Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮನೆಯೊಳಗಿನ ಶೀತಲ ಸಮರ

(ಈ ವರೆಗೆ…)

ಚಂದ್ರಹಾಸನಿಗೆ ಹೆಣ್ಣು ನೋಡಲು ಅಪ್ಪ ಬಸವಯ್ಯನ ಮನೆಗೆ ಹೋಗಿ ಆತನನ್ನು ಮದುವೆಗೆ ಒಪ್ಪಿಸಿ ಬರುತ್ತಾನೆ. ಅಪ್ಪ ಹೇಳಿದ, ಲಕ್ಷ್ಮಿಯನ್ನೇ ಹೋಲುತ್ತಿರುವ ಹುಡುಗಿಯನ್ನು ಮನೆ ತುಂಬಿಸಿಕೊಳ್ಳುವ ಕಾತರದಿಂದ ಅವ್ವ ಚಂದ್ರಹಾಸನೊಡಗೂಡಿ ಬಸವಯ್ಯನ ಮನೆಗೆ ಹೋಗಿ ಮದುವೆ ನಿಶ್ಚಯ ಮಾಡಿಕೊಂಡೇ ಬರುತ್ತಾಳೆ. ಮದುವೆಯ ಹಿಂದಿನ ದಿನ ಏನು ನಡೆಯಿತು?  ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಇಪ್ಪತ್ತೈದನೆಯ ಕಂತು.

ಕೆನೆಯೂರಿನ ಸೀತಾರಾಮ ದೇವಾಲಯದಲ್ಲಿ ಮನೆಯ ಮೊದಲನೇ ಮದುವೆ ಯಾವ ಆಡಂಬರವೂ ಇಲ್ಲದೆ ಕೆಲವು ನೆಂಟರಿಷ್ಟರು ಮತ್ತು ಊರಿನವರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು. ಜೋಗತಿ ಕಟ್ಟೆಯ ಬೀಗರು ಲಕ್ಷ್ಮಿಗೆಂದು ತಂದಿದ್ದ ಧಾರೆ ಸೀರೆಯಲ್ಲಿ ಯಶೋಧ ಸಾಕ್ಷಾತ್ ಲಕ್ಷ್ಮಿಯಂತೆಯೇ ಕಾಣುತ್ತಿದ್ದಳು. ಅವಳನ್ನು ಕಂಡ ಎಲ್ಲರೂ “ಹಿಂಗೂ ಇರ್ತದ” ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡರೆ ಇನ್ನೂ ಕೆಲವರು ಬೆನ್ನ ಹಿಂದೆ ಜಾತಿಯನ್ನು ಎತ್ತಾಡಿ ಸಂತೃಪ್ತರಾದರು.

ಮದುವೆಯ ಹಿಂದಿನ ದಿನವೇ ಸಾಕವ್ವ ತನ್ನ ಗಂಡ ಬೋಪಯ್ಯನ ಮೊದಲನೇ ಹೆಂಡತಿ ದೇವಿರಮ್ಮನ ಮನೆಗೆ ಹೋಗಿ ಧಾರೆಗೆ ಬರಲೇ ಬೇಕೆಂದು ಪಟ್ಟಿಡಿದು ಕೂತಿದ್ದಳು. ಅವ್ವನನ್ನು ಕಂಡರೆ ಜೀವ ಬಿಡುತ್ತಿದ್ದ ದೇವಿರಮ್ಮ “ಈ ಮದ್ವೆ ಹರಿ ಬಿರಿಲಿ ಸರಿಯಾಗ್ ಉಂಡಿದ್ಯೋ ಇಲ್ವೋ ಕುತ್ಕೊ ಇಲ್ಲಿ ಬೇಗ ರೊಟ್ಟಿ ಮಾಡ್ತೀನಿ. ತಿಂದು ಸುದಾರ್ಸ್ಕೊಂಡು ಹೋಗಿವಂತೆ” ಎಂದು ಕೂರಿಸಿ ಬಿಸಿಯಾದ ರಾಗಿ ರೊಟ್ಟಿ ತಟ್ಟಿ ಬಗಲಿಗೆ ತರಕಾರಿ ತಾಳ್ದಾ ಹಾಕಿ  ಅವ್ವನ ಮುಂದಿಟ್ಟಳು.

