Home ದೆಹಲಿ ಬಿಜೆಪಿಯ ಅಂತ್ಯ ಆರಂಭವಾಗಿದೆ: ಅರವಿಂದ್ ಕೇಜ್ರಿವಾಲ್

ಬಿಜೆಪಿಯ ಅಂತ್ಯ ಆರಂಭವಾಗಿದೆ: ಅರವಿಂದ್ ಕೇಜ್ರಿವಾಲ್

0

ದೆಹಲಿ: ಬಿಜೆಪಿ ಪತನದ ಕಾಲ ಹತ್ತಿರ ಬಂದಿದೆ ಎಂದು ಆಮ್ ಆದ್ಮಿ ಪಾರ್ಟಿ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾದ ನಂತರ ಭಾನುವಾರ ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿದ್ದ ಮೊದಲ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಜ್ರಿವಾಲ್, “ಮಿತ್ರರೇ, ಇದು ಅದೇ ಜಂತರ್ ಮಂತರ್, ಇಲ್ಲಿಂದಲೇ ಜನರು ಈ ಹಿಂದೆ ಕಾಂಗ್ರೆಸ್ ಅನ್ನು ಓಡಿಸಿದ್ದರು. ಇಂದು ಜಂತರ್ ಮಂತರ್‌ಗೆ ಐತಿಹಾಸಿಕ ದಿನವಾಗಲಿದೆ. ಇಂದಿನ ದಿನಾಂಕವನ್ನು ನೆನಪಿಟ್ಟುಕೊಳ್ಳಿ, ಇಂದಿನಿಂದಲೇ ಬಿಜೆಪಿಯ ಪತನದ ಉಲ್ಟಾ ಗಣನೆ (ಕೌಂಟ್ ಡೌನ್) ಆರಂಭವಾಗಿದೆ,” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ಬದಲಾಗಿ ಅವರ ಪಕ್ಷದ ಸದಸ್ಯರು ಅಥವಾ ಸ್ನೇಹಿತರೇ ದೊಡ್ಡ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದರು.

“ನಾನು ಹತ್ತು ವರ್ಷಗಳಿಂದ ದೆಹಲಿಯ ಮುಖ್ಯಮಂತ್ರಿಯಾಗಿದ್ದೇನೆ. ಮೋದಿ ಅವರು ನನ್ನ ಮೇಲೆ ಎಷ್ಟೇ ದಾಳಿಗಳನ್ನು ಮಾಡಿದರೂ ಒಂದು ಪೈಸೆಯ ಭ್ರಷ್ಟಾಚಾರವನ್ನೂ ಪತ್ತೆಹಚ್ಚಲು ಅವರಿಗೆ ಸಾಧ್ಯವಾಗಿಲ್ಲ. ಈ ಹತ್ತು ವರ್ಷಗಳಲ್ಲಿ ನಾನು ಸಾವಿರಾರು ಫೈಲ್‌ಗಳಿಗೆ ಸಹಿ ಹಾಕಿದ್ದೇನೆ. ದೆಹಲಿ ಸರ್ಕಾರದ ಒಬ್ಬನೇ ಒಬ್ಬ ಕಂಟ್ರಾಕ್ಟರ್ ಎದ್ದು ನಿಂತು ‘ಕೇಜ್ರಿವಾಲ್ ನನ್ನ ಬಳಿ ಹಣ ಕೇಳಿದ್ದಾರೆ’ ಎಂದು ಹೇಳಿದರೂ ನಾನು ರಾಜಕೀಯವನ್ನೇ ಬಿಟ್ಟುಬಿಡುತ್ತೇನೆ,” ಎಂದು ಸವಾಲು ಹಾಕಿದರು. ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ನೀಡಿದ ತೀರ್ಪನ್ನು ಶ್ಲಾಘಿಸಿದ ಅವರು, “ಕಳೆದ ನಾಲ್ಕು ವರ್ಷಗಳಿಂದ ಮೋದಿ ಮತ್ತು ಅಮಿತ್ ಶಾ ಅವರು ಪಿತೂರಿ ನಡೆಸಿ ದೆಹಲಿ ಜನರಿಗೆ ತುಂಬಾ ತೊಂದರೆ ನೀಡಿದ್ದಾರೆ. ಆದರೆ ನ್ಯಾಯಾಲಯವು ಕೇಜ್ರಿವಾಲ್ ಒಬ್ಬ ಪ್ರಾಮಾಣಿಕ ವ್ಯಕ್ತಿ ಎಂದು ಸಾಬೀತುಪಡಿಸಿದೆ,” ಎಂದರು.

ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಕೇಜ್ರಿವಾಲ್, “ಜನರು 30 ವರ್ಷಗಳ ನಂತರ ಪೂರ್ಣ ಬಹುಮತದೊಂದಿಗೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಆದರೆ ಇಂದು ಬ್ಯಾಂಕ್‌ಗಳು, ರೈಲ್ವೆ, ಶಿಕ್ಷಣ, ಆಸ್ಪತ್ರೆಗಳು ಮತ್ತು ಗ್ರಾಮಗಳು ಹೀಗೆ ಪ್ರತಿಯೊಂದು ಕ್ಷೇತ್ರವೂ ಕಳೆದ 12 ವರ್ಷಗಳಲ್ಲಿ ನಾಶವಾಗಿವೆ. ಇಂದು ಉತ್ತರ ಭಾರತದಾದ್ಯಂತ ಉಸಿರಾಡುವುದೂ ಕಷ್ಟವಾಗುತ್ತಿದೆ, ವಾಯು ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಇವರಿಂದ ಸಾಧ್ಯವಾಗಿಲ್ಲ. ‘ವಿಕಸಿತ ಭಾರತ’ ನಿರ್ಮಿಸುತ್ತೇವೆ ಎನ್ನುವವರು ಮೊದಲು ಈ ದೇಶವನ್ನು ಮನುಷ್ಯರು ಬದುಕಲು ಯೋಗ್ಯವಾದ ದೇಶವನ್ನಾಗಿ ಮಾಡಲಿ,” ಎಂದು ಲೇವಡಿ ಮಾಡಿದರು.

You cannot copy content of this page

Exit mobile version