Saturday, September 14, 2024

ಸತ್ಯ | ನ್ಯಾಯ |ಧರ್ಮ

ಸಾಯುವ ಕೊನೆ ದಿನಗಳಲ್ಲಿ ಬೆಸ್ಟ್‌ ಸೆಲ್ಲರ್‌ ಕೃತಿ ಬರೆದ ಡಾಕ್ಟರ್!‌

  • ಎಂ ನಾಗರಾಜ ಶೆಟ್ಟಿ

ಶ್ವಾಸಕೋಶದಲ್ಲಿ ಅಸಂಖ್ಯಾತ ಗಡ್ಡೆಗಳು, ವಿರೂಪಗೊಂಡ ಬೆನ್ನು ಮೂಳೆ, ಘಾಸಿಯಾದ ಯಕೃತ್ತು- ಕ್ಯಾನ್ಸರ್‌ ವ್ಯಾಪಕವಾಗಿ ಹರಡಿರುವುದನ್ನು ಸಿ ಟಿ ಸ್ಕ್ಯಾನ್‌ ದೃಢ ಪಡಿಸುತ್ತಿತ್ತು.

ಇದನ್ನು ನೋಡುತ್ತಿರುವವನು ಬರಿಯ ವೈದ್ಯನಲ್ಲ; ಆರು ವರ್ಷಗಳ ವೈದ್ಯಕೀಯ ಸ್ನಾತಕೋತ್ತರ ತರಬೇತಿ(Residency)ಯನ್ನು ಮುಗಿಸಿ, ಕೊನೆಯ ವರ್ಷದ ತರಬೇತಿಯಲ್ಲಿರುವ ನರ ಶಸ್ತ್ರ ಚಿಕಿತ್ಸಕನಾದ 36 ರ ತರುಣ. ಆ ವಯಸ್ಸಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುವ ಸಂಭವ ಅತಿ ಕಡಿಮೆಯೆಂದು ಹೇಳಲಾಗಿದೆ. ಪರಿಚಿತ ಡಾಕ್ಟರನ್ನು ಭೇಟಿಯಾದಾಗ ಎಂಆರ್ ಐ ಬದಲು ಎಕ್ಸ್ ರೇ ಮಾಡಲು ಹೇಳುತ್ತಾರೆ. ಎಂಆರ್ ಐಗೆ ಹೆಚ್ಚು ವೆಚ್ಚ ಮಾಡುವ ಮೊದಲು ಎಕ್ಸ್ ರೇ ನೋಡೋಣ ಎಂದವರ ಅಭಿಪ್ರಾಯ.

ಎಕ್ಸ್ ರೇಯ ಫಲಿತಾಂಶ ದೊರಕುವ ಮೊದಲೇ ನ್ಯೂಯಾರ್ಕ್ ಗೆ ಹೋಗುವ ವಿಮಾನ ಹತ್ತಬೇಕಾಗುತ್ತದೆ. ಕೆಲವು ದಿನಗಳ ಹಿಂದೆಯೇ ನೂಯಾರ್ಕ್ ನಲ್ಲಿ ಹಳೆಯ ಗೆಳೆಯರ ಭೇಟಿ ನಿರ್ಧಾರವಾಗಿರುತ್ತದೆ. ವಿಮಾನ ಇಳಿದಂತೆ ಅಸಾಧ್ಯ ನೋವು ಕಾಡುತ್ತದೆ. ಗೆಳೆಯರ ಜೊತೆಯಲ್ಲಿ ಬೆರೆಯಲಾಗದೆ, ಮಲಗಿ, ಎದ್ದು ವಿಪರೀತ ನೋವು ಒತ್ತರಿಸಿ ಬರುತ್ತಿರುವಾಗ ಕ್ಯಾನ್ಸರ್ ಆವರಿಸಿರುವ ಬಗ್ಗೆ ಅನುಮಾನ ಉಳಿಯುವುದಿಲ್ಲ. ವಾಪಾಸು ಬಂದು ಎಕ್ಸ್ ರೇ ನೋಡಿದಾಗ ಶ್ವಾಸಕೋಶವನ್ನು ಆವರಿಸಿದ ಮಬ್ಬು ಅದನ್ನೇ ದೃಢ ಪಡಿಸುತ್ತದೆ.

ಹೆಂಡತಿ ಲೂಸಿ ನ್ಯೂಯಾರ್ಕ್ ಗೆ ಜತೆಯಲ್ಲಿ ಬರಬೇಕಿತ್ತು; ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಮದುವೆ ಮುರಿದು ಬೀಳುವ ಹಂತ ಬಂದಿತ್ತು. ಕ್ಯಾನ್ಸರ್ ಆಗಿದೆ ಎಂದು ಗೊತ್ತಾದಾಗ ಲೂಸಿ ನಿನ್ನನ್ನು ಬಿಟ್ಟು ಅಗಲುವುದಿಲ್ಲ ಎನ್ನುತ್ತಾಳೆ.

ಪಾಲ್ ಕಲಾನಿಥಿ(Paul Kalanithi) ಇಂಗ್ಲಿಷ್ನಲ್ಲಿ ಬಿಎ ಮತ್ತು ಎಂ ಎ; ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ವಿಜ್ಞಾನ ಮತ್ತು ವೈದ್ಯಕೀಯ ಇತಿಹಾಸ ಹಾಗೂ ತತ್ವ ಶಾಸ್ತ್ರದಲ್ಲಿ ಎಂಫಿಲ್ ಗಳಿಸಿದವರು. ಏಳು ವರ್ಷಗಳ ನರ ಶಸ್ತ್ರ ಚಿಕಿತ್ಸೆಯ ಸ್ನಾತಕೋತ್ತರ ತರಬೇತಿಯನ್ನು ಮುಗಿಸಿದ ಬಳಿಕ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವೈದ್ಯ ವಿಜ್ಞಾನಿ ಮತ್ತು ನರರೋಗ ಚಿಕಿತ್ಸಕನಾಗುವ ಕನಸು ಕಂಡವರು. ಅದಕ್ಕೆ ಅವಕಾಶವೂ ಒದಗಿ ಬಂದಿತ್ತು. ಕೆಲವೇ ದಿನಗಳ ಹಿಂದೆ ನೀವು ಆ ಹುದ್ದೆಗೆ ಆಯ್ಕೆಯಾಗುವ ಸೂಕ್ತ ಅಭ್ಯರ್ಥಿ ಎನ್ನುವ ಆಶ್ವಾಸನೆ ದೊರಕಿತ್ತು. ಈ ಹಂತದಲ್ಲಿ ಪ್ರತಿಭಾವಂತ ತರುಣ ಪಾಲ್ ಕಲಾನಿಥಿಗೆ ಮಾರಣಾಂತಿಕ ಕಾಯಿಲೆ ಇರುವುದು ತಿಳಿಯುತ್ತದೆ.

