Sunday, June 16, 2024

ಸತ್ಯ | ನ್ಯಾಯ |ಧರ್ಮ

ದಲಿತರು ಬಿಜೆಪಿಯಿಂದ ದೂರ ಉಳಿವುದೇ ಈ ಹೊತ್ತಿನ ರಾಜಕೀಯ ಮೌಲ್ಯ

2013 ರ ಚುನಾವಣೆಯಲ್ಲಿ  ಅಧಿಕಾರಕ್ಕೆ ಬಂದ  ಕಾಂಗ್ರೆಸ್  ಸರ್ಕಾರದ  ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಕೊಟ್ಟ ಕೊಡುಗೆ ಕಡಿಮೆಯೇನಲ್ಲ. ಆದರೆ ಧರ್ಮ, ದೇವರು ಎಂಬ ಭಾವನಾತ್ಮಕ ಸಂಗತಿಗಳ ಸಮೂಹ ಸನ್ನಿಗೆ ಒಳಗಾದ ದಲಿತ ಸಮುದಾಯ ಬಿಜೆಪಿಯನ್ನು ಹಿಂಬಾಲಿಸಿದ್ದು ವಿಪರ್ಯಾಸ. ಸರ್ಕಾರದ ಕೊನೆ ದಿನದಲ್ಲಿ ಒಳಮೀಸಲಾತಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರಿರುವ ಬಿಜೆಪಿ ದಲಿತ ಸಮುದಾಯವನ್ನು ನಿರ್ಲಜ್ಜತನದಿಂದ ವಂಚಿಸಿರುವುದನ್ನು ದಲಿತ ಸಮುದಾಯ ಅರ್ಥಮಾಡಿಕೊಳ್ಳಬೇಕು, ಯೋಚಿಸಿ ಮತಚಲಾಯಿಸಬೇಕು – ಎನ್‌ ರವಿಕುಮಾರ್

ಬಿಜೆಪಿ  ಅಭ್ಯರ್ಥಿಯಾಗಿರುವ, ಕೊಲೆ, ಸುಲಿಗೆ, ವಂಚನೆಯಂತಹ ಡಜನ್ ಗಟ್ಟಲೆ ಗಂಭೀರ ಕ್ರಿಮಿನಲ್ ಕೇಸುಗಳನ್ನು ಹೊಂದಿರುವ ಮಣಿಕಂಠ ರಾಥೋಡ್  ಭಾರತೀಯ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂಬ ಉನ್ನತ ಪಟ್ಟದಲ್ಲಿ ಕುಳಿತಿರುವ ಕರ್ನಾಟಕದ ಹಿರಿಯ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆ ಅವರ ಕಟುಂಬವನ್ನೆ ಮುಗಿಸಿಬಿಡುತ್ತೇನೆ ಎಂದು  ಘೋಷಿಸುತ್ತಾನೆ.  ಈ ಸಂಬಂಧ ಬಹಿರಂಗವಾಗಿರುವ ಆಡಿಯೋವೇ ನಕಲಿ ಎಂದು ಈ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ, ಬಿಜೆಪಿ ಸಂಘಟನಾ ಕಾರ್ಯದರ್ಶಿ, ಕರ್ನಾಟಕದ ಬಿಜೆಪಿಯ ಸಮಸ್ತ ರಾಜಕೀಯ ವ್ಯವಹಾರಗಳನ್ನು ಬೆರಳ ತುದಿಯಲ್ಲಿ ಆಡಿಸುತ್ತಿರುವ ಬಿ.ಎಲ್ ಸಂತೋಷ್, ಖರ್ಗೆ ಅವರ ಕುಟುಂಬದ ಕೊಲೆಗೆ ಸಂಚು ಎಂಬ ಆರೋಪವನ್ನು “ಹತಾಶೆ”ಯದ್ದೆಂದು ಲೇವಡಿ ಮಾಡಿ ಟ್ವೀಟ್ ಮಾಡುತ್ತಾರೆ. ಎಂದರೆ ಖರ್ಗೆ ಎಂಬ ಈ ರಾಷ್ಟ್ರದ ಹಿರಿಯ ನಾಯಕ ಮತ್ತವರ ಕುಟುಂಬದ ಜೀವ ಎಷ್ಟೊಂದು ಅಗ್ಗ-ಹಗುರ ಎಂದು ಬಿಜೆಪಿ ನಾಯಕರು ಭಾವಿಸಿದ್ದಾರೆ ಎಂಬುದನ್ನು  ಯೋಚಿಸಬೇಕು.

ಇದೇ ಮೋದಿ ಹಿಂದೊಮ್ಮೆ ತಾವು ಹಿಂದುಳಿದ ವರ್ಗದ ನಾಯಕನೆಂಬ ಕಾರಣಕ್ಕೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ. ಇದು ಸಮಸ್ತ ಹಿಂದುಳಿದ ವರ್ಗಗಳಿಗೆ ಮಾಡಿದ ಘೋರ ಅವಮಾನ ಎಂದು ಚೀರಿಕೊಂಡಿದ್ದು ಯಾರಿಗಾದರೂ ನೆನಪಿರಬಹುದು.  ವಾರದೊಪ್ಪತ್ತಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ವಿಷದ ಹಾವಿಗೆ ಹೋಲಿಸಿದರೆಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಷ್ಟೆಲ್ಲಾ ಎಳೆದಾಡಿದ, ನಿಂದಿಸಿದ, ಖಂಡಿಸಿದ ಭಕ್ತರಿರಲಿ, ಸ್ವತಃ ಮೋದಿ ಅವರೆ ರಾಜ್ಯಕ್ಕೆ ಬಂದು ನನ್ನನ್ನು ಖರ್ಗೆ ಬೈಯ್ದರು, ಆಡಿದರು ಎಂದು ಗೋಳಾಡಿದರು. ತನಗೆ ಬೈಯ್ದ ಬೈಗುಳಗಳನ್ನು ದೇಶಕ್ಕೆ ಲೇಪಿಸಿದರು. ಪ್ರಚೋದಿಸಿದರು. ರಾಜಕೀಯ ಮೌಲ್ಯಗಳು, ಭಾಷೆಯ ಸಂಸ್ಕಾರಗಳನ್ನು  ಖರ್ಗೆ ಅವರಿಗೆ ಬೋಧಿಸಲಾಯಿತು. ಕಾಂಗ್ರೆಸ್ಸಿಗ ರು ನನಗೆ 91  ಬಾರಿ ನಿಂದಿಸಿದ್ದಾರೆಂದು ಚಿತ್ರಗುಪ್ತನ ಲೆಕ್ಕವಿಟ್ಟರು. ಸೋಷಿಯಲ್ ಮೀಡಿಯಾಗಳಲ್ಲಿ ಖರ್ಗೆ ಅವರನ್ನು ದಿನಮಾತ್ರದೊಳಗೆ ಖಳನಾಯಕನಂತೆ ಬಿಂಬಿಸಲಾಯಿತು. ಅಷ್ಟೇ ಅಲ್ಲ, ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌  ಹೇಗೆಲ್ಲಾ ಅವಮಾನ ಮಾಡಿದೆ ಎಂದು ಕಪೋಲಕಲ್ಪಿತವಾಗಿ ವಾಗ್ಝರಿ ಸುರಿಸಿದರು.

 ಅದೇ ಮೋದಿ ಮತ್ತವರ ಪರಿವಾರದ ಪುಂಡರು ನಿಜವಾದ ಅಂಬೇಡ್ಕರ್ ವಾದಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸುತ್ತಿರುವುದು, ನಿಂದಿಸುತ್ತಿರುವುದು ಅದು ದಲಿತ ಸಮುದಾಯಕ್ಕೆ, ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಆಗುವುದಿಲ್ಲವೆ? ಎಂಬುದಕ್ಕೆ ಯಾರಾದರೂ ಉತ್ತರ ಕೊಡಬಹುದಾ?

ಮಲ್ಲಿಕಾರ್ಜುನ ಖರ್ಗೆ ಜಾತಿಯ ಅವಮಾನ ಮತ್ತು ಹಿಂಸೆಯ  ಕುಲುಮೆಯಿಂದ ಎದ್ದು ಬಂದ, ರಾಷ್ಟ್ರಮಟ್ಟದವರೆಗೆ ಬೆಳೆದು ನಿಂತ  ದಲಿತ ನಾಯಕ ಎಂಬುದನ್ನು ಮೋದಿ ಮತ್ತವರ ಬಿಜೆಪಿ ಪಕ್ಷ ಮರೆತು ದಾಳಿ ನಡೆಸುತ್ತಿರುವುದು  ದಲಿತ ಸಮುದಾಯದ ಮೇಲಿನ ರಾಜಕೀಯ ಮತ್ತು ಸಾಮಾಜಿಕ ಹಲ್ಲೆ ಎಂದಾಗುವುದಿಲ್ಲವೆ? ದಲಿತರನ್ನು ಸುಲಿದು, ಶೋಷಿಸಿ, ಕೊಂದು ದಕ್ಕಿಸಿ ಕೊಳ್ಳಬಹುದೆಂಬ ಪರಂಪರಾಗತ ಮನೋಭಾವದ ರಾಕ್ಷಸ  ಈಗ ಇನ್ನಷ್ಟು ದಷ್ಟಪುಷ್ಟವಾಗಿ ವಿಜೃಂಭಿಸುತ್ತಿರುವುದಕ್ಕೆ ಖರ್ಗೆ ಮತ್ತವರ ಕುಟುಂಬವನ್ನು ಮುಗಿಸಿಬಿಡುತ್ತೇನೆ ಎಂದ ತಮ್ಮ ಪಕ್ಷದ ಕ್ರಿಮಿನಲ್ ಅಭ್ಯರ್ಥಿಯನ್ನು  ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಯ ವಿಕೃತ ಸಂಸ್ಕಾರವೇ ಸಾಕ್ಷಿ.

ದಲಿತರು ಎಷ್ಟೇ ಎತ್ತರದ ಸ್ಥಾನ-ಮಾನದಲ್ಲಿದ್ದರೂ ಅವರು ಆರಂಭಕ್ಕೂ –ಅಂತ್ಯಕ್ಕೂ ದಲಿತರೇ ಆಗಿರುತ್ತಾರೆ. ಈ ಸಮಾಜ ಅವರನ್ನು ಹಾಗೆಯೇ ನೋಡುತ್ತದೆ, ನಡೆದುಕೊಳ್ಳುತ್ತದೆ. ದಲಿತರ ಮೊದಲ ಶತ್ರು ಮನುಸಿದ್ಧಾಂತದ ನೆಲೆಗಟ್ಟಿನಲ್ಲಿ ರಾಜಕೀಯ ರೂಪವಾಗಿರುವ ಬಿಜೆಪಿ ಎಂಬುದನ್ನು ದಲಿತರು ಅರಿತುಕೊಳ್ಳುವುದರಲ್ಲಿ ವಿಫಲರಾಗಿರುವುದು ಮತ್ತು ಅಂಬೇಡ್ಕರ್ ಅವರ ವಿಚಾರಧಾರೆ. ಹೋರಾಟಗಳಿಂದ ವಿಮುಖವಾಗಿರುವುದರಿಂದಲೆ ಖರ್ಗೆಯಂತ ಹಿರಿಯ ದಲಿತ ನಾಯಕನನ್ನು ಬಿಜೆಪಿ ಹೆಜ್ಜೆ ಹೆಜ್ಜೆಗೂ ಅವಮಾನಿಸುವ ದಾಷ್ಟ್ಯ ತೋರುತ್ತಿದೆ. ಖರ್ಗೆ ಅವರಿಗೆ ಮಾಡುತ್ತಿರುವ ಅವಮಾನ  ಬಿಜೆಪಿಯಲ್ಲಿರುವ ದಲಿತರೆ ಆದ ಗೋವಿಂದ ಕಾರಜೋಳ, ಶ್ರೀನಿವಾಸ್ ಪ್ರಸಾದ್, ರಮೇಶ್ ಜಿಗಜಿಣಗಿಯಂತ ನಾಯಕರಿಗೆ ಏನೂ ಅನಿಸುವುದಿಲ್ಲ ಎಂದಾದರೆ ಅವರ ಸಂವೇದನೆ ಗೆ ತುಕ್ಕು ಹಿಡಿದಿರಬಹುದು.

