Tuesday, June 18, 2024

ಸತ್ಯ | ನ್ಯಾಯ |ಧರ್ಮ

ಪರಿಸರ ನಾಶದಲ್ಲಿ ಭೂಸ್ವಾಧೀನದ ಕಬಂಧ ಬಾಹು

ಕೆಲವು ಸಲ ನಮ್ಮ ಯೋಜನೆಗಳನ್ನು ನೋಡಿದರೆ ಇವುಗಳನ್ನು ಪರಿಸರನಾಶಕ್ಕಾಗಿಯೇ ಯೋಜಿಸಿದಂತೆ ಇರುತ್ತವೆ. ನಮ್ಮ ಇಂಜಿನಿಯರ್ ಗಳಾಗಲೀ ಯೋಜನಾ ಅಧಿಕಾರಿಗಳಾಗಲೀ ದಡ್ಡರಲ್ಲ. ಅವರಲ್ಲಿ ಕೆಲವರಿಗಾದರೂ ಇದರ ಹಿಂದಿನ ಹುನ್ನಾರ ತಿಳಿದಿರುತ್ತದೆ. ಆದರೆ ಅವರಲ್ಲಿ ಹೆಚ್ಚಿನವರು ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳಲಾರರು- ಕಾಡು ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಪ್ರಸಾದ್‌ ರಕ್ಷಿದಿ.

ಸರ್ಕಾರ ಯಾವುದೇ ದೊಡ್ಡ ಯೋಜನೆ ಪ್ರಾರಂಭಿಸುವಾಗ ಅದು ಕಾರ್ಖಾನೆ, ವಿಮಾನ ನಿಲ್ದಾಣ, ಅಣೆಕಟ್ಟು, ರೈಲ್ವೆ, ರಸ್ತೆ, ವಿದ್ಯುತ್ ಯೋಜನೆ, ಗಣಿಗಾರಿಕೆ ಯಾವುದೇ ಇರಲಿ ಮೊದಲ ಹಂತವೇ ಭೂ ಸ್ವಾಧೀನ. ಹಿಂದಿನಿಂದಲೂ ಸರ್ಕಾರ ಭೂಸ್ವಾಧೀನಕ್ಕೆ ಹೊರಟಾಗಲೆಲ್ಲ ನಾಡಿನ‌ ಪ್ರಜ್ಞಾವಂತರು ಪ್ರಶ್ನೆ ಮಾಡಿದ್ದಾರೆ, ವಿರೋಧ ವ್ಯಕ್ತ ಪಡಿಸಿದ್ದಾರೆ. ಚಳುವಳಿ ಹೂಡಿದ್ದಾರೆ.ಇವರಲ್ಲಿ ಪರಿಸರ ಹೋರಾಟಗಾರರಿದ್ದಾರೆ, ನ್ಯಾಯವಾದಿಗಳಿದ್ದಾರೆ, ರೈತ ಸಂಘಟನೆಗಳಿವೆ, ರಾಜಕೀಯ ಪಕ್ಷಗಳ ಒಳಗೇ ಕೆಲವರು ಜನಪರ ಚಿಂತಕರೂ ಇದ್ದಾರೆ. ಕೆಲವು ವರ್ಷಗಳ ಹಿಂದೆ ಇವರೆಲ್ಲರ ಸಂಘಟಿತ ಪ್ರಯತ್ನಗಳಿಂದ ದೇಶದಲ್ಲಿ ಹಲವು ಪರಿಸರ ನಾಶದ ಯೋಜನೆಗಳು ನಿಂತವು. ಉದಾಹರಣೆಗೆ ಕೊಡಗಿನ ಕಂಬದಕಡ ಅಣೆಕಟ್ಟು, ಕುದುರೆ ಮುಖ ಗಣಿಗಾರಿಕೆ, ಗುಂಡ್ಯ ಜಲವಿದ್ಯುತ್ ಯೋಜನೆ ಮುಂತಾದವು. ಅದಲ್ಲದೇ ಹಲವರು ಕೃಷಿಕರು ಭೂಸ್ವಾಧೀನದ ವಿರುದ್ಧ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ತರುತ್ತಿದ್ದರು.

ನಂತರದ ದಿನಗಳಲ್ಲಿ ಸರ್ಕಾರಗಳು ತಮ್ಮ ಕಾರ್ಯ ವಿಧಾನವನ್ನು ಬದಲಿಸಿಕೊಂಡವು.

ಮೊದಲನೆಯದು, ಒಂದು ಯೋಜನೆ ಪ್ರಾರಂಭ ಮಾಡುವಾಗಲೇ ತಾವೇ ಒಂದು ವಿರೋಧಿ ಚಳುವಳಿಯನ್ನು ಹುಟ್ಟು ಹಾಕುವುದು. ಮತ್ತು ಜನರಲ್ಲಿ ಆಮೂಲಕ ಗೊಂದಲ ಮೂಡಿಸುವುದು. ಇದೇ ಸಂಘಟನೆಯನ್ನು ಎರಡನೇ ಹಂತದಲ್ಲಿ ಕೃಷಿಕರ ಜೊತೆಯಲ್ಲಿ ಮಾತುಕತೆ ಮತ್ತು ಸಂಧಾನಕ್ಕೆ  ಬಳಸಿಕೊಂಡು ನಿಜವಾದ ಹೋರಾಟಗಾರರನ್ನು ಪಕ್ಕಕ್ಕೆ ಸರಿಸುವುದು.

UPCL

ಎರಡನೆಯದು, ಜಮೀನು ವಶಪಡಿಸಿಕೊಳ್ಳುವಾಗ ಹೆಚ್ಚಿನ ಬೆಲೆ ಕೊಡುವುದು. ಇದು ರೈತರ ಪಾಲಿಗೆ ದೊಡ್ಡ ಮೊತ್ತವಾಗಿರುತ್ತದೆ.  ಇದರಿಂದ ರೈತರು ಆಮಿಷಕ್ಕೆ ಒಳಗಾಗುತ್ತಾರೆ, ಆದರೆ ಒಟ್ಟೂ ಯೋಜನೆ ಮೊತ್ತದಲ್ಲಿ ಸಣ್ಣ ಪಾಲಾಗಿರುತ್ತದೆ. ( ಕರಾವಳಿಯ ನಂದಿಕೂರು ವಿದ್ಯುತ್ ಯೋಜನೆಯಲ್ಲಿಯೂ  ಇದೇ ತಂತ್ರ ಅನುಸರಿಸಲಾಯಿತು)

ಮೂರನೆಯದು, ಸುತ್ತಲಿನ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರಿನ‌ ವ್ಯವಸ್ಥೆ ಮುಂತಾದ ಅಭಿವೃದ್ಧಿ ಕೆಲಸಗಳ ಆಸೆ ತೋರಿಸುವುದು. ಈ ಪರಿಸರ ನಾಶದ ಬೃಹತ್ ಯೋಜನೆ ಇಲ್ಲದೆಯೂ ಅಂತಹ ಅಭಿವೃದ್ಧಿ ಯಾಕೆ ಮಾಡುವುದಿಲ್ಲ? ಎನ್ನುವ ಪ್ರಶ್ನೆಯನ್ನು ಮರೆಮಾಚಲಾಗುತ್ತದೆ.

ಉದಾಹರಣೆಗೆ ಎತ್ತಿನ ಹೊಳೆ ಯೋಜನೆಯಿಂದ ಮಲೆನಾಡಿನ ರಸ್ತೆಯನ್ನೇ ಕಾಣದ ನೂರಾರು ಹಳ್ಳಿಗಳಿಗೆ ರಸ್ತೆ ಆಯಿತು. ಎತ್ತಿನಹೊಳೆ ಯೋಜನೆಯಲ್ಲಿ ಇದುವರೆಗೆ ಆಗಿರುವ ಖರ್ಚು ಹದಿನೇಳು ಸಾವಿರ ಕೋಟಿ, ಇದರಲ್ಲಿ ರಸ್ತೆ ನಿರ್ಮಾಣಕ್ಕೆ ಆದ ಖರ್ಚು ಮುನ್ನೂರು ಕೋಟಿಗೂ ಕಡಿಮೆ. ಅಂದರೆ ಬಹಳ ಸಣ್ಣ ಮೊತ್ತ. ಎತ್ತಿನ ಹೊಳೆ ಯೋಜನೆ ಇಲ್ಲದೆಯೂ ಸರ್ಕಾರ ಈ ರಸ್ತೆ ಗಳನ್ನು ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಯಾಕೆಂದರೆ ಇಂತಹ ಅಭಿವೃದ್ಧಿಯ ಆಮಿಷ ತೋರಿಸಿ ಎತ್ತಿನ ಹೊಳೆ ಯೋಜನೆಗೆ ಬರುವ ವಿರೋಧಗಳನ್ನು ನಿವಾರಿಸಿಕೊಳ್ಳುವುದು ಇವರ ಕಾರ್ಯ ಸೂಚಿಗಳಲ್ಲಿ ಒಂದು.