” ಮೊಣಕಾಲ ಮೇಲೆ ಮುಖ ಊರಿ ಸಾಕವ್ವನೆದುರು ಹಿಡಿಯಾಗಿ ಕೂತ ದೇವಿರಮ್ಮ ನಿಟ್ಟುಸಿರು ಬಿಟ್ಟು “ಅವತ್ತು ಒಂಚೂರು ಎಚ್ರ ತಪ್ಪಿ ನಡ್ದುದ್ದುಕ್ಕೆ   ಈ ವಯಸ್ನಲ್ಲೂ  ಪ್ರಾಯಶ್ಚಿತ ಅನುಭವುಸ್ತಾನೇ ಇದ್ದೀನಿ ಸಾಕಿ. ಅವ್ರು ನನ್ನ ಮಖ ನೋಡುದ್ರೆ ಚೇಳು ಕುಟುಕ್ದಂಗ್ ಆಡ್ತಾರೆ. ಅಂತದ್ರಲ್ಲಿ ನಾನ್ ಯಾಕ್ ಬಂದು ಅವರ್ಗೆ ತ್ರಾಸ್ ಕೊಡ್ಲವ್ವ, ನನ್ನಿಂದ ಮನೆಲಿ ಜಗಳ ಆಗದ್ ಬ್ಯಾಡ ಹೋಗು ತಾಯಿ.  ಆ ತಿರುಪ್ತಿ ತಿಮ್ಮಪ್ಪನ ಕೃಪೆಯಿಂದ ನಮ್ ಚಂದ್ರಹಾಸುನ್ ಮದುವೆ ಚನ್ನಾಗಾಗಲಿ” ಎಂದು  ಸಂಕಟದಿಂದ ಹೇಳಿದಳು. ದೇವಿರಮ್ಮನ ಮಾತಿಗೆ ಜಗ್ಗದ ಸಾಕವ್ವ “ನೋಡಕ್ಕ ಅಲ್ಲಿ ಏನ್ ನಡುದ್ರು ನಾನು ಅದುನ್ನ ಸಂಭಾಳುಸ್ತೀನಿ. ಈ ಅಂಜಿಕೆನೆಲ್ಲ ಬುಟ್ಟು ನೀನು ಸುಮ್ನೆ ಮದುವೆಗೆ ಬರ್ಬೇಕು ಅಷ್ಟೇಯಾ” ಎಂದು ಹಠಹಿಡಿದು ಕೂತಳು. ಕೊನೆಗೆ ಅವ್ವನ ಹಠಮಾರಿತನಕ್ಕೆ ಕಟ್ಟು ಬಿದ್ದ ದೇವಿರಮ್ಮ “ಮದ್ವೆ ಮನೆಲಿ ನಾಕ್ ಜನುದ್ ಮುಂದೆ ಗೌಡುನ್ಗೆ ಇರ್ಸು ಮುರ್ಸು ಆಗದ್ ಬ್ಯಾಡ. ಸೊಸೆನ ಮನ್ದುಂಬುಸ್ಕೊಳೊ ಹೊತ್ಕೆ ಮನೆ ತಕ್ಕ್ ಬತ್ತಿನಿ  ಹೋಗು” ಎಂದು ಸಮಾಧಾನ ಹೇಳಿ ಕಳುಹಿಸಿದಳು.

ಇದನ್ನೂ ಓದಿ-http://ಎಲ್ರು ಮೈನಾಗು ಹರಿಯದು ಒಂದೇ ರಕ್ತ ತಾನೆಯ..

