Wednesday, June 26, 2024

ಸತ್ಯ | ನ್ಯಾಯ |ಧರ್ಮ

ಮೋದಿಯಿಂದ ಉದ್ಘಾಟನೆಗೊಂಡಿದ್ದ ಪ್ರಗತಿ ಸುರಂಗ ಮಾರ್ಗ ಈಗ ಕೊಳಚೆ ನೀರಿನ ಗುಂಡಿ

ನವದೆಹಲಿ: ಒಂದು ವರ್ಷದ ಹಿಂದೆ 777 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡು ಪ್ರಧಾನ ಮಂತ್ರಿ ಮೋದಿಯವರಿಂದ ಉದ್ಘಾಟನೆಗೊಂಡಿದ್ದ ಪ್ರಗತಿ ಮೈದಾನದ ಸುರಂಗ ಮಾರ್ಗ ಈಗ ರಿಪೇರಿ ಮಾಡಲು ಸಾಧ್ಯವಾಗದಷ್ಟು ಹದಗೆಟ್ಟಿದೆ. ಪ್ರಗತಿ ಮೈದಾನದ ಸುರಂಗವನ್ನು ದುರಸ್ತಿಗೊಳಿಸಲು ಸಾಧ್ಯವಾಗುತ್ತಿಲ್ಲ; ಕಾಮಗಾರಿ ಕುರಿತು ಕೂಲಂಕುಷ ಪರೀಕ್ಷೆಯ ಅಗತ್ಯವಿದೆ’ ಎಂದು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.


ಕಾಮಗಾರಿ ವಿಳಂಬ ಹಾಗೂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಸುರಂಗ ಬಿರುಕು ಬಿಟ್ಟಿದೆ ಎಂದು ಪಿಡಬ್ಲ್ಯುಡಿ ಅಧಿಕಾರಿ ತಿಳಿಸಿದ್ದಾರೆ. ಇನ್ನು ಮುಂದೆ ಪ್ರಯಾಣಿಕರಿಗೆ ಈ ಮಾರ್ಗವು ಸುರಕ್ಷಿತವಲ್ಲ ಮತ್ತು ಸಂಪೂರ್ಣ ಹೊಸದಾಗಿ ನಿರ್ಮಿಸಬೇಕಿದೆ. ಅದನ್ನು ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.


ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆ ₹777 ಕೋಟಿ ವೆಚ್ಚದಲ್ಲಿ ಈ ಸುರಂಗ ನಿರ್ಮಿಸಿತ್ತು. ಈಗ ಕಳಪೆ ಕಾಮಗಾರಿ ಆರೋಪ ಹೊರೆಸಿ ‘ಲಾರ್ಸೆನ್ ಮತ್ತು ಟೂಬ್ರೊ’ಗೆ ಕಂಪನಿಗೆ ನೋಟಿಸ್ ನೀಡಿದೆ. ಇಲಾಖೆಯು ಎಲ್ ಅಂಡ್ ಟಿಯಿಂದ ₹500 ಕೋಟಿಯನ್ನು “ಟೋಕನ್ ಮೊತ್ತ” ವಾಗಿ ಬೇಡಿಕೆಯಿಟ್ಟಿದೆ. ಜೊತೆಗೆ ಕೂಡಲೇ ದುರಸ್ತಿ ಕಾರ್ಯ ಆರಂಭಿಸುವಂತೆ ಸೂಚಿಸಿದೆ.


ತಾನು ನಿರ್ಮಿಸಿದ ಸುರಂಗದ ಸೋರಿಕೆ ಮತ್ತು ಬಿರುಕುಗಳ ಬಗ್ಗೆ ಮಾತನಾಡಿದ ಎಲ್‌ ಅಂಡ್ ಟಿ ವಕ್ತಾರರು, “ಪಿಡಬ್ಲ್ಯೂಡಿ ನಮ್ಮ ಗೌರವಾನ್ವಿತ ಗ್ರಾಹಕ; ನಾವು ಅವರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿದ್ದೇವೆ. ಕಂಪನಿಯು ₹500 ಕೋಟಿಯ ಕ್ಲೈಮ್ ಅನ್ನು ಇಲಾಖೆ ಯಾಕೆ ಸಲ್ಲಿಸಲು ಕೋರಿದೆ ಎಂದು ತಿಳಿಯಬಯಸುತ್ತೇವೆ ಎಂದಿದ್ದಾರೆ.


ಒಂದು ವರ್ಷದ ಹಿಂದೆ ನಿರ್ಮಿಸಲಾದ ಸುರಂಗದ ಗೋಡೆಗಳಿಂದ ನೀರು ಸೋರುವ ಮೂಲಕ ಸಮಸ್ಯೆ ಕಾಣಿಸಿಕೊಂಡಿದೆ. ರಸ್ತೆಯ ಮಧ್ಯದಿಂದ ನೀರು ನುಗ್ಗಿದ್ದರಿಂದ ಸುರಂಗದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸುರಂಗದ ರಸ್ತೆಯಲ್ಲಿಯೂ ಸಹ ಭಾರೀ ಬಿರುಕುಗಳು ಕಾಣಿಸಿಕೊಂಡಿವೆ ಎಂಬುದನ್ನು ಎನ್‌ಡಿಟಿವಿಯ ಗ್ರೌಂಡ್ ರಿಪೋರ್ಟ್ ಸಾಕ್ಷೀಕರಿಸಿದೆ.

ಸುರಂಗ ಮತ್ತು ಐದು ಅಂಡರ್‌ಪಾಸ್‌ಗಳು ಪ್ರಗತಿ ಮೈದಾನ್ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಪ್ರಾಜೆಕ್ಟ್ನ ಭಾಗವಾಗಿವೆ. ಇದು ದೆಹಲಿಯ ಮುಖ್ಯ ಸ್ಥಳದಲ್ಲಿರುವುದರಿಂದ ದೆಹಲಿಯ ಪೂರ್ವ ಭಾಗಗಳು ಮತ್ತು ಹತ್ತಿರದ ನಗರಗಳಾದ ನೋಯ್ಡಾ ಮತ್ತು ಗಾಜಿಯಾಬಾದ್‌ನೊಂದಿಗೆ ದೆಹಲಿಯ ನಡುವಿನ ಸಂಪರ್ಕವನ್ನು ಸುಲಭಗೊಳಿಸಲು ನಿರ್ಮಾಣಗೊಂಡ ಸುರಂಗವಾಗಿದೆ. 2022ರಲ್ಲಿ ಉದ್ಘಾಟನೆಗೊಂಡ 1.3 ಕಿಮೀ ಸುರಂಗವು ಕಳೆದ ವರ್ಷ ಪ್ರವಾಹದ ಸಮಯದಲ್ಲಿ ಅನೇಕ ಬಾರಿ ಬಂದ್ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Related Articles

ಇತ್ತೀಚಿನ ಸುದ್ದಿಗಳು