ಬಿಜೆಪಿ ರಾಜ್ಯದಲ್ಲಿ ದಷ್ಟ-ಪುಷ್ಟಗೊಳ್ಳಲು ದಲಿತರದ್ದೂ ಪಾಲಿದೆ. ಹಿಂದೂತ್ವದ ಅಮಲಿಗೆ ಬಿದ್ದ ದಲಿತರು ಬಿಜೆಪಿಯ ಕಾಲಾಳುಗಳಾಗಿ, ರಾಜಕೀಯ ಗುಲಾಮಗಿರಿಯಲ್ಲಿ ತೊಡಗಿರುವುದು ಇದಕ್ಕೆ ಕಾರಣ. ಬಿಜೆಪಿ ನಾಯಕರುಗಳೇ ಸಂವಿಧಾನ ಬದಲಾವಣೆಯಂತ ಘೋಷಣೆಗಳನ್ನು ಕೂಗುತ್ತಿದ್ದರೂ ಬಿಜೆಪಿಯಲ್ಲಿನ  ದಲಿತರು ಮಾತ್ರ  ಕಿವಿಗಳಿಗೆ ಕಾದ ಸೀಸ ಸುರಿದು ಕಿವುಡಾದವರಂತೆ ಇದ್ದಾರೆ. ದಲಿತರು ಮತ್ತು ದಲಿತರ ಹೆಸರಿನಲ್ಲಿನ ರಾಜಕೀಯ ಶಕ್ತಿಗಳು ಅಂಬೇಡ್ಕರ್ ಅವರ ಸೈದ್ಧಾಂತಿಕತೆ ವಿರುದ್ಧವಾದ ಸಿದ್ಧಾಂತದ ಬಿಜೆಪಿಯ ಜೊತೆಗೆ ಕೈಜೋಡಿಸಿರುವುದು ಅತ್ಯಂತ ಅಪಾಯಕಾರಿ  ಸ್ಥಿತಿ.

 ಕರ್ನಾಟಕದ ಜನಸಂಖ್ಯೆಯಲ್ಲಿ ದಲಿತರೇ ನಂಬರ್ ಒನ್. ಪರಂಪರಾಗತವಾಗಿ ಕಾಂಗ್ರೆಸ್ ನ  ಓಟು ಬ್ಯಾಂಕ್ ಆಗಿಯೇ ಇದ್ದ ದಲಿತರಿಗೆ ಸಾಮಾಜಿಕ ನ್ಯಾಯ ಎಂಬುದು ಮೀಸಲು ಕ್ಷೇತ್ರಗಳ ಕಾರಣಕ್ಕಷ್ಟೆ ಸೀಮಿತವಾಗಿದೆ ವಿನಃ, ಮುಖ್ಯಮಂತ್ರಿ ಪದವಿ ಎಂಬುದು ಕನ್ನಡಿಯೊಳಗಿನ ಗಂಟಷ್ಟೆ. 90 ರ ದಶಕದಲ್ಲಿ  ಕರ್ನಾಟಕದಲ್ಲೂ ದಲಿತ ರಾಜಕೀಯ ಅಸ್ಮಿತೆಯ ಬಹುಜನಸಮಾಜ ಪಕ್ಷ(ಬಿಎಸ್ಪಿ)  ಸಂಚಲನ ಮೂಡಿಸಿತ್ತು. ಸಾಂಪ್ರದಾಯಿಕ ಕಾಂಗ್ರೆಸ್ ನ ತೆಕ್ಕೆಯಿಂದ ಹಳೆ ಮೈಸೂರು ಮತ್ತು ಉತ್ತರಕರ್ನಾಟಕದ ಕೆಲವು ಭಾಗಗಳಲ್ಲಿ ಬಿಎಸ್ಪಿ ತೆಕ್ಕೆಗೆ  ಸಾಮೂಹಿಕವಾಗಿ ಸರಿದ ದಲಿತರು ಸ್ವಾಭಿಮಾನಿ ರಾಜಕಾರಣವನ್ನು ನೆಲೆಗೊಳಿಸುವ ಹೊತ್ತಿನಲ್ಲೆ ಬಿಎಸ್ಪಿ ಉತ್ತರ ಪ್ರದೇಶದಲ್ಲಿ  ಸೈದ್ಧಾಂತಿಕ ವಿರೋಧಿಯಾದ ಬಿಜೆಪಿಯ ಸಖ್ಯ ಮಾಡಿದ್ದು  ಆಘಾತಕಾರಿಯಾದದ್ದು. ಇದು ಕರ್ನಾಟಕದಲ್ಲಿ  ದಲಿತರ ರಾಜಕೀಯ ಓಟಕ್ಕೆ ಹಿನ್ನಡೆ ಆಯಿತೆನ್ನಬಹುದು.  1999 ರಲ್ಲಿ ಕಾಂಗ್ರೆಸ್ ಗೆ ಮರಳಿದ ದಲಿತರು 2004 ರ ಚುನಾವಣೆಯ ಹೊತ್ತಿಗೆ  ಬಿಜೆಪಿ ಕಡೆಗೆ ಮುಖಮಾಡಿದ್ದರು. ದಲಿತರು ಹೆಚ್ಚು ಇಷ್ಟ ಪಡುತ್ತಿದ್ದ ಹಿಂದುಳಿದ ವರ್ಗದ ಎಸ್. ಬಂಗಾರಪ್ಪನವರು ಬಿಜೆಪಿಗೆ ಸೇರಿದ್ದು ಅವರನ್ನು ಹಿಂಬಾಲಿಸಿದ ದಲಿತರು  ಬಂಗಾರಪ್ಪ ಅವರು ಬಿಜೆಪಿಯಿಂದ ಹೊರಬಂದರೂ  ದಲಿತರು, ಹಿಂದುಳಿದ ವರ್ಗಗಳು ಅಲ್ಲಿಯೇ ಉಳಿದು ಬಿಜೆಪಿಗೆ ಕೂಲಿಯಾಳುಗಳಾಗಿದ್ದಾರೆ. 

