Monday, December 22, 2025

ಸತ್ಯ | ನ್ಯಾಯ |ಧರ್ಮ

ಸದನದಲ್ಲಿ ಹೈದರಾಲಿಯ ಸಂಬಳದ `ಸುಳ್ಳಿನ’ ಕಥೆ!

“..ಟಿಪ್ಪು ಮತ್ತು ಹೈದರಾಲಿ ಬಗ್ಗೆ ಸದನದಲ್ಲಿ ಶಾಸಕ ಸುರೇಶ್ ಕುಮಾರ್ ಹೇಳಿದ್ದು ಒಂದು ಕಟ್ಟು ಕಥೆಯಷ್ಟೆ. ನಿಜವೆಂದು ರುಜುವಾತು ಮಾಡುವ ಯಾವುದೇ ಅಧಿಕೃತ ಚಾರಿತ್ರಿಕ ಪುರಾವೆಗಳಿಲ್ಲ..” ಮಾಚಯ್ಯ ಎಂ ಹಿಪ್ಪರಗಿಯವರ ಬರಹದಲ್ಲಿ

ಮೊನ್ನೆ ಸದನದಲ್ಲಿ ಬಿಜೆಪಿಯ ಸುರೇಶ್ ಕುಮಾರರು ಒಂದು ಸ್ವಾರಸ್ಯಕರ ಕಥೆ ಹೇಳಿದರು. ಅದನ್ನು ಕೇಳಿಸಿಕೊಂಡು ಇಡೀ ಸದನ ನಗೆಗಡಲಲ್ಲಿ ತೇಲಿತು ಎಂದು ಮಾಧ್ಯಮಗಳು ವರದಿ ಮಾಡಿದವು. ಗೃಹಲಕ್ಷ್ಮಿ ಹಣ ಸರಿಯಾಗಿ ಫಲಾನುಭವಿಗಳ ಕೈಸೇರದಿರುವುದರ  ಬಗ್ಗೆ  ಸರ್ಕಾರವನ್ನು ಪ್ರಶ್ನೆ ಮಾಡುತ್ತಾ ಹೈದರಾಲಿಯನ್ನು ಎಳೆತಂದ ಅವರು “ಹೈದರಾಲಿ ಇದ್ನಲ್ವಾ.. ಟಿಪ್ಪು ಸುಲ್ತಾನರ ಅಪ್ಪ. ಆತ ತನ್ನ ಸೈನಿಕರಿಗೆ ಜನವರಿ 1ನೇ ತಾರೀಕು ಸಂಬಳ ಕೊಡ್ತಿದ್ದ. ಫೆಬ್ರವರಿ ಬಂದಾಗ 5ನೇ ತಾರೀಕು ಸಂಬಳ ಕೊಡ್ತಿದ್ದ. ನಿಮಗೇನು ಐದೇ ದಿನ ವ್ಯತ್ಯಾಸ. ಮಾರ್ಚ್ ಬಂದಾಗ 10ನೇ ತಾರೀಕು ಕೊಡ್ತಾ ಇದ್ದ. ಏಪ್ರಿಲ್ 15… ಹೀಗೆ ಜೂನ್‌ ಬರೋ ಹೊತ್ತಿಗೆ ಒಂದು ತಿಂಗಳ ಸಂಬಳಾನೆ ಹೊಡ್ದುಬಿಡ್ತಾ ಇದ್ದ”.

