Home ಬ್ರೇಕಿಂಗ್ ಸುದ್ದಿ “ಬಿಗ್ ಬಾಸ್”ನಲ್ಲಿ ಬದಲಾಗಲಿದೆ “ಸ್ವರ್ಗ ನರಕ”ದ ಕಾನ್ಸೆಪ್ಟ್! ; ಪ್ರೋಗ್ರಾಂ ಮೇಲೆ ಕ್ರಮ ಕೈಗೊಳ್ಳಲಿದೆಯೇ ಮಾನವ...

“ಬಿಗ್ ಬಾಸ್”ನಲ್ಲಿ ಬದಲಾಗಲಿದೆ “ಸ್ವರ್ಗ ನರಕ”ದ ಕಾನ್ಸೆಪ್ಟ್! ; ಪ್ರೋಗ್ರಾಂ ಮೇಲೆ ಕ್ರಮ ಕೈಗೊಳ್ಳಲಿದೆಯೇ ಮಾನವ ಹಕ್ಕುಗಳ ಆಯೋಗ?

0

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಬಿಗ್ ಬಾಸ್” ಸರಣಿ 11 ಕ್ಕೆ ಈಗ ಮಾನವ ಹಕ್ಕುಗಳ ಆಯೋಗದಿಂದ ಕ್ರಮ ತಗೆದುಕೊಳ್ಳಬೇಕು, ಹಾಗು ತುರ್ತಾಗಿ ಶೋ ನಿಲ್ಲಿಸಲು ಒತ್ತಾಯಿಸಲಾಗಿದೆ

ಹೆಸರಾಂತ ಟಿವಿ ಕಾರ್ಯಕ್ರಮ, ಕಲರ್ಸ್ ಕನ್ನಡ ವಾಹಿನಿಯಲ್ಲಿ ನಟ ಸುದೀಪ್ ನಡೆಸಿಕೊಡುವ “ಬಿಗ್ ಬಾಸ್” ಯಾರಿಗೆ ತಾನೆ ಗೊತ್ತಿಲ್ಲ. ಪ್ರತೀ ವರ್ಷ ಹೊಸ ಹೊಸ ಕಾನ್ಸೆಪ್ಟ್ ಮೂಲಕ ಮನರಂಜನೆ ಹೆಸರಿನಲ್ಲಿ ಬರುವ “ಬಿಗ್ ಬಾಸ್” ಟಿಆರ್ಪಿಯಲ್ಲೂ ನಂಬರ್ 1 ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ, ಈ ಸೀಜನ್ ನಲ್ಲಿ ಅಳವಡಿಸಿಕೊಂಡಿರುವ ಸ್ವರ್ಗ ನರಕದ ಕಾನ್ಸೆಪ್ಟೇ ಈಗ ವಾಹಿನಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಶೋ ನಿಲ್ಲಿಸಿ, ಹಾಗೂ ಈ ಶೋ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಕಾರ್ಯಕ್ರಮದ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ, ಹಾಗೂ ಆಯೋಗ ಕೂಡ ದೂರಿನ ಅರ್ಜಿಯನ್ನು ಸ್ವೀಕರಿಸಿದೆ.

ಬಿಗ್ ಬಾಸ್ ಎಂಬ ಹೆಸರಿನ ರಿಯಾಲಿಟಿ ಶೋನ ಹನ್ನೊಂದನೇ ಆವೃತ್ತಿ ದಿನಾಂಕ 29-9-2024ರಿಂದ ಆರಂಭವಾಗಿರುತ್ತದೆ. ಬಿಗ್ ಬಾಸ್ ಶೋನಲ್ಲಿ ಮನರಂಜನಾ ಕ್ಷೇತ್ರದಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಹೆಸರು ಮಾಡಿದ ವ್ಯಕ್ತಿಗಳನ್ನು ಒಂದು ಮನೆಯಲ್ಲಿ ಕೂಡಿಹಾಕಿ ಅಡಿಸುವ ಸೈಕಾಲಾಜಿಕಲ್ ಗೇಮ್ ಶೋ ಆಗಿದೆ. ಬಿಗ್ ಬಾಸ್ ನಲ್ಲಿ ಹಲವು ರೀತಿಯ ಮಾನಸಿಕ, ದೈಹಿಕ ಟಾಸ್ಕ್ ಗಳನ್ನು ಕಂಟೆಸ್ಟೆಂಟ್ ಗಳಿಗೆ ನೀಡಲಾಗುತ್ತದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಇನ್ನೊಬ್ಬರ ಮೇಲೆ ಹಲವು ರೀತಿಯಲ್ಲಿ ಆಕ್ರಮಣ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತದೆ. ಹೀಗೆ ಪರಸ್ಪರ ಸೆಣೆಸುತ್ತ ನೂರು ದಿನಗಳ ಕಾಲ ಮನೆಯಲ್ಲಿ ಉಳಿದು ಅಂತಿಮವಾಗಿ ಗೆಲ್ಲುವ ಅಭ್ಯರ್ಥಿಗೆ 50 ಲಕ್ಷ ರುಪಾಯಿಗಳ ಬಹುಮಾನ ನೀಡಲಾಗುತ್ತದೆ ಎಂದು ಬಿಗ್ ಬಾಸ್ ಶೋ ನಲ್ಲಿ ಬರುವ ಮುಖ್ಯ ಕಾನ್ಸೆಪ್ಟ್ ಬಗ್ಗೆ ವಿವರಿಸಲಾಗಿದೆ.

