Home ರಾಜ್ಯ ಕೋಲಾರ ನಮ್ಮ ನಾಡಿನ ಹಿರಿಮೆ ಆದಿಮ: ಡಾ.ನಯನ ಅಭಿಮತ

ನಮ್ಮ ನಾಡಿನ ಹಿರಿಮೆ ಆದಿಮ: ಡಾ.ನಯನ ಅಭಿಮತ

0

ಕೋಲಾರ, ಜ.09: ಕೋಲಾರ ಜಿಲ್ಲೆಯ ಪ್ರಸಿದ್ಧ ತಾಣಗಳಲ್ಲಿ ಒಂದಾಗಿರುವ ಆದಿಮ ಸಾಂಸ್ಕೃತಿಕ ಕೇಂದ್ರವು ತನ್ನ ನೆಲಮುಖಿ ಹಾಗೂ ಜನಮುಖಿ ಸೇವೆಯಿಂದ ನಮ್ಮ ನಾಡಿನ ಹಿರಿಮೆಯನ್ನು ಹೆಚ್ಚಿಸಿರುವ ಕೇಂದ್ರವಾಗಿದೆ ಎಂದು ಕೋಲಾರ ತಾಲ್ಲೂಕಿನ ತಹಶಿಲ್ದಾರರಾದ ಡಾ.ನಯನ ಅವರು ಅಭಿಪ್ರಾಯಪಟ್ಟರು.


ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಜಯಂತಿಯನ್ ಸೇವಾ ವಿಸ್ತರಣೆಯ ಅಂಗವಾಗಿ ಸಾಮಾಜಿಕ ಚಟುವಟಿಕೆಗಳ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ೫ದಿನಗಳ “ಸೌಹಾರ್ದಗಿರಿ-ಗ್ರಾಮೀಣ ಶಿಬಿರ” ವನ್ನು ನಗಾರಿ ಬಾರಿಸುವ ಉದ್ಘಾಟಿಸಿ ಮಾತನಾಡಿದರು.


“ನಾನು ಮೂಲತಃ ಬೆಂಗಳೂರಿನ ನಗರಕ್ಕೆ ಸೇರಿದ್ದು ನಾಗರೀಕ ಸೇವೆಗೆ ಆಯ್ಕೆಯಾದ ಮೇಲೆ ಕನ್ನಡ ನಾಡಿನ ಹಲವಾರು ಗ್ರಾಮಗಳ ನಿಜವಾದ ಬದುಕು ನನಗೆ ಅರಿವಾಯಿತು. ನಗರದೊಳಗಿದ್ದು ವಾರಕ್ಕೊಮ್ಮೆ ಮನೋರಂಜನೆಗಾಗಿ ಗ್ರಾಮಗಳ ಕಡೆ ಪ್ರವಾಸ ಹೋಗಿ ಬರುತ್ತಿದ್ದ ನಮಗೆ ಸಂಪೂರ್ಣ ಗ್ರಾಮಾನುಭವ ಇರಲಿಲ್ಲ. ಕೆ.ಎ.ಎಸ್.ಅಧಿಕಾರಿಯಾಗಿ ಗ್ರಾಮಗಳಿಗೆ ಭೇಟಿಕೊಟ್ಟು ಅಲ್ಲಿನ ಜನರ ಜೊತೆ ಒಡನಾಡುವಾಗ ನಿಜವಾದ ಭಾರತ ನನಗೆ ಅರ್ಥವಾಗತೊಡಗಿತು. ಗ್ರಾಮೀಣ ಜನರ ಬಡತನ, ಸಹಬಾಳ್ವೆ, ಶಾಂತಿ, ಸೌಹಾರ್ದತೆ, ಶ್ರಮದಾಯಕ ಕಾಯಕಗಳು, ಅಲ್ಲಿನ ನಿಸರ್ಗ ನಮಗೆಲ್ಲ ಬಹುದೊಡ್ಡ ಪಾಠವೆನಿಸಿತು. ನಿಜಕ್ಕೂ ನಾವು ಗ್ರಾಮೀಣ ಜನರೊಂದಿಗೆ ಬೆರೆತಾಗ ನಗರದ ಏಕಾಕೀತನ, ಸ್ವಾರ್ಥಗಳು ಮರೆಯಾಗಿ ಸೇವಾಮನೋಭಾವ ಹಾಗೂ ನೆಮ್ಮದಿ ಜೀವನ ನಮ್ಮದಾಗುತ್ತದೆ” ಎಂದು ಮಾತನಾಡಿದರು.


ರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿರುವ ಕ್ರಿಸ್ತು ಜಯಂತಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ನಮ್ಮ ಬೆಟ್ಟದ ಜನರನ್ನು ಭೇಟಿಯಾಗಿ ಅವರ ಅನುಭವಗಳನ್ನು ಅರಿತುಕೊಂಡು ಅವರ ಬದುಕುಗಳನ್ನು ಅರ್ಥಮಾಡಿಕೊಳ್ಳುವಂತಾಗಲಿ. ಆ ಮೂಲಕ ನಗರೀಕರಣದ ಜೀವನಶೈಲಿಗಿಂತ ಭಿನ್ನವಾಗಿರುವ ನೆಮ್ಮದಿಯಿಂದ ಕೂಡಿರುವ ಈ ನೆಲದ ನಿಸರ್ಗ ಹಾಗೂ ಸಂಸ್ಕೃತಿಗಳ ಮಹತ್ವವನ್ನು ಸವಿಯಲಿ, ಆರಿಯಲಿ ಎಂದು ಆಶಿಸಿದರು.


ಭಾರತ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮಾಜಿ ಸದಸ್ಯರಾದ ಶ್ರೀ ಬೆಳಗಾನಹಳ್ಳಿ ಮುನಿವೆಂಕಟಪ್ಪ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಆದಿಮಬೆಟ್ಟದ ಗ್ರಾಮೀಣ ಸೊಗಡನ್ನು ತಿಳಿಯಲು ಬಂದಿರುವ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾದ ಸಂಸ್ಥೆ ನಮ್ಮ ಆದಿಮ. ಆದಿಮ ಕೇಂದ್ರವು ಈ ನೆಲದ ಪ್ರಜ್ಞಾವಂತರಿಂದ ಯಾವುದೇ ಜಾತಿಮತಗಳ ಸೀಮೆಗಳಿಲ್ಲದೆ ಆರಂಭವಾದದ್ದು. ನೀವೂಗಳೂ ಸಹ ಹೀಗೆ ಸೀಮಾತೀತವಾಗಿ ಸೇವೆ ಮಾಡುತ್ತಾ ಒಳ್ಳೆ ಅಧಿಕಾರಿಗಳಾಗಿ ಬಡವರು, ಕಾರ್ಮಿಕರು, ರೈತರು, ಅಬಲರಿಗೆ ನೆರವು ನೀಡುವಂತಹವರಾಗಿ ಎಂದು ತಿಳಿಸಿದರು.


ಯುವಮುಖಂಡರಾದ ಸುಬ್ರಮಣಿ ದೊಡ್ಡನಹಳ್ಳಿ ಅವರು ಮಾತನಾಡಿ, ಆದಿಮ ಕೇಂದ್ರಕ್ಕೆ ಸರ್ವರನ್ನೂ ಆಕರ್ಷಿಸುವ ಹಾಗೂ ಬೆಳೆಸುವ ಶಕ್ತಿ ಇದೆ. ದೇಶವಿದೇಶಗಳಿಂದ, ನಾಡಿನ ಮೂಲೆಮೂಲೆಗಳಿಂದ ಹಲವಾರು ಸಾಹಿತಿಗಳು, ಕಲಾವಿದರು, ಹೋರಾಟಗಾರರು, ಅಧಿಕಾರಿಗಳು, ಶ್ರೀಸಾಮಾನ್ಯರು ಆದಿಮವನ್ನು ಸಂದರ್ಶಿಸಿದ್ದಾರೆ. ಆದಿಮವು ವಿಶ್ವಮಟ್ಟದ ಸಂಸ್ಥೆಯಾಗಿ ಬೆಳೆಯಲು ಅನೇಕರು ಕಾರಣಕರ್ತರಾಗಿದ್ದಾರೆ ಎಂದು ಸ್ಮರಿಸಿದರು. ಜೊತೆಗೆ, ಈ ಬೆಟ್ಟದಲ್ಲಿ ೭ ಗ್ರಾಮಗಳಿದ್ದು, ಈ ತಾಣಗಳೆಲ್ಲ ಇಂದು ಪ್ರವಾಸೀ ತಾಣಗಳಾಗಿವೆ. ಪ್ರತೀದಿನ ನೂರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ ಇಲ್ಲಿನ ಜನರಿಗೆ ಸೂಕ್ತಭದ್ರತೆಯ ಕೊರತೆ ಇದೆ. ಈ ಬೆಟ್ಟಕ್ಕೆ ಒಂದು ಸಮುದಾಯ ಆರೋಗ್ಯ ಕೇಂದ್ರದ ಅವಶ್ಯಕತೆಯಿದೆ. ಈ ಎಲ್ಲಾ ಗ್ರಾಮಗಳ ಜನರಿಗೆ ಸರ್ಕಾರದಿಂದ ಇನ್ನೂ ಕಾನೂನಾತ್ಮಕವಾದ ದಾಖಲಾತಿ ಹಾಗೂ ರಕ್ಷಣೆ ದೊರೆಯಬೇಕಿದೆ ಎಂದು ತಿಳಿಸಿದರು. ಇಲ್ಲಿನ‌ ಗ್ರಾಮಗಳನ್ನು ಈ ಗ್ರಾಮಶಿಬಿರದ ಭಾಗವಾಗಿ ತಾವು ಸಮೀಕ್ಷೆ ಮಾಡುವಾಗ ಇಲ್ಲಿನ ಜನರ ನೋವು, ಬಡತನ ನಿಮಗೆ ಅರ್ಥವಾಗಲಿದೆ.ಅದಕ್ಕಿಂತಲೂ ಮಿಗಿಲಾಗಿ ನೂರು ನೋವುಗಳ ನಡುವೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಈ ಬೆಟ್ದ ಜನರು ಎಷ್ಟು ಗಟ್ಟಿಯಾಗಿದ್ದಾರೆ ಎಂಬುದೂ ನಿಮ್ಮ ಅರಿವಿಗೆ ಬರುತ್ತದೆ ಎಂದರು.


ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆದಿಮದ ಟ್ರಸ್ಟಿಗಳಾದ ಶ್ರೀ ಮಾರ್ಕಂಡಯ್ಯ ಅವರು ಮಾತನಾಡಿ, ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೆಲವೇ ಕೆಲವು ನೆಲಮುಖೀ ಪ್ರಜ್ಞಾವಂತ ಮನಸುಗಳು ಈ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಮರುನೀಡೋದು ಹೇಗೆ ಎಂಬ ಚಿಂತನೆಯಲ್ಲಿ ಆರಂಭವಾಗಿದ್ದು ಆದಿಮ. ಸಮಾಜವನ್ನು ಸನ್ನಡತೆಯಲ್ಲಿ ಮುನ್ನಡೆಯುವಂತೆ ಮಾಡುವುದಕ್ಕಾಗಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನಮ್ಮ ಆದಿಮವೇ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಾದ ತಮ್ಮಲ್ಲಿ ಅಗಾಧವಾದ ಶಕ್ತಿ, ಜ್ಞಾನ ಇರುತ್ತದೆ. ಅದನ್ನು ಒರೆಗೆ ಹಚ್ಚಿದಾಗ ತಾವೆಲ್ಲರೂ ಪ್ರಬುದ್ಧರಾಗುತ್ತೀರಿ. ಈ ನೆಲ,ಜನ, ಜಲವನ್ನು ಸಮರ್ಥವಾಗಿ ಅರಿತು ಮುನ್ನಡೆದರೆ ನೀವು ಒಳ್ಳೆಯ ವ್ಯಕ್ತಿಗಳಾಗ್ತೀರಿ, ನಿಮ್ಮ ಕುಟುಂಬ, ಸಮಾಜಗಳೂ ನೆಮ್ಮದಿಯಾಗಿರುತ್ತವೆ. ಇಂಥ ಗ್ರಾಮೀಣ ಶಿಬಿರಗಳ ಮೂಲಕ ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ತಾವು ನಿರಂತರವಾಗಿ ಮಾಡುತ್ತಿರಿ ಎಂದು ಆಶಿಸಿದರು. ಆದಿಮದ ಟ್ರಸ್ಟಿಗಳಾದ ಶ್ರೀ ನೀಲಕಂಠೇಗೌಡರು, ಶ್ರೀ ತುರಾಂಡಹಳ್ಳಿ ಶ್ರೀನಿವಾಸ್, ಶ್ರೀ ಚಲಪತಿ, ಯುವಮುಖಂಡರಾದ ರವಿ ಬೆಟ್ಟಹೊಸಪುರ, ಪಾಳ್ಯ ನಾಗರಾಜ್, ಅಂಬರೀಶ್ ವಿ.ಶೆಟ್ಟಿಗಾನಹಳ್ಳಿ ಉಪಸ್ಥಿತರಿದ್ದರು.


ಗ್ರಾಮೀಣ ಶಿಬಿರವನ್ನು ಕುರಿತು ಸಾಮಾಜಿಕ ಚಟುವಟಿಕೆಗಳ ಕೇಂದ್ರದ ಸಂಯೋಜಕರಾದ ಪ್ರೊ.ಶಶಿಕುಮಾರ್ ಎಂ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ಸಂಯೋಜಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ಸ್ವಾಗತಿಸಿ ನಿರೂಪಿಸಿದರು. ಕ್ರಿಸ್ತು ಜಯಂತಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಅಜಿತ್ ಪಿ. ಮ್ಯಾಥ್ಯೂ, ಡಾ.ಲೀಲಾವತಿ ಆರ್, ಡಾ.ಪ್ರಿಯಾಂಕ ಘೋಷ್ ಮೊದಲಾದವರು ಉಪಸ್ಥಿತರಿದ್ದರು ಹಾಗೂ ಕಾಲೇಜಿನ ೮೦ ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.

You cannot copy content of this page

Exit mobile version