ಅವರು ಹೇಳಿದ್ದು ಒಂದು ಕಥೆಯಷ್ಟೆ. ನಿಜವೆಂದು ರುಜುವಾತು ಮಾಡುವ ಯಾವುದೇ ಅಧಿಕೃತ ಚಾರಿತ್ರಿಕ ಪುರಾವೆಗಳಿಲ್ಲ. ಹೈದರಾಲಿ ಮತ್ತು ಟಿಪ್ಪು ಕಾಲದ  ಮೈಸೂರು ಸಂಸ್ಥಾನದ ಚರಿತ್ರೆಯನ್ನು ಅಭ್ಯಸಿಸಲು ನಮ್ಮ ಮುಂದೆ ವಿದೇಶಿ ಪ್ರವಾಸಿಗರು ದಾಖಲಿಸಿರುವ ಪರ್ಷಿಯನ್ ಸಾಹಿತ್ಯ, ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ರೆಕಾರ್ಡ್‌ಗಳು, ಬ್ರಿಟಿಷ್ ಸೇನಾಧಿಕಾರಿಗಳ ಟಿಪ್ಪಣಿ ಅಥವಾ ಅನುಭವ ಕಥನಗಳು, ಮೈಸೂರು ಆಡಳಿತದ manualಗಳು, ಆಧುನಿಕ ಚರಿತ್ರಕಾರರ ಸಂಶೋಧನಾತ್ಮಕ ಕೃತಿಗಳಿವೆ. ಆದರೆ ಇಲ್ಲೆಲ್ಲೂ ಇಂತದ್ದೊಂದು ಪ್ರಕರಣದ ಉಲ್ಲೇಖವಿಲ್ಲ. ಪುರಾಣಗಳನ್ನೇ ಚರಿತ್ರೆಯಾಗಿಸಿರುವ ನಮ್ಮ ನೆಲದಲ್ಲಿ ಅಂತೆಕಂತೆಗಳೂ ಇತಿಹಾಸವಾಗುವ ವೈಚಿತ್ಯ್ರ ಹೊಸದಲ್ಲ. ಅದರಲ್ಲೂ ವಾಟ್ಸಾಪ್‌ ಯೂನಿವರ್ಸಿಟಿಯೆಂಬ ಅನಧಿಕೃತ ಕಟ್ಟುಕತೆಗಳ ಟ್ರೆಂಡ್‌ ಹುಟ್ಟಿಕೊಂಡ ಮೇಲಂತೂ ಸುಳ್ಳಿಗೂ ಸತ್ಯಕ್ಕೂ ವ್ಯತ್ಯಾಸವಿಲ್ಲದಷ್ಟು ಕಲಸುಮೇಲೋಗರ. ಸುರೇಶ್‌ ಕುಮಾರ್‍‌ ಅವರು ಹೇಳಿದ್ದು ಕೂಡಾ ಇಂತಹ ಚಾರಿತ್ರಿಕ ಪುರಾವೆಯಿಲ್ಲದ ಅಂತೆಕಂತೆಯ ಕಥೆಯಷ್ಟೆ. ಆದರೆ ಅವರ ನಿರೂಪಣೆ ಶೈಲಿ ಮತ್ತು ಬಾಡಿ ಲಾಂಗ್ವೇಜ್‌ ಹೇಗಿತ್ತೆಂದರೆ, ಅದೊಂದು ಚಾರಿತ್ರಿಕ ಸತ್ಯವೆನ್ನುವಂತೆ ಸದನದಲ್ಲಿ ಹೇಳಿದರು. ವಿರೋಧಿಸಬೇಕಾದವರು ವಿರೋಧಿಸಲಿಲ್ಲ. ಅದು ಕಡತದಲ್ಲಿ ದಾಖಲಾಯ್ತು. ಮುಂದೊಂದು ದಿನ ಆ ದಾಖಲೆಯ ಆಧಾರದಲ್ಲಿ ಸತ್ಯವೆಂದು ಸಾಬೀತಾದರೂ ಅಚ್ಚರಿಯಿಲ್ಲ.

ಎಲ್ಲಿಯೂ ಉಲ್ಲೇಖವಾಗಿಲ್ಲ ಎಂಬ ಕಾರಣಕ್ಕೆ ಒಂದು ಸಂಗತಿಯನ್ನು ಸುಳ್ಳು ಎಂದೇಳಬಹುದೇ? ಸುರೇಶ್‌ ಕುಮಾರರು ಪ್ರಸ್ತಾಪಿಸಿದ ಈ ಕತೆ ನಂಬಲರ್ಹ ಚರಿತ್ರೆಗಳಲ್ಲಿ ಉಲ್ಲೇಖವಾಗಿಲ್ಲ ಎಂಬ ಕಾರಣಕ್ಕೆ ಮಾತ್ರವಲ್ಲ, ಚರಿತ್ರೆಗಳಲ್ಲಿ ಉಲ್ಲೇಖವಾಗಿರುವ ಸಂಗತಿಗಳಿಗೆ ಅದು ವ್ಯತಿರಿಕ್ತವಾಗಿರೋದರಿಂದ ಅದನ್ನು ಸುಳ್ಳೆಂದು ಹೇಳಬಹುದು. ಹಾಗಾದರೆ ಹೈದರಾಲಿ, ಟಿಪ್ಪೂ ಕಾಲದ ಸೇನಾ ನಿರ್ವಹಣೆಯ ಚರಿತ್ರೆಗಳು ಏನು ಹೇಳುತ್ತವೆ?

