Monday, March 17, 2025

ಸತ್ಯ | ನ್ಯಾಯ |ಧರ್ಮ

ಜೀವ ಹೋದ ಮೇಲೂ ಎರಡು ಜೀವಗಳಿಗೆ ಜನ್ಮ ಕೊಟ್ಟ ಮಹಾತಾಯಿ

ರಾಜ್ಯದಲ್ಲಿ ಗರ್ಭಿಣಿ ಮತ್ತು ಬಾಣಂತಿ ಹೆಣ್ಣು ಮಕ್ಕಳ ಸಾವು ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಮಾಧ್ಯಮಗಳೋ ಒಂದಷ್ಟು ದಿನ ಸುದ್ದಿ ಮಾಡಿ ಕೈ ತೊಳೆದುಕೊಂಡು ಬಿಟ್ಟವು. ಆದರೆ ಇವತ್ತಿಗೂ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರ ಸಾವು ನಿಂತಿಲ್ಲ. ಇಂತದ್ದೇ ಒಂದು ಮನ ಕಲಕುವ ಸ್ಟೋರಿಯೊಂದು ಡಾ. ಸಿದ್ದನಗೌಡ ಪಾಟೀಲ್ ಅವರ ಬರಹದಲ್ಲಿ

ರಾಜ್ಯದಲ್ಲಿ ಗರ್ಭಿಣಿ ಮತ್ತು ಬಾಣಂತಿ ಹೆಣ್ಣು ಮಕ್ಕಳ ಸಾವು ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಮಾಧ್ಯಮಗಳೋ.. ಟ್ರೆಂಡ್ ಸೆಟ್ಟಿಂಗ್ ನಂತೆ ಒಂದಷ್ಟು ದಿನ ಸುದ್ದಿ ಮಾಡಿ, ನಂತರ ಯಾರೂ ಕೇಳೋರು ಇಲ್ಲ ಅಂದಾಗ ಕೈ ತೊಳೆದುಕೊಂಡು ಬಿಟ್ಟವು. ಆದರೆ ಇವತ್ತಿಗೂ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರ ಸಾವು ನಿಂತಿಲ್ಲ. ಇಂತದ್ದೇ ಒಂದು ಮನ ಕಲಕುವ ಸ್ಟೋರಿಯೊಂದು ಡಾ.ಸಿ ಡಾ. ಸಿದ್ದನಗೌಡ ಪಾಟೀಲ್ ಅವರ ಬರಹದಲ್ಲಿ

ಇತ್ತೀಚೆಗೆ ಗರ್ಭಿಣಿಯರ, ಬಾಣಂತಿಯರ ಸಾವುಗಳ ಸಂಕಟದ ಸುದ್ದಿಗಳು ನಿರಂತರ ಬರುತ್ತಲೇ ಇವೆ. ಆ ಸುದ್ದಿಗಳನ್ನು, ಘಟನೆಗಳನ್ನು ನೋಡಿ ಮನಸು ಖಿನ್ನತೆಗೆ ಒಳಗಾಗುವಾಗಲೇ ನನ್ನ ಕುಟುಂಬದಲ್ಲಿಯೂ ಅಂಥ ಒಂದು ದಾರುಣ ಘಟನೆ ನಡೆಯಿತು.

  ಈ ಫೋಟೋದಲ್ಲಿ ಇರುವವಳು ರೇವತಿ, ನನ್ನ ತಮ್ಮ ರಾಜಶೇಖರ (ಚಿಕ್ಕಮ್ಮನ ಮಗ)ನ  ಪತ್ನಿ. ವಯಸ್ಸು 26, ತಾಯಿಯ ತಮ್ಮನನ್ನೇ ಮದುವೆಯಾಗಿದ್ದಳು. ಮುದ್ದಾದ ಜೋಡಿ. ಆರಂಭದಿಂದಲೂ ಬಸುರಿ ರೇವತಿಯನ್ನು ಹೆರಿಗೆಗಾಗಿ ಸೊಲ್ಲಾಪುರದ ಶೋಭಾ ನರ್ಸಿಂಗ್ ಆಸ್ಪತ್ರೆಗೆ ತೋರಿಸುತ್ತಿದ್ದರು. (ವಿಜಯಪುರ ಜಿಲ್ಲೆಯ ಹಳ್ಳಿಗಳಿಂದ ಬಹುತೇಕರು ಮಹಾರಾಷ್ಟ್ರದ ಸೊಲ್ಲಾಪುರ,ಮಿರಜಗಳಿಗೆ ಚಿಕಿತ್ಸೆಗಾಗಿ ಹೋಗುತ್ತಾರೆ)ಅಲ್ಲಿನ ವೈದ್ಯರು ರೇವತಿಗೆ ಎರಡು ಕೂಸುಗಳು ಹೊಟ್ಟೆಯಲ್ಲಿ ಇವೆಯೆಂದು ಹೇಳಿದ್ದರು.9 ತಿಂಗಳು ತುಂಬಿ ಎರಡು ದಿನವಾಗಿತ್ತು. ಇದೇ ಫೆಬ್ರವರಿ 24ರಂದು ಸಂಜೆ ಆಸ್ಪತ್ರೆಗೂ ಹೋಗಿದ್ದಾರೆ. ರಕ್ತದೊತ್ತಡವೂ ಸೇರಿ ಎಲ್ಲ ತಪಾಸಣೆ ಮಾಡಿ, ಎಲ್ಲವೂ ಸರಿಯಾಗಿದೆ, ನಾಲ್ಕು ದಿನ ಬಿಟ್ಟು ಬನ್ನಿ ಹೆರಿಗೆ ಮಾಡೋಣ ಎಂದು ವೈದ್ಯರು ಹೇಳಿ ಕಳಿಸಿದ್ದಾರೆ. ಆದರೆ ಅದೇ ದಿನ ರಾತ್ರಿ ಒಂದು ಗಂಟೆಗೆ  ರಕ್ತದೊತ್ತಡ ಹೆಚ್ಚಿ ಪ್ರಜ್ಞೆ ತಪ್ಪಿದ್ದಾಳೆ, ಆಸ್ಪತ್ರೆಗೆ ತೆಗೆದು ಕೊಂಡು ಹೋದಾಗ ಪರಿಸ್ಥಿತಿ ಕೈ ಮೀರಿದೆ. ತಕ್ಷಣ ಮತ್ತೊಂದು ದೊಡ್ಡ ಆಸ್ಪತ್ರೆಗೆ ಸಾಗಿಸಿದ್ದಾರೆ. ಬೆಳಿಗ್ಗೆ ಸ್ಕ್ಯಾನ್ ಮಾಡಿದ್ದಾರೆ , ಬ್ರೇನ್ ಹ್ಯಾಮ್ ರೇಜ್ ಎಂಬ ಆಘಾತಕಾರಿ ಮಾಹಿತಿ. ಅಷ್ಟೊತ್ತಿಗೆ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಹೇಳಿ, ಬೆಳಗಿನ ಹತ್ತು ಘಂಟೆಗೆ ಆಪರೇಶನ್ ಮಾಡಿ ಹೊಟ್ಟೆಯೊಳಗಿನ ಅವಳಿ ಮಕ್ಕಳನ್ನು ತೆಗೆದಿದ್ದಾರೆ. ಒಂದು ಗಂಡು, ಒಂದು ಹೆಣ್ಣು.

ಒಂಭತ್ತು ತಿಂಗಳು ಹೊತ್ತ ಮಕ್ಕಳ ಮುಖವನ್ನೂ ನೋಡದೇ ತಾಯಿ ರೇವತಿ ಕಣ್ಣು ಮುಚ್ಚಿದ್ದಳು, ಕಣ್ಣು ಬಿಡುವ ಮೊದಲೇ ಮಕ್ಕಳು ಹೆತ್ತ ತಾಯಿಯನ್ನು ಕಳೆದು ಕೊಂಡಿದ್ದವು.

ಮೊದಲ ಹೆರಿಗೆ, ವೈದ್ಯರು ಆಸ್ಪತ್ರೆಗೆ ದಾಖಲು ಮಾಡಿಕೊಂಡು ನಿರಂತರ ನಿಗಾ ವಹಿಸಬಹುದಿತ್ತು ಅಥವಾ ಒಂಭತ್ತು ತಿಂಗಳು ತುಂಬುವಷ್ಟರಲ್ಲಿ ಶಸ್ತ್ರಚಿಕಿತ್ಸೆ ಮಾಡಿ ತಾಯಿ ಮಕ್ಕಳನ್ನು ಕಾಪಾಡ ಬಹುದಿತ್ತು.

