Monday, June 17, 2024

ಸತ್ಯ | ನ್ಯಾಯ |ಧರ್ಮ

ಮಹಿಳಾ ಕುಸ್ತಿ ಪಟುಗಳ ಹೋರಾಟ | ಇದೆಂಥಾ ಕ್ರೌರ್ಯ?!

ಲೈಂಗಿಕ ಕಿರುಕುಳದ ವಿರುದ್ಧದ  ಪ್ರತಿಭಟನೆಯು ಕ್ರೀಡೆ ಮತ್ತು ಭಾರತೀಯ ರಾಜಕೀಯವೆಷ್ಟು ರೋಗಗ್ರಸ್ತವಾಗಿದೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವರ್ಷಗಳ ರಾಜಕೀಯ ಕುಟಿಲತೆಯಿಂದ ಹೇಗೆ ಭ್ರಷ್ಟಗೊಂಡಿದೆ ಮತ್ತು ಕಾನೂನು ನ್ಯಾಯದ ಸಾಧನವಾಗಿರದೆ ಹೇಗೆ ದಬ್ಬಾಳಿಕೆಯ ಸಾಧನವಾಗಿ ಮಾರ್ಪಟ್ಟಿದೆ ಎಂಬುದನ್ನು ಎತ್ತಿ ತೋರಿಸಿದೆ - ರೇಣುಕಾ ನಿಡಗುಂದಿ, ಕವಯತ್ರಿ

ನಿನ್ನೆಯ ದಿನ ದೇಶದ ರಾಜಧಾನಿಯ ಜಂತರ್ ಮಂತರ್‍ ನಲ್ಲಿ ನಡೆದ ಘಟನೆಯನ್ನು ಈ ದೇಶದ ಚರಿತ್ರೆ ಯಾವತ್ತಿಗೂ ಕ್ಷಮಿಸಲಾರದು. ಸಂಸತ್ತಿನ ಉದ್ಘಾಟನೆಯಂದು ಪ್ರಜಾಪ್ರಭುತ್ವದ ವಚನಗಳನ್ನು ಪಾಲಿಸಬೇಕಾದವರೇ ಅದರ ಕತ್ತುಹಿಸುಕಿದ  ಕರಾಳ ದಿನ.  ಒಂದೆಡೆ ನೂತನ ಸಂಸತ್ತನ್ನು ಉದ್ಗಾಟಿಸಿದ ಪ್ರಧಾನಿಗಳು ಭವ್ಯ ದಿವ್ಯ, ಕರ್ತವ್ಯ ನಿಷ್ಠೆಯಂಥ  ಅತೀರಂಜಿತ ಪದಪುಂಜಗಳನ್ನು ಉದ್ಗರಿಸುತ್ತಾ “ಭಾರತ ಪ್ರಜಾಪ್ರಭುತ್ವದ ರಾಷ್ಟ್ರವಷ್ಟೇ ಅಲ್ಲ ಪ್ರಜಾಪ್ರಭುತ್ವದ ಜನನಿ,  ಮದರ್ ಆಫ್ ಡೆಮಾಕ್ರಸಿ, ಇದು ಒಂದು ವ್ಯವಸ್ಥೆಯಲ್ಲ, ಸಂಸ್ಕಾರ, ಪರಂಪರೆ” ಎಂದು ಭಾಷಣ ಮಾಡುತ್ತಿರುವ ಹೊತ್ತಿನಲ್ಲಿ ಸಂಸತ್ತಿನ ಕೆಲವೇ ನಿಮಿಷಗಳ ದೂರದ ರಾಜಧಾನಿಯ ಬೀದಿಯಲ್ಲಿ ಮಹಿಳಾ ಕುಸ್ತಿಪಟುಗಳನ್ನು ಬಲಪೂರ್ವಕವಾಗಿ ಬಂಧಿಸಿ ಎಳೆದು ವಾಹನಕ್ಕೆ ದಬ್ಬುತ್ತಿದ್ದರು ಪೊಲೀಸರು. ಸಂಸ್ಕಾರವೆಂದರೆ ಇದೆ ಏನು ?  ಯಾವ ಸಂಸ್ಕಾರದ  ಬಗ್ಗೆ ಪ್ರಧಾನಿಗಳು ಪದೇ ಪದೇ  ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಾರೆ ?  ಹೈ ಕಮಾಂಡಿನ ಆದೇಶವಿಲ್ಲದೇ, ಸಮ್ಮತಿಯಿಲ್ಲದೇ ಒಂದು ಹುಲ್ಲುಕಡ್ಡಿಯೂ ಕದಲುವುದಿಲ್ಲ. ಅಂದಮೇಲೆ  ಇದೆಲ್ಲ ನಡೆದದ್ದು ಉದ್ದೇಶಪೂರ್ವಕವಾಗಿ ಮತ್ತು ಸುವ್ಯವಸ್ಥಿತವಾಗಿಯೇ  ಅಲ್ಲವೇ ? 

ವಿಶ್ವವೇ ತಿರುಗಿ ನೋಡುವಂತೆ ದೇಶವೇ ಹೆಮ್ಮೆಪಡುವಂತೆ ಚಿನ್ನದ ಪದಕ ಗೆದ್ದುತಂದ ನಮ್ಮ ದೇಶದ ಹೆಣ್ಣುಮಕ್ಕಳು  ಈ ವರ್ಷದ ಜನವರಿಯಿಂದ ನ್ಯಾಯಕ್ಕಾಗಿ ತಮ್ಮ ದನಿ ಎತ್ತುತ್ತಿದ್ದರೆ ಆಲಿಸುವ ಹೃದಯವೇ ಇಲ್ಲ ಈ ಪ್ರಭುತ್ವಕ್ಕೆ. ತಮ್ಮ ನಿವಾಸಕ್ಕೆ ಕರೆಸಿಕೊಂಡು ಫೋಟೋಗೆ ಪೋಸ್ ಕೊಡುವ ಪ್ರಧಾನಿಗಳಿಗೆ ಸ್ವಲ್ಪವಾದರೂ ನಾಚಿಕೆಯಿದ್ದಿದ್ದರೆ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹಿಳೆಯರನ್ನು ಈ ರೀತಿ ಬೀದಿಗೆ ತಳ್ಳಿ ಜೈಲಿಗಟ್ಟಬೇಕಿದ್ದ ಅತ್ಯಾಚಾರಿಯನ್ನು ಹೀಗೆ ಸಂಸತ್ತಿನ ಶುಭಾರಂಭಕ್ಕೆ ಆಹ್ವಾನಿಸುತ್ತಿದ್ದಿಲ್ಲ, ಅಷ್ಟು ಭಯಭಕ್ತಿಯೇಕೆ ಈ ಅತ್ಯಾಚಾರಿಯ ಬಗ್ಗೆ ?  ತಾವೆಂದೂ ಗೌರವಿಸದ ಅದರ ಅರ್ಥಕ್ಕೂ ವ್ಯಾಪ್ತಿಗೂ ಅರ್ಹರಲ್ಲದವರು ಡೆಮಾಕ್ರಸಿಗೇ ಅಪಚಾರ ಬಗೆಯುತ್ತಿರುವವರು ಹೀಗೆ ಢೋಂಗಿ ಭಾಷಣ ಮಾಡುತ್ತಿದ್ದಿಲ್ಲ.  ಅವರ ಆತ್ಮಸಾಕ್ಷಿಯಿದ್ದಿದ್ದರೆ “ ಲೋಕತಂತ್ರ ಕೀ ಜನನಿ” ಎನ್ನುವಾಗ  ಅವರ ನಾಲಿಗೆ ತೊದಲುತ್ತಿತ್ತು.  ನಾಚಿಕೆಯಿಲ್ಲದ ಅತ್ಯಾಚಾರಿ ಬ್ರಿಜ್ ಭೂಷಣ ಶರಣ ಸಿಂಗ್ ನೂತನ ಸಂಸತ್ತಿನ ಸಂಭ್ರಮದಲ್ಲಿ ಎದೆಯುಬ್ಬಿಸಿ ನಿಂತಿರುವಾಗ ಇತ್ತ ನಮ್ಮ ಹೆಮ್ಮೆಯ ಬೇಟಿಯರನ್ನು ಪೋಲಿಸರು ಸುತ್ತುವರಿದು ಅವರು ಮುಂದೆ ಹೆಜ್ಜೆಯನ್ನಿಡದಂತೆ ಬಂಧಿಸಿಕೊಂಡು ಹೋದದ್ದಲ್ಲದೇ ಅವರ ಮೇಲೆ ಅನೇಕ ದಂಡಸಂಹಿತೆಯನ್ನು ಹೇರಿ ಎಫ್‌.ಐ.ಆರ್ ದಾಖಲಿಸಿದ್ದಾರೆ. ಅತ್ಯಾಚಾರಿಯ ಮೇಲೆ ಎಫ್‌.ಐ.ಆರ್ ದಾಖಲಿಸಲು ಏಳುದಿನಗಳೇ ಬೇಕಾದವು. ಸುಪ್ರೀಂಕೋರ್ಟ್ ನಡುವೆ ಬರಬೇಕಾಯಿತು. ಕುಸ್ತಿಪಟುಗಳ ಮೇಲೆ ಕೆಲವೇ ಗಂಟೆಗಳಲ್ಲಿ ಎಫ್‌.ಐ.ಆರ್ ದಾಖಲು.  ಅಬ್ಬಾ ಎಂಥಾ ವೇಗದ ನಡೆ.  ಭಲೇ ರೇ ವ್ಯವಸ್ಥೆ!   

ಅಷ್ಟಾಗಿಯೂ  ಮಹಿಳಾ ಕುಸ್ತಿಪಟುಗಳ ತಪ್ಪೇನು? ನೂತನ ಸಂಸತ್ತಿನ ಉದ್ಘಾಟನಾ ದಿನದಂದು ತಾವು “ಮಹಿಳಾ ಮಹಾಪಂಚಾಯತ್” ನಡೆಸುತ್ತೇವೆ ಎಂದು ಮುಂಚಿತವಾಗಿಯೇ ತಿಳಿಸಿದ್ದ ಮಹಿಳಾ ಪ್ರತಿಭಟನಾಕಾರರೆಲ್ಲ ಕಾಲುನಡಿಗೆಯಿಂದ ನೂತನ ಸಂಸತ್ತಿನ ಕಡೆಗೆ ಹೊರಟಿದ್ದರು. ಅದಕ್ಕೆ ಅನುಮತಿ ಕೊಟ್ಟಿರಲಿಲ್ಲ ಪೊಲೀಸ್ ಇಲಾಖೆ. ಪ್ರಧಾನಿಗಳ ರಾಜ್ಯಾಭಿಷೇಕದ (?)ಪೂಜೆ ಹೋಮಕ್ಕೆ ವಿಘ್ನವುಂಟಾಗಬಾರದೆಂದು ಈ ಮೊದಲೇ ಇಡೀ ಪೊಲೀಸ್ ಪಡೆಯನ್ನು ನಿರ್ದೇಶಿಸಲಾಗಿತ್ತು. ಪ್ರತಿಭಟನಾಕಾರ ಹೆಮ್ಮಕ್ಕಳನ್ನು ಬೆಂಬಲಿಸಲು ಸುತ್ತಲಿನ ಹರಿಯಾಣಾ, ಪಂಜಾಬಿನ ರೈತರು ದಿಲ್ಲಿಗೆ ಆಗಮಿಸುವವರಿದ್ದರು. ರೈತರು ದಿಲ್ಲಿಗೆ ಕಾಲಿಡದಂತೆ ಟಿಕ್ರಿ ಸಿಂಘು ಗಡಿಗಳನ್ನು ಬ್ಯಾರಿಕೆಡ್ ಹಾಕಿ ಅಲ್ಲಿಯೂ ದೊಡ್ದ ಸಂಖ್ಯೆಯಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದರು.  ಪ್ರಜಾಪ್ರಭುತ್ವದ ತಾಯಿ ಅಕ್ಷರಶಃ ಅಳುತ್ತಿದ್ದಳು. ನಮ್ಮ ದೇಶದ ಮಹಿಳೆಯರು ರಾಜಧಾನಿಯ ಬೀದಿಯಲ್ಲಿ ಕಣ್ಣೀರು ಹಾಕುತ್ತಿದ್ದರೆ  ಕ್ರೂರಿ ಸರ್ಕಾರ ತನ್ನದೇ ಅಮಲಿನಲ್ಲಿ ಕುರುಡಾಗಿತ್ತು.