ವಾಸ್ತವದಲ್ಲಿ ಇವತ್ತಿನ ರೀತಿ ತಿಂಗಳ ಸಂಬಳ ಎನ್ನುವ ಪರಿಕಲ್ಪನೆಯೇ ಹೈದರಾಲಿಗೆ ಮುನ್ನ ಚಾಲ್ತಿಯಲ್ಲಿ ಇರಲಿಲ್ಲ. ಅದರಲ್ಲೂ ಸೈನಿಕರಿಗೆ ನಿಗದಿತ ವೇತನ ವ್ಯವಸ್ಥೆಯೇ ಇರಲಿಲ್ಲ. ಯಾಕೆಂದ್ರೆ, ಆಗೆಲ್ಲ ಸೈನ್ಯ ಎನ್ನುವುದು standby ಆಯ್ಕೆಯಾಗಿರಲಿಲ್ಲ. ಡೇ-ಟು-ಡೇ ಚಟುವಟಿಕೆಗಳಿಗೆ ಅಗತ್ಯವಾದ ಸೇವಕರ ಅಥವಾ ಭಟರ ಒಂದು ಖಾಯಂ ಪಡೆಯನ್ನು ಬಿಟ್ಟರೆ, ಬೃಹತ್‌ ಸೈನ್ಯವನ್ನು  ಯುದ್ದಗಳ ಸಮಯದಲ್ಲಿ ಪಾಳೇಗಾರರುಗಳ ಅಧೀನದಲ್ಲಿ ಕ್ರೋಢೀಕರಿಸಲಾಗುತ್ತಿತ್ತು. ರಾಜನಿಂದ ಜಾಗೀರು ಪಡೆದಿದ್ದ ಪಾಳೇಗಾರರುಗಳೇ, ಒಂದಷ್ಟು ಜಮೀನನ್ನೋ ಅಥವಾ ಬೇರಾವುದೆ ಆದಾಯ ಮೂಲವನ್ನೋ ಸೈನಿಕರಿಗೆ ಕಲ್ಪಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ಅವರು ಅಗತ್ಯಬಿದ್ದಾಗ ಸೇನೆಯಲ್ಲಿ ಕೆಲಸ ಮಾಡಬೇಕಿತ್ತು, ಪಾಳೇಗಾರರಿಗೆ ಬಿಟ್ಟಿ ಚಾಕರಿಯನ್ನೂ ಮಾಡಬೇಕಿತ್ತು. ಅದು ಒಂದು ರೀತಿಯಲ್ಲಿ ಶೋಷಣೆಯ ವ್ಯವಸ್ಥೆ. ಇದು ಮೈಸೂರು ಪ್ರಾಂತ್ಯಕ್ಕಷ್ಟೆ ಸೀಮಿತವಲ್ಲದೆ ಮರಾಠರು, ಮೊಘಲರು, ನಿಜಾಮರ ಸೇನೆಗಳಲ್ಲಿಯೂ ರೂಢಿಯಲ್ಲಿತ್ತು.

