Monday, September 8, 2025

ಸತ್ಯ | ನ್ಯಾಯ |ಧರ್ಮ

ಕಾಳಿಂಗ ಸಂಶೋಧನೆ ಹೆಸರಿನ ಕರಾಳ ಮುಖಗಳು

“..ಕಾನೂನು ಪ್ರಕಾರ ಸಂರಕ್ಷಿತ ಪ್ರದೇಶಕ್ಕೆ ಹಗಲಿನ ವೇಳೆಯಲ್ಲಿಯೇ ಪ್ರವೇಶವಿಲ್ಲ. ಆದರೆ ಇಲ್ಲಿ Night Trail ಹೆಸರಿನಲ್ಲಿ ರಾತ್ರಿ ಅಕ್ರಮವಾಗಿ ಕಾಡಿನಲ್ಲಿ ಗುಂಪುಗಳಲ್ಲಿ ಓಡಾಡಲಾಗುತ್ತಿದೆ.. ಹಾವು ಕಪ್ಪೆ ಸರಿಸೃಪಗಳ ಚಿತ್ರೀಕರಣ ನಡೆದಿದೆ..” ಪರಿಸರ ಚಿಂತಕರಾದ ನಾಗರಾಜ್ ಕೂವೆ ಅವರ ಬರಹದಲ್ಲಿ

ಆಗುಂಬೆಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಸಂಶೋಧಕ ಗೌರಿಶಂಕರ್ ಒಡೆತನದ ಕಾಳಿಂಗ ಮನೆ/ಕಾಳಿಂಗ ಕೇರ್/KCRE ಯಲ್ಲಿ ಇಂದು ಸಂಶೋಧನೆಗಳು ನಡೆಯುತ್ತಿಲ್ಲ! ಇದು ಪೂರ್ಣ ಪ್ರಮಾಣದ ರೆಸಾರ್ಟ್ ಆಗಿ ಬದಲಾಗಿದೆ! ಸಂರಕ್ಷಣೆಯ ಮುಖವಾಡದಲ್ಲಿ ವಾಣಿಜ್ಯಿಕ ಚಟುವಟಿಕೆಗಳು ನಡೆಯುತ್ತಿದೆ. ಹಲವು ರೂಪದ ಅಕ್ರಮ ಚಟುವಟಿಕೆಗಳ ತಾಣವಾಗಿ ಮಲೆನಾಡಿನ ವನ್ಯಸಂಪತ್ತನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ಇಲ್ಲಿ ಕಾಳಿಂಗ ಸರ್ಪ ಸಂರಕ್ಷಣೆ ಬಗ್ಗೆ ತರಬೇತಿ ಕೊಡುತ್ತೇವೆಂದು King Cobra Bionomics & Conservation Workshop ನೆಡೆಸಲಾಗುತ್ತದೆ. ಅಲ್ಲಿ  ಒಬ್ಬ ವ್ಯಕ್ತಿಗೆ ಸುಮಾರು ₹ 16,069/- ಶುಲ್ಕ ವಿಧಿಸಲಾಗುತ್ತದೆ. ಖಾಸಗಿ ವ್ಯಕ್ತಿಗಳಿಗೆ ಇಂತಹ ಚಟುವಟಿಕೆಗಳನ್ನು ಆಯೋಜಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಹಾಗಿದ್ದರೂ ಈ ಕಾರ್ಯಾಗಾರದಲ್ಲಿ ಸಂರಕ್ಷಣೆ ಬಗೆಗೆ ಕಲಿಸುವ ನೆಪದಲ್ಲಿ ಕಾಳಿಂಗ ಸರ್ಪಗಳನ್ನು ಹಿಡಿಯುವುದು, ಸ್ಪರ್ಶಿಸುವುದು, ಓಡಿಸುವುದು, ಗೂಡನಲ್ಲಿನ ಮೊಟ್ಟೆಗಳನ್ನು ಮುಟ್ಟುವುದು, ಆ ಮೊಟ್ಟೆಗಳನ್ನು ಸ್ಥಳಾಂತರಿಸುವುದು ನಡೆಯುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972 ರ ಪ್ರಕಾರ ಇದು ಶಿಕ್ಷಾರ್ಹ ಅಪರಾಧ.

ಆಗುಂಬೆ ವಲಯದ ದಾಸನಕೂಡಿಗೆ ವ್ಯಾಪ್ತಿಯ “ಅಕ್ಕಿ ಭತ್ತ ರಾಶಿ ಗುಡ್ಡ” ಎಂಬ ಸ್ಥಳಕ್ಕೆ ಅನಧಿಕೃತವಾಗಿ ಟ್ರೆಕ್ಕಿಂಗ್ ಕರೆದುಕೊಂಡು ಹೋಗಲಾಗುತ್ತಿದೆ. ಈ ಸಂರಕ್ಷಿತ ಪ್ರದೇಶಕ್ಕೆ ಸ್ಥಳೀಯ ಹಳ್ಳಿಗರಿಗೂ ಪ್ರವೇಶವಿಲ್ಲ. ಆದರೆ ರೆಸಾರ್ಟ್ ಗ್ರಾಹಕರಿಗೆ ಇದು ಮುಕ್ತವಾಗಿ ತೆರೆದಿದೆ.

ಆಗುಂಬೆ ಸಮೀಪದ ಗುಡ್ಡೆಗೆರೆ ಗ್ರಾಮ ವ್ಯಾಪ್ತಿಯ ಚುರ್ಚಿಕಲ್ಲಿನಲ್ಲಿ ಈತ ಗುಡ್ಡ ಕೊರೆದು ರಸ್ತೆ ನಿರ್ಮಿಸಿದ್ದಾನೆ. ಇಲ್ಲಿ ಜೀಪ್ ನಂತಹ ವಾಹನಗಳಲ್ಲಿ ಮಾತ್ರ ಹೋಗಬಹುದು. ಇದೇ ಪ್ರದೇಶದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಅನಧಿಕೃತ ಹಾದಿಯ ಮೂಲಕ ಹಣ ವಸೂಲಿ ಮಾಡಿ ಅಕ್ರಮ ಕಾಡು ಪ್ರವೇಶ ನಿರಂತರವಾಗಿ ನಡೆದಿದೆ.

ಕಾನೂನು ಪ್ರಕಾರ ಸಂರಕ್ಷಿತ ಪ್ರದೇಶಕ್ಕೆ ಹಗಲಿನ ವೇಳೆಯಲ್ಲಿಯೇ ಪ್ರವೇಶವಿಲ್ಲ. ಆದರೆ ಇಲ್ಲಿ Night Trail ಹೆಸರಿನಲ್ಲಿ ರಾತ್ರಿ ಅಕ್ರಮವಾಗಿ ಕಾಡಿನಲ್ಲಿ ಗುಂಪುಗಳಲ್ಲಿ ಓಡಾಡಲಾಗುತ್ತಿದೆ. ಅನುಮತಿ ಇಲ್ಲದೆ ಪ್ರವೇಶಿಸುವುದಲ್ಲದೇ ಅಕ್ರಮವಾಗಿ ಹಾವು, ಕಪ್ಪೆ, ಹಲ್ಲಿ, ಕೀಟ, ಸರಿಸೃಪ, ನಿಶಾಚರಿಗಳ ಛಾಯಾಗ್ರಹಣ, ವಿಡಿಯೋ ಚಿತ್ರೀಕರಣ, ಆಡಿಯೋ ಸಂಗ್ರಹ ನಡೆಯುತ್ತಿದೆ. Herp Tour ಹೆಸರಿನಲ್ಲಿ ಅನಗತ್ಯವಾಗಿ ಜೀವಿಗಳನ್ನು ಮುಟ್ಟುವ, ತೊಂದರೆ ಮಾಡುವ,ಹಿಂಸಿಸುವ, ಬೆದರಿಸುವ ಕೆಲಸ ನಡೆಯುತ್ತಿದೆ. ಅವುಗಳ ಬೇಟೆ, ಆಹಾರ, ಮಿಲನ, ಜೀವನ ಚಕ್ರದಲ್ಲಿ ಹಸ್ತಕ್ಷೇಪ ನಡೆಯುತ್ತಿದೆ.

STORM(Scientific Training on Reptile Management) ಹೆಸರಿನಲ್ಲಿ ಸರಿಸೃಪಗಳ ನಿರ್ವಹಣೆ ಬಗೆಗೆ ತರಬೇತಿ ಕೊಡುತ್ತೇವೆಂದು ವ್ಯಕ್ತಿಯೊಬ್ಬರಿಗೆ ಸುಮಾರು ₹7650/- ಶುಲ್ಕ ವಿಧಿಸಲಾಗುತ್ತದೆ. ಕಾನೂನು ಪ್ರಕಾರ ರೆಸಾರ್ಟ್ ಒಂದರಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶವೇ ಇಲ್ಲ. ಈ ಕಾರ್ಯಾಗಾರದಲ್ಲಿ live snake rescue ಹೆಸರಿನಲ್ಲಿ ಅನಗತ್ಯವಾಗಿ ಹಾವುಗಳಿಗೆ ತೊಂದರೆ ಕೊಡಲಾಗುತ್ತದೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಪ್ರಕಾರ ಕಾನೂನು ಬಾಹಿರ. ಇದು Kalinga Centre for Rainforest Ecology ಬ್ಯಾನರ್ ಅಡಿಯಲ್ಲಿ ಮೈಸೂರು, ಚೆನ್ನೈ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತದೆ. ಇದರಲ್ಲಿ ಹಾವು ತೋರಿಸುವಂತೆ ‘ಇರುಳ’ ಎಂಬ ಆದಿವಾಸಿ ಜನಾಂಗದ ಜನರಿಗೆ  ಆಮೀಷವೊಡ್ಡಿ ಬೆದರಿಸಲಾಗುತ್ತದೆ. ತಮ್ಮ ಹಣದಾಹಕ್ಕಾಗಿ ಮುಗ್ಧ ಬುಡಕಟ್ಟು ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಕೃತ್ಯ SC/ST ದೌರ್ಜನ್ಯ ಕಾಯ್ದೆಯಡಿ ಗಂಭೀರ ಪ್ರಕರಣ.

ಇನ್ನು ಆಗುಂಬೆ ಸುತ್ತಮುತ್ತಲಿನ ಯಾವುದೇ ಹಳ್ಳಿಗಳಲ್ಲಿ  ಹಾವು ಕಂಡು ಬಂದರೂ ಈತ ಹಿಡಿದು ತನ್ನ ವಾಹನದಲ್ಲಿ ಸಾಗಿಸುತ್ತಾನೆ. ಹೀಗೆ ಹಿಡಿದ ಕಾಳಿಂಗಗಳ ವಿಷ ಸಂಗ್ರಹ ನಡೆಯುತ್ತಿದೆ ಎಂಬುದು ಇಲ್ಲಿನ ಸ್ಥಳೀಯರ ಆರೋಪ. ಈ ವಿಷವು ಮಾದಕದ್ರವ್ಯ ಜಾಲಕ್ಕೆ ಸರಬರಾಜು ಆಗುತ್ತಿದೆ ಎಂಬುದು ಗುಮಾನಿ. ಈ ಹಿನ್ನೆಲೆಯಲ್ಲಿ ಆಗುಂಬೆ ಸಮೀಪ ಇರುವ ಮಣಿಪಾಲದಲ್ಲಿ ಮಾದಕದ್ರವ್ಯಗಳು ಆಗಾಗ ಸದ್ದು ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ. 

“ಕಾಳಿಂಗ ಕೇರ್ ಗೆ ಸೆಲೆಬ್ರಿಟಿಗಳು ಬಂದಾಗ ಅವರ ತಟ್ಟೆಗೆ ವನ್ಯಜೀವಿ ಮಾಂಸ ಬಂದು ಬೀಳುತ್ತದೆ. ರೆಸಾರ್ಟ್ ಸುತ್ತಲಿನ ಕಾಡಿನಲ್ಲಿ ಅವ್ಯಾಹತವಾಗಿ ಶಿಕಾರಿ ನಡೆಯುತ್ತಿದೆ” ಎಂದು ಆಗುಂಬೆ ಸುತ್ತ ಮುತ್ತಲಿನ ಜನ ಬಹಿರಂಗವಾಗಿಯೇ ಮಾತನಾಡುತ್ತಾರೆ. 

“ವನ್ಯಜೀವಿಗಳು, ಅವುಗಳ ಅಂಗಾಂಗಗಳ ಕಳ್ಳ ಸಾಗಾಣಿಕೆ ನಡೆದಿದೆ. ಸ್ಥಳೀಯ ಪೊಲೀಸ್ ಮತ್ತು ಅರಣ್ಯ ಇಲಾಖೆ ಇವರ ವಾಹನಗಳನ್ನು ಪರಿಶೀಲಿಸುವುದಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಬೆದರಿಸುವ, ಮೇಲಾಧಿಕಾರಿಗಳು, ಮಂತ್ರಿಗಳ ಹೆಸರು ಹೇಳಿ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ” ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