ಸಿಕ್ಕ ಅವಕಾಶವನ್ನು ಬಿಡಬಾರದೆನ್ನುವ ದುಷ್ಟ ಪೊಲೀಸ್ ಪಡೆ ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಹೋಗಿ ಮಹಿಳಾಪಟುಗಳು ತಂಗಿದ್ದ ಶಿಬಿರ ತಂಬೂಗಳನ್ನು ಕಿತ್ತು ಬಿಸಾಕಿದರು. ಬೂಟುಗಾಲಿನಲ್ಲಿ ಮಹಿಳೆಯರು ಮಲಗುತ್ತಿದ್ದ ಹಾಸಿಗೆಯನ್ನು ತುಳಿಯುತ್ತ ಓಡಾಡುತ್ತಿದ್ದುದನ್ನು  ನೋಡಿ ಯಾರ ಹೃದಯವಾದರೂ ದ್ರವಿಸದೇ ಇರುತ್ತಿದ್ದಿಲ್ಲ.  ಅವರು ಬಳಸುತ್ತಿದ್ದ ಸಾಮಾನುಗಳು, ಕೂಲರ್, ಟ್ರಂಕು ಎಲ್ಲವನ್ನೂ ಬೀದಿಗೆಸೆದು ಗುಡಿಸಿ ಹಾಕಿ ಸ್ವಚ್ಚಗೊಳಿಸಿದ ಪೊಲೀಸರು ಇವತ್ತು ಖಾಲಿ ಜಾಗದಲ್ಲಿ ಕಾವಲು ಕುಳಿತಿದ್ದಾರೆ. ರೈತ ಆಂದೋಲನದಲ್ಲಿಯೂ ಸಿಂಗೂ , ಟಿಕಿ ಬಾರ್ಡರಿನಲ್ಲಿ ರೈತರು ಮುಂದೆ ಸಾಗದಂತೆ ಬೀದಿಗೆ ಅಡ್ಡಲಾಗಿ ಸಿಮೆಂಟಿನ ಬಂಡೆಗಳನ್ನು ಇಟ್ಟು, ರಸ್ತೆ ಮೇಲೆ ಕಬ್ಬಿಣದ ಮೊಳೆ ಹೊಡೆದ ಕಲ್ಲುಹೃದಯದ ಕ್ರೂರ ಸರ್ಕಾರವಿದು. 

ಒಲಂಪಿಕ್ ಪದಕ ವಿಜೇತರು ಕಳಪೆ ಆಡಳಿತ, ಆರ್ಥಿಕ ಅಕ್ರಮಗಳು ಮತ್ತು ಆಪಾದಿತ ಲೈಂಗಿಕ ಶೋಷಣೆಯ ವಿರುದ್ಧ ಪ್ರತಿಭಟಿಸಿ – ಹೆಚ್ಚು ನಿರ್ದಿಷ್ಟವಾಗಿ ಕುಸ್ತಿಯಲ್ಲಿ – ಭಾರತೀಯ ಕ್ರೀಡಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೀದಿಗಿಳಿದಿದ್ದಾರೆ. ಅವರ ಧೈರ್ಯ ಮತ್ತು ಜವಾಬ್ದಾರಿಯನ್ನು ಶ್ಲಾಘಿಸುವ ಬದಲು, ಪ್ರತಿಭಟಿಸುವ ಕ್ರೀಡಾಪಟುಗಳು ಅಧಿಕಾರದಲ್ಲಿರುವವರಿಂದ ಹಗೆತನ, ಮಾನನಷ್ಟ ಮತ್ತು ಸಂಪೂರ್ಣ ಖಂಡನೆಯನ್ನು ಎದುರಿಸಿದ್ದಾರೆ.

ಇದುವರೆಗೆ ನಮ್ಮ ದೇಶ ಓಲಿಂಪಿಕ್ ನಲ್ಲಿ ಗಳಿಸಿದ  ಒಟ್ಟು ಪದಕ ಕೇವಲ 35 . 10, ಚಿನ್ನ 9ಬೆಳ್ಳಿ ,  16 ಕಂಚು.  ನಮ್ಮ ದೇಶದ ಹೆಣ್ಣುಮಕ್ಕಳಿಗೆ ಅವರು ಬಯಸುವ ಆಸಕ್ತಿಗಳಿಗೆ ಪ್ರೊತ್ಸಾಹ ಸಿಗುವುದೇ ಕಡಿಮೆ. ಸಿಕ್ಕರೂ ಆಕೆ ಹೆಣ್ಣು ಎಂಬ ಕಾರಣಕ್ಕೆ  ಕ್ರೀಡೆ ಬೇಡ, ಪೈಲಟ್ ಬೇಡ, ಅದು ಬೇಡ ಇದು ಬೇಡ ಎನ್ನುವ ಕುಟುಂಬಗಳೇ ಹೆಚ್ಚು. ಇಪ್ಪತ್ತೊಂದನೇ ಶತಮಾನದಲ್ಲಿಯೂ ಕೆಲ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಡಬಲ್ ಡಿಗ್ರಿ ಮಾಡಿದ್ದರೂ ಯಜಮಾನನ ಒಪ್ಪಿಗೆಯಿರದೇ ಹೊರಗೆ ದುಡಿಯಲು ಹೋಗದೇ ಮನೆವಾಳ್ತೆ, ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿಯೇ ಉಳಿದಿದ್ದಾರೆ. ಮನೆಯ ಸದಸ್ಯರನ್ನು ಎದುರು ಹಾಕಿಕೊಂಡು ಅಲ್ಲೂ ಹೋರಾಡಿ ಅವಕಾಶಗಳನ್ನು ಗಳಿಸಿಕೊಂಡು ಹೊಸಿಲುದಾಟಿ ಬಂದ ಹೆಣ್ಣುಮಕ್ಕಳನ್ನು ಮುಕ್ಕಲು ಬ್ರಿಜ್ ಭೂಷಣನಂತಹ ನೀಚರು ಎಲ್ಲೆಲ್ಲಿಯೂ ಇದ್ದಾರೆ. ಸರಕಾರಿ ದಫ್ತರುಗಳಿಂದ ಹಿಡಿದು ಖಾಸಗಿ ಕಂಪನಿಗಳವರೆಗೆ. ಸಿನಿಮಾ ರಂಗದಿಂದ ಹಿಡಿದು ಅಕಾಡೆಮಿಕ್ ವಲಯ- ಯಾವುದನ್ನೇ ಹೆಸರಿಸಿ ಮಹಿಳೆಯರ ಶೋಷಣೆ, ಕಿರುಕುಳ,  ಲೈಂಗಿಕ ಆಮಿಷಗಳು, ಕೊಡುಕೊಳ್ಳುವಿಕೆಯ ಒಪ್ಪಂದದಂಥ ಹೇಸಿಗೆಯನ್ನು ಹುಟ್ಟುಹಾಕಿದ್ದೇ ಈ ಪುರುಷ ಪ್ರಧಾನ ವ್ಯವಸ್ಥೆ.  ಎಲ್ಲ ಕಾಲದಲ್ಲೂ ಹೆಣ್ಣು ವ್ಯವಸ್ಥೆಯ ವಿರುದ್ಧವಾಗಿ ತನ್ನ ಅಸ್ತಿತ್ವ ಅಸ್ಮಿತೆಗಾಗಿ ಹೋರಾಡುತ್ತಲೇ ಇದ್ದಾಳೆ. ಹೆಸರುಗಳು ಬದಲಾಗಿವೆ ವಿನೆಶ್ ಫೋಗಟ್, ಸಾಕ್ಷಿ ಮಲ್ಲಿಕ್, ಇದಕ್ಕೂ ಮುಂಚೆ #ಮೀಟೂ ಆಂದೋಲನದಲ್ಲಿ ಮುಂದೆಬಂದ ಎಲ್ಲಾ ಮಹಿಳೆಯರು, ಲೈಂಗಿಕ ದೌರ್ಜನ್ಯದಲ್ಲಿ ಹೊಸಕಿ ಹೋದ ಕಂದಮ್ಮಗಳು, ಹೆಸರಿಸುತ್ತಾ ಹೋದರೆ ಹೊಸ ಸಂಸತ್ತಿನ ಗೋಡೆಗಳೂ ಬಿರುಕು ಬಿಡಬಹುದು.

ಹೌದಲ್ಲವೇ.. ಯಾವುದೇ ದೇಶದ ಸಂಸತ್ತು ಅ ದೇಶದ ಜನರ ನಾಡಿಮಿಡಿತವನ್ನು ಕೇಳುವ ತಾಯಿ ಹೃದಯವಾಗಿರಬೇಕು. ಜನರು ಆರಿಸಿ ಕಳಿಸಿದ ಜನಪ್ರತಿನಿಧಿಗಳು ಜನಸೇವಕರೇ ಹೊರತು ರಾಜರಲ್ಲ. ಅಲ್ಲಿ ಕುಳಿತಿರುವವರು ಅಂತಃಕರಣವುಳ್ಳವರಾಗಿರಬೇಕು, ಸಂವೇದನಶೀಲರಾಗಿರಬೇಕೇ ಹೊರತು ಕ್ರೂರಿಗಳಲ್ಲ. ಕ್ರೂರಿಗಳು ಕೂರುವ ಸ್ಥಾನವೂ ಅದಲ್ಲ. ಅದೂ ನಮ್ಮಂತಹ ಪ್ರಜಾಪ್ರಭುತ್ವ ದೇಶದಲ್ಲಿ. ಪ್ರಜಾಪ್ರಭುತ್ವದ ಜನನಿ ಎಂದು ವಿಶ್ವವೇ ನಮ್ಮತ್ತ  ನೋಡುವಂತಹ ದೇಶದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ. ನ್ಯಾಯ ಬೇಡುತ್ತಿರುವ ಹೆಣ್ಣುಮಕ್ಕಳ ಅಳಲನ್ನು ಸರಕಾರ ಕೇಳುತ್ತಿಲ್ಲವೆಂದರೆ, ಅವರ ದನಿ ಅವರೆದೆಯನ್ನು ಕರಗಿಸುತ್ತಿಲ್ಲವೆಂದರೆ  ಆ ದೇಶದ ಪ್ರಜಾಪ್ರಭುತ್ವ ಸತ್ತುಹೋಗುತ್ತಿದೆ ಎಂದೇ ಅರ್ಥ……

ರೇಣುಕಾ ನಿಡಗುಂದಿ, ನವದೆಹಲಿ

ಲೇಖಕರು, ಕವಿ, ಅನುವಾದಕರು  

ಇದನ್ನು ಓದಿದ್ದೀರಾ?   ಮಂಗಳೂರಿನಲ್ಲಿ ಲೈಂಗಿಕ ಕಿರುಕುಳ ಪ್ರಕರಣ| ಆರೋಪಿಗಳಿಗೆ ರಾಜಕಾರಣಿ, ಪೊಲೀಸ್‌ ಆಧಿಕಾರಿಗಳ ಬೆಂಬಲ- ಸಂತ್ರಸ್ತೆಯ ಅಳಲು

Related Articles

ಇತ್ತೀಚಿನ ಸುದ್ದಿಗಳು