೋಪದ ನಡುವೆ ಈಗ ತಮಿಳುನಾಡು ಬಿಜೆಪಿ ನಾಯಕರ ವಿರುದ್ಧ ಇದ್ದ ಈ ವೃದ್ಧರ ಪ್ರಕರಣ ಈಗ ಎಲ್ಲೆಡೆ ತೀವ್ರ ಚರ್ಚೆಯ ವಿಷಯವಾಗಿದೆ.

ಇನ್ನು ಇಡಿ ಈ ಇಬ್ಬರು ವೃದ್ಧರ ತನಿಖೆಗೆ ಒಳಪಡಿಸಿದ ಸಂದರ್ಭದಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣ ಕೇವಲ 450 ರೂಪಾಯಿ ಎಂದು ತಿಳಿದು ಬಂದಿದೆ. ಜೊತೆಗೆ ಈವರೆಗೆ ಅವರ ಖಾತೆಯಿಂದ ಅಂತಹ ಯಾವುದೇ ಬಾರೀ ಮೊತ್ತದ ಹಣದ ವ್ಯವಹಾರ ಕೂಡಾ ನಡೆದಿಲ್ಲ ಎಂದು ತಿಳಿದು ಬಂದಿದೆ.

ಈ ಬಗ್ಗೆ ರಾಜಕೀಯ ವಲಯ ಹಾಗೂ ಸಾಮಾಜಿಕ ವಲಯಗಳಲ್ಲಿ ಇಡಿ ಹಾಗೂ ಬಿಜೆಪಿ ಪಕ್ಷದ ವಿರುದ್ಧ ವ್ಯಾಪಕ ವಿರೋಧ ಬಂದ ಹಿನ್ನೆಲೆಯಲ್ಲಿ ಇಡಿ ಈ ಪ್ರಕರಣವನ್ನು ವಜಾಗೊಳಿಸಲು ನಿರ್ಧರಿಸಿದೆ. ಅಲ್ಲದೇ ಇದು ನಮ್ಮ ಅರಿವಿಗೆ ಬಾರದೇ ನಡೆದ ಪ್ರಮಾದ ಎಂದು ಇಡಿ ಸ್ಪಷ್ಟನೆ ನೀಡಿದೆ.

ಇತ್ತ ತಮಿಳುನಾಡು ಬಿಜೆಪಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಸ್ಥಳೀಯ ಪೊಲೀಸರು ಬಿಜೆಪಿ ಪಕ್ಷ ಮತ್ತು ಇಡಿ ಸಂಸ್ಥೆಗೆ ಬೆದರಿಸುವ ಕಾರ್ಯ ನಡೆಸಿದ್ದಾರೆ ಎಂದು ಆರೋಪಿಸಿದೆ. ಆದರೆ ಈವರೆಗೆ ಇಡಿ ಸಂಸ್ಥೆ ಮೇಲಿದ್ದ ಆರೋಪದಂತೆ ಸಂಸ್ಥೆ ಬಿಜೆಪಿ ಪಕ್ಷದ ಕೈಗೊಂಬೆಯಂತೆ ವರ್ತಿಸಿದೆ ಎಂಬ ಆರೋಪಕ್ಕೆ ಈ ಪ್ರಕರಣ ಇಂಬು ನೀಡಿದಂತಿದೆ.

Related Articles

ಇತ್ತೀಚಿನ ಸುದ್ದಿಗಳು