Friday, June 14, 2024

ಸತ್ಯ | ನ್ಯಾಯ |ಧರ್ಮ

ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೆಸರು ಪ್ರಸ್ತಾಪ

ನವದೆಹಲಿ: ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಅವರ ಹೆಸರನ್ನು, ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸು ಮಾಡುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸಿಜೆಐ ಲಲಿತ್ ಅವರು ಇಂದು ಬೆಳಗ್ಗೆ 10.15ಕ್ಕೆ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಉತ್ತರಾಧಿಕಾರಿಯಾಗಿ ಮುಖ್ಯ ನ್ಯಾಯಮೂರ್ತಿ ನೇಮಕ ಪತ್ರವನ್ನು ಹಸ್ತಾಂತರಿಸಿದ್ದು, ಮುಂದಿನ ನ್ಯಾಯಮೂರ್ತಿಯವರ ಹೆಸರನ್ನು ಘೋಷಿಸಲು ನ್ಯಾಯಾಧೀಶರ ಲಾಂಜ್‌ನಲ್ಲಿ ಸಭೆ ಸೇರುವಂತೆ ಸಿಜೆಐ ಲಲಿತ್ ಅವರು ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು.

ಸಿಜೆಐ ಲಲಿತ್ ಅವರು ನವೆಂಬರ್ 8ರಂದು ನಿವೃತ್ತಿ ಹೊಂದಲಿದ್ದಾರೆ. ಇತ್ತೀಚೆಗೆ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಸಿಜೆಐಗೆ ಪತ್ರ ಬರೆದಿದ್ದರು.

CJI ಲಲಿತ್ ಅವರ ಪ್ರಸ್ತಾವನೆಯನ್ನು ಕೇಂದ್ರವು ಒಪ್ಪಿಕೊಂಡರೆ, ನ್ಯಾಯಮೂರ್ತಿ ಚಂದ್ರಚೂಡ್ ಅವರು ನವೆಂಬರ್ 10, 2024ರವರೆಗೆ ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಎರಡು ವರ್ಷಗಳ ಅವಧಿಯನ್ನು ಹೊಂದಿರುತ್ತಾರೆ – ಹೀಗಾಗಿ ಇತ್ತೀಚಿನ ದಿನಗಳಲ್ಲಿ ನ್ಯಾಯಮೂರ್ತಿಯೊಬ್ಬರಿಗೆ ಸಿಗುತ್ತಿರುವ ದೀರ್ಘಾವಧಿಯ ಸೇವಾವಧಿಯಾಗಿದೆ.

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಕಿರು ಪರಿಚಯ

ನ್ಯಾಯಮೂರ್ತಿ ಚಂದ್ರಚೂಡ್ ಅವರು ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ  ಬಿಎ ಮತ್ತು ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಕಾನೂನು ಕೇಂದ್ರದಿಂದ ಎಲ್ಎಲ್‌ಬಿ ಅಧ್ಯಯನ ಮಾಡಿದ್ದು, USA ನ ಹಾರ್ವರ್ಡ್ ಲಾ ಸ್ಕೂಲ್‌ನಿಂದ ತಮ್ಮ LLM ಪದವಿ ಮತ್ತು ನ್ಯಾಯಾಂಗ ವಿಜ್ಞಾನದಲ್ಲಿ (SJD) ಡಾಕ್ಟರೇಟ್ ಅನ್ನು ಪೂರ್ಣಗೊಳಿಸಿದ್ದಾರೆ.

ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಮತ್ತು ಒಕ್ಲಹೋಮ ಯೂನಿವರ್ಸಿಟಿ ಸ್ಕೂಲ್ ಆಫ್ ಲಾ, USA ನಲ್ಲಿ ತುಲನಾತ್ಮಕ ಸಾಂವಿಧಾನಿಕ ಕಾನೂನಿನ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಚಂದ್ರಚೂಡ್ ಅವರು, ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿ, ಜೂನ್ 1998 ರಲ್ಲಿ ಬಾಂಬೆ ಹೈಕೋರ್ಟ್‌ನಿಂದ ಹಿರಿಯ ವಕೀಲರಾಗಿ ನೇಮಕಗೊಂಡರು.1998 ರಿಂದ ನ್ಯಾಯಾಧೀಶರಾಗಿ ನೇಮಕಗೊಳ್ಳುವವರೆಗೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕೂಡ ನೇಮಕಗೊಂಡಿದ್ದರು.

ಚಂದ್ರಚೂಡ್ ಅವರು, ಮಾರ್ಚ್ 2000 ರಲ್ಲಿ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾದರು. ಅಕ್ಟೋಬರ್ 2013 ರಲ್ಲಿ ಅವರು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಇವರು, ಮೇ 2016 ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು