ಪ್ರಾದೇಶಿಕ ಪಕ್ಷವಾದ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಯಿಂದ ಸಮಾನ ಅಂತರ ಉಳಿಸಿಕೊಳ್ಳಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ಇಂದೂ ಕೂಡಾ ಬಿಜೆಪಿಯ ಬಸವರಾಜ ಬೊಮ್ಮಾಯಿಯವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ದೇವೇಗೌಡರ ನಿಲುವಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಕುಮಾರಸ್ವಾಮಿಯವರ ಈ ನಡೆ ಈಗ ಜೆಡಿಎಸ್ ಕಾರ್ಯಕರ್ತರಿಗೂ ಇರಿಸುಮುರಿಸು ಉಂಟುಮಾಡಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಇನ್ನೇನು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಹಂತದಲ್ಲೇ NDA ಮೈತ್ರಿಕೂಟದ ಸಭೆಯಿಂದ ದೂರ ಉಳಿದಿತ್ತು. ಜೆಡಿಎಸ್ ಹಿರಿಯ ನಾಯಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಯಾವ ಪಕ್ಷ ಅಥವಾ ಒಕ್ಕೂಟಕ್ಕೂ ನಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ.
ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ದಿನಕ್ಕೊಂದು ಬಾರಿಯಾದರೂ ಬಿಜೆಪಿ ಜೊತೆಗೆ ಗುರುತಿಸಿಕೊಳ್ಳುವುದನ್ನ ನಿಲ್ಲಿಸಿಲ್ಲ. ಇಂದೂ ಸಹ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಟಿ ಪತ್ರಿಕಾಗೋಷ್ಠಿ, ಬೆಂಕಿ ಇಲ್ಲದೇ ಹೊಗೆ ಆಡುತ್ತಿಲ್ಲ ಎಂಬುದನ್ನು ಸಾಕ್ಷೀಕರಿಸುತ್ತಿದೆ. ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಸಿದ ಬಿಜೆಪಿ ಪಕ್ಷದ ದೂರಿನ ಅರ್ಜಿಯಲ್ಲೂ ಕುಮಾರಸ್ವಾಮಿಯವರ ಸಹಿ ಇವೆಲ್ಲಾ ಬೆಳವಣಿಗೆಯನ್ನು ಪುಷ್ಠೀಕರಿಸಿದಂತಿದೆ.
ಈ ನಡುವೆ ಬಿಜೆಪಿ ಜೊತೆಗಿನ ಮೈತ್ರಿ ಕಾರಣಕ್ಕೆ ಜೆಡಿಎಸ್ ಪಾಳಯದಲ್ಲೇ ಬಿರುಕು ಮೂಡಿದೆ. ಹೆಚ್.ಡಿ.ಕುಮಾರಸ್ವಾಮಿ ನಡೆಯ ಬಗ್ಗೆ ಸ್ವತಃ ಜೆಡಿಎಸ್ ಶಾಸಕರೇ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿ ವಿಚಾರವಾಗಿ ಜೆಡಿಎಸ್ ನಾಯಕರಲ್ಲಿ ಒಮ್ಮತ ಮೂಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ಈಗಿರುವ ಜೆಡಿಎಸ್‌ನ 19 ಶಾಸಕರ ಪೈಕಿ ಕೆಲವು ಶಾಸಕರಿಗೆ ಬಿಜೆಪಿ ಮೈತ್ರಿ ಕುರಿತು ಭಿನ್ನಾಭಿಪ್ರಾಯವಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಎರಡು ದಿನಗಳ ಹಿಂದೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಕೂಡಾ ‘ಕುಮಾರಸ್ವಾಮಿ ನಡೆಯಿಂದ ಬೇಸತ್ತ ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಯಾವುದೇ ಕಂಡೀಶನ್ ಹೊರತುಪಡಿಸಿ ಅವರು ನಮ್ಮ ಜೊತೆಗೆ ಕೈ ಜೋಡಿಸಲು ತಯಾರಿದ್ದಾರೆ’ ಎಂದು ಹೊಸ ಬಾಂಬ್ ಎಸೆದದ್ದು ಜೆಡಿಎಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ.
ಎರಡು ದಿನಗಳ ಹಿಂದೆ ವಿಧಾನಸಭೆಯ ಸ್ಪೀಕರ್ ಕುರ್ಚಿಗೆ ಹರಿದ ಪೇಪರ್ ಎಸೆದು ಅಸಭ್ಯವಾಗಿ ವರ್ತಿಸಿ, ಸದನದಿಂದ ಅಮಾನತುಗೊಂಡ 10 ಮಂದಿ ಬಿಜೆಪಿ ಶಾಸಕರ ಪರವಾಗಿ ಕುಮಾರಸ್ವಾಮಿ ನಿಂತಿದ್ದು ಸಹ ಕುಮಾರಸ್ವಾಮಿಗೆ ಬಿಜೆಪಿ ಪರ ಒಲವನ್ನು ತೋರ್ಪಡಿಸಿದಂತಿದೆ. ಆದರೆ ಮಾಜಿ ಸಚಿವ, ಜೆಡಿಎಸ್ ಹಿರಿಯ ನಾಯಕ ಜಿ ಟಿ ದೇವೇಗೌಡ ಸೇರಿದಂತೆ ಹಲವು ಜೆಡಿಎಸ್ ನಾಯಕರು ಇದಕ್ಕೆ ವಿರೋಧವಾಗಿ ನಿಂತಿದ್ದಾರೆ. ಬಿಜೆಪಿ ಶಾಸಕರ ನಿಲುವು ಸಮ್ಮತವಲ್ಲ. ಸ್ಪೀಕರ್ ಜೊತೆಗೆ ನಡೆದುಕೊಂಡ ರೀತಿ ಸರಿಯಲ್ಲ ಎಂದು ಮಾಜಿ ಸಚಿವ ಜಿ.ಟಿ.ಡಿ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಲು ಕಾಂಗ್ರೆಸ್ ಪಕ್ಷವು ಮಸೂದೆಯನ್ನು ಅಂಗೀಕರಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸದನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದು ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರಿಗೆ ಸರಿ ಕಂಡುಬರಲಿಲ್ಲ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ. ಜೆಡಿಎಸ್ (ಕುಮಾರಸ್ವಾಮಿ) ನಡೆ ಸರಿಯಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನುವ ಮಾತು ಕೇಳಿ ಬರುತ್ತಿದೆ.2024 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳಬೇಕೆಂದು ಕುಮಾರಸ್ವಾಮಿ ಬಯಸಿದ್ದಾರೆ. ಆದರೆ, ಎಚ್‌ಡಿ ರೇವಣ್ಣ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುಮಾರಸ್ವಾಮಿ ಅವರ ಬಯಕೆಗೆ ಸುಮಾರು 12 ಜೆಡಿಎಸ್ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಕೀಯ ವಿರೋಧಗಳೇನೇ ಇದ್ದರೂ ಹೊಸ ಮೈತ್ರಿಕೂಟ, ಹಳೆಯ ದೋಸ್ತಿಗಳ ಜೊತೆಗೆ ಕೈಜೋಡಿಸಿ, “INDIA” ಮೈತ್ರಿಕೂಟದ ನಾಯಕರೊಂದಿಗೆ ಮಾತುಕತೆ ನಡೆಸಬಹುದಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಹೇಗಿದ್ದರೂ ಮಾಜಿ ಪ್ರಧಾನಿ ದೇವೇಗೌಡರಿಗೆ ಅಲ್ಲಿ ವಿಶೇಷ ಸ್ಥಾನಮಾನ ಕೂಡಾ ಸಿಗುತ್ತಿತ್ತು. ಆದರೆ ಕುಮಾರಸ್ವಾಮಿಯವರ ನಡೆಯಿಂದಾಗಿ ಇವೆಲ್ಲವನ್ನೂ ಕಳೆದುಕೊಳ್ಳಬೇಕಾಗಿದೆ ಎಂಬ ಅಸಮಾಧಾನ ಕೂಡಾ ಜೆಡಿಎಸ್ ನಲ್ಲಿ ಇದೆ ಎನ್ನಲಾಗಿದೆ.
ರಾಜಕೀಯವಾಗಿ ಹೆಚ್.ಡಿ.ಕುಮಾರಸ್ವಾಮಿಯವರ ದಿನಕ್ಕೊಂದು ನಡೆ, ಪಕ್ಷದ ನಿಲುವಿನ ಬಗ್ಗೆ ಹೆಚ್.ಡಿ.ದೇವೇಗೌಡರ ಹೇಳಿಕೆ, ಒಂದೇ ಕುಟುಂಬವಾದರೂ ಹೆಚ್.ಡಿ.ರೇವಣ್ಣನವರ ವ್ಯತಿರಿಕ್ತ ನಿಲುವು, ಕುಮಾರಸ್ವಾಮಿ ನಡೆಯಿಂದ ಬೇಸತ್ತ ಶಾಸಕರು.. ಎಲ್ಲಕ್ಕಿಂತ ಹೆಚ್ಚಾಗಿ ಅತಂತ್ರ ಸ್ಥಿತಿಯಲ್ಲಿರುವ ಕಾರ್ಯಕರ್ತರು.. ಇವೆಲ್ಲವನ್ನೂ ನೋಡುತ್ತಿದ್ದರೆ ಮೇಲಿನ ಸಾಲು ಜೆಡಿಎಸ್ ನ ಇಂದಿನ ಸ್ಥಿತಿಗೆ ಸೂಕ್ತ ಅನ್ನಿಸದಿರದು.