Thursday, June 20, 2024

ಸತ್ಯ | ನ್ಯಾಯ |ಧರ್ಮ

ದ No Intelligenceಮತ್ತು ಓಡಿಶಾ AI ಆಂಕರ್!!


ನಿನ್ನೆಯಿಂದ ಮಾಧ್ಯಮಗಳಲ್ಲಿ ಓಡಿಶಾದ ಪತ್ರಿಕಾಬಳಗವೊಂದು ಸುದ್ದಿ ಓದಬಲ್ಲ ಆಂಕರ್ ರೂಪವೊಂದನ್ನು ಸ್ಥಾಪಿಸಿದೆ ಎಂಬ ಸುದ್ದಿ ಭರ್ಜರಿಯಾಗಿ ಓಡಾಡುತ್ತಿದೆ. ಹಲವು ಪತ್ರಿಕೆಗಳು ಮುಖಪುಟದಲ್ಲೇ ಇದನ್ನು ಪ್ರಕಟಿಸಿಕೊಂಡಿವೆ. ಇದು ಒಟ್ಟಾರೆಯಾಗಿ ನಮ್ಮ ದೇಶದ ಮಾಧ್ಯಮಗಳ “ಬುದ್ಧಿಮತ್ತೆ”ಗೆ ಹಿಡಿದ ಕನ್ನಡಿ.
ನಲ್ವತ್ತು ವರ್ಷ ಹಿಂದೆ ಕಂಪ್ಯೂಟರು‌ಗಳು ಆಗಷ್ಟೇ ಭಾರತದಲ್ಲಿ ಕಾಲೂರತೊಡಗಿದ್ದಾಗ, ಕ್ಯಾಲ್ಕ್ಯುಲೇಟರ್‌ಗಳೇ ಊರತುಂಬೆಲ್ಲ ಕಂಪ್ಯೂಟರ್‌ಗಳಾಗಿದ್ದವು! ಸರಳವಾಗಿ, ಅರ್ಥ ಆಗುವಂತೆ ಹೇಳಬೇಕೆಂದರೆ, ಈಗ ಓಡಿಶಾದ ಪತ್ರಿಕಾ ಬಳಗ ಮಾಡಿರುವುದು ಅಷ್ಟೇ ಗಾತ್ರದ ಕೆಲಸ.


ಮಾಧ್ಯಮಗಳಲ್ಲಿ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಯಾವಾಗ ಬಂದಂತಾಗುತ್ತದೆ? ಮಾನವ ಸಂಪರ್ಕ ಇಲ್ಲದೇ (ಅರ್ಥಾತ್ ಸುದ್ದಿ ಡೆಸ್ಕ್ ಇಲ್ಲದೆ) ಯಾವ ಸುದ್ದಿ ಆಯ್ಕೆ ಮಾಡಬೇಕು, ಅದರ ವೇಯ್ಟೇಜ್ ಏನು, ಎಷ್ಟು ಕವರೇಜ್ ಎಂದೆಲ್ಲ ನಿರ್ಧರಿಸಿ, ಆ ಬಳಿಕ ಆ ಸುದ್ದಿಯನ್ನು “ಬಾಟ್ ಮುಖ ಆಂಕರ್” ಓದಿದ ದಿನ ಮಾಧ್ಯಮಗಳಿಗೆ AI ಬಂತು ಅಂತ ಲೆಕ್ಕ.


ಕಳೆದ 10-20 ವರ್ಷಗಳಿಂದ ನಿಮ್ಮ ಆಸ್ಪತ್ರೆಯಲ್ಲೋ ಹೊಟೇಲಿನಲ್ಲೋ ಟೋಕನ್ ನಂಬರ್ ಡಿಸ್‌ಪ್ಲೇ ಮಾಡಿ ಓದಿ ಹೇಳುವ, ಟೆಲಿಫೋನಿನಲ್ಲಿ ಒಂದು ಒತ್ತಿ, ಎರಡು ಒತ್ತಿ ಎಂದು ಉಲಿಯುವ IVR ವ್ಯವಸ್ಥೆಯ ಸ್ವಲ್ಪ ಸುಧಾರಿತ ರೂಪ ಇದು ಅಷ್ಟೇ. ನಿಮ್ಮ ಐಫೋನಿನಲ್ಲಿರುವ ಸಿರಿ, ಮನೆಯಲ್ಲಿರುವ ಅಲೆಕ್ಸಾ ಇತ್ಯಾದಿ BOTಗಳು ಕೂಡ ಪ್ರಾಥಮಿಕ AI ಪ್ರಯತ್ನಗಳು. ಅವನ್ನು Narrow AI ಎಂದು ಕರೆಯಬಹುದು.