ಇದಲ್ಲದೆ ಇನ್ನೂ ಜನ ಜನ ಹಲವು ‌ನೇರ ಭ್ರಷ್ಟಾಚಾರದ  ವಿಧಾನಗಳಂತೂ ಇದ್ದೇ ಇದೆ.

ಇಂತಹ ಕಾರ್ಯ ವಿಧಾನಗಳಿಂದ ( ಪ್ರತಿಯೊಂದು ಯೋಜನೆಯಲ್ಲಿ ವಿವರಗಳು ಬೇರೆ ಬೇರೆ ಇರಬಹುದು. ಪರಿಣಾಮ ಇದೇ) ಪರಿಸರ ನಾಶದ ಯೋಜನೆಗಳಿಗೆ ಬರುವ ಅಡ್ಡಿಗಳನ್ನು‌ ನಿವಾರಿಸಿಕೊಳ್ಳಲಾಗಿದೆ ಹಾಗೂ ಪರಿಸರವಾದಿಗಳನ್ನು ಖಳರಾಗಿ, ಜನವಿರೋಧಿಗಳಾಗಿ ಬಿಂಬಿಸಲಾಗಿದೆ.

ಯೋಜನೆಗಳನ್ನು ಹೆಚ್ಚು ಹೆಚ್ಚು ದೊಡ್ಡದಾಗಿಸುವುದು ಯಾವಾಗಲೂ ಉದ್ಯಮಿಗಳಿಗೆ ಮತ್ತು ಅವರ ಕೃಪೆಯಲ್ಲಿರುವ ಆಳುವವರಿಗೆ ಅಚ್ಚುಮೆಚ್ಚು. ಇದರಿಂದ ಅವರಿಗೆ ದೊರೆಯುವ ಲಾಭ ಗರಿಷ್ಟ ಮಾತ್ರ ವಲ್ಲ ದೀರ್ಘ ಕಾಲದ್ದೂ ಆಗಿರುತ್ತದೆ. ಉದಾಹರಣೆಗೆ ಈಗ ನಮ್ಮ ಹೆದ್ದಾರಿ ಯೋಜನೆಗಳನ್ನು ನೋಡಿ.

ಕೆಲವು ಸಲ ನಮ್ಮ ಯೋಜನೆಗಳನ್ನು ನೋಡಿದರೆ ಇವುಗಳನ್ನು ಪರಿಸರನಾಶಕ್ಕಾಗಿಯೇ ಯೋಜಿಸಿದಂತೆ ಇರುತ್ತವೆ. ನಮ್ಮ ಇಂಜಿನಿಯರ್ ಗಳಾಗಲೀ ಯೋಜನಾ ಅಧಿಕಾರಿಗಳಾಗಲೀ ದಡ್ಡರಲ್ಲ. ಅವರಲ್ಲಿ ಕೆಲವರಿಗಾದರೂ ಇದರ ಹಿಂದಿನ ಹುನ್ನಾರ ತಿಳಿದಿರುತ್ತದೆ. ಆದರೆ ಅವರಲ್ಲಿ ಹೆಚ್ಚಿನವರು ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳಲಾರರು. ವಿರೋಧಿಗಳನ್ನು ಹಣಿಯುವುದು ಹೇಗೆ ಎಂದು ಆಳುವವರಿಗೆ ತಿಳಿದಿದೆ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

Related Articles

ಇತ್ತೀಚಿನ ಸುದ್ದಿಗಳು