Monday, January 26, 2026

ಸತ್ಯ | ನ್ಯಾಯ |ಧರ್ಮ

ಕೇಂದ್ರ ಸರ್ಕಾರ ತರಿಗೆ ಹಾಗೂ ರಾಜ್ಯಕ್ಕೆ ಭಾರೀ ಅನ್ಯಾಯ ಮಾಡುತ್ತಿದೆ – ಸಚಿವ ಕೃಷ್ಣ ಬೈರೇಗೌಡ

ಹಾಸನ: ರಾಜ್ಯದ ಪ್ರಗತಿಗೆ ಶಿಕ್ಷೆ ನೀಡುವ ರೀತಿಯಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿ, ಮಹಾದಾಯಿ, ಕಳಸಾ-ಬಂಡೂರಿ, ಮೇಕೆದಾಟು ಸೇರಿದಂತೆ ಪ್ರಮುಖ ಜಲ ಯೋಜನೆಗಳಿಗೆ ಅನುಮತಿ ನೀಡದೆ ರೈತರಿಗೆ ಹಾಗೂ ರಾಜ್ಯಕ್ಕೆ ಭಾರೀ ಅನ್ಯಾಯ ಮಾಡುತ್ತಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಇಂದು ಈ ಕುರಿತು  ಮಾಧ್ಯಮದೊಂದಿಗೆ ಮಾತನಾಡಿ, ತಮಿಳುನಾಡಿನ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದರೂ ಕೂಡ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಇದು ಕುಡಿಯುವ ನೀರು ಹಾಗೂ ರೈತರ ಬದುಕಿಗೆ ಧಕ್ಕೆ ತರುವ ನಡೆ ಎಂದು ಕಿಡಿಕಾರಿದರು. ಭದ್ರ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ರೂ ನೀಡುವುದಾಗಿ ಘೋಷಣೆ ಮಾಡಿದ್ದರೂ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಹಣಕಾಸು ಆಯೋಗ ರಾಜ್ಯಕ್ಕೆ 11,495 ಕೋಟಿ ರೂ ನೀಡಲು ಶಿಫಾರಸು ಮಾಡಿದ್ದರೂ ಕೇಂದ್ರ ಸರ್ಕಾರ ಒಂದು ಪೈಸೆಯನ್ನೂ ನೀಡಿಲ್ಲ. ಜಲಜೀವನ್ ಮಿಷನ್ ಅಡಿ 14 ಸಾವಿರ ಕೋಟಿ ರೂ ಬಾಕಿ ಇದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಿ ಬಡವರ ಕೈಯಿಂದ ಉದ್ಯೋಗವನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನಮಂತ್ರಿ ಆವಾಸ್ ಯೋಜನೆ, ಪಿಂಚಣಿ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳಲ್ಲಿ ಸಹಾಯಧನ ಹೆಚ್ಚಳವಾಗಿಲ್ಲ. ಕಳೆದ 12 ವರ್ಷಗಳಲ್ಲಿ ಮನೆ ಕಟ್ಟುವ ವಸ್ತುಗಳ ಬೆಲೆ ಎರಡು ಪಟ್ಟು ಹೆಚ್ಚಾದರೂ ಸಹಾಯಧನ ಮಾತ್ರ ಅದೇ ಮಟ್ಟದಲ್ಲಿ ಉಳಿದಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಡುಗೆ ಸಹಾಯಕಿಯರ ಗೌರವಧನವನ್ನೂ ಒಂದು ರೂಪಾಯಿ ಹೆಚ್ಚಳ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಸಚಿವರು, ಹಾಸನ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 4.41 ಲಕ್ಷ ಮಹಿಳೆಯರಿಗೆ 2,019 ಕೋಟಿ ರೂ. ನೇರವಾಗಿ ವರ್ಗಾವಣೆಯಾಗಿದೆ ಎಂದು ತಿಳಿಸಿದರು. ಗೃಹಜ್ಯೋತಿ ಯೋಜನೆಯಡಿ 5,40,717 ಕುಟುಂಬಗಳಿಗೆ 517 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ ಹಾಸನ ಜಿಲ್ಲೆಯಲ್ಲಿ 19.67 ಕೋಟಿ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, 672 ಕೋಟಿ ರೂ ವೆಚ್ಚವಾಗಿದೆ ಎಂದರು.

ಐದು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ 1 ಲಕ್ಷ 12 ಸಾವಿರ ಕೋಟಿ ರೂ. ನೇರವಾಗಿ ಜನರ ಖಾತೆಗೆ ವರ್ಗಾವಣೆಯಾಗಿದ್ದು, ಇದು ಜಗತ್ತಿನಲ್ಲೇ ಅಪರೂಪದ ಸಾಧನೆ. ಇದರಿಂದಲೇ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ತಲುಪಿದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page