Sunday, July 27, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿಯ ಅಪಪ್ರಚಾರಕ್ಕೆ ಜನರ ಅಭಿವೃದ್ಧಿ ಮೂಲಕವೇ ಉತ್ತರ: ಸಿ.ಎಂ.ಸಿದ್ದರಾಮಯ್ಯ

ವಿಜಯಪುರ ಜು 14: ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಎನ್ನುವುದಕ್ಕೆ, ಒಂದೇ ದಿನ ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ನಾನು ನೆರವೇರಿಸಿದ ಈ ಕ್ಷಣವೇ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಇಂದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣ ನಡೆಸಿದ ಹಿನ್ನೆಲೆಯಲ್ಲಿ ಕೆ.ಕೆ.ಆರ್.ಟಿ.ಸಿ ಬಸ್‌ಗೆ ಪೂಜೆ ನೆರವೇರಿಸಿ, ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿ, ನಂತರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ, ಲಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

4157 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, 401 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ ಮಾಡಿದ್ದೇನೆ. ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ. ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರದ ಸಾಧನೆ ಮತ್ತು ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಸಾರ್ವಜನಿಕ‌ವಾಗಿ ದಾಖಲೆ ಸಮೇತ ಚರ್ಚೆ ನಡೆಸೋಣ. ಜನರೇ ತೀರ್ಮಾನಿಸಲಿ ಎಂದು ನುಡಿದರು.

ಬಿಜಾಪುರ ಜಿಲ್ಲೆ ಮೊದಲು ಹೇಗಿತ್ತು ? ನಮ್ಮ ಸರ್ಕಾರದಲ್ಲಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ಕೈಯಲ್ಲಿ ಹಿಡಿದು ನೋಡಿ. ಬಿಜಾಪುರ ಜಿಲ್ಲೆಯಲ್ಲಿ ನೀರಾವರಿ ಈ ಮಟ್ಟಕ್ಕೆ ಅಭಿವೃದ್ಧಿಗೊಳಿಗೆ, ಬರದ ನಾಡಾಗಿದ್ದ ಬಿಜಾಪುರವನ್ನು ಹಸಿರು ನಾಡು ಮಾಡಿದ್ದು ನಾವು ಎಂದು ನುಡಿದರು.

ಹಿಂದೆ ಬರಗಾಲ ಬಂದಾಗ ಜನ ನಿಂಬೆ ಗಿಡ ಕಿತ್ತು ಹಾಕುತ್ತಿದ್ದರು. ಅದೇ ದಿನ‌ ನಾನು ಇಂಡಿಗೆ ಬಂದಿದ್ದೆ. ನಿಂಬೆ ಬೆಳೆಗಾರರಿಗೆ ಭರವಸೆ ನೀಡಿದ್ದೆ. ಇಂದು ನಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನ ಬಿಡುಗಡೆ ಮಾಡಿ ನುಡಿದಂತೆ ನಡೆಯುವ ಕಾಂಗ್ರೆಸ್ಸಿನ ಪರಂಪರೆಯನ್ನು ಮುಂದುವರೆಸಿದ್ದೇವೆ ಎಂದರು.

ಬಿಜೆಪಿ-ಜೆಡಿಎಸ್ ಇಬ್ಬರೂ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಅಪಪ್ರಚಾರ ಮಾಡಿ ಜನರಿಂದಲೇ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ನಾವು ಇವರ ಅಪಪ್ರಚಾರಕ್ಕೆ ಜನರ ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳ ಮೂಲಕವೇ ಉತ್ತರ ಕೊಡುತ್ತಿದ್ದೇವೆ ಎಂದರು.

500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವುದು, 1.23 ಕೋಟಿ ಕುಟುಂಬಗಳು ಗೃಹಲಕ್ಷ್ಮಿ ಹಣ ಪಡೆದಿರುವುದು, 1.64 ಕೋಟಿ ಮನೆಗಳಿಗೆ ಉಚಿತವಾಗಿ 200 ಯೂನಿಟ್ ಹಣ ಪಡೆಯುತ್ತಿರುವುದು, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ಕೋಟಿ ಕೋಟಿ ಕನ್ನಡಿಗರ ಬದುಕಿಗೆ ನೆರವಾಗಿರುವುದು ಅಭಿವೃದ್ಧಿ ಅಲ್ಲವೇ ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಗ್ಯಾರಂಟಿಗಳಲ್ಲದೆ 83 ಸಾವಿರ ಕೋಟಿ ರೂಪಾಯಿ ಹಣ ಅಭಿವೃದ್ಧಿಗೆ ತೆಗೆದಿಟ್ಟುರುವುದು ನಮ್ಮ ಅಭಿವೃದ್ಧಿಪರವಾದ ಆಡಳಿತಕ್ಕೆ ಸ್ಪಷ್ಟ ನಿದರ್ಶನ. ಆದ್ದರಿಂದ ಬಿಜೆಪಿ-ಜೆಡಿಎಸ್ ನ ಸುಳ್ಳು ಆರೋಪಗಳನ್ನು ನಂಬಬೇಡಿ. ನಿಮ್ಮ ಕಣ್ಣೆದುರಿಗೇ ಇರುವ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿಯವರ ಮುಖಕ್ಕೆ ಹಿಡಿದು ಉತ್ತರಿಸಿ ಎಂದು ಕರೆ ನೀಡಿದರು.

ಸ್ಥಳೀಯ ಶಾಸಕರಾದ ಯಶವಂತರಾಯಗೌಡ ಪಾಟೀಲ್ ಅವರಿಗೆ ಸರ್ಕಾರದಿಂದ ಹಣ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವುದು ಹೇಗೆ ಎನ್ನುವುದರಲ್ಲಿ ಬಹಳ ಪ್ರಾಮಾಣಿಕರು ಮತ್ತು ಚಾಣಾಕ್ಷರು. ನಮ್ಮದು ಸರ್ವರ ಅಭಿವೃದ್ಧಿಗೆ ಬದ್ದವಾಗಿರುವ ಸರ್ಕಾರ ಎಂದರು.

ಸ್ಥಳೀಯ ಶಾಸಕರಾದ ಯಶವಂತರಾಯಗೌಡ ಪಾಟೀಲ್ ಅವರ ಅಧ್ಯಕ್ಷತೆಯ ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲ್, ಶಿವಾನಂದ ಎಸ್.ಪಾಟೀಲ್, ಶರಣ ಪ್ರಕಾಶ ಪಾಟೀಲ್ ಸೇರಿದಂತೆ ಹಲವು ಮಂದಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page