Thursday, July 3, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಹೇಳುವುದು ಸರಿಯಿದೆ, ಇನ್ನೊಂದು ಎಮರ್ಜೆನ್ಸಿ ಹೇರಿದರೆ ಭಾರತದ ಸ್ಥಿತಿ ಇನ್ನೂ ಕೆಟ್ಟದಾಗಬಹುದು

ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತುರ್ತು ಪರಿಸ್ಥಿತಿಗೆ 50 ವರ್ಷವಾಗಿರುವ ಸಂದರ್ಭದಲ್ಲಿ, ಸಾಂವಿಧಾನಿಕ ಆಡಳಿತಕ್ಕೆ ತಮ್ಮನ್ನು ತಾವು ಮತ್ತೆ ಸಮರ್ಪಿಸಿಕೊಳ್ಳುವ ಬದಲು, ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ರಾಕ್ಷಸೀಕರಿಸುವ ಒಂದು ಘೋರ ನಡೆಯನ್ನು ಇಡುತ್ತಿದೆ.

ತುರ್ತು ಪರಿಸ್ಥಿತಿಯನ್ನು ಔಪಚಾರಿಕವಾಗಿ ಹೇರುವ ಮೂಲಕ ಎಂದಿಗೂ ಸಂವಿಧಾನವನ್ನು ಉಲ್ಲಂಘಿಸದ ಕಾರಣ ಅವರು ತಮ್ಮನ್ನು ತಾವು ಸಂವಿಧಾನಕ್ಕೆ ಅರ್ಪಿಸಿಕೊಳ್ಳಬೇಕಾಗಿಲ್ಲ. ನರೇಂದ್ರ ಮೋದಿ ಸರ್ಕಾರವು ಈ ಸಂದರ್ಭವನ್ನು ಸಂವಿಧಾನ್ ಹತ್ಯಾ ದಿವಸ್ – ಸಂವಿಧಾನದ ಹತ್ಯೆಯ ದಿನ ಎಂದು ಬಿಂಬಿಸಲು ತನ್ನ ಸೃಜನಶೀಲ ಪ್ರತಿಭೆಯನ್ನೆಲ್ಲಾ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್‌ನ ಕಾಳಜಿ ಒಂದು ನಾಟಕ ಮತ್ತು ಇಂದಿರಾ ಗಾಂಧಿಯವರ ಪಕ್ಷ ಅಧಿಕಾರಕ್ಕೆ ಬಂದರೆ ದೇಶ ಮತ್ತೆ ತುರ್ತು ಪರಿಸ್ಥಿತಿಯ ಭಯಾನಕ ಪರಿಸ್ಥಿತಿಗೆ ಬೀಳುತ್ತದೆ ಎಂಬ ಭಯಾನಕ ಸಂದೇಶವನ್ನು ರವಾನಿಸುವುದು ಬಿಜೆಪಿಯ ಉದ್ದೇಶವಾಗಿತ್ತು ಎಂಬುದು ಸ್ಪಷ್ಟ.

ಇಂದು ಮೋದಿ ಸರ್ಕಾರ ಪತನಗೊಂಡು ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಚುನಾವಣೆಗಳು ನಡೆಯುತ್ತವೆ ಎಂದು ಊಹಿಸೋಣ. ವಿರೋಧ ಪಕ್ಷಗಳು ಗೆದ್ದು ಕಾಂಗ್ರೆಸ್‌ನಲ್ಲಿ ಯಾರಾದರೂ ಪ್ರಧಾನಿಯಾಗುತ್ತಾರೆ ಎಂದು ಅಂದುಕೊಳ್ಳೋಣ. ಆಗ ಅವರು ಏನು ಮಾಡಬಹುದು?