ಮೂಲತಃ ಸೇನಾಧಿಪತ್ಯದ ಹಿನ್ನೆಲೆಯಿಂದ ಬಂದ ಹೈದರಾಲಿ ಸೈನಿಕರ ಕಷ್ಟ, ಶೋಷಣೆಗಳ ಅರಿವಿದ್ದವ. ಅದೇ ಹೊತ್ತಿಗೆ, ಭಾರತವನ್ನು ಆಕ್ರಮಿಸಲು ಶುರು ಮಾಡಿದ್ದ ಯುರೋಪಿಯನ್ನರ ಸೇನಾ ನಿರ್ವಹಣೆಗಳು ಆತನ ಗಮನ ಸೆಳೆದವು. ಹಾಗಾಗಿ ಸೇನೆಯಲ್ಲಿ ಈ ಹಿಂದೆ ಇದ್ದ ಪಾಳೇಗಾರರ ಮಧ್ಯವರ್ತಿ ನಿಯಂತ್ರಣವನ್ನು ತಪ್ಪಿಸಿ, ಸೈನಿಕರಿಗೆ ನೇರವಾಗಿ ಸಂಬಳ ನೀಡುವ standby centralized institution ರೂಪವನ್ನು ಸೇನೆಗೆ ಕೊಟ್ಟ. ಭಾರತದ ರಾಜರ ಇತಿಹಾಸದಲ್ಲಿ ಈ ಪ್ರಯತ್ನ ಮಾಡಿದ ಮೊದಲ ಆಳ್ವಿಕೆಗಾರ ಹೈದರಾಲಿ. ಈ ಸಂಬಳವನ್ನು `ನಕ್ದಿ’ (‘ನಗದು’ ರೂಪ) ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಬ್ರಿಟಿಷ್‌ ಚರಿತ್ರೆಕಾರ ಮಾರ್ಕ್ಸ್‌ ವಿಲ್ಸ್‌ ತನ್ನ Historical Sketches of the South of India ಕೃತಿಯಲ್ಲಿ ““Hyder gradually destroyed the power of the poligars by substituting regular troops in the service of the state.” ಎಂದು ಉಲ್ಲೇಖಿಸಿರುವುದು ಇದನ್ನು ಸಾಬೀತು ಮಾಡುತ್ತದೆ.

ಹೈದರ್‍‌ ಮತ್ತು ಟಿಪ್ಪೂ ಯಾಕೆ ಪದೇಪದೇ ಕೊಡಗಿನ ಮೇಲೆ ದಾಳಿ ಮಾಡುತ್ತಿದ್ದರು? ಎಂಬ ಪ್ರಶ್ನೆ ಸಾಮಾನ್ಯವಾಗಿ ನಮ್ಮನ್ನು ಕಾಡುತ್ತಿರುತ್ತದೆ. ಅದಕ್ಕೂ ಈ ಸೇನಾ ಸುಧಾರಣೆಗಳೇ ಕಾರಣ. Making History: Karnataka’s People and Their Past ಕೃತಿಯಲ್ಲಿ ಚರಿತ್ರೆಕಾರ ಸಾಕಿಯವರು ಇದನ್ನು ವಿವರಿಸಿದ್ದಾರೆ. ಕೊಡಗಿನಲ್ಲಿದ್ದ ಹಾಲೇರಿ ಪಾಳೇಗಾರರು ರೈತಾಪಿ ವರ್ಗಕ್ಕೆ ಜಮೀನುಗಳನ್ನು ಗುತ್ತಿಗೆ ನೀಡುತ್ತಿದ್ದರು. ಬೆಳೆಗೆ ಅನುಗುಣವಾಗಿ ಅವರು ಕಂದಾಯ ಕಟ್ಟಬೇಕಿತ್ತು. ಅದನ್ನು `ಜಮ್ಮಾ ಗುತ್ತಿಗೆ’ ಎಂದು ಕರೆಯಲಾಗುತ್ತಿತ್ತು. ಈ ಕಂದಾಯವಲ್ಲದೆ, ಗುತ್ತಿಗೆ ಪಡೆದ ಕುಟುಂಬದ ಒಬ್ಬರು ಸೇನೆಯಲ್ಲಿ ಪುಕ್ಕಟೆಯಾಗಿ ಕೆಲಸ ಮಾಡಬೇಕಿತ್ತು. ಜಮೀನುದಾರರು, ಕರಿಯಾಗಾರರು ಇಂತಹ ತುಕಡಿಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಕೊಡಗನ್ನು ವಶಪಡಿಸಿಕೊಂಡ ನಂತರ 1774ರಲ್ಲಿ ಹೈದರಾಲಿ ಈ ಜಮ್ಮಾ ಗುತ್ತಿಗೆಯನ್ನು ರದ್ದು ಮಾಡಿ, ಸೇನೆಯಲ್ಲಿ ನೀವು ಪುಕ್ಕಟೆ ಸೇವೆ ಮಾಡುವುದು ಬೇಡ ಎಂಬ ಕಾನೂನು ಜಾರಿಗೆ ತಂದ. ಸೇನೆ ಸೇರುವುದೇ ಆದಲ್ಲಿ, ನಾವೇ ನಿಮಗೆ ಸಂಬಳ ನೀಡುತ್ತೇವೆ ಎಂದ.  ಆದರೆ ಕಂದಾಯವನ್ನು ತುಸು ಹೆಚ್ಚಿಸಿದ. ಹೈದರಾಲಿಯಿಂದಾಗಿ ಅಧಿಕಾರ ವಂಚಿತನಾದ ಕೊಡಗಿನ ಪಾಳೇಗಾರ, ತಮ್ಮ ನೇರ ಪ್ರಭಾವದಲ್ಲಿದ್ದ ಸೈನಿಕರಲ್ಲಿ ಕಂದಾಯ ಹೆಚ್ಚು ಮಾಡಿದ್ದನ್ನಷ್ಟೇ ಪ್ರಚೋದಿಸಿ ಬಂಡಾಯ ಉತ್ಪಾದಿಸಿದ. ಆ ಬಂಡಾಯವೇ ಮುಂದೆ  ಹೈದರಾಲಿ, ಟಿಪ್ಪೂ ಆಡಳಿತವನ್ನು ಬಲವಾಗಿ ಸತಾಯಿಸಿತು. ಒಟ್ಟಿನಲ್ಲಿ ಹೈದರಾಲಿ ಸೇನಾ ಆಡಳಿತ ಸುಧಾರಣೆಗೆ ಮುಂದಾಗಿದ್ದು ನಮಗಿಲ್ಲಿ ಅರ್ಥವಾಗುತ್ತದೆ.

