Sunday, June 16, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ಶಾಲೆಗಳ ದುಸ್ಥಿತಿ ಜೆಸಿಬಿ ಪಕ್ಷಗಳ ಕೊಡುಗೆ : KRS ಪಕ್ಷ

ದಿನಪತ್ರಿಕೆಯೊಂದರ ಮಾಹಿತಿ ಪ್ರಕಾರ ರಾಜ್ಯದಲ್ಲಿ 48,285 ಸರ್ಕಾರಿ ಶಾಲೆಗಳಿದ್ದು, ಅದರಲ್ಲಿ 17,258 ಕೊಠಡಿಗಳ ಕೊರತೆ ಇದೆ. ಏಳು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಾಲಾ ಕೊಠಡಿಗಳ ಅಗತ್ಯವಿದೆ. ಸರ್ಕಾರಿ ಶಾಲೆಯ ಮಕ್ಕಳು, ಬೇಸಿಗೆಯಲ್ಲಿ ಬೇಯುತ್ತಾ, ಮಳೆಗಾಲದಲ್ಲಿ ನೆನೆಯುತ್ತಾ, ಚಳಿಗಾಲದಲ್ಲಿ ನಡುಗುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಹ ದುಸ್ಥಿತಿಗೆ ನೇರವಾಗಿ ರಾಜ್ಯದಲ್ಲಿ ಈವರೆಗೆ ಆಡಳಿತ ನಡೆಸಿದ ಜೆಸಿಬಿ ಪಕ್ಷಗಳೇ (ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ) ಕಾರಣ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಗಂಭೀರವಾಗಿ ಆರೋಪಿಸಿದೆ.

ಶಾಲಾ ಕೊಠಡಿಗಳ ಕೊರತೆಯಿಂದಾಗಿ ಸರ್ಕಾರಿ ಶಾಲೆಯ ಮಕ್ಕಳು, ಬೇಸಿಗೆಯಲ್ಲಿ ಬೇಯುತ್ತಾ, ಮಳೆಗಾಲದಲ್ಲಿ ನೆನೆಯುತ್ತಾ, ಚಳಿಗಾಲದಲ್ಲಿ ನಡುಗುತ್ತಾ ವಿದ್ಯಾಭ್ಯಾಸ ಮಾಡುತ್ತಿರುವುದು ಕನ್ನಡ ನಾಡು-ನುಡಿಯ ಕುರಿತು ಉದ್ದುದ್ದ ಭಾಷಣ ಮಾಡುವ ನಮ್ಮ ರಾಜಕಾರಣಿಗಳು, ಸಾಹಿತಿಗಳು, ಹೋರಾಟಗಾರರು ಸರ್ಕಾರಿ ಶಾಲೆಗಳ ಕುರಿತು ದಿವ್ಯ ನಿರ್ಲಕ್ಷ್ಯ ತಾಳಿರುವುದು ಎದ್ದು ಕಾಣುತ್ತದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್ ಜೀವನ್ ಆರೋಪಿಸಿದ್ದಾರೆ.

ನಾನು ಗ್ರಾಮ ಪಂಚಾಯಿತಿ ಸದಸ್ಯನಾದರೆ, ಅಧ್ಯಕ್ಷನಾದರೆ, ಶಾಸಕನಾದರೆ, ಸಚಿವನಾದರೆ ರಾಜ್ಯವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸುತ್ತೇನೆ. ಹೀಗಾಗಿ ನನಗೆ ಓಟು ಹಾಕಿಯೆಂದು ಕೇಳುವ ಜೆಸಿಬಿ ಪಕ್ಷದ ರಾಜಕಾರಣಿಗಳಿಗೆ ತಮ್ಮದೇ ಊರುಗಳಲ್ಲಿರುವ ಸರ್ಕಾರಿ ಶಾಲೆಗಳತ್ತ ಮುಖ ಎತ್ತಿ ನೋಡುವುದಿಲ್ಲ.

ಹಾಗೆಯೇ ನಮ್ಮ ಸಾಹಿತಿಗಳು, ಬುದ್ಧಿಜೀವಿಗಳು ಅಧಿಕಾರ, ಅಂತಸ್ತು, ಪ್ರಶಸ್ತಿಗಳಿಗಾಗಿ ತಮ್ಮ ಇಡೀ ಸಾಹಿತ್ಯವನ್ನು ಮುಡಿಪಾಗಿಟ್ಟಂತೆ ಕಾಣುತ್ತದೆ. ಇಲ್ಲದಿದ್ದರೆ, ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಕಂಡೂ ಕಾಣದಂತೆ ಕುರುಡಾಗಿ ಇರುತ್ತಿರಲಿಲ್ಲ. ನವೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಮಾಡುವ ನಮ್ಮ ಸಂಘಟನೆಗಳು, ನಾವು ವಿದ್ಯಾಭ್ಯಾಸ ಮಾಡಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸ್ವಲ್ಪ ಕಾಳಜಿ ವಹಿಸಿ, ಅಂದೋಲನದ ರೀತಿಯಲ್ಲಿ ಜಾಗೃತಿ ಮೂಡಿಸಿದರೆ ಸರ್ಕಾರಿ ಶಾಲೆಗಳು ಸುಧಾರಣೆಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದ್ದಾರೆ.

ಹೀಗೆ ಸರ್ಕಾರಿ ಶಾಲೆಗಳ ಈ ದುಸ್ಥಿತಿಗೆ ಪ್ರತಿಯೊಬ್ಬರ ನಿರ್ಲಕ್ಷ್ಯ, ಉದಾಸೀನತೆಯೇ ಕಾರಣವಾಗಿದೆ. ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ನವಂಬರ್ ತಿಂಗಳಿನಲ್ಲಿ ಕನ್ನಡ ಶಾಲೆಗಳ ವಾಸ್ತವ ಪರಿಸ್ಥಿತಿ ಅನಾವರಣ ಅಭಿಯಾನವನ್ನು ರಾಜ್ಯಾದ್ಯಂತ ಮಾಡಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ, ಡಿ ಡಿ ಪಿ ಐ ಹಾಗೂ ಬಿಇಓ ಗಳಿಗೆ ಶಾಲೆಗಳ ಪರಿಸ್ಥಿತಿಯ ಬಗ್ಗೆ ತಿಳಿಸಲಾಗಿದೆ.

ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಕೊಟ್ಟಡಿಗಳು ಇಲ್ಲದೆ ಇರುವುದು, ಶಿಕ್ಷಕರ ಕೊರತೆ, ಶಾಲೆಗಳ ಶೌಚಾಲಯ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಮುಂತಾದವುಗಳ ಬಗ್ಗೆ ಗಂಭೀರವಾಗಿ ಯೋಚಿಸಿ ಕ್ರಮ ಕೈಗೊಳ್ಳಬೇಕು ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು KRS ಪಕ್ಷ ಸರ್ಕಾರವನ್ನು ಆಗ್ರಹಿಸಿದೆ.

Related Articles

ಇತ್ತೀಚಿನ ಸುದ್ದಿಗಳು