ಸಾಕವ್ವ  ಸಡಗರದಿಂದ  ಹೋಗುವುದನ್ನೇ ನೋಡುತ್ತಾ ತೊಲೆ ಬಾಗಿಲಲ್ಲೇ ನಿಂತ ದೇವಿರಮ್ಮ, ಸಂಕಟದ ಹಿಂದೆಯೇ ಸಂತಸವನ್ನು, ಸಂತಸದ ಹಿಂದೆಯೇ ಸಂಕಟವನ್ನು ಹುದುಗಿಟ್ಟು ಕೊಂಡಿರುವ ಕಾಲನ ಮಾಯೆಯನ್ನು ನೆನೆದು ದೀರ್ಘವಾಗಿ ನಿಟ್ಟುಸಿರೆಳೆದು  ಹಾಗೆಯೇ ಬಾಗಿಲಿಗೊರಗಿ ಕಣ್ಣು ಮುಚ್ಚಿದಳು…. ಹಾಗೇ ಕಣ್ಣು ಮುಚ್ಚಿದವಳಿಗೆ ಆ… ದಿನ  ಮಿಂಚಂತೆ ದಡ್ಡನೆ ಬಾಗಿಲು ತೆರೆದು ಒಳಬಂದ ಅಪ್ಪನ ಪೆಚ್ಚಾದ ಮುಖ ಕಣ್ಣ ಮುಂದೆ ಧುತ್ತನೆ ಬಂದು ನಿಂತು ಕ್ಷಣ ಮೈ ಬೆವರಿಸಿತು. ಕೈ ಮೀರಿ ನಡೆದು ಹೋದ ಆ ದುರ್ಘಟನೆಯನ್ನು  ನೆನೆಪಿನಿಂದ ಹೊಸಕಿ ಹಾಕಿ  ಹೊಸಬಳಾಗಿ ಅರಳಿಕೊಳ್ಳ ಬೇಕೆಂದು ಸಾಹಸ ಮಾಡಿದಷ್ಟು ಅದು ಮತ್ತೆ ಮತ್ತೆ ತನ್ನೆದುರು ಸುರುಳಿ ಬಿಚ್ಚಿ ನಿಂತು, ಅಪರಾಧಿ ಭಾವಕ್ಕೆ ತಳ್ಳಿ ಹೈರಾಣ ಮಾಡಿ ಬಿಡುತ್ತಿತ್ತು. ಹಾಗೆ ತಲೆಬಾಗಿಲ ಬಳಿ ನಿಂತ ದೇವಿರಮ್ಮನಿಗೆ ಎದೆ ಭಾರವಾಗಿ ಕಣ್ಣು ಕತ್ತಲಿಡಿದಂತಾಗಿ ಕುಸಿದು ಕೂತಳು…. 

ಇದನ್ನೂ ಓದಿhttp://ಮನೆಗೊಬ್ಳು ಸೊಸೆ ತಗಂಬಾ…

ಪಕ್ಕದ ಭುವನ ಗಿರಿಯ ಹುಡುಗಿ ದೇವಿರಮ್ಮನನ್ನು  ಬೋಪಯ್ಯನ ಅಪ್ಪ ಅವ್ವ ಬಹಳವಾಗಿ ಮೆಚ್ಚಿ ತಂದು ಮಗನಿಗೆ ಲಗ್ನ ಮಾಡಿದ್ದರು.  ಸುಮಾರು ಆರು ವರ್ಷಗಳ ಕಾಲ ನಡೆದ ಬೋಪಯ್ಯ ದೇವಿರಮ್ಮನ ಸಂಸಾರದ ಕುರುಹಾಗಿ ಹುಟ್ಟಿದ ಮಗಳು, ಮಂಜುಳೆಯ ಗೆಜ್ಜೆ ಪಾದದ ಸದ್ದು ಮನೆ ತುಂಬಾ ಅನುರಣಿಸುತ್ತಾ ಬೆಳೆಯ ತೊಡಗಿತ್ತು.