ಹೈದರಾಲಿ ಜಾರಿಗೆ ತಂದ ‘ನಕ್ದಿ’ ವೇತನವೂ ತಿಂಗಳ ಕಾಯಂ ವೇತನವಾಗಿರಲಿಲ್ಲ. ಯಾವಯಾವ ಸಂದರ್ಭದಲ್ಲಿ ಸೇನಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತೋ ಅದಕ್ಕನುಗುಣವಾಗಿ ನೀಡಲಾಗುತ್ತಿದ್ದ ವೇತನ.  ಒಂದುವೇಳೆ, ಸೈನಿಕರನ್ನು ವಂಚಿಸುವುದೇ ಆತನ ಉದ್ದೇಶವಾಗಿದ್ದರೆ, ಆತನೇಕೆ ನಕ್ದಿ ವೇತನ ವ್ಯವಸ್ಥೆ ಜಾರಿಗೆ ತರುತ್ತಿದ್ದ. ಮಧ್ಯವರ್ತಿ ಪಾಳೇಗಾರರ ಶೋಷಣಾ ವ್ಯವಸ್ಥೆಯನ್ನೆ ಮುಂದುವರೆಸಬಹುದಿತ್ತಲ್ಲವೇ?

East India Company military correspondence, Madras Presidency ದಾಖಲೆಯಲ್ಲಿ ಮೊದಲ ಆಂಗ್ಲೋ-ಮೈಸೂರು ಯುದ್ಧದ ಸಂದರ್ಭದಲ್ಲಿ (1767-69) ಬ್ರಿಟಿಷ್‌ ಗುಪ್ತಚರ ವರದಿಯ ಒಂದು ಕಡೆ ಹೀಗೆ ಉಲ್ಲೇಖಿಸಲಾಗಿದೆ, “ಯುದ್ಧ ಸುದೀರ್ಘಗೊಳ್ಳುತ್ತಿದ್ದರೂ, ಹೈದರಾಲಿಯ ಸೇನೆಯಲ್ಲಿ ಸೈನಿಕರ ಸಂಖ್ಯೆ ಕಡಿಮೆಯಾಗುತ್ತಿಲ್ಲ, ಅವರ ನಿಷ್ಠೆ ಕುಂದುತ್ತಿಲ್ಲ”. ಅಕಸ್ಮಾತ್‌, ಹೈದರಾಲಿ ವೇತನದ ಮೂಲಕ ತನ್ನ ಸೈನಿಕರನ್ನು ವಂಚಿಸುತ್ತಿದ್ದರೆ, ಸೈನಿಕರು ಹೀಗೆ ತಮ್ಮ ನಿಷ್ಠೆ ಉಳಿಸಿಕೊಳ್ಳುತ್ತಿದ್ದರೇ?

ಟಿಪ್ಪೂವನ್ನು ಯುದ್ದದಲ್ಲಿ ಕೊಂದು, ಮೈಸೂರು ಸಂಸ್ಥಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ (1799) ಬ್ರಿಟಿಷರು ಮೈಸೂರು ಆಡಳಿತದ ಪ್ರತಿಯೊಂದು ಲೆಕ್ಕಪತ್ರಗಳನ್ನು ಕೊಂಡೊಯ್ದು ಅಧ್ಯಯನ ನಡೆಸುತ್ತಾರೆ. ಅದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದು, ಪರಕೀಯರಾದ ಅವರಿಗೆ ಇಲ್ಲಿ ಆಳ್ವಿಕೆ ನಡೆಸಬೇಕೆಂದರೆ ಸ್ಥಳೀಯ ಆಡಳಿತದ ರೀತಿ ರಿವಾಜುಗಳ ಪರಿಚಯ ಬೇಕಿತ್ತು. ಹಾಗಾಗಿ ಯಾವುದೇ ರಾಜರನ್ನು ಮಣಿಸಿದರೂ, ಸ್ಥಳೀಯ ಆಡಳಿತ ವೈಖರಿಯನ್ನು ಅಧ್ಯಯನ ಮಾಡುತ್ತಿದ್ದರು. ಎರಡನೆಯದು, ಮಣಿಸಲ್ಪಟ್ಟ ರಾಜ ಮತ್ತೆಂದೂ ಪುಟಿದೆದ್ದು ಪ್ರತಿರೋಧ ಒಡ್ಡಬಾರದೆಂದರೆ, ಆತನ ವೈಫಲ್ಯ ಅಥವಾ ವಂಚನೆಗಳನ್ನು ಜನರ ಮುಂದಿಟ್ಟು ಆತನ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ನಾಶಗೊಳಿಸುವುದು ಆಂಗ್ಲರ ವಸಾಹತು ವೈಖರಿಯಾಗಿತ್ತು. (ಇವತ್ತು ನಮ್ಮ ಆಡಳಿತಗಾರರು ಮಾತುಮಾತಿಗೂ ನೆಹರೂ ಅವರನ್ನು ನಿಂದನೆ ಮಾಡಿದಂತೆ). ಅದರ ಭಾಗವಾಗಿ ಮೈಸೂರು ದಾಖಲೆಗಳನ್ನು ಅಧ್ಯಯನ ಮಾಡುವ ಹೊಣೆಯನ್ನು ಕರ್ನಲ್‌ ಕೋಲಿನ್ ಮೆಕೆಂಜಿಗೆ ವಹಿಸಲಾಗಿತ್ತು. ಆ ದಾಖಲೆಗಳನ್ನು ನೋಡಿ ಬ್ರಿಟಿಷರಿಗೆ ಆಶ್ಚರ್ಯವಾಗುತ್ತದೆ. ಆಡಳಿತದ ಲೆಕ್ಕಪತ್ರಗಳನ್ನು ವ್ಯವಸ್ಥಿತವಾಗಿ, ಪಾರದರ್ಶಕವಾಗಿ ನಿರ್ವಹಣೆ ಮಾಡಲಾಗಿತ್ತು. ಸಣ್ಣಪುಟ್ಟ ಖರ್ಚುಗಳ ವಿವರಗಳೂ ಅಲ್ಲಿ ದಾಖಲಾಗಿದ್ದವು. ಸೈನಿಕರಿಗೆ ನೀಡಲಾದ ಪ್ರತಿ ವೇತನವೂ ನಮೂದಾಗಿತ್ತು. ಇವತ್ತಿಗೂ ಬ್ರಿಟಿಷ್‌ ಲಂಡನ್‌ ಲೈಬ್ರರಿಯಲ್ಲಿರುವ ಮೆಕೆಂಜಿ ಕಲೆಕ್ಷನ್ಸ್‌ ಆರ್ಕೈವ್‌ನಲ್ಲಿ ಇದರ ಉಲ್ಲೇಖಗಳಿವೆ. ಕೊನೆಗೆ ಟಿಪ್ಪೂ-ಹೈದರಾಲಿಯ ಕೆಲವೊಂದು ಆಡಳಿತ ವೈಖರಿಗಳನ್ನು ಮದ್ರಾಸ್‌ ಪ್ರಾಂತ್ಯದಲ್ಲಿ ಬ್ರಿಟಿಷರು ಅಳವಡಿಸಿಕೊಂಡಿದ್ದಾಗಿ ಮೆಕೆಂಜಿ ದಾಖಲಿಸಿದ್ದಾನೆ. ತನ್ನ ಸೈನಿಕರಿಗೆ ಸಂಬಳದಲ್ಲಿ ವಂಚಿಸುವುದು ಹೈದರಾಲಿಯ ಉದ್ದೇಶವಾಗಿದ್ದರೆ  ಆ ಲೆಕ್ಕಪತ್ರಗಳನ್ನೆಲ್ಲ ಆತ ಯಾಕೆ ವ್ಯವಸ್ಥಿತವಾಗಿ ದಾಖಲಿಸಿ ಇಡುತ್ತಿದ್ದ? ನಿರ್ವಹಣೆ ಮಾಡುವಂತೆ ಯಾರೂ ಅವನನ್ನು ಒತ್ತಾಯಿಸಿರಲಿಲ್ಲ.

ಟಿಪ್ಪೂ ಕಾಲದ ಸೇನಾ ನಿರ್ವಹಣೆಯನ್ನು ಝೈನುಲ್‌ ಅಬುದೀನ್‌ ಶೂಸ್ತಾರಿ ತನ್ನ ‘ಫತುಲ್‌ ಮುಜಾಹಿದಿನ್’ ಎಂಬ military manualನಲ್ಲಿ ದಾಖಲಿಸಿದ್ದಾನೆ. ಅದರಲ್ಲಿ ಆತ “ದೇವರು ನೀಡಿದ ರಾಜ್ಯದ ಸೇವೆಯಲ್ಲಿ ಪಾಲ್ಗೊಳ್ಳುವ ಸೈನಿಕರಿಗೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ರಾಜ್ಯದ ಖಜಾನೆಯಿಂದ ವೇತನ ಸಂದಾಯವಾಗುತ್ತಿತ್ತು; ಇದರಲ್ಲಿ ವ್ಯತ್ಯಯವಾಗುವುದೆಂದರೆ ಸೇನಾ ಶಿಸ್ತಿಗೆ ಭಂಗ ಬರಲಿದೆ ಎಂದು ಆಡಳಿತಗಾರರು ನಂಬಿದ್ದರು” ಎಂದು ದಾಖಲಿಸಿದ್ದಾನೆ. ಬ್ರಿಟಿಷ್‌ ಸೇನಾಧಿಕಾರಿ ಕೇಟ್‌ ಬ್ರಿಟಲ್‌ಬ್ಯಾಂಕ್‌ ತನ್ನ Tipu Sultan’s Search for Legitimacy ಕೃತಿಯಲ್ಲಿ “ಸೈನಿಕರು ಮತ್ತು ರಾಜನ ನಡುವಿನ ಮಧ್ಯವರ್ತಿ ವ್ಯವಸ್ಥೆಯನ್ನು ಟಿಪ್ಪೂ ತೆಗೆದುಹಾಕಿದ್ದ” ಎಂದು ಉಲ್ಲೇಖಿಸಿದ್ದಾನೆ. ಹೈದರಾಲಿ ಮತ್ತು ಟಿಪ್ಪೂ ಕಾಲದ ಆಸ್ಥಾನ ನಿರ್ವಹಣೆಯ ದಾಖಲೆ (ಡೈರಿಯಂತೆ) ಎಂದು ನಂಬಲಾಗಿರುವ “ತಾರಿಕ್‌-ಇ-ಖುದ್ದದಿ” (Tarikh-i-Khudadadi) ವಿವರಣೆಯಲ್ಲಿ “ವೇತನವಿಲ್ಲದ ಸೇನೆ ಸೇನೆಯೇ ಅಲ್ಲ; ಸೈನಿಕರ ಬಗ್ಗೆ ಕಾಳಜಿವಹಿಸುವುದೆಂದರೆ ಸಿಂಹಾಸನದ ಬಗ್ಗೆ ಕಾಳಜಿವಹಿಸಿದಂತೆ” ಎಂದು ಉಲ್ಲೇಖವಾಗಿರುವ ಸಂಗತಿ ಕೂಡಾ ಹೈದರ್‍‌ ಮತ್ತು ಟಿಪ್ಪೂ ತಮ್ಮ ಸೇನಾ ನಿರ್ವಹಣೆಯ ಬಗ್ಗೆ ಎಂತಹ ಎಚ್ಚರ ಹೊಂದಿದ್ದರು ಎಂಬುದನ್ನು ಸಾಬೀತು ಮಾಡುತ್ತೆ.

ಅಂತವರು ಸಂಬಳ ಉಳಿಸಲು ತಮ್ಮ ಸೈನಿಕರಿಗೆ ವಂಚಿಸಲು ಸಾಧ್ಯವೇ? Madras Presidency correspondence (1760s–70s) ನಲ್ಲಿ ಬ್ರಿಟಿಷರು “ಹಲವು ಯುರೋಪಿಯನ್‌ ಸೇನಾಧಿಕಾರಿಗಳು (ಪ್ರಧಾನವಾಗಿ ಫ್ರೆಂಚರು) ಹೈದರಾಲಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಆತನ ಸೇನೆಗೆ ತರಬೇತಿ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಅದು ನಿಜವೂ ಹೌದು, ಮಾನ್ಷಿಯರ್‍‌ (ಫ್ರೆಂಚ್‌ ಗೌರವಸೂಚಕ) ಲ್ಯಾಲಿ, ಪಿಂಚೋಯಿನ್‌ ತರಹದ ಅನೇಕ ಸೇನಾಧಿಕಾರಿಗಳು ಹೈದರ್‍‌ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಪಾಶ್ಚಾತ್ಯ ಮಾದರಿಯ ಯುದ್ಧ ಕೌಶಲಗಳನ್ನು ಹೈದರ್‍‌ ಸೈನಿಕರಿಗೆ ತರಬೇತಿ ನೀಡುತ್ತಿದ್ದರು. ಅವರಿಗೆ ಅಪಾರ ವೇತನವನ್ನೂ ನೀಡಲಾಗುತ್ತಿತ್ತು. ತನ್ನದೇ ಸೈನಿಕರಿಗೆ ವಂಚಿಸುವ ಕೆಟ್ಟಗುಣ ಹೈದರ್‍‌ಗೆ ಇದ್ದಿದ್ದರೆ ಯುರೋಪ್‌ ಸೇನಾಧಿಕಾರಿಗಳೇಕೆ ಅಂತಹ ಹೈದರ್ ಜೊತೆ ಕೆಲಸ ಮಾಡಲು ಮುಂದೆ ಬರುತ್ತಿದ್ದರು?

ಇಂತಹ ಸಾಕಷ್ಟು ಅಧಿಕೃತ ಚಾರಿತ್ರಿಕ ಉಲ್ಲೇಖಗಳನ್ನು ಪರಿಗಣಿಸಿದಾಗ ಹೈದರ್‍‌ ಆಗಲಿ ಅಥವಾ ಟಿಪ್ಪೂ ಆಗಲಿ ತಮ್ಮ ಸೈನಿಕರಿಗೆ ವೇತನ ನೀಡುವ ವಿಚಾರದಲ್ಲಿ ವಂಚಿಸಿದ್ದರು ಎಂಬುದು ಸುಳ್ಳಿನ ಕಥೆ ಎಂಬ ತೀರ್ಮಾನಕ್ಕೆ ಬರಬಹುದು. ಜನರಲ್ಲಿ ಮುಸ್ಲಿಂ ಆಡಳಿತಗಾರರ ಮೇಲೆ ಧರ್ಮಾಧಾರಿತ ದ್ವೇಷವನ್ನು ಬಿತ್ತುವ ರಾಜಕೀಯ ಅಜೆಂಡಾದ ಭಾಗವಾಗಿ ಇಂತಹ ಅಪಸತ್ಯಗಳನ್ನು ಚಾಲ್ತಿಗೆ ತರಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page