ಒಟ್ಟಿನಲ್ಲಿ ನಾನು ಎತ್ತಿ ಆಡಿಸಿದ ಕಂದಮ್ಮ ರೇವತಿಯನ್ನು ಚಿತೆಯ ಮೇಲಿಟ್ಟ ಆಘಾತ, ಮುದ್ದಾದ ಎರಡು ಕೂಸುಗಳ ನೋಟ ಎದುರಿಸಲಾಗದ ಸಂಕಟ,ತಮ್ಮನ ಅಸಹಾಯಕ ಮುಖ ನೋಡವಾಗದ ಸ್ಥಿತಿ, .ರೇವತಿ -ರಾಜಶೇಖರರ  ತಂದೆ ತಾಯಿ,ಅಕ್ಕ ತಂಗಿಯರ,ಅಣ್ಣ ತಮ್ಮಂದಿರ, ಬಂಧು ಬಳಗದ  ರೋಧನ ಕೇಳಿಸಿಕೊಳ್ಳಲಾಗದೆ ಒದ್ದಾಡುವ ಸ್ಥಿತಿ ಭಯಂಕರವಾಗಿದೆ.

ಸರ್ಕಾರಗಳು , ವೈದ್ಯಲೋಕ ತಾಯಂದಿರನ್ನು ಕಳೆದುಕೊಳ್ಳುವ ಕೂಸುಗಳು,ಕೂಸುಗಳನ್ನು ಕಳೆದುಕೊಳ್ಳುವ ತಾಯಂದಿರು ಇಲ್ಲದಂಥ ಸಮಾಜಕ್ಕಾಗಿ ಶ್ರಮಿಸಲಿ. ಹಲವಾರು ವೈದ್ಯರು ವ್ಯಕ್ತಿಗತವಾಗಿ ಕರ್ತವ್ಯ ನಿರತರೂ ಕರುಣಾಮಯಿಗಳೂ ನಿಸ್ವಾರ್ಥಿಗಳೂ ಆಗಿ ವೈದ್ಯಕೀಯ ಸೇವೆಯನ್ನು ಒಂದು ತಪಸ್ಸಿನಂತೆ ಮಾಡುತ್ತಿದ್ದಾರೆ. ಅಂಥ ಎಲ್ಲ ವೈದ್ಯರ ಸೇವೆಯನ್ನು ಸ್ಮರಿಸುತ್ತಲೇ ಬಹುತೇಕ ವೈದ್ಯರು ಮತ್ತು ಆಸ್ಪತ್ರೆಗಳು ವೈದ್ಯಕೀಯ ವ್ಯವಸ್ಥೆಯನ್ನೂ  ವ್ಯಾಪಾರ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಚಂದ್ರಲೋಕದಲ್ಲಿ, ಅನ್ಯಗ್ರಹಗಳಲ್ಲಿ ಮಾನವ ವಾಸಕ್ಕೆ ಯೋಗ್ಯವಾದ ಜಾಗ ಹುಡುಕುತ್ತಿರುವ ಸರ್ಕಾರಗಳು, ಈಗಿರುವ ಭೂಮಿಯಲ್ಲಿ ಬದುಕುತ್ತಿರುವ ಮನುಷ್ಯ ಮನುಷ್ಯನಾಗಿ ಘನತೆಯಿಂದ, ಆರೋಗ್ಯದಿಂದ, ನೆಮ್ಮದಿಯಿಂದ ಬದುಕುವ ವಾತಾವರಣ ರೂಪಿಸಲಿ. ಕನಿಷ್ಟ ಜನ್ಮ ನೀಡುವ ತಾಯಂದಿರು,ಹುಟ್ಟುವ ಹಸುಗೂಸುಗಳು ಸಾಯದಿರಲಿ, ಕನಿಷ್ಟ,ತಾಯಿ ತನ್ನ ಮಗುವಿನ,ಮಗು ತನ್ನ ತಾಯಿಯ ಮುಖ ನೋಡುವ ಅವಕಾಶ,ಸಂತಸವಾದರೂ ಇರಲಿ. ಮಾನವನ ಸ್ವಾರ್ಥಕ್ಕೆ ನಿಸರ್ಗದತ್ತವಾದ ಸೃಷ್ಟಿ ಕ್ರಿಯೆಗೆ ಧಕ್ಕೆಯಾಗದಿರಲಿ.

‌ ಡಾ. ಸಿದ್ದನಗೌಡ ಪಾಟೀಲ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page