ಪಾಲ್ ಕಲಾನಿಥಿಯ ತಾಯಿ ತಂದೆ ದಕ್ಷಿಣ ಭಾರತದವರು. ಕ್ರಿಶ್ಚಿಯನ್ ತಂದೆ, ಹಿಂದೂ ತಾಯಿ- ಮದುವೆಗೆ ಎರಡೂ ಕಡೆಯ ಹೆತ್ತವರ ಒಪ್ಪಿಗೆ ದೊರಕದೆ ಅಮೆರಿಕಾಕ್ಕೆ ಬರುತ್ತಾರೆ. ಮೂವರು ಮಕ್ಕಳಾದ ನಂತರ ಹೃದ್ರೋಗ ತಜ್ಞರಾದ ತಂದೆ, ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲಾಗದೆ ನ್ಯೂಯಾರ್ಕ್ ಬಿಟ್ಟು ಅರಿಜೋನಾದ ಕಿಂಗ್ಮನ್ನಲ್ಲಿ ನೆಲಸುತ್ತಾರೆ. ಅರಿಜೋನಾ ವಿಶೇಷ ಸವಲತ್ತುಗಳಿಲ್ಲದ, ಮರುಭೂಮಿಯ ಜಾಗ. ಅಲ್ಲಿ ಶಿಕ್ಷಣಕ್ಕೆ ಸೂಕ್ತ ಅವಕಾಶ ಇಲ್ಲದ್ದನ್ನು ಕಂಡು ತಾಯಿ ಮಕ್ಕಳ ಓದಿಗಾಗಿ ತಾನೇ ಪುಸ್ತಕಗಳ ಯಾದಿ ತಯಾರಿಸುತ್ತಾರೆ. ಇದರಿಂದಾಗಿ ಪೌಲ್ ಕಲಾನಿಥಿ 12 ವರ್ಷವಾಗುವ ಮೊದಲೇ ಎಡ್ಗರ್ ಅಲೆನ್ ಪೋ, ಗೊಗೊಲ್, ಡಿಕನ್ಸ್, ಮಾರ್ಕ್ ಟ್ವೈನ್, ಆಸ್ಟೆನ್, ಜಾರ್ಜ್ ಆರ್ವೆಲ್ ಮುಂತಾದವರನ್ನು ಓದುತ್ತಾರೆ. ಆ ಸಮಯದಲ್ಲಿ ಅವರ ಗೆಳತಿ ಜೆರೆಮಿ ಲೆವೆನ್ ಕೊಟ್ಟ ಪುಸ್ತಕದಿಂದ ಬದುಕಿನ ಬಗ್ಗೆ ಹೊಸ ದೃಷ್ಟಿಕೋನ ಮೂಡುತ್ತದೆ.

ನಮ್ಮ ಚಿಂತನೆಗಳಿಗೆ ಕಾರಣವಾದ ಮಿದುಳು ಒಂದು ಜೈವಿಕ ಅಂಗ. ಸಾಹಿತ್ಯದ ಆಳವಾದ ಅಧ್ಯಯನದ ಮೂಲಕ ಮನುಷ್ಯನ ಭಾವನೆಗಳನ್ನು, ಕಲ್ಪನೆಗಳನ್ನು, ಚಿಂತನೆಗಳನ್ನು ಅರಿತುಕೊಳ್ಳಬಹುದು. ಅದರೊಂದಿಗೆ ಮಿದುಳಿನ ರಚನೆಯನ್ನು, ಕಾರ್ಯವಿಧಾನವನ್ನು ತಿಳಿದುಕೊಳ್ಳಲು ಜೀವ ಶಾಸ್ತ್ರದ ಅಗತ್ಯವಿದೆ. ಭಾಷೆ ಸಂವಹಿಸಲು ಮಾನವನು ಕಂಡುಕೊಂಡು ಅದ್ಭುತವಾದ ಮಾಧ್ಯಮ. ಮಿದುಳು, ನರಕೋಶಗಳು, ಜೀರ್ಣಾಂಗ, ಎದೆ ಬಡಿತ ಮುಂತಾದವನ್ನು ಒಳಗೊಂಡ ಶರೀರ ರಚನೆಯಿಂದ ಭಾಷೆ ಹೊರಡುತ್ತದೆ. ಸಾಮಾನ್ಯವಾಗಿ ಸಾಹಿತ್ಯ ಜೀವಿಗಳಿಗೆ ಜೀವ ಶಾಸ್ತ್ರ, ಶರೀರ ಶಾಸ್ತ್ರ ಅಪಥ್ಯವಾದರೂ ಪ್ರಸಿದ್ಧ ಕವಿ ವಾಲ್ಟ್ ವಿಟ್ಮನ್ ಈ ಕುರಿತು ಆಸಕ್ತಿ ಹೊಂದಿ ʼ ದೈಹಿಕ- ಆಧ್ಯಾತ್ಮಿಕ ಮನುಷ್ಯʼ (The Physiological-Spiritual Man) ಎನ್ನುವ ಪರಿಭಾಷೆಯನ್ನೇ ಸೃಷ್ಟಿಸಿದ. ಸಾಹಿತ್ಯ, ಜೀವಶಾಸ್ತ್ರ, ತತ್ವಶಾಸ್ತ್ರ ಇವೆಲ್ಲವುಗಳ ಅಧ್ಯಯನ ಬದುಕಿನ ಅರ್ಥವನ್ನು ತಿಳಿದುಕೊಳ್ಳಲು ಸಹಕಾರಿಯಾಗಹುದೇ? ಬದುಕನ್ನು ಸಾರ್ಥಕಗೊಳಿಸುವ ಬಗೆ ಹೇಗೆ?

ಈ ಕುರಿತು ತೀವ್ರ ಕುತೂಹಲ ಬೆಳೆಸಿಕೊಂಡ ಪಾಲ್ ಕಲಾನಿಥಿ ಸಾಹಿತ್ಯ ಮತ್ತು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ತತ್ವಶಾಸ್ತ್ರದಲ್ಲಿ ಎಂಫಿಲ್ ಪಡೆದ ನಂತರ ಜೀವಶಾಸ್ತ್ರ ವಿಜ್ಞಾನ ಮತ್ತು ನರ ಶಸ್ತ್ರ ಚಿಕಿತ್ಸೆಯನ್ನು ಅಧ್ಯಯನ ಮಾಡುವ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ಪಾಲ್ ಸ್ನಾತಕೋತ್ತರ ತರಬೇತಿ ಸಂದರ್ಭದಲ್ಲಿ ಕ್ಲಿಷ್ಟವಾದ ಹಲವು ನರ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿ ಮೆಚ್ಚುಗೆಗೂ ಪ್ರಶಸ್ತಿಗೂ ಪಾತ್ರರಾಗುತ್ತಾರೆ. ಹತ್ತು ವರ್ಷಗಳ ಸತತ ಶ್ರಮದ ನಂತರ, ತಾನು ಬಯಸಿದ ತಜ್ಞ ಶಸ್ತ್ರ ಚಿಕಿತ್ಸಕ ಹಾಗೂ ಪ್ರೊಫೆಸರ್ ಆಗಲು ಕೇವಲ 15 ತಿಂಗಳು ಉಳಿದಿರುವಾಗ ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗುತ್ತದೆ. ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಮೀರಿ ಕ್ಯಾನ್ಸರ್ ಉಲ್ಬಣಗೊಳ್ಳುತ್ತಾ ಹೋಗುತ್ತದೆ.

ʼ ವೆನ್ ಬ್ರೆಥ್ ಬಿಕಮ್ಸ್ ಏರ್ ʼ (When Breath becomes Air) ಇಂತಹ ಪರಿಸ್ಥಿತಿಯಲ್ಲಿ, ದುರ್ಭರ ನೋವಿನಲ್ಲಿ- ಧ್ಯಾನಾವಸ್ಥೆಯಲ್ಲಿ ರೂಪುಗೊಂಡ ಕೃತಿ. ಈ ಪುಸ್ತಕದಲ್ಲಿ ಮರಣಾವಸ್ಥೆಯಲ್ಲಿರುವ ವ್ಯಕ್ತಿಯೊಬ್ಬನ ದೃಢ ಚಿತ್ತ, ಸಾವನ್ನು ಘನತೆಯಿಂದ ಎದುರುಗೊಳ್ಳುವ ಬಗೆಯನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸಲಾಗಿದೆ. ಸಾಹಿತ್ಯದ ವಿಸ್ತ್ರತ ಓದು, ತತ್ವಶಾಸ್ತ್ರದ ತಿಳಿವು, ವಿಜ್ಞಾನ-ವೈದ್ಯಕೀಯದ ಅರಿವು ಇದನ್ನೊಂದು ವಿಶಿಷ್ಟ ಕೃತಿಯಾಗಿ ರೂಪಿಸಿದೆ. ಪಾಲ್ ಕಲಾನಿಥಿ ಮರಣಾನಂತರ ಅವರ ಪತ್ನಿ ಕೃತಿಯ ಕೊನೆಯ ಭಾಗವನ್ನು ಬರೆದಿದ್ದಾರೆ.