ಈ ಪ್ರಕರಣದಲ್ಲಿ ಸುದ್ದಿ ಡೆಸ್ಕ್ ಸಿದ್ಧಪಡಿಸಿಕೊಟ್ಟ ಸುದ್ದಿಯನ್ನು ಓದಬಲ್ಲ ವ್ಯವಸ್ಥೆಯನ್ನೂ ಮತ್ತು ಅದಕ್ಕೆ ಲಿಪ್ ಸಿಂಕ್ ಮಾಡಬಲ್ಲ ಗ್ರಾಫಿಕ್ಸನ್ನು ಒಟ್ಟಿಗಿಟ್ಟು ಆ ಸಂಸ್ಥೆ ಅದು AI ಎಂದು ಹೇಳಿದಂತಿದೆ. ಅದಕ್ಕೆ ಎಲ್ಲ ಮಾಧ್ಯಮಗಳೂ ಯಾವುದೇ ಪ್ರಶ್ನೆ ಎತ್ತದೆ “ಹೌದಪ್ಪ ವರದಿ” ಪ್ರಕಟಿಸಿದಂತಿದೆ. ಈಗಾಗಲೇ 2018 ರಲ್ಲಿ ಚೀನಾದಲ್ಲಿ, ಭಾರತದಲ್ಲೇ ಇಂಡಿಯಾಟುಡೇ ಬಳಗದಲ್ಲಿ ಈ ತಂತ್ರ ಬಳಕೆ ಆಗಿದೆ. ನಮ್ಮಲ್ಲಿ ಹೆಚ್ಚಿನವರ ಸ್ಮಾರ್ಟ್ ಫೋನ್‌ಗಳಲ್ಲೂ ಈ “ಓದು” ಸೌಲಭ್ಯ ಈಗಾಗಲೇ ಇದೆ. ಬಹುತೇಕ ಕಂಪನಿಗಳ ವರ್ಚುವಲ್ ಅಸಿಸ್ಟಂಟ್ BOTಗಳೂ ಮಾತಾಡಬಲ್ಲವು.


ನನಗೆ ಇರುವ ಮಾಹಿತಿಯಂತೆ, ಭಾರತೀಯ ಮಾಧ್ಯಮಗಳಲ್ಲಿ ಈಗಾಗಲೇ ಲಭ್ಯ ಇರುವ ತಂತ್ರಜ್ಞಾನವನ್ನೇ ಸುದ್ದಿಮನೆ ಆಟೊಮೇಷನ್‌ಗೆ ಬಳಸಲು ಸಾಧ್ಯವಾಗಿಲ್ಲ. ಭಾಷಾಂತರಕ್ಕೆ ಇಂದು ಅತ್ಯಂತ ಪರಿಣಾಮಕಾರಿ ಕ್ಯಾಟ್ ಟೂಲುಗಳು ಲಭ್ಯವಿವೆ. ಅವು ಬಂದು 15 ವರ್ಷ ಆಯಿತು. ಭಾರತದಲ್ಲಿ ಯಾವುದೇ ಪತ್ರಿಕಾಸಂಸ್ಥೆ ಅದನ್ನು ಬಳಸಿರುವುದು ಇಲ್ಲಿಯ ತನಕ ನಾನು ಕಂಡಿಲ್ಲ. ಅದನ್ನು ಬಳಸಿದ್ದರೆ, ಈ ಹೊತ್ತಿಗೆ ಮುಕ್ಕಾಲು ಭಾಗ ಸುದ್ದಿ ಡೆಸ್ಕ್ ಕೆಲಸ ಮಾಯವಾಗಿರುತ್ತಿತ್ತು! ಈಗ ಈ ಕ್ಯಾಟ್ ಟೂಲ್‌ಗಳಿಗೆ ಮಷೀನ್ ಲರ್ನಿಂಗ್ ಅಭ್ಯಾಸ ಮಾಡಿಸಲಾಗುತ್ತಿದೆ, ಅದರ ಸುಧಾರಿತ ರೂಪಗಳು ಹೊರಬರುತ್ತಿವೆ. ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆದರೆ, ವರ್ನಾಕ್ಯುಲರ್ ಪತ್ರಿಕೆಗಳಲ್ಲಿ ಭಾಷಾಂತರ ಮಾಡಬಲ್ಲ ಉಪಸಂಪಾದಕರು ಅಗತ್ಯವೇ ಇರುವುದಿಲ್ಲ!


ತಂತ್ರಜ್ಞಾನ ಬೆಳೆಯತೊಡಗಿದಾಗ ಯಾವುದನ್ನು ಎಲ್ಲಿಟ್ಟು ನೋಡಬೇಕು ಎಂದು ಕಲ್ಪನೆ ಇಲ್ಲದ ಪತ್ರಕರ್ತರು, ಜಗತ್ತಿಗಿಂತ ನಾವು ಯಾವತ್ತೂ ಒಂದು ಹೆಜ್ಜೆ ಮುಂದೆ ಎಂದು ಹೇಳುವ ಸ್ಥಿತಿಯಲ್ಲಿ ಈವತ್ತು ಉಳಿದಿಲ್ಲ ಎಂಬುದಕ್ಕೆ ಒಳ್ಳೆಯ ನಿದರ್ಶನ ಇದು!!

Rajaram Talluru

Related Articles

ಇತ್ತೀಚಿನ ಸುದ್ದಿಗಳು