ಬೆಂಗಳೂರು: ಕೇಂದ್ರ ಸರಕಾರ ನಮ್ಮ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ನಮಗೆ ಕೊಟ್ಟಿಲ್ಲ. ಬದಲಿಗೆ ಅವರು ಕೊಟ್ಟಿರುವುದು ಬಡ್ಡಿ ರಹಿತ ಸಾಲ ಮಾತ್ರ. ವಿರೋಧಪಕ್ಷದವರಿಗೆ ಮಾತನಾಡಲು ಏನೂ ಸಿಗದೆ ಸುಳ್ಳು ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸದ ಸಿಎಂ, ನಮ್ಮ ಕಾರ್ಯಕ್ರಮಗಳನ್ನು ವಿಶೇಷವಾಗಿ ಗ್ಯಾರಂಟಿ ಯೋಜನೆಗಳನ್ನು ಮಾಧ್ಯಮಗಳು, ಜನರು, ವಿಶ್ವವಿದ್ಯಾನಿಲಯಗಳು, ವಿದ್ವಾಂಸರು ಶ್ಲಾಘಿಸಿದ್ದಾರೆ. ಕ್ಯಾಮರೂನ್ ದೇಶದ ಸುಲೇಮಾನ್ ಹ್ಯಾಂಕ್, ವಿಶ್ವಸಂಸ್ಥೆ ಜನರಲ್ ಬಾಡಿ ಅಧ್ಯಕ್ಷರು ಗ್ಯಾರಂಟಿಗಳನ್ನು ಒಪ್ಪಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು ಗ್ಯಾರಂಟಿಗಳನ್ನು ಶ್ಲಾಘಿಸಿ ಬರೆದಿರುವುದು ಸದನದ ಗಮನದಲ್ಲಿದ್ದರೂ ಬಿಜೆಪಿಯವರು ಸುಳ್ಳು ಹೇಳಿದ್ದಾರೆ. 2020ರಲ್ಲಿ ನಾವು ಗ್ಯಾರಂಟಿಗಳನ್ನು ಘೋಷಿಸಿದಾಗಲೂ ಪತ್ರಿಕೆಗಳು ಶ್ಲಾಘಿಸಿ ಬರೆದಿವೆ. ನೀವೆಲ್ಲಾ ಇದನ್ನು ವಿರೋಧಿಸಿದ್ದೀರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಸರಕಾರ ಗ್ಯಾರಂಟಿ ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಅಭಿವೃದ್ಧಿಗೆ ಹಣವಿರುವುದಿಲ್ಲ ಎಂದು ನೀವು ಮಾತ್ರವಲ್ಲ, ದೇಶದ ಪ್ರಧಾನಿಗಳು ಕೂಡ ಟೀಕಿಸಿದ್ದರು. ಆದರೆ ನೀವೇ ಲೋಕಸಭಾ ಚುನಾವಣೆಯಲ್ಲಿ ಮೋದಿ ಕಿ ಗ್ಯಾರಂಟಿ ಎಂದು ಘೋಷಣೆ ಮಾಡಿದ್ದೀರಿ. ಗ್ಯಾರಂಟಿಗಳನ್ನು ನಿರಂತರವಾಗಿ ವಿರೋಧಿಸಿದವರೇ ಈ ಕೆಲಸ ಮಾಡಿದ್ದೀರಿ. ಅನೇಕ ರಾಜ್ಯಗಳಲ್ಲಿ ಇದನ್ನು ನಕಲು ಮಾಡಿದ್ದೀರಿ ಎಂದು ವ್ಯಂಗ್ಯವಾಡಿದರು.