(ಅನುವಾದಕರ ಸ್ಪಷ್ಟೀಕರಣ: ಇಲ್ಲಿಂದ ಮುಂದೆ ಸದ್ಯ ನಡೆಯುತ್ತಿರುವ ಪ್ರತಿಕೂಲ ಸಂಗತಿಗಳನ್ನು ವಿಡಂಬನಾತ್ಮಕವಾಗಿ ಬಳಸಲಾಗಿದೆ. ಮೋದಿ ಹೋಗಿ ಇನ್ನೊಂದು ಸರ್ವಾಧಿಕಾರಿ ಬಂದರೆ ಮೋದಿ ಮಾಡುತ್ತಿರುವುದನ್ನೇ ಮಾಡಬಹುದು)

ಅವರು ನವೆಂಬರ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಆಡಳಿತ ಪ್ರಾರಂಭಿಸಬಹುದು, ಬಹುಶಃ ಮಧ್ಯರಾತ್ರಿಯಿಂದ ಭಾರತೀಯ ಕರೆನ್ಸಿಯನ್ನು ಅಮಾನ್ಯ ಮಾಡುತ್ತೇವೆ ಎಂದು ಘೋಷಿಸಬಹುದು. ಅವರು ಊಹೆಯನ್ನೂ ಮಾಡದಂತೆ ರಾಷ್ಟ್ರದ ಮೇಲೆ ನೋಟು ರದ್ದತಿ ರಾಕ್ಷಸನನ್ನು ಬಿಡಬಹುದು, ಎಲ್ಲೆಡೆ ಭಯಭೀತಿಯನ್ನು ಉಂಟುಮಾಡಬಹುದು, ಸಾಮಾನ್ಯ ಜನರು ಮುಂದಿನ ಜೀವನಕ್ಕೆ ಯಾವುದೇ ತಯಾರಿ ಮಾಡುವ ಮೊದಲೇ ಈ ನಿರ್ಧಾರ ತೆಗೆದುಕೊಳ್ಳಬಹುದು. ಆಗ ಏನಾಗುತ್ತದೆ? ವ್ಯವಹಾರಗಳು ನಾಶವಾಗಬಹುದು; ಆರ್ಥಿಕತೆ ಕುಸಿಯಬಹುದು ಮತ್ತು ಜನರು ನೂರಾರು ರುಪಾಯಿ ಹಣಕ್ಕಾಗಿಯೂ ದಿಕ್ಕುಗೆಡಬಹುದು. ಸಂವೇದನೆಯೇ ಇಲ್ಲದ ಮನಸ್ಥಿತಿಯನ್ನು ಹೊಂದಿರುವ ಸರ್ವಾಧಿಕಾರಿಯಂತೆ, ಕಾಂಗ್ರೆಸ್ ಪ್ರಧಾನಿ ಲಕ್ಷಾಂತರ ಬಡ ಜನರನ್ನು “ಘರ್ ಮೇ ಶಾದಿ ಹೈ, ಪೈಸೆ ನಹೀಂ ಹೈ (ಮನೆಯಲ್ಲಿ ಮದುವೆ ಇದೆ, ಆದ್ರೆ ಹಣವಿಲ್ಲ)” ಎಂದು ಅಣಕಿಸಿ ನಗುತ್ತಾರೆ. ಲೀಡರ್ ಪ್ರಜಾಪ್ರಭುತ್ವವನ್ನು ನಿರ್ದಯವಾಗಿ ಕತ್ತು ಹಿಸುಕಲು ಹೋಗುತ್ತಾನೆ. ತನ್ನ ಹುಚ್ಚುತನವನ್ನು ವಿರೋಧಿಸುವ ಪ್ರತಿಯೊಬ್ಬ ನಾಗರಿಕ, ಪ್ರತಿಯೊಬ್ಬ ಅರ್ಥಶಾಸ್ತ್ರಜ್ಞ ಮತ್ತು ಪ್ರತಿಯೊಬ್ಬ ಟೀಕಾಕಾರನನ್ನೂ “ಭ್ರಷ್ಟ” ಎಂದು ಖಂಡಿಸುತ್ತಾನೆ. ತುರ್ತು ಪರಿಸ್ಥಿತಿಯನ್ನು ಜಾರಿಗೆ ತರುವ ಪಕ್ಷದ ಆ ದುಷ್ಟ ಪ್ರಧಾನಿ ನಿಜಕ್ಕೂ ಹಾಗೆ ಮಾಡುತ್ತಾನೆ.

ಹಾಗಲ್ಲದೇ ಇಲ್ಲದಿದ್ದರೆ, ಆ ಪ್ರಧಾನಿಯು ಇಂದಿರಾ ಗಾಂಧಿಯವರು ಮಾಡಿದಂತೆ ತುರ್ತು ಪರಿಸ್ಥಿತಿಯನ್ನು ಹೇರಿ, ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಅದನ್ನು ತೆಗೆದುಹಾಕುವ ಮೂರ್ಖ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ, ತುರ್ತು ಪರಿಸ್ಥಿತಿಯಂತೆ ಅರಾಜಕ ಪರಿಸ್ಥಿತಿಗಳ ಕುಂಟ ನೆಪ ಹಾಕುವ ಅಗತ್ಯವಿಲ್ಲ. ಭಾರತವನ್ನು ಅಸ್ಥಿರಗೊಳಿಸಲು ಅಂತರರಾಷ್ಟ್ರೀಯ ಪಿತೂರಿಯ ಅನುಮಾನಗಳನ್ನು ಹರಡುವ ಅಗತ್ಯವಿಲ್ಲ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ‘ಭಾರತವನ್ನು ಮತ್ತೊಮ್ಮೆ ಶ್ರೇಷ್ಠ ಮಾಡುತ್ತೇವೆ’ ಎಂಬ ಬೊಗಳೆ ಪ್ರಚಾರ ಮಾಡುತ್ತಾರೆ.

1975 ರಂತಲ್ಲದೆ, ಮಾಧ್ಯಮಗಳ ಮೇಲೆ ಯಾವುದೇ ತಾತ್ಕಾಲಿಕ ನಿರ್ಬಂಧಗಳಿರುವುದಿಲ್ಲ. ಪ್ರಧಾನಿಯವರು ಮಾಧ್ಯಮ ಸಂಸ್ಥೆಗಳನ್ನು ವಶಪಡಿಸಿಕೊಂಡು ಪತ್ರಿಕಾ ಸ್ವಾತಂತ್ರವನ್ನು ದುರ್ಬಲಗೊಳಿಸಬಹುದು, ಇದರಿಂದಾಗಿ ದೂರದರ್ಶನ ಚಾನೆಲ್‌ಗಳು ಸರ್ಕಾರಕ್ಕೆ ಗುರಾಣಿಯಂತೆ ಮತ್ತು ವಿರೋಧಿಗಳನ್ನು ಬೇಟೆಯಾಡುವ ಬೇಟೆ ನಾಯಿಗಳಂತೆ ನೋಡಿಕೊಳ್ಳಬಹುದು. ಸ್ವತಂತ್ರ ಪತ್ರಕರ್ತರನ್ನು ನಿರುದ್ಯೋಗಿಗಳನ್ನಾಗಿ ಮಾಡಲಾಗುತ್ತದೆ, ಪ್ರಶ್ನಿಸುವ ಸುದ್ದಿ ಪೋರ್ಟಲ್‌ಗಳ ಮೇಲೆ ದಾಳಿ ಮಾಡಲಾಗುತ್ತದೆ ಮತ್ತು ಪ್ರಮುಖ ಮಾಧ್ಯಮ ಸಂಸ್ಥೆಗಳನ್ನು ಕ್ರೋನಿ ಬಂಡವಾಳಶಾಹಿಗಳು ಖರೀದಿಸುತ್ತಾರೆ. ಪ್ರಧಾನಿಯರು ನ್ಯಾಯಾಂಗವು ಚೆಂಡಾಟ ಆಡುವಂತೆ ನೋಡಿಕೊಳ್ಳುತ್ತಾರೆ; ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಅವರ ಸ್ನೇಹಿತರು ಮತ್ತು ಅನುಯಾಯಿಗಳಂತೆ ವರ್ತಿಸುತ್ತಾರೆ. ಹೈಕೋರ್ಟ್‌ಗಳು ಸಾಂವಿಧಾನಿಕ ತತ್ವಗಳ ವಿರುದ್ಧ ಸಂಭ್ರಮದಿಂದ ಹಾಡುತ್ತವೆ.

ಕಾಂಗ್ರೆಸ್ ನ ಹೊಸ ಪ್ರಧಾನಿ ಇಲ್ಲಿಗೇ ನಿಲ್ಲುವುದಿಲ್ಲ. ಭಾರತದ ಚುನಾವಣಾ ಆಯೋಗದ ಪ್ರಮುಖ ಸಂಸ್ಥೆಯನ್ನು ನಿಯಂತ್ರಿಸುವುದು ರಾಜಕೀಯದಲ್ಲಿ ಅವರಿಗೆ ಅನಿವಾರ್ಯ. ಅವರು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ತಮಗೆ ವಿಧೇಯರಾಗಿರುವ ಅಧಿಕಾರಿಗಳನ್ನು ನೇಮಿಸುತ್ತಾರೆ, ನೇಮಕಾತಿ ಪ್ರಕ್ರಿಯೆಯನ್ನು ತರ್ಕಬದ್ಧಗೊಳಿಸುವ ಸುಪ್ರೀಂ ಕೋರ್ಟ್‌ನ ಪ್ರಯತ್ನವನ್ನು ರದ್ದುಗೊಳಿಸುತ್ತಾರೆ ಮತ್ತು ಪಾರದರ್ಶಕತೆಯನ್ನು ಹತ್ತಿಕ್ಕಲು ನಿಯಮಗಳನ್ನು ತಿದ್ದುಪಡಿ ಮಾಡುತ್ತಾರೆ. ಸಾಂಪ್ರದಾಯಿಕ ಅರ್ಥದಲ್ಲಿ ಇಲ್ಲಿ ಪ್ಲೈಬಲ್ ಎಂದರೆ ವಿಧೇಯರು ಎಂದರ್ಥವಲ್ಲ. ಪ್ಲೈಬಲ್ ಎಂದರೆ ಅಪರಾಧದಲ್ಲಿ ಪಾಲುದಾರರು; ದುಷ್ಟ ಪಿತೂರಿಗಳನ್ನು ಕುರುಡಾಗಿ ಕಾರ್ಯಗತಗೊಳಿಸುವವರು. ಕನಿಷ್ಠ ತಮ್ಮನ್ನು, ತಮ್ಮ ಹತ್ತಿರದ ಸಚಿವರು ಮತ್ತು ಕೆಲವು ಪ್ರಮುಖ ಮುಖ್ಯಮಂತ್ರಿಗಳನ್ನು ಮಾದರಿ ನೀತಿ ಸಂಹಿತೆಯ ಹಿಡಿತದಿಂದ ಹೊರಗಿಡಲು ಅವರು ಅಧಿಕಾರಿಗಳನ್ನು ಬಳಸುತ್ತಾರೆ. ಇವಿಎಂಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಾರೆ, ಮತದಾರರ ಪಟ್ಟಿಗಳನ್ನು ಕುಶಲತೆಯಿಂದ ನಿರ್ವಹಿಸುತ್ತಾರೆ ಮತ್ತು ಚುನಾವಣೆಗೆ ಮುನ್ನ ವಿರೋಧ ಪಕ್ಷಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಾರೆ.

ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲು ಕಾಂಗ್ರೆಸ್ ಪ್ರಧಾನಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. ಕೇಂದ್ರೀಯ ತನಿಖಾ ದಳಗಳ ಕೈಯಲ್ಲಿ ವಿರೋಧ ಪಕ್ಷದ ನಾಯಕರ ವಿಳಾಸಗಳನ್ನು ಮಾತ್ರ ಇರುವಂತೆ ಮಾಡಬಹುದು. ಆದರೆ ಕಾನೂನು ಬಾಹಿರ ಜಾರಿ ನಿರ್ದೇಶನಾಲಯವು ಮಾಟಗಾರರಂತೆ ದೈತ್ಯವಾಗಿ ಬದಲಾಗುತ್ತದೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಯಾರನ್ನೂ ಬಿಡಲಾಗುವುದಿಲ್ಲ; ವಿದ್ಯಾರ್ಥಿ ನಾಯಕರನ್ನು ಭಯೋತ್ಪಾದಕರ ಪರ ಎಂದು ದೂಷಿಸಿ ಜೈಲಿಗೆ ಹಾಕಲಾಗುತ್ತದೆ, ಘೋರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ವರದಿ ಮಾಡಲು ಹೋಗುವ ವರದಿಗಾರರನ್ನು ಕಠಿಣ ಕಾನೂನುಗಳ ಅಡಿಯಲ್ಲಿ ಬಂಧಿಸಲಾಗುತ್ತದೆ , ಜಾಮೀನು ಅರ್ಜಿಗಳನ್ನು ವರ್ಷಗಳ ಕಾಲ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ, ಭ್ರಷ್ಟ ವಿರೋಧ ಪಕ್ಷದ ನಾಯಕರನ್ನು ಬಲವಂತದ ಒತ್ತಡದಲ್ಲಿ ಬಂಧಿಸಲಾಗುತ್ತದೆ ಮತ್ತು ರಾಜ್ಯ ಸರ್ಕಾರಗಳನ್ನು ಉರುಳಿಸಲಾಗುತ್ತದೆ ಮತ್ತು ಅಧಿಕಾರ ಕಸಿದುಕೊಳ್ಳಲಾಗುತ್ತದೆ.

( ಅನುವಾದಕರ ಸ್ಪಷ್ಟೀಕರಣ: ಇವೆಲ್ಲವೂ ಕಾಂಗ್ರೇಸ್‌ ಒಂದು ವೇಳೆ ಸರ್ವಾಧಿಕಾರಿಯನ್ನು ಸೃಷ್ಟಿಸಿದರೆ ಮಾಡಬಹುದು ಎಂಬ ವಿಡಂಬನಾತ್ಮಕ ಊಹೆ. ಈ ಊಹೆಯೇ ಸದ್ಯ ಬಿಜೆಪಿ ಸರ್ಕಾರದ ಅಡಿಯಲ್ಲಿ ನೈಜವಾಗಿ ನಡೆಯುತ್ತಿದೆ)

50 ವರ್ಷಗಳ ಹಿಂದೆ ಹೇರಿದ್ದ ತುರ್ತು ಪರಿಸ್ಥಿತಿಗಿಂತ ಈ ಹೊಸ ರೂಪವು ಹೆಚ್ಚು ಭಯಾನಕ ಮತ್ತು ನೋವಿನಿಂದ ಕೂಡಿದೆ. 1975 ರ ಕಾನೂನು ತುರ್ತು ಪರಿಸ್ಥಿತಿಯು ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಸರ್ಕಾರಿ ಉಪಕರಣವನ್ನು ಬಳಸಿತು.ಆದರೆ ಹೊಸ ಪ್ರಧಾನಿಯ ತುರ್ತು ಪರಿಸ್ಥಿತಿಯು ಸರ್ಕಾರೇತರ ವ್ಯಕ್ತಿಗಳಿಗೆ ಕಾನೂನಿನ ನಿಯಮವನ್ನು ದುರ್ಬಲಗೊಳಿಸಲು ಅಧಿಕಾರ ನೀಡಬಹುದು. ಉದ್ರಿಕ್ತ ಗುಂಪುಗಳು ಬೀದಿಗಳಲ್ಲಿ ಜನರನ್ನು ಹಿಂಸಿಸಿ ಹತ್ಯೆ ಮಾಡಬಹುದು, ಕೋಮುವಾದಿ ಗುಂಪುಗಳು ನರಮೇಧದ ಕರೆಗಳನ್ನು ನೀಡಬಹುದು ಮತ್ತು ಆಡಳಿತ ಪಕ್ಷದ ಸದಸ್ಯರ ಕಾನೂನುಬಾಹಿರ ದೂರುಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬಹುದು. ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿಯನ್ನು ಶ್ಲಾಘಿಸಲು ನಿರಾಕರಿಸುವವರ ಮೇಲೆ ಸಂಘಟಿತ ಟ್ರೋಲ್‌ ದಾಳಿ ನಡೆಸಬಹುದು, ಅವರ ಬಗ್ಗೆ ಅಪಪ್ರಚಾರ ಮಾಡಬಹುದು. ಸುಳ್ಳು ಪ್ರಚಾರ ಮತ್ತು ಸುಳ್ಳು ಭರವಸೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಬಲ್ಯ ಸಾಧಿಸುತ್ತವೆ ಮತ್ತು ವಿರೋಧ ಪಕ್ಷದ ಧ್ವನಿಗಳು ಸಾರ್ವಜನಿಕ ಚರ್ಚೆಯಿಂದ ಮರೆಮಾಚಲ್ಪಡಬಹುದು.

