ಬೆಂಗಳೂರು: ಇತ್ತೀಚೆಗಷ್ಟೇ ಸಾಕಷ್ಟು ಸುದ್ದಿಯಾಗಿದ್ದ ಪೇಯಿಂಗ್ ಗೆಸ್ಟ್‌ಗೆ ನುಗ್ಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಪೊಲೀಸರು ಒಂದು ಅಂತ್ಯ ಹಾಡಿದ್ದಾರೆ.ಕೋರಮಂಗಲದ ವಿ.ಆರ್. ಬಡಾವಣೆಯ ಭಾರ್ಗವಿ ಮಹಿಳಾ ಪೇಯಿಂಗ್ ಗೆಸ್ಟ್‌ಗೆ ನುಗ್ಗಿ ಯುವತಿ ಕೃತಿ ಕುಮಾರಿ (24) ಎಂಬುವವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕೋರಮಂಗಲ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಧ್ಯಪ್ರದೇಶದ ಯುವಕ ಅಭಿಷೇಕ್ ಆರೋಪಿ.ಈ ಆರೋಪಿಯು ಪಿ.ಜಿಗೆ ನುಗ್ಗಿ ಯುವತಿಯ ಕತ್ತು ಸೀಳಿ ಹತ್ಯೆ ಮಾಡುತ್ತಿರುವ ದೃಶ್ಯ ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೃಶ್ಯಾವಳಿ ಆಧರಿಸಿ ಆರೋಪಿಯ ಗುರುತು ಪತ್ತೆ ಹಚ್ಚಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಯಶಸ್ವಿ ಆಗಿದ್ದಾರೆ.
ಕೃತಿ ಕುಮಾರಿ ಹಾಗೂ ಮಹಾರಾಷ್ಟ್ರ ಯುವತಿ ರೇಣುಕಾ (ಹೆಸರು ಬದಲಿಸಲಾಗಿದೆ) ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಇಬ್ಬರೂ ಭಾರ್ಗವಿ ಪಿಜಿಗೆ ಸ್ಥಳಾಂತರಗೊಂಡಿದ್ದರು. ಕೃತಿ ಕುಮಾರಿ ಅವರ ಸ್ನೇಹಿತೆ ರೇಣುಕಾ ಅಭಿಷೇಕ್‌ನನ್ನು ಪ್ರೀತಿಸುತ್ತಿದ್ದರು. ಅಭಿಷೇಕ್ ಎಲ್ಲೂ ಕೆಲಸ ಮಾಡುತ್ತಿರಲಿಲ್ಲ. ಅಭಿಷೇಕ್‌ಗೆ ಎಲ್ಲಾದರೂ ಕೆಲಸ ಮಾಡುವಂತೆ ಪ್ರಿಯತಮೆ ಬುದ್ಧಿಮಾತು ಹೇಳಿದ್ದರು. ಆದರೂ ಆತ ಎಲ್ಲೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕೆಲಸಕ್ಕೆ ತೆರಳುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದ.
ಅಭಿಷೇಕ್ ಕೆಲಸಕ್ಕೆ ಹೋಗದೇ ಸುತ್ತಾಟ ನಡೆಸುತ್ತಿರುವುದನ್ನು ಕೃತಿ ಪತ್ತೆ ಮಾಡಿದ್ದರು. ಸ್ನೇಹಿತೆಯನ್ನೂ ಬೇರೆ ಪಿ.ಜಿಗೆ ಸೇರಿಸಿದ್ದರು. ಪ್ರಿಯತಮೆ ನನ್ನಿಂದ ದೂರ ಆಗಲು ಕೃತಿ ಅವರೇ ಕಾರಣವೆಂದು ಕುಪಿತಗೊಂಡಿದ್ದ ಅಭಿಷೇಕ್ ಮಂಗಳವಾರ ರಾತ್ರಿ ಪಿ.ಜಿಗೆ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಇನ್ನಷ್ಟೇ ಆರೋಪಿಯನ್ನು ಮತ್ತಷ್ಟು ತನಿಖೆಗೆ ಒಳಪಡಿಸಲಾಗುವುದು ಎ ಎಂದು ಪೊಲೀಸರು ತಿಳಿಸಿದ್ದಾರೆ.