Thursday, March 6, 2025

ಸತ್ಯ | ನ್ಯಾಯ |ಧರ್ಮ

“ಸರ್ಕಾರ ಭಾಷಾ ನೀತಿ ಜಾರಿಗೆ ಮುಂದಾಗಲಿ”: ಡಾ.ರಮೇಶ್ ಬೆಲಂಕೊಂಡ, ನಮ್ಮ ನಾಡು ನಮ್ಮ ಆಳ್ವಿಕೆ ತಂಡದ ಸದಸ್ಯರು

“ನಾವು ಭಾರತೀಯರು, ಹಾಗಾಗಿ, ನಾವು ಏನೂ ಹಿಂಜರಿಕೆಯಿಲ್ಲದೆ, ನಮ್ಮನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸದೆ, ಭಾರತಕ್ಕೆ ನ್ಯಾಯಯುತವಾದ ಭಾಷಾ ನೀತಿಗಾಗಿ ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದು ನಮ್ಮ ಹಕ್ಕು. ಭಾರತದ ಮಟ್ಟದಲ್ಲಿನ ಯಾವುದೇ ನೀತಿ ಕರ್ನಾಟಕದ ಜನರ ಮೇಲೂ ಆಳವಾಗಿ ಪರಿಣಮಿಸಬಹುದು ಮತ್ತು ಪರಿಣಮಿಸುತ್ತದೆ” ಎನ್ನುವ ಮೂಲಕ ನಮ್ಮ ನಾಡು ನಮ್ಮ ಆಳ್ವಿಕೆ ತಂಡದ ಸದಸ್ಯರಾದ ಡಾ.ರಮೇಶ್ ಬೆಲ್ಲಂಕೊಂಡ ಅವರು ದೇಶದಲ್ಲಿ ದ್ವಿಭಾಷಾ ನೀತಿಗೆ ಮುಂದಾಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

“ದೇಶದಲ್ಲಿ ಭಾಷಾ ಅಸಮಾನತೆ ಮತ್ತು ಭಾಷಾ ಅನ್ಯಾಯ ಅಸ್ತಿತ್ವದಲ್ಲಿದೆ. ದೇಶದ ಹಿಂದಿಯೇತರ ಜನಸಂಖ್ಯೆಯ ಮೇಲೆ ಹಿಂದಿಯನ್ನು ಹೇರಲಾಗುತ್ತಿದೆ. ಭಾಷಾ ಅನ್ಯಾಯವು ಎಲ್ಲಾ ಹಿಂದಿಯೇತರ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವಂತೆ ಕರ್ನಾಟಕ ರಾಜ್ಯದಲ್ಲೂ ಅಸ್ತಿತ್ವದಲ್ಲಿದೆ. ಕೇಂದ್ರ ಸರ್ಕಾರದ ಪ್ರಚಲಿತ ಆಚರಣೆಗಳು ಮತ್ತು ನೀತಿಗಳ ಪರಿಣಾಮವಾಗಿ ದೇಶದ ಇತರ ಅನೇಕ ರಾಜ್ಯಗಳಲ್ಲಿ  ಭಾಷಾ ಅಸಮಾನತೆ ಅಸ್ತಿತ್ವದಲ್ಲಿದೆ.” ಎಂದು ಸರ್ಕಾರಕ್ಕೆ ನೀಡಿರುವ ವಿವರವಾದ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ಇತರೆ ಅವಕಾಶಗಳು ಹಿಂದಿಯವರಿಗೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರಸ್ತುತ, ಬಹುಪಾಲು ಅಥವಾ ಸಂಪೂರ್ಣವಾಗಿ, UPSC ಪರೀಕ್ಷೆಗಳು, SSC ಪರೀಕ್ಷೆಗಳು, ಬ್ಯಾಂಕ್ ಅಧಿಕಾರಿಗಳ ಪರೀಕ್ಷೆಗಳು, ರೈಲ್ವೆ ಪರೀಕ್ಷೆಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳ ಪರೀಕ್ಷೆ ಸೇರಿದಂತೆ ಮುಂತಾದವುಗಳನ್ನು ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಮಾತ್ರ ನಡೆಸಲಾಗುತ್ತಿದೆ. ಈ ನೀತಿ ಮತ್ತು ಅಭ್ಯಾಸವು ಹಿಂದಿಯೇತರ ಭಾರತೀಯರಿಗಿಂತ ಹಿಂದಿ ಭಾರತೀಯರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿದೆ. ಹಿಂದಿ ಪ್ರದೇಶಗಳ ಜನರು ಈ ಪರೀಕ್ಷೆಗಳನ್ನು ತಮ್ಮದೇ ಆದ ಪ್ರಾದೇಶಿಕ ಭಾಷೆಯಾದ ಹಿಂದಿಯಲ್ಲಿ ತೆಗೆದುಕೊಳ್ಳಬಹುದು. ಆದರೆ, ಹಿಂದಿಯೇತರ ಪ್ರದೇಶಗಳ ಜನರು ತಮ್ಮ ಸ್ವಂತ ಪ್ರಾದೇಶಿಕ ಭಾಷೆಗಳಲ್ಲಿ ಈ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಬಹಳ ಅಸಮಾನವಾದ ಸ್ಪಧಾ೯ ಕ್ಷೇತ್ರಕ್ಕೆ ಕಾರಣವಾಗುತ್ತಿದೆ. ಇದು ಹಿಂದಿ ಭಾರತೀಯರಿಗೆ ವ್ಯವಸ್ಥಿತ ಗಂಭೀರ ಅನ್ಯಾಯದ ಅನುಕೂಲತೆಯನ್ನೂ ಮತ್ತು ಹಿಂದಿಯೇತರ ಭಾರತೀಯರಿಗೆ ವ್ಯವಸ್ಥಿತ ಗಂಭೀರ ಅನ್ಯಾಯದ ಅನಾನುಕೂಲತೆಯನ್ನೂ ಉಂಟು ಮಾಡುತ್ತಿದೆ.” ಎಂದು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮತ್ತು ಅನ್ಯಾಯಗಳ ಬಗ್ಗೆ ಆತಂಕ ಹೊರಹಾಕಿದ್ದಾರೆ.

ಕರ್ನಾಟಕಕ್ಕೆ ನ್ಯಾಯಯುತವಾದ ದ್ವಿಭಾಷಾ ನೀತಿಯ ಅಗತ್ಯವಿದೆ.  ಕರ್ನಾಟಕದೊಳಗೆ ನಮ್ಮ ಪ್ರಾದೇಶಿಕ ಭಾಷೆ ಕನ್ನಡ ಹಾಗೂ ಭಾರತದ ಒಳಗೆ ಮತ್ತು ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಭಾಷೆ; ಇವೆರಡೂ ಶಿಕ್ಷಣ, ಆಡಳಿತ ಮತ್ತು ಸಾಮಾನ್ಯ ಸಂವಹನದಲ್ಲಿ ಕಡ್ಡಾಯ ಭಾಷೆಗಳಾಗಬೇಕಿದೆ. ಕನ್ನಡಕ್ಕೆ ಮೊದಲನೆ ಆದ್ಯತೆ ಮತ್ತು ಇಂಗ್ಲೀಷಿಗೆ ಎರಡನೆ ಸ್ಥಾನ ಇರಬೇಕು.  ಆಸಕ್ತಿ ಹೊಂದಿರುವವರು ತಮ್ಮ ವೈಯಕ್ತಿಕ ಸಂದರ್ಭಗಳಿಗೆ ಅನುಗುಣವಾಗಿ ಅವರಿಗೆ ಸೂಕ್ತವೆಂದು ತೋರುವ ಯಾವುದೇ ಹೆಚ್ಚುವರಿ ಭಾಷೆಗಳನ್ನು ಕಲಿಯಲು ಅವಕಾಶಗಳಿರಬೇಕು.

ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ: ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ.  ಭಾರತೀಯ ಸಂವಿಧಾನವು ಯಾವುದೇ ರಾಷ್ಟ್ರ ಭಾಷೆಯನ್ನು ನಿರ್ದಿಷ್ಟ ಪಡಿಸಿಲ್ಲ. ಸಂವಿಧಾನದ ಶೆಡ್ಯೂಲ್ 8 ರಲ್ಲಿ 22 ಭಾಷೆಗಳಿದ್ದು, ಅದರಲ್ಲಿ ಹಿಂದಿಯೂ ಒಂದು. ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ಸುಳ್ಳು ಬಹಳ ವರ್ಷಗಳಿಂದ ಅನೇಕ ರೀತಿಗಳಲ್ಲಿ ಮತ್ತು ಅನೇಕ ಸ್ಥಳಗಳಲ್ಲಿ ಚಾಲ್ತಿಯಲ್ಲಿದೆ.  ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಬಿಂಬಿಸುವುದು ಸುಳ್ಳುತನ ಎನ್ನುವುದನ್ನು ಎಲ್ಲ ಹಂತಗಳಲ್ಲಿ ಹಾಗೂ ಎಲ್ಲ ಸ್ಥಳಗಳಲ್ಲಿ ಸ್ಪಷ್ಟಪಡಿಸಬೇಕಿದೆ. ಹಿಂದಿಯು ಭಾರತದಲ್ಲಿ ಕೇವಲ ಅತಿ ದೊಡ್ಡ ಪ್ರಾದೇಶಿಕ ಭಾಷೆಯಾಗಿದೆ ಮತ್ತು ಅದನ್ನು ಹಾಗೆಯೇ ಪರಿಗಣಿಸಬೇಕು. ಹಿಂದಿಯು ಕನ್ನಡ ಅಥವಾ ಇತರೆ ಯಾವುದೇ ಪ್ರಮುಖ ಭಾರತೀಯ ಭಾಷೆಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರಬಾರದು ಮತ್ತು ಕಡಿಮೆ ಪ್ರಾಮುಖ್ಯತೆಯನ್ನೂ ಹೊಂದಿರಬಾರದು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹಿಂದಿಯನ್ನು ಹೇರುವ ಮೂಲಕ ಕನ್ನಡವನ್ನು ಎರಡನೇ ದರ್ಜೆಯ ಭಾಷೆಯಾಗಿ ಪರಿಗಣಿಸಲಾಗುತ್ತಿದೆ ಮತ್ತು ಭಾರತದಲ್ಲಿ ಕನ್ನಡಿಗರನ್ನು ಎರಡನೇ ದರ್ಜೆಯ ಭಾರತೀಯರಂತೆ ಪರಿಗಣಿಸಲಾಗುತ್ತಿದೆ. ಭಾಷಾ ನೀತಿಗಳು ಮತ್ತು ಆಚರಣೆಗಳು ಹಿಂದಿ ಹೇರಿಕೆಯ ಪರವಾಗಿವೆ. ಇದು ಇತರೆ ಹಿಂದಿಯೇತರ ರಾಜ್ಯಗಳ  ಪ್ರಜೆಗಳಿಗೂ ಅನ್ವಯವಾಗುತ್ತದೆ. ನಾವು ಕನ್ನಡವನ್ನು ಮಾತ್ರ ಒಪ್ಪಲು ಅರ್ಹವಾಗಿ ಮಾಡಿದರೆ, ಕನ್ನಡಿಗರು ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸಲು ಸಾಧ್ಯವಿಲ್ಲ.  ಉದ್ಯೋಗ, ವಿಜ್ಞಾನ, ವ್ಯಾಪಾರ ಮತ್ತು ಎಲ್ಲದರಲ್ಲೂ ತೊಂದರೆ ಅನುಭವಿಸಬೇಕಾಗುತ್ತದೆ. ನಮಗೆ ಕನ್ನಡ ಮತ್ತು ಇಂಗ್ಲಿಷ್ ಬೇಕು. ಇಂಗ್ಲಿಷ್ ಅನ್ನು ದ್ವೇಷಿಸುವುದರಿಂದ ಹಿಂದಿ ಹೇರಿಕೆಯನ್ನು ಸುಗಮಗೊಳಿಸಿದಂತಾಗುತ್ತದೆ. ಹಿಂದಿಯೇತರ ಭಾರತೀಯರನ್ನು ಮತ್ತಷ್ಟು ಕಡೆಗಣಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಭಾಷಾ ಹೇರಿಕೆ ಬಗ್ಗೆ ದನಿ ಏರಿಸಿದ್ದಾರೆ.

ಉಪ-ಪ್ರಾದೇಶಿಕ ಭಾಷೆಗಳಿಗೆ ನ್ಯಾಯ: ಕನಾ೯ಟಕ ಹಾಗೂ ಇತರೆ ರಾಜ್ಯಗಳು, ತಮ್ಮ ತಮ್ಮ ರಾಜ್ಯಗಳ ಉಪ-ಪ್ರದೇಶಗಳಲ್ಲಿರುವ ಭಾಷೆಗಳಿಗೂ (ಉದಾಹರಣೆ – ‘ತುಳು’ ಭಾಷೆ) ನ್ಯಾಯ ಒದಗಿಸುವ ಬಗ್ಗೆ, ಅಲ್ಲಿನ ಜನರೊಂದಿಗೆ ಚಚಿ೯ಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಭಾರತೀಯರನ್ನೂ ಅಷ್ಟೇ ಅಲ್ಲ, ಎಲ್ಲಾ ಮನುಷ್ಯರನ್ನೂ ನಾವು ಸಹೋದರ ಸಹೋದರಿಯರಂತೆ ಕಾಣಬೇಕು. ಜೊತೆಗೆ ಭಾಷೆಗೆ ಸಂಬಂಧಪಟ್ಟ ಕಾರಣಗಳಿಂದ ಯಾರನ್ನೂ ಕೆಟ್ಟದಾಗಿ ನೋಡಬಾರದು. ತಾರತಮ್ಯ ಮಾಡಬಾರದು. ಅವಕಾಶಗಳಿಂದ ವಂಚಿತರನ್ನಾಗಿ ಮಾಡಬಾರದು. ಭಾಷಾ ದಬ್ಬಾಳಿಕೆ, ಶೋಷಣೆ, ಅಧೀನತೆ ಇತ್ಯಾದಿಗಳು ಯಾವುದೇ ಒಕ್ಕೂಟಕ್ಕೆ ಉತ್ತಮ ಅಡಿಪಾಯವನ್ನು ರೂಪಿಸುವುದಿಲ್ಲ. ಸಮಾನತೆ, ಪರಸ್ಪರ ಗೌರವ, ನ್ಯಾಯ, ಯಾವುದೇ ಅರ್ಥಪೂರ್ಣ ಒಕ್ಕೂಟಕ್ಕೆ ಮೂಲಭೂತ ಅವಶ್ಯಕತೆಗಳು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಹಲವು ಪ್ರಮುಖ ಅಂಶಗಳ ಒಳಗೊಂಡಂತೆ ಕರ್ನಾಟಕ ಸರ್ಕಾರಕ್ಕೆ ರಾಜ್ಯವು ದ್ವಿಭಾಷಾ ನೀತಿಯನ್ನು ಘೋಷಿಸಬೇಕು ಮತ್ತು ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸಧ್ಯ ಈ ಮನವಿಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, “ಭಾಷಾ ವಿಷಯಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ಚರ್ಚೆಗಳ ವೈವಿಧ್ಯತೆಯನ್ನು ಗಮನಿಸಿದಾಗ ಕರ್ನಾಟಕಕ್ಕೆ ದ್ವಿಭಾಷಾ ಸೂತ್ರದ ಅವಶ್ಯಕತೆ ಇದೆ ಎಂದು ಅನಿಸುತ್ತದೆ. ಏನಿದ್ದರೂ ಈ ಕುರಿತಂತೆ ಸರ್ಕಾರದ ಹಂತದಲ್ಲಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ತಮ್ಮಿಂದ ಕೋರುತ್ತಿದ್ದೇನೆ” ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page