ಸಾಮಾನ್ಯ ನಾಗರಿಕರು ಮಾತ್ರವಲ್ಲದೆ, ಸಂಸತ್ ಸದಸ್ಯರೂ ಸಹ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗುವುದಿಲ್ಲ.

ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸುವುದನ್ನು ಮರೆತುಬಿಡಬಹುದು, ಗಾಜಾದಲ್ಲಿನ ನರಮೇಧದಂತಹ ದೂರದೇಶದ ವಿಚಾರಗಳ ಕುರಿತು ಶಾಂತಿಯುತ ಮೆರವಣಿಗೆ ಮಾಡಲು ಸಹ ಅನುಮತಿಸಲಾಗುವುದಿಲ್ಲ. ವಿಶ್ವವಿದ್ಯಾಲಯಗಳು ಅಸಮರ್ಥ ಸೈದ್ಧಾಂತಿಕ ಧರ್ಮಾಂಧರಿಂದ ತುಂಬಿರುತ್ತವೆ. ಮಾಹಿತಿ ಹಕ್ಕು ಮುಂತಾದ ಜನಪರ ಸಾಧನಗಳು ದುರ್ಬಲಗೊಳ್ಳಬಹುದು. ಇಷ್ಟು ಸಾಕಾಗುವುದಿಲ್ಲವೇ? ಈ ಪಕ್ಷದ ಭ್ರಷ್ಟ ನಾಯಕರು ರಾಷ್ಟ್ರೀಯ ಆಸ್ತಿಗಳನ್ನು ಒಬ್ಬ ಆಪ್ತ ಬಂಡವಾಳಶಾಹಿಗೆ ಹಸ್ತಾಂತರಿಸುತ್ತಾರೆ; ಕಾನೂನುಗಳನ್ನು ಉಲ್ಲಂಘಿಸಲು ಮತ್ತು ಪ್ರಪಂಚದಾದ್ಯಂತ ಒಪ್ಪಂದಗಳನ್ನು ಪಡೆದುಕೊಳ್ಳಲು ಸರ್ಕಾರಿ ಪ್ರಭಾವವನ್ನು ಬಳಸಲು ಅವನಿಗೆ ಅವಕಾಶ ಮಾಡಿಕೊಡುತ್ತಾರೆ. ಭ್ರಷ್ಟ ಒಪ್ಪಂದಗಳ ತನಿಖೆಯನ್ನು ತಡೆಯಲು ಅವರು ಯಾವುದೇ ಹಂತಕ್ಕೆ ಕೂಡ ಹೋಗಬಹುದು ; ಮುಚ್ಚಿದ ಲಕೋಟೆಗಳಲ್ಲಿ ರಹಸ್ಯ ಪತ್ರಗಳ ಮೂಲಕ ನ್ಯಾಯಾಂಗವನ್ನು ದಾರಿ ತಪ್ಪಿಸುವವರೆಗೆ.

(ಸದ್ಯ ಬಿಜೆಪಿ ಮಾಡುತ್ತಿರುವ ಈ ರೀತಿಯ ಸರ್ವಾಧಿಕಾರವನ್ನು) ಕಾಂಗ್ರೆಸ್ ಮಾಡಿದರೆ ಆ ಬಗ್ಗೆ ಎಚ್ಚರದಿಂದಿರಿ! ಇದು non-state actors ನಾಗರಿಕರ ಮೇಲೆ ನಿಗಾ ಇಡಲು ಮತ್ತು ಸಾರ್ವಜನಿಕ ಜೀವನವನ್ನು ಕಲುಷಿತಗೊಳಿಸಲು ಅವಕಾಶ ನೀಡುವುದಲ್ಲದೆ, non-state actors ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಸಂವಿಧಾನದಲ್ಲಿ ವಿರೂಪಗಳನ್ನು ಸೂಚಿಸಲು ಪ್ರೋತ್ಸಾಹಿಸಬಹುದು. ಸಾಂವಿಧಾನಿಕ ಸಂಸ್ಕೃತಿಯ ಅವಶೇಷಗಳ ಮೇಲೆ ನೃತ್ಯ ಮಾಡಲು ಡೋಂಗಿ ಬಾಬಾಗಳು ಹುಟ್ಟಿಕೊಳ್ಳುತ್ತಾರೆ. ಗೂಂಡಾಗಳು ಕಾನೂನಿನ ಪಾಲನೆ ಮಾಡುವ ಅಧಿಕಾರಿಗಳಿಗೆ ಆದೇಶ ನೀಡಬಹುದು, ಸಾರ್ವಜನಿಕ ನಡವಳಿಕೆಯನ್ನು ನಿಯಂತ್ರಿಸುತ್ತಾರೆ; ನಾಗರಿಕರಿಗೆ ಏನು ಹೇಳಬೇಕು, ಏನು ತಿನ್ನಬೇಕು, ಏನು ಧರಿಸಬೇಕು, ಯಾರನ್ನು ಪ್ರೀತಿಸಬೇಕು ಮತ್ತು ಮದುವೆಯಾಗಬೇಕು ಎಂದು ಹೇಳಬಹುದು. ಐತಿಹಾಸಿಕ ಸಂಗತಿಗಳನ್ನು ಅಳಿಸಿಹಾಕಲಾಗುತ್ತದೆ ಮತ್ತು ಹೊಸ ಇತಿಹಾಸವನ್ನು ಬರೆಯಲಾಗುತ್ತದೆ. ಸಮಾಜದಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ, ಸೃಜನಶೀಲ ಸ್ವಾತಂತ್ರ್ಯಗಳನ್ನು ನಿಗ್ರಹಿಸಲಾಗುತ್ತದೆ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಬೇಷರತ್ತಾದ ನಿಷ್ಠೆಯನ್ನು ಡಿಮ್ಯಾಂಡ್‌ ಮಾಡಬಹುದು. ಸಂಸತ್ತನ್ನು ಸಹ ಸಣ್ಣ ಸರ್ಕಾರಿ ಇಲಾಖೆಗಳಂತೆ ನಿಯಂತ್ರಿಸಲಾಗುತ್ತದೆ; ಬೆಲೆಗಳು ಮತ್ತು ನಿರುದ್ಯೋಗದಂತಹ ಮೂಲಭೂತ ವಿಷಯಗಳನ್ನು ಚರ್ಚಿಸಲು, ಬಾಹ್ಯ ಆಕ್ರಮಣಗಳು ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯ ಬಗ್ಗೆ ಏನು ಮಾತನಾಡಬೇಕು ಎಂಬುದನ್ನು ಚರ್ಚಿಸಲು ವಿರೋಧ ಪಕ್ಷಗಳು ಹೆಣಗಾಡುತ್ತವೆ. ಕೆಲವು ನಾಯಕರು ಮತ್ತು ಅವರ ಕಾರ್ಪೊರೇಟ್ ಸ್ನೇಹಿತರ ಬಗ್ಗೆ ಯಾವುದೇ ಪ್ರತಿಕೂಲ ಹೇಳಿಕೆಗಳು ಬಂದರೂ ಅದನ್ನು ವಿಧೇಯ ರಾಷ್ಟ್ರಪತಿ ತೆಗೆದುಹಾಕುತ್ತಾರೆ.

ಇಲ್ಲ, ಈ ಪರಿಸ್ಥಿತಿ ಇಷ್ಟು ಭಯಾನಕವಾಗಿದೆ. ನಾವು ಮತ್ತೆ ಇಂದಿರಾ ಗಾಂಧಿಯಂತೆ ತುರ್ತು ಪರಿಸ್ಥಿತಿ ಹೇರಲು ಅಗತ್ಯವಿಲ್ಲ. ನಾವು ಇಂದು ಹೆಚ್ಚು ಸಂತೋಷವಾಗಿದ್ದೇವೆ. ಮತ್ತೊಂದು ತುರ್ತು ಪರಿಸ್ಥಿತಿಯ ದುಃಸ್ವಪ್ನಕ್ಕಾಗಿ ನಾವು ಈ ಅಮೃತ ಕಾಲವನ್ನು ಏಕೆ ಬಲಿಕೊಡಬೇಕು? ಮೋದಿ ಭಜನೆಯನ್ನು ಗಟ್ಟಿಯಾಗಿ ಮಾಡೋಣ.

ಲೇಖನ: ಸಂಜಯ್ ಕೆ. ಝಾ, ರಾಜಕೀಯ ವಿಶ್ಲೇಷಕರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page