“ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಿಡಿಗೇಡಿಗಳಿಂದಲೇ ರಾಜ್ಯಪಾಲರ ಮೇಲೆ ಕಲ್ಲು ತೂರಬಹುದು ಎನ್ನುವ ಕಾರಣಕ್ಕೆ ಪೊಲೀಸ್ ಅವರು ರಕ್ಷಣೆಗಾಗಿ ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ “ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ, 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿ, ಜೆಡಿಎಸ್ ಪ್ರಯತ್ನಿಸುತ್ತಿದೆ ಎನ್ನುವ ಮಾಹಿತಿ ನಮಗಿದೆ ಎಂದು ಹೇಳಿದರು
ಯಾವ ಸಂದರ್ಭದಲ್ಲೂ ರಾಜ್ಯಪಾಲರ ಮೇಲೆ ಬಿಜೆಪಿ ಮತ್ತು ಜೆಡಿಎಸ್ ನ ಕಿಡಿಗೇಡಿಗಳು ಅಪಾಯ ತಂದೊಡ್ಡಬಹುದು. ಹೀಗಾಗಿ ರಾಜ್ಯಪಾಲರಿಗೆ ಸೂಕ್ತ ಭದ್ರತೆ ಒದಗಿಸುವ ದೃಷ್ಟಿಯಿಂದ ಅವರಿಗೆ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ನಮಗೆ ರಾಜ್ಯಪಾಲರ ಮೇಲೆ ಗೌರವವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನನ್ನು, ನಿಮ್ಮನ್ನು ಯಾರನ್ನು ಬೇಕಾದರೂ ಟೀಕೆ ಮಾಡಬಹುದು. ಯಾರಿಗೆ ಯಾವ ಗೌರವ ಕೊಡಬೇಕೋ ಅದನ್ನು ಖಂಡಿತ ಕೊಡಲೇಬೇಕು. ಘನವೆತ್ತ ರಾಜ್ಯಪಾಲರಿಗೆ ನಾವು ಖಂಡಿತಾ ಗೌರವ ನೀಡುತ್ತೇವೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ರಾಜ್ಯಪಾಲರಿಗೆ ಅವಮಾನಿಸಿದ್ದನ್ನು ವಿರೋಧಿಸಿ ಬಿಜೆಪಿಯವರ ಪ್ರತಿಭಟನೆ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಡಿಸಿಎಂ ಡಿಕೆ ಶಿವಕುಮಾರ್ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.