ಆ ದಿನ ಬೋಪಯ್ಯನ ಅವ್ವ ನರಸಮ್ಮ ತನ್ನ  ತವರಿನಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಮಾಳದಬ್ಬಕ್ಕೆ,  ವಾರದ ಮೊದಲೇ ತನ್ನ ವಯಸ್ಸಿಗೆ ಬಂದ ಮಗಳು ತುಂಗೆ ಮತ್ತು ಮೊಮ್ಮಗಳು ಮಂಜುಳೆಯನ್ನು ಬೆನ್ನಿಗೆ ಹಾಕಿಕೊಂಡು ತವರಿಗೆ ಪಾದ ಬೆಳೆಸಿದ್ದಳು. ತಾನು ತೊಟ್ಟ ಗರಿ ಮುರಿ ಬಟ್ಟೆಯ ಸುಕ್ಕು ಕೆಡದಂತೆ, ತನ್ನ ಚಾಣಾಕ್ಷತೆ ಮತ್ತು ಗತ್ತು ಗೈರತ್ತಿನಿಂದ ಬೇರೆಯವರಿಂದ ನಾಜೂಕಾಗಿ ಕೆಲಸ ತೆಗೆಸುವುದರಲ್ಲಿ ನಿಸ್ಸೀಮನಾಗಿದ್ದ ಬೋಪಯ್ಯನ ಅಪ್ಪ ರಾಚಪ್ಪಯ್ಯ, ಎಂದಿನಂತೆ ಅಂದು ಕೂಡ ಶಿಸ್ತಾಗಿ ಕೂದಲು ಕೊಂಕದಂತೆ ಸ್ವಲ್ಪ ಹೊತ್ತು ಹೊಲದ ಮೇಲುಸ್ತುವಾರಿ ಮಾಡಿ ಹೊಸ ನಾರಿಪುರದಲ್ಲಿ ತುರ್ತಾಗಿ ಕೆಲಸವಿದೆ ಎಂದು ಮಗನಿಗೆ ಹೇಳಿ ತರಾತುರಿಯಲ್ಲೇ ಮನೆಗೆ ಬಂದು ಸೇರಿಕೊಂಡ.

ಇದನ್ನೂ ಓದಿhttp://ಎಲ್ಲಿ ಹೋದಳು ಅವ್ವ?

ಅಪ್ಪನಿಗೆ ತದ್ವಿರುದ್ಧವಾಗಿ ನಡೆಯುತ್ತಿದ್ದ ಬೋಪಯ್ಯ ಕಾಯಕವೇ ಕೈಲಾಸ ಎಂಬ ಬಸವಣ್ಣನ  ಮಾತನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದ.  ಹತ್ತು ಆಳಿಗೆ ಸರಿಸಮನಾಗಿ ತಾನೊಬ್ಬನೇ ಹೊಲದ ಗೈಮೆ ಮಾಡುತ್ತಾ ತನ್ನ ಪರಿಶ್ರಮದಿಂದಲೇ ಆಸ್ತಿಯನ್ನು ವಿಸ್ತರಿಸಿದ್ದ ಕೂಡ. ಅಂದು ಬೆಳ್ಳಂಬೆಳಗೆಯೆ ಆಳುಗಳನ್ನು ಕಟ್ಟಿಕೊಂಡು ಹೊಲಕ್ಕೆ ಇಳಿದಿದ್ದ ಬೋಪಯ್ಯನಿಗೆ ಸೂರ್ಯ ನೆತ್ತಿ ಹತ್ತುತ್ತಿದ್ದಂತೆ ಕೈ ಕಾಲು ಸೋಲ ತೊಡಗಿತ್ತು. ಇನ್ನು ಈ ಬಿಸಿಲಿನ ಜಳದಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ ಎನ್ನಿಸಿ ಅರ್ಧಕ್ಕೆ ಕೆಲಸ ಕೈ ಬಿಟ್ಟು ಆಳುಗಳೊಂದಿಗೆ  ಮನೆ ಕಡೆ ನಡೆದ.‌