ಈ ಬಾರಿಯ ಬಿಗ್ ಬಾನ್ ಕಾರ್ಯಕ್ರಮದ ಆರಂಭದಲ್ಲಿಯೇ ಸ್ವರ್ಗ ಮತ್ತು ನರಕ ಎಂಬ ಎರಡು ಮನೆಗಳನ್ನು ಸೃಷ್ಟಿಸಲಾಗಿದೆ. ಒಟ್ಟು ಹದಿನೇಳು ಸ್ಪರ್ಧಿಗಳ ಪೈಕಿ 10 ಮಂದಿಯನ್ನು ಸ್ವರ್ಗಕ್ಕೂ, 7 ಮಂದಿಯನ್ನು ನರಕದಲ್ಲೂ ಇರಿಸಲಾಗಿದೆ. ಸ್ವರ್ಗ ನಿವಾಸಿಗಳಿಗೆ ಉತ್ತಮ ಊಟ, ಮಲಗಲು ಮಂಚ ಸೇರಿದಂತೆ ಐಶಾರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ. ನರಕ ನಿವಾಸಿಗಳನ್ನು ಜೈಲಿನ ಖೈದಿಗಳ ಹಾಗೆ ಒಂದು ಬ್ಯಾರಾಕ್ ನಲ್ಲಿ ಬಂಧಿ ಮಾಡಿ ಇಡಲಾಗಿದೆ. ಶೋ ನಲ್ಲಿ ನರಕದಲ್ಲಿ ಇರುವವರಿಗೆ ಶೋ ಆರಂಭಗೊಂಡ ದಿನದಿಂದ ಕೇವಲ ಗಂಜಿ ಊಟ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಅವರಿಗೆ ಪ್ರತ್ಯೇಕ ಶೌಚಾಲಯದ ಅವಕಾಶವೂ ಇಲ್ಲ. ಸ್ವರ್ಗ ನಿವಾಸಿಗಳನ್ನು ವಿನಂತಿಸಿ ಅವರು ಬೀಗ ತೆಗೆದರಷ್ಟೇ ಅವರು ಶೌಚಾಲಯಕ್ಕೆ ಹೋಗಲು ಸಾಧ್ಯ. ದಿನಾಂಕ: 2-10-2024ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ನರಕವಾಸಿ ಸ್ಪರ್ಧಿಗಳು ತಮಗೆ ಬಂದಾಗಿಂದಲೂ ಕೇವಲ ಗಂಜಿ ಊಟ ಕೊಡಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ನರಕವಾಸಿಗಳಿಗೆ ಶೌಚಕ್ಕೆ ಅವಸರವಾದಾಗ ಸ್ವರ್ಗವಾಸಿ ಸ್ಪರ್ಧಿಗಳು ಸ್ವಲ್ಪ ತಡೆದುಕೊಳ್ಳಿ ಎಂದು ಹೇಳುವುದು, ಇದಕ್ಕೆ ನರಕವಾಸಿ ಸ್ಪರ್ಧಿಗಳು ಪ್ರತಿಭಟಿಸುವುದನ್ನು ಕೂಡ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಹುಮಾನ ಮತ್ತು ಹಣದ ಆಮಿಷ ಒಡ್ಡಿ ಸ್ಪರ್ಧಿಗಳನ್ನು ಬಿಡದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮನೆಯೊಂದರಲ್ಲಿ ಕೂಡಿಹಾಕಲಾಗಿದೆ. ಟಾಸ್ಕ್ ಗಳ ಹೆಸರಲ್ಲಿ ಅವರಿಗೆ ದೈಹಿಕ, ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ. ಹಣ, ಬಹುಮಾನದ ಆಸೆಗೆ ಕಾಂಟ್ರಾಕ್ಟ್ ಗೆ ಸಹಿ ಮಾಡಿದ ಸ್ಪರ್ಧಿಗಳು ಅಲ್ಲಿ ನಡೆಯುವ ಶೋಷಣೆಯನ್ನು ಹೊರಗೆ ಹೇಳದಂತೆ ಬಾಯಿ ಮುಚ್ಚಿಸಲಾಗಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಅಕ್ರಮವಾಗಿ ಬಂಧಿಸಿಟ್ಟು, ಅವರಿಗೆ ಸರಿಯಾದ ಪೌಷ್ಠಿಕ ಆಹಾರವನ್ನೂ ನೀಡದೆ, ಅವರ ದೇಹಬಾಧೆ ತೀರಿಸಿಕೊಳ್ಳಲೂ ಇತರರ ಅನುಮತಿ ಪಡೆಯುವಂಥ ಪರಿಸ್ಥಿತಿ ನಿರ್ಮಿಸಿರುವುದು ಅತ್ಯಂತ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಈ ಶೋಷಣೆಗೆ ಒಂದು ವೇಳೆ ಆಮಿಷಕ್ಕೆ ಒಳಗಾಗಿ ಸ್ಪರ್ಧಿಗಳು ಒಪ್ಪಿಗೆ ನೀಡಿದ್ದರೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸ್ಪರ್ಧಿಗಳ ತೊಂದರೆಗಳನ್ನು ಉಲ್ಲೇಖಿಸಿ ಮಾನವ ಹಕ್ಕುಗಳ ಹೋರಾಟಗಾರ್ತಿ ಎಂ ನಾಗಮಣಿ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಬಿಗ್ ಬಾಸ್ ಶೋ ಮಾನವಹಕ್ಕುಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಯಾಕೆಂದರೆ, ಟಾಸ್ಕ್ ಒಂದರಲ್ಲಿ ಕಂಟೆಸ್ಟೆಂಟ್ ಒಬ್ಬರು ಹೇಳುವ ಪ್ರಕಾರ ಅವರಿಗೆ ಸತತ ಮೂರು ದಿನಗಳಿಂದ ಕೇವಲ ಗಂಜಿ ಊಟವನ್ನು ಕೊಡಲಾಗಿದೆ. ಅವರು ತಮ್ಮ ಊಟವನ್ನು ಪಡೆದುಕೊಳ್ಳದಂತೆ ಅವರನ್ನು ಕೂಡಿಹಾಕಿ ಬೀಗ ಜಡಿಯಲಾಗಿದೆ. ಅಷ್ಟೇ ಅಲ್ಲದೆ ಅವರು ಶೌಚಕ್ಕೆ ಹೋಗಲೂ ಬೇರೆಯವರನ್ನು ಬೇಡುವಂಥ ಸ್ಥಿತಿ ನಿರ್ಮಿಸಲಾಗಿದೆ. ಈ ರೀತಿಯ ಟಾರ್ಚರ್ ಭಾರತದ ಜೈಲುಗಳಲ್ಲೂ ಸಹ ಇರಲು ಸಾಧ್ಯವಿಲ್ಲ. ಭಾರತದ ಜೈಲುಗಳಲ್ಲಿ ಶಿಕ್ಷೆಗೆ ಒಳಪಟ್ಟ ಖೈದಿಗಳಿಗೆ, ವಿಚಾರಣಾಧೀನ ಖೈದಿಗಳಿಗೆ ಕೊಡಬೇಕಾದ ಅಹಾರದ ಕುರಿತು ಕಟ್ಟುನಿಟ್ಟಿನ ನಿಯಮಗಳಿವೆ. ಎಲ್ಲ ಖೈದಿಗಳಿಗೆ ಒಬ್ಬ ಮನುಷ್ಯನಿಗೆ ಬೇಕಾದ ಪೌಷ್ಠಿಕಾಂಶಗಳನ್ನು ಉಳ್ಳ ಅಹಾರವನ್ನು ಗ್ರಾಂಗಳ ಲೆಕ್ಕದಲ್ಲಿ ಕೊಡಲಾಗುತ್ತದೆ. ಜೈಲಿನ ಅಧಿಕಾರಿಗಳು ಇದನ್ನು ಉಲ್ಲಂಘಿಸುವಂತಿಲ್ಲ, ಮಾನವ ಹಕ್ಕುಗಳ ಆಯೋಗವು ಆಗಾಗ ಜೈಲುಗಳಿಗೆ ಭೇಟಿ ನೀಡಿ ಖೈದಿಗಳ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೇ ಎಂದು ಪರಿಶೀಲಿಸುತ್ತದೆ. ಹೀಗಿರುವಾಗ ಬಿಗ್ ಬಾಸ್ ಶೋನಲ್ಲಿ ನಡೆದಿರುವ ಸಾರಾಸಗಟಾಗಿ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗುತ್ತದೆ ಎಂದು ದೂರಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದಾಗ ಶೋಷಿತರೇ ದೂರು ನೀಡಬೇಕೆಂದಿಲ್ಲ. THE PROTECTION OF HUMAN RIGHTS ACT, 1993 ರ Article 12 (A) ಪ್ರಕಾರ ಯಾರು ಬೇಕಾದರೂ ದೂರು ನೀಡಬಹುದಾಗಿದೆ. ಈ ಎಲ್ಲ ಹಿನ್ನೆಲೆಗಳನ್ನು ಗಮನಿಸಿ, ತಾವು ದಯಮಾಡಿ ಕೂಡಲೇ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಅಕ್ರಮವಾಗಿ ಬಂಧನಕ್ಕೆ ಒಳಗಾಗಿರುವ ಎಲ್ಲ ಸ್ಪರ್ಧಿಗಳನ್ನು ಹೊರಗೆ ತರಬೇಕೆಂದು ವಿನಂತಿಸುತ್ತೇನೆ. ಹಾಗೆಯೇ ಕಳೆದ ಐದು ದಿನಗಳಿಂದ ಶೂಟ್ ಮಾಡಲಾದ ಎಲ್ಲ ಪುಟೇಜ್ ಗಳನ್ನೂ, ಹಾರ್ಡ್ ಡಿಸ್ಕ್ ಗಳನ್ನೂ ವಶಪಡಿಸಿಕೊಂಡು ಸಾಕ್ಷ್ಯನಾಶವಾಗದಂತೆ ಕಾಪಾಡಬೇಕೆಂದು ವಿನಂತಿಸುತ್ತೇನೆ ಎಂದು ದೂರುದಾರೆ ಎಂ ನಾಗಮಣಿಯವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವ ಆಯೋಗ ಚಾನಲ್ ಗೆ ಸಧ್ಯದಲ್ಲೇ ನೋಟಿಸ್ ಜಾರಿ ಮಾಡಲಿದ್ದು, ಮುಂದಿನ ದಿನಗಳಲ್ಲಿ ಶೋ ನಲ್ಲಿ ಸ್ವರ್ಗ ನರಕದ ಕಾನ್ಸೆಪ್ಟ್ ಬದಲಾಗಲಿದೆ ಎಂಬ ಗುಸುಗುಸು ಶುರುವಾಗಿದೆ. ಅಷ್ಟೇ ಅಲ್ಲದೆ ಇಡೀ ಶೋ ನಲ್ಲಿ ಸ್ಪರ್ಧಿಗಳ ಹೆಸರಿನಲ್ಲಿ ಸ್ಪರ್ಧಿಗಳನ್ನು ಖೈದಿಗಳಂತೆ ನಡೆಸಿಕೊಂಡಿರುವ ಹಿನ್ನೆಲೆಯಲ್ಲಿ ಇಡೀ ಶೋ ಅನ್ನೋ ಸ್ಥಗಿತಗೊಳಿಸುವ ಬಗ್ಗೆಯೂ ಒತ್ತಾಯ ನಡೆದಿರುವ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗ ಬಿಗ್ ಬಾಸ್ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬ ಕುತೂಹಲ ಮೂಡಿಸಿದೆ.

You cannot copy content of this page

Exit mobile version