“ಸ್ಥಳೀಯರು ಕೃಷಿ ಮಾಡದೆ ಬೀಳು ಬಿಟ್ಟ ಭೂಮಿಯನ್ನು ಈತ ಕೊಳ್ಳಲು ಕೇಳುತ್ತಾನೆ. ಮಾರಲು ಆಸಕ್ತಿ ತೋರಿಸಿದ್ದಿದ್ದರೆ, ರೆಸಾರ್ಟ್ ಕಟ್ಟೋಣ. ನನ್ನ ಪರಿಚಿತರಿಂದ ಹಣ ಹೂಡಿಕೆ ಮಾಡಿಸುವೆ ಎಂದು ವ್ಯವಹಾರ ಕುದುರಿಸಲು ಪ್ರಯತ್ನಿಸುತ್ತಾನೆ” ಎಂಬುದು ಸ್ಥಳೀಯರೊಬ್ಬರ ಅನುಭವದ ಮಾತು. “ಈತನ ಬಳಿ ಬೆಂಗಳೂರಿನಲ್ಲಿ ಮೂರು ಸೈಟ್ ಇದೆ” ಎಂದು ಅವರು ಕಾಳಿಂಗ ಸಂಶೋಧನೆ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳ ಬಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Snake Ecology, Herptaxonomy, Wild Calling ಮೊದಲಾದವುಗಳ ಹೆಸರಿನಲ್ಲಿ ಅಧ್ಯಯನ, ಜಾಗೃತಿ, ಸಂಶೋಧನೆ, ಸಂರಕ್ಷಣೆ ಎಂದೆಲ್ಲಾ ವನ್ಯಜೀವಿಗಳ ಬದುಕಿನಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾನೆ. Media Internship ಹೆಸರಿನಲ್ಲಿ ಜನರನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವನ್ಯಜೀವಿಗಳನ್ನು ಬಳಸಿಕೊಂಡು ರೆಸಾರ್ಟ್ ಪ್ರಮೋಷನ್ ನಲ್ಲಿ ತೊಡಗಿದ್ದಾನೆ. ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಎಕಾಲಜಿಯ ಇಂತಹ ಚಟುವಟಿಕೆಗಳಿಗೆಲ್ಲ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ರೈ ಪ್ರಕಾರ ಶಿಕ್ಷಾರ್ಹ ಅಪರಾಧ.

ಪರಿಸರ ಪ್ರೇಮಿ ಪತ್ರಕರ್ತರೊಬ್ಬರು “ಈತ ಪತ್ರಕರ್ತರಿಗೆ ಅದ್ಧೂರಿಯಾಗಿ ಔತಣಕೂಟ ಏರ್ಪಡಿಸಿ, ಉಡುಗೊರೆ, ಭಕ್ಷೀಸು ಕೊಟ್ಟು ಆತನ ಪರ ಪತ್ರಿಕೆಗಳಲ್ಲಿ ಬರೆಸುತ್ತಾನೆ. ಅದರಲ್ಲಿ ನೈಜ ಸಂಗತಿಗಳಿಗಿಂತ ಉತ್ಪ್ರೇಕ್ಷೆ ಹೆಚ್ಚಿರುತ್ತದೆ. ಸ್ಥಳೀಯರಾದ ನಮಗೆ  ಕೆಲವು ಅನುಮಾನಗಳಿದ್ದರೂ, ಯಾರೂ ಆ ಕುರಿತು ಧ್ವನಿ ಎತ್ತದೇ, ನಮ್ಮ ಮೇಲಿನವರೂ ಪ್ರೋತ್ಸಾಹಿಸದೆ, ಪತ್ರಿಕೆಗಳಿಗೆ ಬರೆಯಲು ಸಾಧ್ಯವಾಗುತ್ತಿಲ್ಲ” ಎಂದು ಅಸಹಾಯಕತೆ ತೋಡಿಕೊಂಡರು.

ಆಶ್ಚರ್ಯಕರ ಸಂಗತಿಯೆಂದರೆ ಒಬ್ಬ ಖಾಸಗಿ ವ್ಯಕ್ತಿ ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ರಾಜಾರೋಷವಾಗಿ ಇಷ್ಟೆಲ್ಲಾ ಅಕ್ರಮಗಳನ್ನು ಮಾಡುತ್ತಿದ್ದರೂ ಯಾವುದೇ ಸ್ಥಳೀಯ ರಾಜಕಾರಣಿಗಳು, ಪಕ್ಷಗಳು ಇದರ ವಿರುದ್ಧ ಮಾತನಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ. ಅರಣ್ಯ ಮತ್ತು ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಎಲ್ಲರಿಗೂ ಸಲ್ಲಬೇಕಾದ್ದು ಸಲ್ಲುತ್ತಿರಬಹುದು.

ಈ ಎಲ್ಲಾ ಅಕ್ರಮ ಚಟುವಟಿಕೆಗಳ ಬಗೆಗೆ ಉನ್ನತ ತನಿಖೆ ನಡೆಯಬೇಕು. ಎಲ್ಲಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಕಾನೂನು ಬಾಹಿರ ಚಟುವಟಿಕೆಗಳು ನಿಲ್ಲಬೇಕು. ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಉದ್ಧಟತನ ಇಲ್ಲಿ ಕಾಣಿಸುತ್ತಿದೆ. ಇದು ಅಪಾಯಕಾರಿ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page