ಹೀಗೆ ಹೊಲದಲ್ಲಿ ಕೆಲಸ ಮುಗಿಸಿ ಬಂದಾಗೆಲ್ಲಾ ಮನೆಯ  ಹಿತ್ತಿಲಲ್ಲಿ  ಕೈಕಾಲು ತೊಳೆದು ಹಿಂದಿನ ಬಾಗಿಲಿನಿಂದಲೇ ಒಳ ಬರುವ ರೂಢಿ ಮಾಡಿ ಕೊಂಡಿದ್ದ ಬೋಪಯ್ಯ, ಅಂದು ಕೂಡ  ಮುಂದು ಮಾಡಿದ್ದ ಹಿತ್ತಿಲ ದೈತ್ಯ ಬಾಗಿಲನ್ನು ತುಸು ಬಲವಾಗಿಯೆ ತಳ್ಳಿ ಒಳ ಬಂದ. ಹಜಾರದಲ್ಲಿ ಹಾಕಿದ್ದ ದೊಡ್ಡ ಮಂಚದ ಮೇಲೆ ಮಾವ ರಾಚಪ್ಪಯ್ಯನೊಡನೆ  ಬೆತ್ತಲಾಗಿ ಮಲಗಿದ್ದ ಹೆಂಡತಿ ದೇವಿರಮ್ಮನನ್ನು ಕಂಡು ಆಘಾತಗೊಂಡ. ಬಿಸಿಲ ಜಳಕ್ಕೆ ಕಣ್ಣು ಮಂಜಾಗಿರ ಬೇಕೆಂದು ತನಗೆ ತಾನೇ ಸಾಂತ್ವನ ಮಾಡಿ ಕೊಳ್ಳುತ್ತಾ ಗಟ್ಟಿಯಾಗಿ ಕಣ್ಣು ಉಜ್ಜಿಕೊಂಡು ಮತ್ತೆ ತೀಕ್ಷ್ಣವಾಗಿ ದಿಟ್ಟಿಸಿದ. ಮೈ ಕಸುವೆಲ್ಲಾ ಇಂಗಿದಂತಾಯಿತು. ಆ ಕ್ಷಣ ಅಲ್ಲಿಂದ ಓಡಿಬಿಡ ಬೇಕೆಂದು ಪ್ರಯತ್ನಿಸಿದ. ಸೋತ ಕಾಲು ಮೇಲೇಳಲೇ ಇಲ್ಲ. 

ದಡ್ಡನೆ ತೆರೆದುಕೊಂಡ ಬಾಗಿಲ ಸದ್ದಿಗೆ ಬೆಚ್ಚಿ ಮೇಲೆದ್ದ ದೇವಿರಮ್ಮ, ಪೆಚ್ಚು ಮೋರೆ ಹೊತ್ತು ಎದುರು ನಿಂತ ಗಂಡನನ್ನು ಕಂಡು ತತ್ತರಿಸಿ ಹೋದಳು. ಬಗಲಲ್ಲಿದ್ದ ಸೀರೆಯನ್ನು ಸರಸರನೆ ಮೈಮೇಲೆಳೆದು ಕೊಂಡು ಅಡುಗೆ ಕೋಣೆಗೆ ಹೋಗಿ ಅಡಗಿ ಕೊಂಡಳು. ಸುಖದ ಅಮಲಿನ ಗೊರಕೆಯಲ್ಲಿದ್ದ ರಾಚಪಯ್ಯನನ್ನು  ದೇವಿರಮ್ಮನ ಬಿರುಸಾದ ಹೆಜ್ಜೆಯ ಸಪ್ಪಳ ಅಲುಗಿಸಿತಾದರು, ಆಯಾಸಗೊಂಡ ದೇಹ ಕಣ್ಣು ತೆರೆಯಲಿಚ್ಚಿಸದೆ ಹಾಗೆ ಮಗ್ಗುಲಿಗೆ ಹೊರಳಿ ಮತ್ತೆ ನಿದ್ದೆಗೆ ಜಾರಿ ಕೊಂಡಿತು.  ಬೋಪಯ್ಯ ದುಸ್ವಪ್ನ ಕಂಡು ಎಚ್ಚೆತ್ತವನಂತೆ ಭಾರವಾದ ಎದೆ ಹಿಡಿದು, ತ್ರಾಣ ಕಳೆದು ಕೊಂಡ ತನ್ನ ಕಾಲುಗಳನ್ನು ಎಳೆಯುತ್ತಾ ಹಿಂದಿನ ಬಾಗಿಲಲ್ಲಿ ಕಣ್ಮರೆಯಾಗಿ ಹೋದ.