2013 ರ ಚುನಾವಣೆಯಲ್ಲಿ  ಅಧಿಕಾರಕ್ಕೆ ಬಂದ  ಕಾಂಗ್ರೆಸ್  ಸರ್ಕಾರದ  ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಕೊಟ್ಟ ಕೊಡುಗೆ ಕಡಿಮೆಯೇನಲ್ಲ. ಆದರೆ ಧರ್ಮ, ದೇವರು ಎಂಬ ಭಾವನಾತ್ಮಕ ಸಂಗತಿಗಳ ಸಮೂಹ ಸನ್ನಿಗೆ ಒಳಗಾದ ದಲಿತ ಸಮುದಾಯ ಬಿಜೆಪಿಯನ್ನು ಹಿಂಬಾಲಿಸಿದ್ದು ವಿಪರ್ಯಾಸ. ಶ್ರೀನಿವಾಸ್ ಪ್ರಸಾದ್‍ರಂತಹ ನಾಯಕರು ಬಿಜೆಪಿಗೆ ಸೇರಿದ್ದು ಬಿಜೆಪಿಗಿದ್ದ ಮಡಿವಂತಿಕೆಯನ್ನು ಸಕ್ರಮಗೊಳಿಸಿತು.  ದಲಿತರನ್ನು ವೈದಿಕ ಹಿಂದೂತ್ವಕ್ಕೆ  ರೂಪಾಂತರಗೊಳಿಸಿ ಪರಿಚಾರಕ್ಕಿಟ್ಟುಕೊಂಡಿರುವ ಬಿಜೆಪಿ  ಸಖತ್ತಾದ ಫಲವನ್ನೆ ಪಡೆಯುತ್ತಿದೆ.  ಸರ್ಕಾರದ ಕೊನೆ ದಿನದಲ್ಲಿ ಒಳಮೀಸಲಾತಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರಿರುವ ಬಿಜೆಪಿ ದಲಿತ ಸಮುದಾಯವನ್ನು  ನಿರ್ಲಜ್ಜತನದಿಂದ ವಂಚಿಸಿರುವುದನ್ನು ದಲಿತ ಸಮುದಾಯ ಅರ್ಥಮಾಡಿಕೊಳ್ಳಬೇಕು.

ಸಭ್ ಕಾ ಸಾಥ್ ಸಭ್ ಕಾ ವಿಕಾಸ್ ಎಂದು ಘೋಷಣೆ ಹಾಕುವ ಪ್ರಧಾನಮಂತ್ರಿಗಳ ಮನ್ ಕಿ ಬಾತ್ ನಲ್ಲಿ ಗುಜರಾತ್, ಉತ್ತರಪ್ರದೇಶ, ರಾಜಾಸ್ತಾನ, ಹರ್ಯಾಣದಲ್ಲಿ ದಲಿತರನ್ನು ಗೋ ಮಾಂಸ ತಿಂದ ಆರೋಪದ ಮೇಲೆ ಬೀದಿಯಲ್ಲಿ ಕಟ್ಟಿ ಹೊಡೆಯುವ, ದಲಿತ ಹೆಣ್ಣುಮಕ್ಕಳನ್ನು ಅತ್ಯಾಚಾರ ಹತ್ಯೆಮಾಡಿದ ಬಗ್ಗೆ ಸೊಲ್ಲೆ ಹೊರಡುವುದಿಲ್ಲ. ದೂರದ ಮಾತೇಕೆ? ಕರ್ನಾಟಕದಲ್ಲೆ ಕಳೆದ ನಾಲ್ಕು ವರ್ಷಗಳಲ್ಲಿ ದೇವನಹಳ್ಳಿ, ಕೋಲಾರ, ಹಾಸನ, ತುಮಕೂರು ಮೈಸೂರು ಜಿಲ್ಲೆಗಳಲ್ಲಿ ದಲಿತರ ಮೇಲೆ ನಡೆದ ಹಲ್ಲೆ, ದೌರ್ಜನ್ಯಗಳಿಗೆ ಬೊಮ್ಮಾಯಿ ಸರ್ಕಾರ ಶಿಕ್ಷೆ ವಿಧಿಸಿದೆಯಾ? ಬಿಜೆಪಿ ಯಾಕೆ ಇದನ್ನೆಲ್ಲಾ ಖಂಡಿಸುವುದಿಲ್ಲ? ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಬಿಜೆಪಿ ಮಹಾನುಭಾವರಿಗೆ ಇದೆಲ್ಲಾ ಹಿಂಸೆ, ಅಮಾನವೀಯ, ಅನ್ಯಾಯ ಎಂದು ಅನಿಸುವುದಿಲ್ಲ ಯಾಕೆಂದರೆ ಅವರು ಅಂಬೇಡ್ಕರ್ ವಾದಿಗಳಲ್ಲ. ಅವರದ್ದೇನಿದ್ದರೂ ಮನುಸ್ಮೃತಿ ಮತ್ತು  ಗೋಳ್ವಾಲ್ಕರ್‍ ನ ʼಬಂಚ್ ಆಫ್ ಥಾಟ್ಸ್ʼ  ಅಷ್ಟೆ.

 ಅಂಬೇಡ್ಕರ್ ಅವರ ಆಶಯ ಮತ್ತು ಅವರು ಬರೆದ ಸಂವಿಧಾನದ ವಿರುದ್ದ ದಿಕ್ಕಿನಲ್ಲಿ ಚಲಿಸುತ್ತಿರುವ ಬಿಜೆಪಿಯಿಂದ ದಲಿತರು ಎಲ್ಲಾ ಕಾಲಕ್ಕೂ ಅಂತರವನ್ನು ಕಾಯ್ದುಕೊಳ್ಳಬೇಕು.  ದಲಿತರು ಬಿಜೆಪಿ ಪಾಲಿನ ಕಾಲಾಳುಗಳೇ ಹೊರತು  ನಾಯಕರಲ್ಲ.  ಕರ್ನಾಟಕ ವಿಧಾನಸಭಾ ಚುನಾವಣೆಯು ನಡೆಯುತ್ತಿರುವ ಈ ಹೊತ್ತಿನಲ್ಲಿ ದಲಿತರು ಬಿಜೆಪಿಯನ್ನು ತಾತ್ವಿಕ ನೆಲೆಗಟ್ಟಿನಲ್ಲಿ ವಿರೋಧಿಸುವುದು ಮತ್ತು ಮತಶಕ್ತಿಯಿಂದ ಮಣಿಸುವ ಸ್ವಾಭಿಮಾನ ತೋರುವ ಅವಕಾಶವೊಂದು ಬಂದಿದೆ. ಇದು ಅಂಬೇಡ್ಕರ್ ಅವರಿಗೆ ಸಲ್ಲಿಸಬಹುದಾದ ಕೃತಜ್ಞತೆ. ಈ ಪ್ರಯತ್ನದಲ್ಲಿ  ಅಂಬೇಡ್ಕರ್ ಸಿದ್ಧಾಂತದ ಸನಿಹಕ್ಕಾದರೂ ಇರುವ ಪರ್ಯಾಯ ರಾಜಕೀಯ ಶಕ್ತಿಗಳ ಜೊತೆ ನಿಲ್ಲುವುದು ರಾಜಕೀಯ ಕರ್ತವ್ಯವೇ ಆಗಿರುತ್ತದೆ.

ಎನ್.ರವಿಕುಮಾರ್

ಪತ್ರಕರ್ತರು

ಇದನ್ನೂ ಓದಿhttp://ಉಚಿತ ಸವಲತ್ತುಗಳ ರಾಜಕೀಯ https://peepalmedia.com/the-politics-of-free-bies/

Related Articles

ಇತ್ತೀಚಿನ ಸುದ್ದಿಗಳು