Monday, March 31, 2025

ಸತ್ಯ | ನ್ಯಾಯ |ಧರ್ಮ

ಎದೆ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಜಾತಿ ವಿನಾಶದ ಆಶಯದ ಸಾಧ್ಗ – ಅಸಾಧ್ಯತೆಗಳು – ನೀಲಪ್ಪ ಬಸವರಾಜ ಕಜ್ಜರಿ

ಇತ್ತೀಚೆಗೆ ಕನಿಷ್ಠಪಕ್ಷ ತಳ ಸಮುದಾಯದ ಜಾತಿಗಳಲ್ಲಾದರು ಅಂತರ್ ಜಾತೀಯ ವಿವಾಹಗಳಾಗಬೇಕು ಎಂಬ ವಾದ ಬಹಳ ಮುನ್ನಲೆಗೆ ಬಂದಿಗೆ. ಈ ಭರತಖಂಡದಲ್ಲಿ ಅತೀವವಾಗಿ ಜಾತಿ ದೌರ್ಜನ್ಯಕ್ಕೆ ಒಳಗಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ತೀರಾ ಹೀನಾಯ ಪರಿಸ್ಥಿತಿಗೆ ತಳ್ಳಿಸಿಕೊಳ್ಳಲ್ಪಟ್ಟ ಜನ ಸಮುದಾಯದವರೇ ಈ ಅಂತರ್ ಜಾತಿ ವಿವಾಹದ ಮೂಲಕ ಈ ಜಾತಿ ಪದ್ಧತಿಯನ್ನು ಪುಡಿ ಪುಡಿ ಮಾಡುವ ಕೆಲಸಕ್ಕೆ ನಾಂದಿ ಹಾಕಬೇಕು. ಆಗ ಸಮಾಜದಲ್ಲಿ ನಿಜವಾದ ಬದಲಾವಣೆ ತನ್ನಿಂದ ತಾನೇ ಪ್ರಾರಂಭ ಆಗುತ್ತದೆ ಎಂಬ ಆಶಯ ಈ ಕೋರಿಕೆಯ ಹಿಂದಿರುವಂತೆ ಮೇಲುನೋಟಕ್ಕೆ ಕಾಣುತ್ತದೆ. ಇಷ್ಟು ಸರಳವಾದ ದಾರಿ ಇರುವಾಗ ಕೂಡ ಸಮಾಜದಲ್ಲಿರುವ ತಳ ಸಮುದಾಯದ ಜಾತಿಗಳು ಜಾತಿ ವಿನಾಶಕ್ಕಾಗಿ ಈ ಮಾರ್ಗ ಅನುಸರಿಸಲು ಹಿಂಜರಿಯುತ್ತಿರುವುದು ಏಕೆ? ಅವರಿಗೆ ಈ ಜಾತಿ ಆಧಾರಿತ ಶೋಷಣೆ ಒಪ್ಪಿತವಾಗಿದೆಯೇ? ಈ ಪ್ರಶ್ನೆಗಳನ್ನು ನಾವು ಇಲ್ಲಿ ಸಮಗ್ರವಾಗಿ ಚರ್ಚಿಸಬೇಕಾಗಿದೆ.
ಈಗ ನಾವು ಮೊದಲನೆಯ ಪ್ರಶ್ನೆ ಕೈಗೆತ್ತಿಗೊಳ್ಳೊಣ. ಕನಿಷ್ಟ ತಳಸಮುದಾಯದ ಜನರಾದರೂ ಅಂತರ್‌ ಜಾತಿ ವಿವಾಹ ಮಾಡಿಕೊಳ್ಳಲು ಮುಂದೆ ಬಾರದೇ ಇರುವುದು ಈ ವ್ಯವಸ್ಥೆಗೆ ಅಂತಹ ಜಾತಿಗಳ ಸಾಮೂಹಿಕ ಒಪ್ಪಿಗೆ ಸೂಚಿಸಿದಂತೆ, ಎಂಬ ಅರ್ಥ ನೀಡುವುದೇ? ಹೀಗೆ ಒಂದು ವೇಳೆ ಅಂತಹ ಒಪ್ಪಿಗೆಯು ತಮಗೆ ಜಾತಿ ಆಧಾರಿತ ಶೋಷಣೆಯು ಒಪ್ಪಿತವಾಗಿದೆ, ಇದು ಸಾಮಾಜಿಕ ಸಂರಚನೆಯ ಅವಿಭಾಜ್ಯ ಅಂಶ ಎಂಬುದನ್ನು ಸೂಚಿಸುವುದೇ? ಇಲ್ಲಿ ಶೋಷಿತರಾಗಿರುವ ಜಾತಿಯವರ ಜಾತಿ ವಿನಾಶದ ಪ್ರಯತ್ನ ರಹಿತ ಮನಸ್ಥಿತಿಯು ಅವನು ಅಲ್ಲಿಯೇ ಅದೇ ಜಾತಿಯಲ್ಲಿ ಉಳಿಯಲು ಬಯುಸುತ್ತಿದ್ದಾನೆಯೇ? ಎಂಬ ಪ್ರಶ್ನೆಗೆ ಇಂಬು ಕೊಡುತ್ತದೆ, ಕಾರಣ ಕನಿಷ್ಟ ತಳ ಸಮುದಾಯದಲ್ಲಾದರೂ ಅಂತರ್‌ಜಾತಿ ವಿವಾಹ ಆಗಬೇಕೆಂದು ವಾದಿಸುವವರ ಅಭಿಪ್ರಾಯ.
ಈ ದೇಶದಲ್ಲಿ ಜಾತಿ ವ್ಯವಸ್ಥೆ ಹೇಗೆ ಘನೀಕರಣಗೊಂಡಿತು? ಎಂಬಯದನ್ನು ಬಾಬಾ ಸಾಹೇಬರ ಸಂಶೋಧನಾತ್ಕಕ ಬರಹಗಳ ಮೂಲಕ ನಾವು ಗ್ರಹಿಸಬಹುದಾಗಿದೆ. ಗುರುಕುಲಕ್ಕಿದ್ದ ಉಪನಯನದ ಅಧಿಕಾರ ಮತ್ತು ವರ್ಣ ನಿರ್ಧಾರದ ಅಧಿಕಾರವನ್ನು ಯಾವಾಗ ತಂದೆಗೆ ವರ್ಗಾಯಿಸಿಕೊಂಡು ವರ್ಣವನ್ನು ವಂಶಪಾರಂಪರ್ಯಗೊಳಿಸಿ, ಇದರ ನಿರಂತರತೆಗಾಗಿ ಸ್ವಜಾತಿ ವಿವಾಹ ಮತ್ತು ಸಹಭೋಜನಗಳನ್ನು ತನ್ನ ವರ್ಣದವರಿಗಾಗಿ ಮಾತ್ರ ಸೀಮಿತಗೊಳಿಸಿಕೊಂಡ ಮುಚ್ಚಿದ ಬಾಗಿಲ ವ್ಯವಸ್ಥೆಯನ್ನು ಈ ದೇಶದ ಉನ್ನತ ಸ್ಥರದ ಮನುಷ್ಯ ಜಾರಿಗೆ ತಂದುಕೊಂಡನೋ ಆಗಲೇ ಜಾತೀಯತೆಯ ಉಗಮಕ್ಕೆ ನಾಂದಿಯಾಯಿತು ಎನ್ನುತ್ತಾರೆ ಬಾಬಾ ಸಾಹೇಬರು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಘನೀಕರಣಗೊಂಡು ವಿಕಾರ ರೂಪ ತಾಳಿದ ಈ ಶೋಷಣೆಯ ನಿರಂತರತೆಗೆ ಕಾರಣವೇ ರಕ್ತ ಸಂಕರದ ನಿಷೇಧ ಅಥವಾ ಅಂತರ್‌ ಜಾತಿ ವಿವಾಹ ಮತ್ತು ಸಹಭೋಜನ ನಿಷೇಧ. ಹಾಗಾದರೆ ಅಂತರ್‌ ಜಾತಿ ವಿವಾಹ ಮತ್ತು ಸಹಭೋಜನದಿಂದ ಜಾತಿ ವಿನಾಶ ಸಾಧ್ಯವೇ? ಇದರ ಬಗ್ಗೆ ಅಂಬೇಡ್ಕರ್‌ ಸಾಹೇಬರ ನಿಲುವೇನಿತ್ತು ಅನ್ನುವುದನ್ನು ನೋಡೋಣ.
ಸಹಭೋಜನ ಪದ್ಧತಿ ಉಲ್ಲಂಘಿಸಿದರೆ, ಇದಕ್ಕೆ ಧಾರ್ಮಿಕ ಪ್ರಾಯಶ್ಚಿತ್ತ ಮಾಡಿಕೊಂಡರೆ ಅವನ ಈ ಪಾಪ ಕೃತ್ಯ ಪರಿಹಾರವಾದಂತೆ. ಧಾರ್ಮಿಕ ಮಾರ್ಗೋಪಾಯಗಳಿರುವಾಗ ಜಾತಿಯ ಸಡಿಲಿಕೆಗೆ ಈ ಪರಿಹಾರೋಪಾಯ ಸೂಕ್ತವಾದುದಲ್ಲಾ ಅಂತಾರೆ ಸಾಹೇಬರು. ನಿಜ ಈ ಕಾಲಮಾನದಲ್ಲಿ ನಾವೆಲ್ಲರೂ ಒಟ್ಟಿಗೆ ಒಡಾಡುತ್ತಿದ್ದೇವೆ, ಊಟ ಮಾಡುತ್ತಿದ್ದೇವೆ, ಓದುತ್ತಿದ್ದೇವೆ ಕೆಲಸ ಮಾಡುತ್ತಿದ್ದೇವೆ ಆದರೂ ಜಾತಿಯ ಬೇರುಗಳು ಸಡಿಲವಾಗಿಲ್ಲ ಎಂಬುದು ನಾವು ಗಮನಿಸಬೇಕು.
ಇನ್ನು ಅಂತರ್ಜಾತಿ ವಿವಾಹ ನಿಷೇಧದ ಬಗ್ಗೆ ನೋಡೋಣ. ರಕ್ತ ಸಂಕರ ತನ್ನ ಜಾತಿಯವರಿಗೇ ಮಾತ್ರ ಸೀಮಿತಗೊಂಡರೆ ಜಾತೀಯತೆಯ ನಿರಂತರತೆ ಸಾಧ್ಯ ಎಂಬುದನ್ನು ಕಂಡುಕೊಂಡವರು ವಿವಾಹಗಳನ್ನು ತನ್ನ ಜಾತಿಯ ಜನರಿಗೆ ಮಾತ್ರ ಸೀಮಿತಗೊಳಿಸಿಕೊಂಡರು. ಅಂದರೆ ಯಾವುದೇ ಜಾತಿಯ ಜನರನ್ನು ಒಳಗೆ ಬಿಟ್ಟುಕೊಡದೇ ಇರುವ ಮುಚ್ಚಿದ ಬಾಗಿಲಿನ ವ್ಯವಸ್ಥೆ. ಈ ವಿವಾಹ ಪದ್ಧತಿಯ ಆಚರಣೆ ಮೇಲುಸ್ಥರದಿಂದ ಹಂತ ಹಂತವಾಗಿ ಕೆಳಗಿನ ಸ್ಥರಗಳವರೆಗೂ ಅನುಕರಣೆಯ ಮೂಲಕ ಪ್ರವಹಿಸಿತು ಎಂದು ಹೇಳುತ್ತಾರೆ ನಮ್ಮ ಬಾಬಾ ಸಾಹೇಬರು. ಹೀಗೆ ವಿವಾಹ ಪದ್ಧತಿ ಮೇಲುಸ್ತರದ ಯಜಮಾನಿಕೆಯನ್ನು ವಂಶಪಾರಂಪರ್ಯಗೊಳಿಸುವುದಕ್ಕೋಸ್ಕರವೇ ಮೇಲು ಸ್ತರದಿಂದ ಕೆಳಗಿನ ಸ್ತರಕ್ಕೆ ಅನುಕರಣೆಯ ಮೂಲಕ ಪ್ರವಹಿಸಿ ಘನೀಕೃತಗೊಂಡಿರುವಾಗ, ಸಿಡಿದು ಹೋಗುವ ವ್ಯಕ್ತಿಗೆ ಯಾವ ಜಾತಿಯೂ ಬಾಗಿಲು ತೆರೆಯದ ಪರಿಸ್ಥಿತಿ ಇದ್ದಾಗ ಅವನು ಸಿಡಿದು ನಿಲ್ಲುವುದಾದರೂ ಎಲ್ಲಿ? ಯಾವ ಜಾತಿಯಲ್ಲಿ? ಜಾತಿ ಇಲ್ಲದ ವ್ಯಕ್ತಿಗೆ ಈ ಸಮಾಜದಲ್ಲಿ ಸಾಮಾಜಿಕ, ಧಾರ್ಮಿಕ ಸ್ಥಾನಮಾನವೇ ಅಳಿದು ಹೋಗಿ ಅವನು ಸಾಮಾಜಿಕ ಸದಸ್ಯನ ಸ್ಥಾನದಿಂದ ಸಾಮಾಜಿಕವಲ್ಲದ, ಕೌಟುಂಬಿಕವೂ ಅಲ್ಲದ ಅಸ್ಥಿತ್ವವೇ ಇರದ ಒಬ್ಬಂಟಿ ವ್ಯಕ್ತಿಯಾಗಿ ಬಿಡುವ ಭಯವಿರುವಾಗ ಅವನು ಸಿಡಿದು ಹೋಗುವುದಾದರೂ ಹೇಗೆ? ಇಂತಹ ವಿವಾಹ ಕ್ರಮದಿಂದ ಸಿಡಿದು ಹೋಗುವ ಜನರಿಗೆ ಜಾತಿ ಬಹಿಷ್ಕಾರ, ಸಾಮಾಜಿಕ ಹಾಗೂ ಧಾರ್ಮಿಕ ಬಹಿಷ್ಕಾರ ಇರುವಾಗ, ಅಂತಹ ಸಿಡಿದು ಹೋಗುವ ವ್ಯಕ್ತಿಯು ಹೇಗೆ ಸಿಡಿದು ಹೋಗಲು ಧೈರ್ಯ ತೋರಿಯಾನು?
ಹೀಗಿದ್ದೂ ಅಂತರ್ಜಾತಿ ವಿವಾಹದಿಂದ ಜಾತಿ ವಿನಾಶ ಸಾಧ್ಯವೇ? ಸಾಧ್ಯವೇ ಇಲ್ಲ. ಜಾತಿಯ ಚೌಕಟ್ಟನ್ನು ಮೀರಿ ಹೋದವರು ಜಾತಿಗಳ ಸಂಕೋಲೆಯಿಂದ ಬಿಡುಗಡೆಯ ಭಾವದಿಂದ ಬದುಕಬಹುದು. ಆದರೆ ಅದೇ ಜಾತಿಯ ಚೌಕಟ್ಟಿನೊಳಗೆ ನಿಂತು ಸ್ವಜಾತಿ ವಿವಾಹ ಬಂಧನದಿಂದ ಮುಂದುವರೆಯುತ್ತಿರುವವರಿಂದ ಜಾತಿ ನಿರಂತರವಾಗುವುದಿಲ್ಲವೇ?
ಅದಕ್ಕೆ ಹೇಳೋದು, ಅಂತರ್ಜಾತಿಯ ವಿವಾಹಗಳು ಜಾತಿ ವ್ಯವಸ್ಥೆಯ ಕೊನೆಗಾಣಿಸಲು ಇರುವ ತೀರಾ ಆಮೆ ಗತಿಯ ಪ್ರಯತ್ನಗಳಷ್ಟೇ. ಇಂತಹ ಅಂತರ್ಜಾತೀಯ ವಿವಾಹಗಳಿಂದ ಜಾತಿ ವಿನಾಶದ ವೇಗ ಬಹಳ ಮಂದಗತಿಯದ್ದು. ಜಾತಿ ವಿನಾಶಕ್ಕೆ ಅಂತರ್ಜಾತಿ ವಿವಾಹ ಒಂದು ಸಣ್ಣ ಉಪಕ್ರಮ ಅಷ್ಟೇ. ಇದೇ ಉಪಕ್ರಮವನ್ನು ತಳ ವರ್ಗದ ಜನರ ಜಾತಿ ವಿನಾಶದ ರಾಮ ಬಾಣ ಎಂಬಂತೆ ಹೇಳೋದು ಸರಿಯಾದ ಸಲಹೆಯಾಗಲಾರದು.
ಹಾಗಾದರೆ ಅಂಬೇಡ್ಕರ ಸಾಹೇಬರು ಈ ಎರಡೂ ಉಪಕ್ರಮಗಳಿಗಿಂತಲೂ ಮುಂದೆ ಹೋಗಿ ಜಾತಿ ವಿನಾಶಕ್ಕಾಗಿ ಈ ದೇಶದ ಜನರಿಗೆ ಸಲಹೆ ನೀಡಿದ್ದು ಏನೆಂದರೆ ಓಟ್ಟಾರೆ ಶಾಸ್ತ್ರಗಳಿಂದ ಹೊರಬನ್ನಿ ಎಂದು. ಅವರು ಈ ಭಾರತ ದೇಶದ ಸಾಮಾಜಿಕ ಸಂರಚನೆಯನ್ನು ಆಭ್ಯಾಸ ಮಾಡಿ ಕಂಡುಕೊಂಡ ಸತ್ಯವೇನೆಂದರೆ ಜನರನ್ನು ಈ ಶಾಸ್ತ್ರಗಳು ಹೆಜ್ಜೆ ಹೆಜ್ಜೆಗೂ ಜನರನ್ನು ಜಾತಿ ಸಂಕೋಲೆಯಲ್ಲಿ ಕಟ್ಟಿಹಾಕಿವೆ. ಇಂತಹ ಶಾಸ್ತ್ರಗಳಿಂದ ಜನರನ್ನು ಮುಕ್ತಿಗೊಳಿಸಿದಾಗಲೇ ಜಾತಿಯತೆಯ ವಿನಾಶ ಸಾಧ್ಯ ಎಂಬುದು ಅವರ ಸಲಹೆಯಾಗಿತ್ತು. ಇವತ್ತು ಈ ಸಮಾಜದಲ್ಲಿ ಸಮಾನ ಧಾರ್ಮಿಕ ಅವಕಾಶಗಳಿಗಾಗಿ ಜನರು ಜಾತಿ ಹೇರುವ ಶಾಸ್ತ್ರಗಳನ್ನು ಧಿಕ್ಕರಿಸಿದರೆ, ಸಮಾನ ಸಾಮಾಜಿಕ ಅವಕಾಶಗಳಿಗಾಗಿ ಜಾತಿ ಹೇರುವ ಶಾಸ್ತ್ರಗಳನ್ನು ಧಿಕ್ಕರಿಸಿದರೆ, ಸಮಾನ ಆರ್ಥಿಕ ಅವಕಾಶಗಳಿಗಾಗಿ ಜಾತಿ ಹೇರುವ ಶಾಸ್ತ್ರಗಳನ್ನು ಧಿಕ್ಕರಿಸಿದರೆ, ಸಮಾನ ಶೈಕ್ಷಣಿಕ ಅವಕಾಶಗಳಿಗಾಗಿ ಜಾತಿ ಹೇರುವ ಶಾಸ್ತ್ರಗಳನ್ನು ಧಿಕ್ಕರಿಸಿದರೆ ಆಗ ತನ್ನಿಂದ ತಾನೇ ಸಮಾಜದಲ್ಲಿ ಜಾತಿಯ ಹಿಡಿತ ಸಡಿಲಗೊಳ್ಳುವುದು ಎಂದು ಹೇಳುತ್ತಾರೆ ಅಂಬೇಡ್ಕರ್ ಸಾಹೇಬರು. ಇದೇ ಆಶಯಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ ಪ್ರಯುಕ್ತವೇ ಸಮಾಜದಲ್ಲಿ ಸಮಾನತೆಯ ಆಶಯದ ಬೇರುಗಳು ಆಳವಾಗಿ ಇಳಿಯುತ್ತಿವೆ. ಜಾತೀಯತೆಯನ್ನು ಘನೀಕರಿಸುವ ಶಾಸ್ತ್ರಗಳನ್ನು ಧಿಕ್ಕರಿಸುವುದೇ ಜಾತಿ ವಿನಾಶದ ಸಮಗ್ರ ಪರಿಹಾರ ಎಂಬ ಸಾಹೇಬರ ಮಾತಿಗೆ ನಾವಿಂದು ಸಾಕ್ಷೀಭೂತವಾಗಿದ್ದೇವೆ.
ಶಾಸ್ತ್ರಗಳಿಂದ ಹೊರಬರುವುದು ಎಂದರೆ ಕೇವಲ ಮದುವೆ ಶಾಸ್ತ್ರದಿಂದ ಹೊರಬರುವುದಲ್ಲ. ಜೀವನಪೂರ್ತಿ ಜಾತಿ ಸೂಚಕ ಶಾಸ್ತ್ರಗಳಡಿಯಲ್ಲಿ ಈ ಸಮಾಜದಲ್ಲಿ ಬದುಕಿದ ಮನುಷ್ಯ ಏಕಾಏಕಿ ಮದುವೆ ಶಾಸ್ತ್ರದಲ್ಲಿ ಜಾತಿ ಮೀರಲಿ ಎಂದು ನಿರೀಕ್ಷಿಸುವುದು ಸರಿಯಾದ ಸಲಹೆಯಾಗಲಾರದು, ಎಂಬುದನ್ನು ಮನಗಂಡೇ ನಮ್ಮ ಅಂಬೇಡ್ಕರ್ ಸಾಹೇಬರು ಕೇವಲ ಅಂತರ್ಜಾತಿ ಹಾಗೂ ಸಹಭೋಜನದಂತಹ ಉಪಕ್ರಮಗಳನ್ನು ದಾಟಿ ಭಾರತೀಯರಿಗೆ ಜಾತಿ ಸೂಚಕ ಶಾಸ್ತ್ರಗಳನ್ನು ಮೀರಿ ಬದುಕಲು ಸಲಹೆ ನೀಡಿ ಜಾತಿ ವಿನಾಶಕ್ಕೆ ನಾಂದಿ ಹಾಡಲು ಸೂಚಿಸಿದ್ದಾರೆ.
ಕೆಲವು ಬಿಡಿ ಬಿಡಿ ಪ್ರಯತ್ನಗಳು ಹೇಗೆ ಜಾತಿ ವಿನಾಶದ ಆಶಯಕ್ಕೆ ಪೂರಕವಾಗಲಾರವೋ ಹಾಗೆಯೇ ಜಾತಿ ವಿನಾಶದ ಆಶಯ ಸಮಾಜದ ಎಲ್ಲ ಜಾತಿಯವರ ಪ್ರಯತ್ನದಿಂದ ಸಾಕಾರಗೊಳ್ಳಬೇಕು. ಸಮಾಜದ ನಿಮ್ನ ವರ್ಗದ ಜನರು ಶಾಸ್ತ್ರ ಧಿಕ್ಕರಿಸಿ ದೇವಾಲಯದ ಒಳಗೆ ಪ್ರವೇಶ ಬಯಸಿ, ಕಾನೂನು ಬದ್ಧವಾಗಿ ಪ್ರವೇಶಿಸಿ ಬಿಟ್ಟರೂ ಅಂದುಕೊಳ್ಳೋಣ. ಆಗ ಮೇಲ್ವರ್ಗದವರು ಆ ದೇವಸ್ಥಾನದಿಂದ ದೂರವಿದ್ದರೆ ಅದರಿಂದ ಸಾಮಾಜಿಕ ಕಂದಕ ಹೆಚ್ಚಾಗುವುದೇ ವಿನಃ ಸಾಮಾಜಿಕ ಸಾಮರಸ್ಯ ಆಗುವುದಿಲ್ಲ. ಇದನ್ನೇ ಪದೇಪದೇ ನಾನು ಹೇಳುವುದು ಸಾಮಾಜಿಕ ಸಂಕರಕ್ಕಾಗಿ ಜಾತಿ ವಿನಾಶ ಬಯಸುವ ನಾವು ಇದಕ್ಕಾಗಿ ಕೇವಲ ಕೆಳವರ್ಗದವರಿಗೆ ಈ ಕೆಲಸವಹಿಸಿ ಸುಮ್ಮನೆ ಕೂರಲಾಗದು. ಅಂತರ್ಜಾತಿ ವಿವಾಹಗಳು ಕೆಳವರ್ಗದವರಲ್ಲಾದರೂ ಸಾಮಾಜಿಕ ಸಂಕರವನ್ನು ಏರ್ಪಡಿಸುವ ಉಪಕ್ರಮಗಳು ಅನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಇದು ಒಂದು ಉಪಕ್ರಮ ಅಷ್ಟೇ, ಸಮಗ್ರ ಪರಿಹಾರವಲ್ಲ ಜಾತಿ ವಿನಾಶದ ಸಮಗ್ರ ಪರಿಹಾರ ಕ್ರಮವೆಂದರೆ ಜಾತಿ ಸೂಚಕ ಶಾಸ್ತ್ರಗಳಿಂದ ನಮ್ಮ ಜನರನ್ನು ವಿಮುಕ್ತಿಗೊಳಿಸುವುದಾಗಿದೆ. ಹಾಗೆ ನಿಮ್ನ ವರ್ಗದ ಜನರನ್ನು ಜಾತಿ ಸೂಚಕ ಶಾಸ್ತ್ರಗಳ ಹಿಡಿತದಿಂದ ಬಿಡಿಸದ ಹೊರತು ಕೇವಲ ನಿಮ್ಮ ವರ್ಗದ ಜನರಲ್ಲಾದರೂ ಅಂತರ್ಜಾತಿ ವಿವಾಹಗಳು ಆಗಲಿ ಎಂಬುದು ಜಾತಿ ವಿನಾಶದ ಸಮರ್ಗ್ರ ಪರಿಹಾರವಾಗಲಾರದು.
ಇದಕ್ಕೆ ಸರಿಯಾದ ಉದಾಹರಣೆ ಎಂದರೆ ಬಸವಣ್ಣನವರ ವಚನ ಧರ್ಮ ಅಥವಾ ವಚನ ಚಳುವಳಿ. ಇಲ್ಲಿ ಸಮಗ್ರವಾಗಿ ಸಮಾಜದ ಎಲ್ಲ ಜಾತಿಯ ಜನರು ತಮ್ಮ ಜಾತಿಗಳನ್ನು ಕಳೆದುಕೊಂಡು ಒಂದು ಸಮಾನ ಹೊಸ ಧಾರ್ಮಿಕ ತತ್ವಶಾಸ್ತ್ರಕ್ಕೆ ತಮ್ಮನ್ನು ತೆರೆದುಕೊಂಡರು. ಇಲ್ಲಿ ಬಸವಣ್ಣನವರಂತಹ ಮೇಲ್ವರ್ಗದ ಸಾಮಾಜಿಕ ಹಿನ್ನೆಲೆಯಿಂದ ಬಂದವರು ತಮ್ಮ ಮನೆಗೆ ಜಾತಿ ಕಳೆದುಕೊಂಡು ಶರಣರಾದ ನಿಮ್ನ ಹಿನ್ನೆಲೆಯಿಂದ ಬಂದವರನೆಲ್ಲರನ್ನು ಅಹ್ವಾನಿಸಿದರು. ಕೂಡಿ ಊಟ ಮಾಡಿದರು. ಅಂತವರ ಮನೆಗೆ ಇವರು ಹೋದರು. ಒಂದೇ ತಟ್ಟೆಯಲ್ಲಿ ಊಟ ಮಾಡಿದರು. ಯಾಕೆ ಇದು ಸಾಧ್ಯವಾಯಿತು? ಕಾರಣ ಧರ್ಮ ಶಾಸ್ತ್ರ ಇದುವರೆಗೆ ಹೇಳಿದ ಸಹಭೋಜನ ಜಾತಿಯೊಳಗಿನ ಉಪಕ್ರಮ ಎಂಬ ಜಾತಿ ಸೂಚಕ ಶಾಸ್ತ್ರದ ನಿಯಮವನ್ನು ಇವರು ಮೀರಿದರು. ಇದರ ಅರ್ಥ ಇವರು ಜಾತ್ಯಾತೀತರಾದರು. ಸ್ಥಾವರ ದೇವರನ್ನು ಧಿಕ್ಕರಿಸಿದರು. ಯಾವ ಧರ್ಮಶಾಸ್ತ್ರ ಜಾತಿ ಆಧಾರಿತವಾಗಿ ದೇವಾಲಯ ಪ್ರವೇಶ ಸ್ಥಳಗಳನ್ನು ನಿರ್ಧರಿಸಿತ್ತೋ ಅಂತಹ ಶಾಸ್ತ್ರವನ್ನು ಧಿಕ್ಕರಿಸಿದ್ದರಿಂದಲೇ ಇಷ್ಟಲಿಂಗ ಪರಿಕಲ್ಪನೆ ಮುನ್ನಡೆಗೆ ಬಂದಿದ್ದು. ಮೇಲು ಕೀಳನೆದೆ ಲಿಂಗ ಭೇದವರಿಸದೆ ಎಲ್ಲರಿಗೂ ಲಿಂಗ ದೀಕ್ಷೆ ನೀಡಿದರು. ಜಾತಿ ನಿರಶನವಾಯಿತು. ಜಾತಿ ನಿರಶನಗೊಂಡ ಶರಣರಲ್ಲಿ ವಿವಾಹ ಏರ್ಪಟ್ಟಿತು. ಯಾವ ಶರಣರಿಗೂ ಇದು ವಿಚಿತ್ರವಾಗಿ ಕಾಣಲೇ ಇಲ್ಲ. ಕಾರಣ ಶರಣರ ಮನಸ್ಸಿನಲ್ಲಿ ಕೇವಲ ಮನುಷ್ಯ ಉಳಿದಿದ್ದ. ಅಂದಿನ ಬಸವಾದಿ ಶರಣರದ್ದು ಸಮಗ್ರವಾಗಿ ಜಾತಿ ಸೂಚಕ ಶಾಸ್ತ್ರದ ವಿರುದ್ಧದ ಹೋರಾಟವಾಗಿತ್ತು. ಕಾರಣ ಆ ಎಲ್ಲ 720 ಶರಣರಲ್ಲಿ ಅವರನ್ನು ಅನುಸರಿಸಿ ಬಂದ ಎಲ್ಲ ಜಾತಿಯ ಜನರಲ್ಲೂ ಜಾತಿ ನಿರಶನವಾಗಿತ್ತು. ಜಾತಿ ನಾಶಕ್ಕಾಗಿ ಅಂತರ್ಜಾತಿ ವಿವಾಹ ಒಂದೇ ಉಪಕ್ರಮವಾಗಲಾರದು ಎಂಬುದಕ್ಕೆ ವಚನ ಧರ್ಮ ಸಾಕ್ಷಿಯಾಗಿದೆ. ಇದು ಜಾತಿ ಸೂಚಕ ಸಮಗ್ರ ಶಾಸ್ತ್ರಗಳನ್ನು ಧಿಕ್ಕರಿಸುವುದರಲ್ಲಿ ಅಡಗಿದೆ ಎಂಬುದನ್ನು ಮತ್ತು ಇದೇ ಈ ನೆಲಕ್ಕೆ ಸರಿಯಾದ ಉಪಕ್ರಮವೆಂಬುದನ್ನು ಬಸವಾದಿ ಶರಣರು ಆಚರಣೆಯ ಮೂಲಕ ಅನುಷ್ಠಾನಗೊಳಿಸಿ ಅನುಭವಿಗಳಾಗಿ ವಚನ ರೂಪದಲ್ಲಿ ನಮಗೆ ನೀಡಿ ಮಾದರಿಯಾಗಿದ್ದಾರೆ. ಅಂಬೇಡ್ಕರ್ ಸಾಹೇಬರು ಈ ಜಾತಿ ವ್ಯವಸ್ಥೆಯ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಕೇವಲ ಅಂತರ್ಜಾತಿ ವಿವಾಹ ಮತ್ತು ಸಹಭೋಜನದಿಂದ ಜಾತಿ ವಿನಾಶ ಸಾಧ್ಯವಿಲ್ಲ ಇದಕ್ಕೆ ಜಾತಿ ಸೂಚಕ ಶಾಸ್ತ್ರಗಳ ಧಿಕ್ಕಾರ ಒಂದೇ ಪರಿಹಾರ ಅಂದಿದ್ದಾರೆ. ಅದಕ್ಕೆ ನಾವು ಹೇಳುವುದು ಈ ನೆಲಕ್ಕೆ ಬುದ್ಧ ಬಸವ ಅಂಬೇಡ್ಕರ್ ಸಾಹೇಬರ ಸತ್ಯಾದರ್ಶಗಳು ಸಹನೀಯವಾಗಬಹುದಾದ ಮಾನವೀಯ ಉಪಕ್ರಮಗಳು ಎಂಬುದನ್ನು.
ಕೊನೆಗೆ ಶಾಸ್ತ್ರಗಳನ್ನು ಹೇಗೆ ಧಿಕ್ಕರಿಸುವುದು? ಮತ್ತೆ ಹಾಗೆಂದರೇನು? ಅಂದಾಗ ಈ ನೆಲದಲ್ಲಿ ಮೊದಲು ಶಾಸ್ತ್ರಗಳ ವಿರುದ್ಧ ನಿಂತವರು ಬುದ್ಧ, ನಂತರ ಕರ್ನಾಟಕದಲ್ಲಿ ಬಸವಣ್ಣ ನಂತರ ಅಂಬೇಡ್ಕರ್ ಸಾಹೇಬರು. ಒಂದು ಹಂತದ ಈ ಮೂವರ ವಿಚಾರಧಾರೆಗಳ ಸಮಗ್ರ ಓದು ಖಂಡಿತವಾಗಿಯೂ ಶಾಸ್ತ್ರಗಳನ್ನು ಧಿಕ್ಕರಿಸುವುದು ಎಂದರೇನು ಎಂಬುದನ್ನು ಅನುಭವಕ್ಕೆ ತರುತ್ತದೆ.
ವಚನ ಧರ್ಮದ ಸಮಗ್ರ ಓದು ಹಾಗೂ ಅಂಬೇಡ್ಕರ್ ಸಾಹೇಬರ ಮಹಾ ಪ್ರಬಂಧ “ಜಾತಿ ವಿನಾಶ” ದ ಸಮಗ್ರ ಓದು ನಮಗೆ ಈ ಜಾತಿ ವಿನಾಶದ ಸಮಗ್ರ ಪರಿಕಲ್ಪನೆಯನ್ನು ನೀಡುತ್ತದೆ. ಅಂತರ್ ಜಾತಿ ವಿವಾಹ ಹಾಗೂ ಸಹಭೋಜನದಂತಹ ಉಪಕ್ರಮಗಳು ಕೇವಲ ಮೇಲ್ಪದರದ ಬದಲಾವಣೆ ಅನ್ನಿಸದಿರವು.
ಕೊನೆಯದಾಗಿ ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು? ಎಂಬ ಕುವೆಂಪು ವಾಣಿಯು ಈ ನೆಲದಲ್ಲಿನ ಜಾತಿ ವ್ಯವಸ್ಥೆಯನ್ನು ಮೀರಲು ಅಮೃತ ವಾಣಿಯಂತೆ ಸಹಾಯವಾಗಬಲ್ಲದು ಎಂಬುದನ್ನು ಹೇಳುತ್ತಾ ಅವರು ಬರೆದ ಶೂದ್ರತಪಸ್ವಿಯು ಶೂದ್ರನಿಗೆ ಶಿಕ಼್ಣದ ಹಕ್ಕಿಲ್ಲ ಎಂದು ಸಾರಿದ ಶಾಸ್ತ್ರದ ನಿಯಮವನ್ನು ಮೀರಿತು, ಶೂದ್ರ ಶಂಭೂಕ ಮುನಿ ಶಿಕ್ಷಣ ಪಡೆದ. ರಾಮಬಾಣವೂ ಶಾಸ್ತ್ರವನ್ನು ಧಿಕ್ಕರಿಸಿ ಶೂದ್ರರೂ ಶಿಕ಼್ಣಣ ಪಡೆಯುಲು ಹಕ್ಕುಳ್ಳವರು ಎಂಬುದನ್ನು ಸಾರಿತು. ಅವರ ಜಲಗಾರ ಕೃತಿ ಕೆಲಸದೊಳಗೆ, ಗೊಬ್ಬರದ ಗುಂಡಿಯೊಳಗೆ ದೇವರನ್ನು ಕಲ್ಪಿಸಿ ಜಾತಿ ಸೂಚಕ ಶಾಸ್ತ್ರಗಳಿಗೆ ತಿಲಾಂಜಲಿ ನೀಡಿತು. ಬೆರಳ್ ಗೆ ಕೊರಳ್‌, ಯಮನ ಸೋಲು, ಇವೆಲ್ಲವೂ ಶಾಸ್ತ್ರಗಳಿಂದ ಜನರನ್ನು ಮುಕ್ತಿಗೊಳಿಸುತ್ತವೆ. ಹೀಗೆ ಜಾತಿ ಸೂಚಕ ಶಾಸ್ತ್ರಗಳಿಂದ ಮುಕ್ತಗೊಂಡ ಜನರೇ ಜಾತಿ ಮೀರಲು ಸಾಧ್ಯ.
ಕೊನೆಯದಾಗಿ ಭಾರತದ ಸಂವಿಧಾನವು ಜಾತಿವಿನಾಶದ ಸಮಗ್ರ ಆಶಯಗಳನ್ನು ಒಳಗೊಂಡ ಮಹಾನ್‌ ಕೈಪಿಡಿ. ಸಮಾನ ನಾಗರೀಕ ಸಮಾಜ ನಿರ್ಮಾಣಕ್ಕೆ ಒದಗಿಸಿದ ಮಹಾನ್‌ ಗ್ರಂಥ. ಇದರಲ್ಲಿ ಜಾತಿನಿವಾರಣೆಯ ಸಮಗ್ರ ಮಾರ್ಗಗಳನ್ನು ಸೂಚಿಸಲಾಗಿದೆ. ಹೀಗಿದ್ದಾಗಲೂ ಮನುಷ್ಯನ ದೈನಂದಿನ ಜೀವನವನ್ನು ಅವನ ಧಾರ್ಮಿಕ ನಿಯಮಗಳು ಸಾಂವಿಧಾನಿಕ ನಿಯಮಗಳಿಗಿಂತ ಹೆಚ್ಚಾಗಿ ಕೈಹಿಡಿದು ನಡೆಸುತ್ತಿರುತ್ತವೆ. ಕಾರಣ ಏಲ್ಲಾ ಧರ್ಮಗಳಲ್ಲಿ ಅಸಮಾನತೆಯನ್ನು ಪೋಷಿಸುವ ಶಾಸ್ತ್ರಗಳನ್ನು ಧಿಕ್ಕರಿಸುವ ಸಮಗ್ರ ಮಾರ್ಗಗಳತ್ತ ನಮ್ಮ ಯುವಜನತೆಯನ್ನು ಸಜ್ಜುಗೊಳಿಸಬೇಕಾದ ಅನಿವಾರ್ಯತೆ ಇಂದೆಂದಿಗಿಂತಲೂ ಈಗ ಹೆಚ್ಚಿದೆ. ಜೀವನಪೂರ್ತಿ ಅಸಮಾನತೆಯನ್ನು ಪೋಷಿಸುವ ಧರ್ಮಶಾಸ್ತ್ರಗಳ ಗುಲಾಮಗಿರಿಯಲ್ಲಿ ಬದುಕಿ ಇದ್ದಕ್ಕಿದ್ದಂತೆ ಮದುವೆಯಲ್ಲಿ ಜಾತಿ ಮೀರಿ ಎಂಬ ಉಚಿತ ಸಲಹೆ ಸರಿಯಾದುದ್ದಲ್ಲ.

ಚರ್ಚೆಗೆ ಸ್ವಾಗತ

Related Articles

ಇತ್ತೀಚಿನ ಸುದ್ದಿಗಳು

You cannot copy content of this page