2016 ರಲ್ಲಿ ಪ್ರಕಟವಾದ ʼ ವೆನ್ ಬ್ರೆಥ್ ಬಿಕಮ್ಸ್ ಏರ್ ʼ ಪುಸ್ತಕದ 15 ಲಕ್ಷಕ್ಕಿಂತಲೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಹಲವು ತಿಂಗಳುಗಳ ಕಾಲ ಬೆಸ್ಟ್ ಸೆಲ್ಲರ್ ಎನ್ನಿಸಿಕೊಂಡಿದ್ದು ಜಗತ್ತಿನ 50 ಕ್ಕಿಂತಲೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಈ ಕೃತಿಯಲ್ಲಿ ಧಾರ್ಮಿಕ ಗ್ರಂಥಗಳು, ತತ್ವಶಾಸ್ತ್ರದ ಪುಸ್ತಕಗಳು, ಸಂತರ- ದೇವಮಾನರ ಬೋಧನೆಗಳು ಮುಂತಾದವುಗಳಿಂತ ಭಿನ್ನವಾಗಿ, ಸಾವಿಗೆ ಮುಖಾಮುಖಿಯಾಗುವ, ಕಡೇ ಗಳಿಗೆಯಲ್ಲೂ ಬದುಕನ್ನು ಸಾರ್ಥಕ ಮಾಡಿಕೊಳ್ಳುವ ತೀವ್ರ ತುಡಿತವನ್ನು ಕಾಣಬಹುದು. ಸಾವು ಒಮ್ಮೆ ಸಂಭವಿಸುತ್ತದೆ; ಆದರೆ ಮಾರಣಾಂತಿಕ ಕಾಯಿಲೆಯೊಂದಿಗೆ ಬದುಕುವುದು ಒಂದು ಪ್ರಕ್ರಿಯೆ ಎಂದವರು ಬರೆಯುತ್ತಾರೆ.

ಏಳು ವರ್ಷಗಳ ಸ್ನಾತಕೋತ್ತರ ತರಬೇತಿ ಸಮಯದ ಅನುಭವ, ಸವಾಲು ಅವುಗಳಿಂದ ಒದಗುವ ಒಳನೋಟಗಳನ್ನು ಮನ ಮುಟ್ಟುವಂತೆ ಪುಸ್ತಕದಲ್ಲಿ ವಿವರಿಸಲಾಗಿದೆ. ಹೆರಿಗೆ ಸಮಯದಲ್ಲಿ 24 ವಾರ ತುಂಬದ ಅವಳಿ ಮಕ್ಕಳನ್ನು ಉಳಿಸಲಾಗದ ಸಂಕಟ ಒಂದೆಡೆಯಾದರೆ, ಕ್ಲಿಷ್ಟ ಹೆರಿಗೆ ಯಶಸ್ವಿಯಾಗಿ ಮಾಡಿದ ಸಂತಸ ಮತ್ತೊಂದೆಡೆ. ಬೈಕ್ ಅಪಘಾತದಲ್ಲಿ 22 ವರ್ಷದ ಯುವಕನೊಬ್ಬನ ಮಿದುಳು ಮೂಗಲ್ಲಿ ಹೊರ ಬರುತ್ತಿರುವ ಸನ್ನಿವೇಶ; ಮಿದುಳು ಗಡ್ಡೆಯಾದ ಮಹಿಳೆಯನ್ನು ಶಸ್ತ್ರಚಿಕಿತ್ಸೆ ಒಪ್ಪಿಸುವ ಅನಿವಾರ್ಯತೆ; ಬದುಕುವ ಅವಕಾಶವಿಲ್ಲವೆಂದು ಸಂಬಂಧಿಗಳಿಗೆ ತಿಳಿ ಹೇಳುವ ಒತ್ತಡ- ಇಂತಹ ವಿಷಮ ಸಂದರ್ಭಗಳಲ್ಲೂ ಪಾಲ್ ಮಾನವ ಸಂಬಂಧದಲ್ಲಿ ಅರ್ಥವಂತಿಕೆಯನ್ನು ಅರಸುತ್ತಾರೆ.

ಯಾರನ್ನು ಉಳಿಸಬೇಕು, ಯಾರನ್ನು ಉಳಿಸಲಾಗದು, ಉಳಿಸಿದರೆ ಆಗುವ ಪರಿಣಾಮಗಳೇನು ಇವೆಲ್ಲವನ್ನೂ ವೈದ್ಯನಾದವ ಅನುಭವದಿಂದ ಅರಿಯಬೇಕು. ತೀವ್ರ ಕಾಯಿಲೆಯಿಂದ ಚೇತರಿಸಿಕೊಂಡ ವ್ಯಕ್ತಿ ಮೊದಲಿನಂತಿರುವುದಿಲ್ಲ. ಅವನ ವ್ಯಕ್ತಿತ್ವ ( Identity) ಉಳಿಯುತ್ತದೆಯೇ? ವ್ಯಕ್ತಿತ್ವ ನಾಶವಾದ ಮನುಷ್ಯನ ಪಾಡೇನು? ಇವೆಲ್ಲ ತತ್ವಜ್ಞಾನಿಯಂತೆ ಪಾಲ್ ಕಲಾನಿಥಿಯವರನ್ನು ಕಾಡುತ್ತವೆ. ಮಾನವ ಸಂಬಂಧಗಳಿಗೆ ಅವರು ಹೆಚ್ಚು ಒತ್ತು ನೀಡುತ್ತಾರೆ. ಇದು ಕೇವಲ ರೋಗಿ ಮತ್ತು ಅವನ ಕುಟುಂಬಿಕರ ಸಂಬಂಧವಲ್ಲ; ಡಾಕ್ಟರ್ ಮತ್ತು ರೋಗಿಯ ಸಂಬಂಧ ಕೂಡಾ. ವೈದ್ಯನ ಕ್ಷಮತೆ ಎಷ್ಟಿದ್ದರೂ ಸೋಲು ಗೆಲುವಿನ ಅಂತರ ಬಹಳ ಕ್ಷೀಣ ಎನ್ನುವ ಎಚ್ಚರದಿಂದ, ರೋಗದ ಬಗ್ಗೆ ಅಥವಾ ಸಾವಿನ ಬಗ್ಗೆ ರೋಗಿಗಳಿಗೆ, ಅವರ ಸಂಬಂಧಿಕರಿಗೆ ತಿಳಿ ಹೇಳಿ ಬದುಕನ್ನು ಎದುರಿಸಲು ಸಜ್ಜುಗೊಳಿಸಬೇಕು ಎಂದವರು ಅಭಿಪ್ರಾಯ ಪಡುತ್ತಾರೆ.

ಶ್ವಾಸಕೋಶದ ಕ್ಯಾನ್ಸರ್ ದೃಢ ಪಟ್ಟ ನಂತರ ಪಾಲ್ ಎಮ್ಮಾ ಹೇವರ್ಥ್ ಎನ್ನುವ ಪರಿಣತ ಕ್ಯಾನ್ಸರ್ ತಜ್ಞೆಯಿಂದ ಚಿಕಿತ್ಸೆ ಪಡೆಯುತ್ತಾರೆ. ಕ್ಯಾನ್ಸರ್ನ ಗುಣ ಲಕ್ಷಣಗಳನ್ನು ಅವಲೋಕಿಸಿದಾಗ ಕಿಮೋ ಥೆರಪಿಯ ಅಗತ್ಯವಿಲ್ಲವೆಂದು ತಿಳಿಯುತ್ತದೆ. ತರ್ಸೆವಾ( Tarceva) ಎನ್ನುವ ಚಿಕ್ಕ ಗುಳಿಗೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯಿಂದ ಪಾಲ್ ಕಲಾನಿಥಿಯ ಆರೋಗ್ಯ ಉತ್ತಮಗೊಳ್ಳುತ್ತದೆ. ತೂಕ ಹೆಚ್ಚತೊಡಗಿ, ಓಡಾಟಕ್ಕೆ ಶಕ್ತಿ ಒದಗುತ್ತದೆ. ಇನ್ನುಳಿದ ದಿನಗಳನ್ನು ಪಾಲ್ ಹೊಸ ಹುರುಪಿನಿಂದ ಅರ್ಥಪೂರ್ಣವಾಗಿ ಬದುಕುವ ಸಂಕಲ್ಪ ಮಾಡುತ್ತಾರೆ.

ಅವರ ಮುಂದಿರುವುದು ಎರಡೇ ದಾರಿ: ಬರೆಯುವುದು ಅಥವಾ ನರ ಶಸ್ತ್ರ ಚಿಕಿತ್ಸೆಯಲ್ಲಿ ತೊಡಗಿಕೊಳ್ಳುವುದು. ನರ ಶಸ್ತ್ರ ಚಿಕಿತ್ಸೆ ಬಹಳ ಕಠಿಣ, ಕ್ಲಿಷ್ಟ ಹಾಗೂ ನಾಜೂಕಾದುದು. ಶಸ್ತ್ರ ಚಿಕಿತ್ಸೆಗೆ ಗಂಟೆಗಳ ಪರಿವೆ ಇಲ್ಲ. ಸಣ್ಣ ತಪ್ಪು ಕೂಡಾ ವಿಷಮ ಪರಿಸ್ಥಿತಿಗೆ ಕಾರಣವಾಗಬಹುದು. ಹೀಗಿದ್ದರೂ ಪೌಲ್ ನರ ಶಸ್ತ್ರ ಚಿಕಿತ್ಸೆಯಲ್ಲಿ ಮತ್ತೆ ತೊಡಗುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮೊದಲಿನ ಆತಂಕಗಳು ದಿನಗಳೆದಂತೆ ಕಡಿಮೆಯಾಗುತ್ತವೆ; ಮತ್ತೆ ಪರಿಣತಿ ಸಿದ್ಧಿಸುತ್ತದೆ.

ಈ ನಡುವೆ ಪಾಲ್ ದಂಪತಿ ಮಗು ಪಡೆಯುವ ಯೋಚನೆ ಮಾಡಿರುತ್ತಾರೆ. ತನ್ನ ನಂತರ ಮತ್ತೊಂದು ಜೀವ ಅರಳುತ್ತದೆ, ಅದು ತನ್ನನ್ನು ಬೀಳ್ಕೊಡುತ್ತದೆ ಎನ್ನುವ ಅಶಾವಾದದೊಂದಿಗೆ ಹೊಸ ಅನುಭವಕ್ಕೆ ತೆರೆದುಕೊಳ್ಳುವ ಇಚ್ಛೆ ಅವರದು.

ಪಾಲ್ ಕೆಲದಿನಗಳ ನಂತರ ಸಿಟಿ ಸ್ಕ್ಯಾನ್ ನೋಡಿದಾಗ ಶ್ವಾಸಕೋಶದಲ್ಲಿ ದೊಡ್ಡದಾದ ಗಡ್ಡೆ ಕಂಡು ಬರುತ್ತದೆ. ಮೊದಲಿನ ಔಷಧಿಯೊಂದಿಗೆ ಕಿಮೋಥೆರಪಿಯನ್ನೂ ನೀಡಲಾಗುತ್ತದೆ. ಇದರಿಂದ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ಶುಶ್ರೂಷೆ ಮಾಡುವ ಎಮ್ಮಾ ಹೇವರ್ಥ್ ಸೇರಿದಂತೆ ತಂದೆ, ತಾಯಿ, ಅಣ್ಣ- ತಮ್ಮ ಮತ್ತು ಹೆಂಡತಿ ಲೂಸಿ ಭರವಸೆ ತುಂಬುತ್ತಾರೆ. ಪಾಲ್ ಡಾಕ್ಟರಾಗಿ, ರೋಗಿಯಾಗಿ ಮುಂದಾಗುವುದನ್ನು ಬಲ್ಲರು. ಕೊನೆಯ ದಿನ ಎಂದು ಬರುತ್ತದೆ ಎನ್ನುವುದಷ್ಟೇ ತಿಳಿದಿಲ್ಲ! ಅದು ಆರು ತಿಂಗಳಲ್ಲಿ ಆಗಬಹುದು; ಅರವತ್ತು ತಿಂಗಳುಗಳೂ ಆಗಬಹುದು.

ಪಾಲ್ ಜೀವನದಲ್ಲಿ ಬಯಸಿದ್ದು ಕೈಗೆಟಕುತ್ತದೆ ಎನ್ನುವಂತಿರುವಾಗ ಎಲ್ಲವೂ ಆವಿಯಾಗಿ ಹೋಗುತ್ತದೆ. ಆದರೆ ಅವರು ಧೃತಿಗೆಡುವುದಿಲ್ಲ. ಎಲ್ಲವನ್ನೂ ದೃಢ ಮನಸ್ಸಿನಿಂದ ಎದುರಿಸುತ್ತಾರೆ. ಪೂರ್ತಿಯಾಗಿ ಬಾಳಬೇಕು- Live life to its fullest- ಎನ್ನುವ ಸಂಕಲ್ಪದಿಂದ ಬದುಕನ್ನು ಆನಂದಿಸುತ್ತಾ, ಕಹಿ ಇಲ್ಲದೆ, ಸಂಬಂಧಗಳ ತೊಡಕಿಲ್ಲದೆ, ತನ್ನ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳುತ್ತಾ ಕೊನೆ ತನಕ ಜೀವಂತಿಕೆಯಿಂದ ಇರುತ್ತಾರೆ.

ʼ ವೆನ್ ಬ್ರೆಥ್ ಬಿಕಮ್ಸ್ ಏರ್ ʼ (ಉಸಿರು ಗಾಳಿಯಾದಾಗ) ಸಾಯುವ ವ್ಯಕ್ತಿಯೊಬ್ಬನ ಒಣ ಅಧ್ಯಾತ್ಮವಲ್ಲ. ಅನಿಶ್ಚಿತತೆಯನ್ನು ದಿಟ್ಟವಾಗಿ ಎದುರಿಸಿ, ಬದುಕಿನ ಅರ್ಥಗಳನ್ನು ಶೋಧಿಸುತ್ತಾ ಘನತೆಯಿಂದ ಸಾವನ್ನು ಬರಮಾಡಿಕೊಂಡ ವ್ಯಕ್ತಿಯೊಬ್ಬನ ಸ್ಪೂರ್ತಿದಾಯಕ ಕಥಾನಕ. ಅವರೇ ಹೇಳುವಂತೆ “ ನೀವು ಪರಿಪೂರ್ಣತೆಯನ್ನು ಹೊಂದಲು ಸಾಧ್ಯವಿಲ್ಲ. ಆದರೆ ಕಷ್ಟಕರವಾದ ಗುರಿಯನ್ನು ತಲುಪಲು ನಿರಂತರವಾಗಿ ಪ್ರಯತ್ನಿಸಬಹುದು” ಕೊನೆಯ ಉಸಿರಿನ ವರೆಗೂ ಪೌಲ್ ಕಲಾನಿಥಿ ಆ ಪ್ರಯತ್ನ ನಡೆಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page