ಇದನ್ನೂ ಓದಿhttp://ʼನನ್ನ ಬುಟ್ಟೋಗ್ ಬ್ಯಾಡ ಎದ್ದೇಳವ್ವ ಲಕ್ಷ್ಮಿʼ

ವಾರ ಮೂರಾದರೂ ಬೋಪಯ್ಯ ಮನೆ ಕಡೆ ತಲೆ  ಹಾಕಲೇ ಇಲ್ಲ. ಆತಂಕಗೊಂಡ ರಾಚಪ್ಪ ಕೊನೆಗೆ ತಾನೇ ಹುಡುಕಿ ತಡಕಿ ಮಗನ ಕೈ ಕಾಲು ಹಿಡಿದು ಮನೆಗೆ ಕರೆದುಕೊಂಡು ಬಂದ. ಊರಿನವರ ಮುಂದೆ ಮನೆಯ ಮಾನ ಮುಕ್ಕಾಗ ಬಾರದು ಎಂದು ಅಂಜಿದ ಬೋಪಯ್ಯ,  ಈ ವಿಷಯವನ್ನು ಯಾರೊಂದಿಗೂ ತುಟಿಕ್ ಪಿಟಿಕ್ ಎನ್ನಲಿಲ್ಲ. ಸಂಪೂರ್ಣವಾಗಿ ತನ್ನ ಹೆಂಡತಿ ಮತ್ತು ಅಪ್ಪನೊಂದಿಗೆ ಮಾತು ನಿಲ್ಲಿಸಿದ. ಮೂಕವಾಗಿ ತನ್ನ ಆಘಾತ ಸಂಕಟಗಳನ್ನೆಲ್ಲಾ ನುಂಗಿ ನಡೆಯುವುದನ್ನು ರೂಢಿಸಿ ಕೊಂಡ.  ತನ್ನ ಅವ್ವ ಮಾಡಿದ ಅಡುಗೆಯ ಹೊರತು ಹೆಂಡತಿಯ ಕೈ ಅಡುಗೆ ಮುಟ್ಟಲಿಲ್ಲ. ಆಗಾಗ ಉಪವಾಸವಿದ್ದು ಹೊಟ್ಟೆಗೆ ಹಸಿವು ತಡೆಯುವುದನ್ನು ಕಲಿಸಿದ. 

ಹೀಗೆ ಸುಮಾರು ಒಂದು ವರ್ಷಗಳ ಕಾಲ ಮನೆಯ ಒಳಗೇ  ನಡೆದ ಶೀತಲ ಸಮರವನ್ನು ಸರಿಪಡಿಸಲು ಬೋಪಯ್ಯನ ಅವ್ವನೂ,  ದೇವಿರಮ್ಮನ ತವರಿನವರು  ಕೈ ಗೊಂಡ ಎಲ್ಲಾ ಪ್ರಯತ್ನಗಳು ಸೋತು ಕೊನೆಗೆ ಎಲ್ಲರೂ  ಕೈ ಚೆಲ್ಲಿದರು. ಪ್ರೀತಿಯ ಹೊರತು ದ್ವೇಷ ಎಂಬುದನ್ನೇ ಅರಿಯದ ಬೋಪಯ್ಯನ ತಾಳ್ಮೆ, ಅನುಕಂಪಗಳ  ಬಗ್ಗೆ   ಅಪಾರವಾದ ನಂಬಿಕೆ ಇಟ್ಟಿದ್ದ ದೇವಿರಮ್ಮ ಮಾತ್ರ, ತನ್ನ ಗಂಡ ಇಂದಲ್ಲ ನಾಳೆ ತನ್ನೊಂದಿಗೆ ಸರಿಯಾಗಿಯೇ ಆಗುತ್ತಾನೆ ಎನ್ನುವ ಅಚಲವಾದ ನಂಬಿಕೆ ಇಟ್ಟು ಆ ಮನೆಯಲ್ಲಿಯೇ ದಿನ ದೂಡ ತೊಡಗಿದಳು. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು