ಕಮಲ್ ಹಾಸನ್ ಗೆ ಹೈಕೋರ್ಟ್ ಚಾಟಿ; ಕರ್ನಾಟಕದಲ್ಲಿ ‘ಥಗ್ ಲೈಫ್’ ಬಿಡುಗಡೆ ಮಾಡದಿರಲು ಚಿತ್ರತಂಡ ತೀರ್ಮಾನ

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆಯಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಕಮಲ್ ಹಾಸನ್ ಗೆ ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದೆ. ಭಾಷಾ ಜ್ಞಾನದ ಬಗ್ಗೆ ಮಾತನಾಡಲು ನೀವೇನು ಇತಿಹಾಸ ತಜ್ಞರೇ ಎಂದು ಹೈಕೋರ್ಟ್ ಪ್ರಶ್ನಿಸಿದ್ದಲ್ಲದೇ ಮೊದಲು ಕನ್ನಡಿಗರ ಕ್ಷಮೆ ಕೇಳುವಂತೆ ಹೇಳಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆ ಕರ್ನಾಟಕ ಹೈಕೋರ್ಟ್ ಗೆ ನಟ ಕಮಲ್ ಹಾಸನ್ ಪರ ವಕೀಲರು ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರವನ್ನು ಬಿಡುಗಡೆ ಮಾಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಕಮಲ್ ಹಾಸನ್, ಹೈಕೋರ್ಟ್ ಮೂಲಕ ಕರ್ನಾಟಕದಲ್ಲಿ ತಮ್ಮ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಮನವಿ ಮಾಡಿದ್ದರು. ಕನ್ನಡಿಗರ ವ್ಯಾಪಕ ಆಕ್ರೋಶದ ಕಾರಣ ಹಾಗೂ ಸಿನೆಮಾ ಬಿಡುಗಡೆ ಆದರೆ ಥಿಯೇಟರ್ ಗೆ ಬೆಂಕಿ ಹಚ್ಚುವುದಾಗಿ ಕನ್ನಡಪರ ಸಂಘಟನೆಗಳು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಿನೆಮಾ ತಂಡ ಹೈಕೋರ್ಟ್ ಗೆ ಮೊರೆ ಹೋಗಿತ್ತು.

ಅಂತೂ ಕನ್ನಡಿಗರ ಭಾಷಾ ಭಾವನೆಗೆ ನೋವುಂಟು ಮಾಡಿದ ಕಮಲ್ ಹಾಸನ್ ಗೆ ಕಾನೂನಿನ ಮೂಲಕವೂ ಬೆಂಬಲ ಸಿಗದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಆದರೆ ಮತ್ತೊಂದು ಅನಾಹುತ ಎದುರಾಗಬಹುದೆಂದು ಊಹಿಸಿ ಸಿನಿಮಾ ಬಿಡುಗಡೆಯಿಂದ ಹಿಂದೆ ಸರಿದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು