Sunday, June 16, 2024

ಸತ್ಯ | ನ್ಯಾಯ |ಧರ್ಮ

ಈ ದೇಶದ ಪ್ರಧಾನಿ ಅಂಜುಬುರುಕ | ಪ್ರಿಯಾಂಕಾ ಗಾಂಧಿ

ಸೆಟೆದು ಹೋರಾಡುವ ಛಲದೆದುರು ಭೀತ ಕುತಂತ್ರದ ಆಟಗಳು ನಡೆಯುವುದು ಕಷ್ಟ. ಈ ದೇಶದ ಪ್ರಜಾ ಸತ್ತೆ, ಅಭಿವೃದ್ಧಿಗೆ ಕಿಂಚಿತ್ತೂ ಕೆಲಸ ಮಾಡದ ಈ ಪ್ರಭುತ್ವ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಸಮಯ ಬಂದಿದೆ. ಇದು ಸಂವಿಧಾನ ಎತ್ತುತ್ತಿರುವ ಪ್ರಶ್ನೆಗಳು.  ಈ ಸವಾಲಿನ ಆರಂಭ ಇದು. ರಾಜಘಾಟ್ ನಲ್ಲಿ ಪ್ರಿಯಾಂಕಾ ಗಾಂಧಿ ಮಾಡಿದ ಭಾಷಣದ ಸಾರಾಂಶ ಇಲ್ಲಿದೆ.

“ಇಲ್ಲಿ ಕೂತಿರುವಾಗ ನನಗೆ ಹಳೆಯದೊಂದು ನೆನಪಾಗುತ್ತಿದೆ. 1991 ರ ಮಾತು ಅದು. ನನ್ನ ತಂದೆಯವರ ಶವಯಾತ್ರೆ ತೀನ್ ಮೂರ್ತಿ ಭವನದಿಂದ ಹೊರಟಿತ್ತು. ನಾನು, ನನ್ನ ಸಹೋದರ ವಾಹನದಲ್ಲಿ ಕುಳಿತಿದ್ದೆವು. ಎದುರು ಭಾರತೀಯ ಸೈನ್ಯದ  ಪುಷ್ಪಾಲಂಕೃತ ಟ್ರಕ್ ನಲ್ಲಿ ನಮ್ಮ ತಂದೆಯರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಸ್ವಲ್ಪ ದೂರ ಸಾಗುತ್ತಿದ್ದಂತೆ ನನ್ನ  ರಾಹುಲ್ ನಾನು ಇಳಿತೀನಿ ಎಂದ.. ಹಾಗೆಲ್ಲ ಇಳಿಯಬೇಡ ಅಂದೆ ನಾನು. ಆತನ ಚಡಪಡಿಕೆ ಹೆಚ್ಚಾಯಿತು. 

“ಅವನು ಇಳಿಯಲಿ “ ಎಂದು ಅಮ್ಮನಲ್ಲಿ ಹೇಳಿದೆ. ನನ್ನ ಸಹೋದರ ಅಲ್ಲಿಂದ  ಸಮಾಧಿ ಸ್ಥಳದವರೆಗೆ ಆ ದೇಹವಿರಿಸಿದ್ದ ಟ್ರಕ್ ನ್ನು ನಡೆಯುತ್ತಾ ಹಿಂಬಾಲಿಸಿದ. ನಡೆಯುತ್ತಾ ನಡೆಯುತ್ತಾ ಇಲ್ಲಿಗೆ ತಲುಪಿದ. ಇಲ್ಲಿಂದ ಐನೂರು ಗಜ ದೂರದಲ್ಲಿ ನಮ್ಮ ತಂದೆಯವರ ಅಂತಿಮ ಸಂಸ್ಕಾರವನ್ನು ರಾಹುಲ್ ನೆರವೇರಿಸಿದ. ಆ ಚಿತ್ರ ನನ್ನ ಮನಃಪಟಲದಲ್ಲಿ ಈಗಲೂ ಇದೆ.

 ನಮ್ಮ ತಂದೆಯವರ ದೇಹ ಈ ತ್ರಿವರ್ಣ ಧ್ವಜದಲ್ಲಿ ಅಡಗಿತ್ತು. ಆ ಹುತಾತ್ಮ ತಂದೆಯ ಅವಮಾನ ಸಂಸತ್ತಿನಲ್ಲಿ ನಡೆಯುತ್ತಿದೆ. ಆ ಹುತಾತ್ಮನ ಮಗನನ್ನು ದೇಶ ದ್ರೋಹಿ ಎನ್ನುತ್ತಿದ್ದಾರೆ. ಮೀರ್ ಜಾಫರ್ ಎಂದು ಕರೆಯಲಾಗುತ್ತಿದೆ. ಆತನ ತಾಯಿಗೆ ಅವಮಾನ ಮಾಡಲಾಗುತ್ತಿದೆ. ನಿಮ್ಮ ಮಂತ್ರಿ ನನ್ನ ತಾಯಿಯನ್ನು ಸಂಸತ್ತಿನಲ್ಲಿ ಅವಮಾನಿಸುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ರಾಹುಲ್ ನಿಗೆ ತನ್ನ ತಂದೆ ಯಾರೆಂದು ಗೊತ್ತಾ ಎಂದು ಕೇಳುತ್ತಾನೆ. ನಿಮ್ಮ ಪ್ರಧಾನ ಮಂತ್ರಿ ಈ ಕುಟುಂಬ ನೆಹರೂ ಹೆಸರನ್ನೇಕೆ ಧರಿಸುತ್ತಿಲ್ಲ ಎನ್ನುತ್ತಾರೆ. ಇಡಿ ಕುಟುಂಬವನ್ನು ಅಪಮಾನಿಸಲಾಗುತ್ತಿದೆ. ಕಾಶ್ಮೀರಿ ಪಂಡಿತ ಪರಂಪರೆಗೇ ಅವಮಾನ ಮಾಡಲಾಗುತ್ತಿದೆ.  ಆದರೆ ನಿಮ್ಮ ಮೇಲೆ ಯಾವುದೇ ಮೊಕದ್ದಮೆ ದಾಖಲಾಗುವುದಿಲ್ಲ. ನಿಮಗೆ ಎರಡು ವರ್ಷದ ಶಿಕ್ಷೆಯಾಗುವುದಿಲ್ಲ. ನಿಮ್ಮನ್ನು ಸಂಸತ್ತಿನಿಂದ ಹೊರ ಕಳಿಸುವುದಿಲ್ಲ. ಎಂಟು ವರ್ಷ ಚುನಾವಣೆ ಸ್ಪರ್ಧಿಸುವಂತಿಲ್ಲ ಎನ್ನೋದಿಲ್ಲ.  ಯಾಕೆ?

 ಇಷ್ಟುದಿನ ಸುಮ್ಮನಿದ್ದೆವು.  ಅಪಮಾನದ ಮೇಲೆ ಅಪಮಾನ ನಮ್ಮ ಕುಟುಂಬದ ಮೇಲೆ. ಆದರೂ, ನನ್ನ ಸಹೋದರ ಏನು ಮಾಡಿದ?  ಮೋದಿಯವರನ್ನು ಆಲಂಗಿಸಿದ. ಆಲಂಗಿಸಿ ನಿಮ್ಮ ಜೊತೆ ಸಿಟ್ಟಿಲ್ಲ. ನಮ್ಮ ವಿಚಾರಧಾರೆ ಬೇರೆ ಇರಬಹುದು. ಆದರೆ ಸಿಟ್ಟು ನನಗಿಲ್ಲ ಎಂದ.

ನಮ್ಮ ಕುಟುಂಬವನ್ನು ಎಷ್ಟು ಅವಮಾನಿಸುತ್ತೀರಿ? ಇದು ಹಿಂದೂ ಪರಂಪರೆಯಾ? ನಮ್ಮ ಕುಟುಂಬದವರು ಹುತಾತ್ಮರಾಗಿದ್ದಾರೆ. ಈ ಧ್ವಜದಲ್ಲಿ ಅವರ ನೆತ್ತರಿದೆ. ಈ ನೆಲದಲ್ಲಿ ಅವರ ನೆತ್ತರಿದೆ.

 ಈ ದೇಶದ ಪ್ರಜಾಸತ್ತೆಗೆ ನಮ್ಮ ಕುಟುಂಬದ ರಕ್ತ ಸಿಂಚನವಾಗಿದೆ.  ನಮ್ಮನ್ನು ಅವಮಾನಗೊಳಿಸಿ, ಬೆದರಿಸಿ, ಏಜೆನ್ಸಿಗಳನ್ನು ಛೂ ಬಿಟ್ಟು ಬೆದರಿಸಬಹುದು ಎಂದು ಯಾರಾದರೂ  ಭಾವಿಸಿರಬಹುದು. ಆದರೆ ನಾವು ಭಯಪಡೋದಿಲ್ಲ. ನಾವು ಇನ್ನಷ್ಟು ಧೈರ್ಯದಿಂದ ಹೋರಾಡುತ್ತೇವೆ.   ಈ ದೇಶದ ಪ್ರಜಾಸತ್ತೆ ಕಾಂಗ್ರೆಸ್ಸಿನ ಕೊಡುಗೆಯಿಂದ ಬೆಳೆದಿದೆ. ಕಾಂಗ್ರೆಸ್ ಈ ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದೆ. ಈಗಲೂ  ಹೋರಾಡುತ್ತಲೇ ಇದೆ.  ಕೆಲವೊಮ್ಮೆ ಅನ್ನಿಸುತ್ತೆ. ಸಾರ್ವಜನಿಕರು ಇದನ್ನೆಲ್ಲಾ ನೋಡುತ್ತಿಲ್ಲವೇ? ನಿಮಗೆ ಕಾಣಿಸೋಲ್ಲವೇ?.

 ನಿಮ್ಮ ಸಂಪತ್ತು ಲೂಟಿ ಮಾಡಿ ಯಾರಿಗೋ ನೀಡಲಾಗುತ್ತಿದೆ.  ಈ ಉದ್ಯಮಪತಿಗಳಿಗೆ ನೀಡಲಾಗುತ್ತಿರೋದು ಯಾರ ಸಂಪತ್ತು? ರಾಹುಲ್ ಗಾಂಧಿಯ ಸಂಪತ್ತೇ? ಇದು ನಿಮ್ಮ ಸಂಪತ್ತು. ಈ ಸಾರ್ವಜನಿಕ ಉದ್ಯಮಗಳು ಯಾರದ್ದು? ಇದು ನಿಮಗಾಗಿ ಇದೆ. ಒಂದಾದ ಮೇಲೆ ಒಂದು  ಇವುಗಳನ್ನು ಮಾರಲಾಗುತ್ತಿದೆ.

 ನಿಮ್ಮ ಉದ್ಯೋಗ ಸಣ್ಣ ವ್ಯಾಪಾರಿಗಳು, ಉದ್ಯಮಿಗಳಿಂದ ಹುಟ್ಟುತ್ತದೆ. ದೊಡ್ಡ ಅದಾನಿಯಿಂದಲ್ಲ.  ಅವರು ಉದ್ಯೋಗ ನೀಡೋದಿಲ್ಲ. ಉದ್ಯೋಗ ಕಸಿಯುತ್ತಾರೆ. ಇದು ನಿಮಗೆ  ಯಾಕೆ ಅರ್ಥವಾಗುತ್ತಿಲ್ಲ ? ನೀವು ಗ್ಯಾಸ್ ಗೆ ಸಾವಿರ ರೂಪಾಯಿ ನೀಡುತ್ತಿದ್ದೀರಿ. ಅಲ್ಲಿ ನಿಮ್ಮ ಸಂಪತ್ತನ್ನು ಯಾರಿಗೋ ಧಾರೆ ಎರೆಯಲಾಗುತ್ತಿದೆ.

 ರಾಹುಲ್ ಏನು ಹೇಳಿದರು?  ಕೇಳಿದ ಪ್ರಶ್ನೆಗೆ ಉತ್ತರ  ಕೊಡಲಾಗದೇ ಅವರು ಭೀತಿಗೊಂಡರು. ಉತ್ತರ ಕೊಡಲಾಗದೇ ದಮನ ಶುರು ಮಾಡಿದರು. ಕಣ್ಣು ತೆರೆದು ನೋಡಿ. ಈ ಇಡೀ ಸರಕಾರ, ಮಂತ್ರಿಗಳು ಸಂಸದರು ಒಬ್ಬ ವ್ಯಕ್ತಿಯನ್ನು ರಕ್ಷಿಸಲು ಯಾಕೆ ಹೆಣಗಾಡುತ್ತಿದ್ದಾರೆ? ಈ ಅದಾನಿಯಲ್ಲಿ ಅಂಥಾದ್ದೇನಿದೆ? ೨೦ ಸಾವಿರ ಕೋಟಿ ಶೆಲ್ ಕಂಪೆನಿಗಳಿಂದ ಬಂದಿದೆ. ಇದರ ತನಿಖೆ ನಿಮ್ಮಿಂದ ಯಾಕೆ ಸಾಧ್ಯವಾಗುತ್ತಿಲ್ಲ? ಈ ಅದಾನಿ ಯಾರು? ಅವರ ಹೆಸರು ಕೇಳಿದ ತಕ್ಷಣ ಆತನ ರಕ್ಷಣೆಗಿಳಿಯುತ್ತೀರಿ.  ನೀವು ಈ ದೇಶವಾಸಿಗಳು. ಇದು ನಿಮ್ಮ ದೇಶ. 

ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಇದು ಪ್ರಜಾಸತ್ತೆಯ ತಾಯಿ ಎನ್ನುತ್ತಾರೆ. ಅಭಿವೃದ್ಧಿ ಆಗಿದೆ ಎನ್ನುತ್ತಾರೆ. ಹಾಗಿದ್ದರೆ ಇಷ್ಟು ಯುವಕರು ಯಾಕೆ ನಿರುದ್ಯೋಗಿಗಳಾಗಿದ್ದಾರೆ? ಇಷ್ಟು ಬೆಲೆ ಏರಿಕೆ ಯಾಕಿದೆ?. ಇಷ್ಟೆಲ್ಲಾ ಕೆಲಸ ಮಾಡೋರಿಗೆ  ಗ್ಯಾಸ್ ಬೆಲೆ ಇಳಿಸಲು ಸಾಧ್ಯವಾಗೋದಿಲ್ಲವೇ? ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಲು ಸಾಧ್ಯವಾಗೋದಿಲ್ಲವೇ? ಉದ್ಯೋಗ  ಸೃಷ್ಟಿ ಯಾಕೆ ಮಾಡುತ್ತಿಲ್ಲ? ಮತ್ತೆ ನಿಮ್ಮ ಸರಕಾರ ಯಾಕಿದೆ? ಜನರ ದಮನಕ್ಕಾಗಿಯೇ? ಅದಾನಿಗೆ ಅನುಕೂಲ ಮಾಡಲಿಕ್ಕೆ ಇದೆಯೇ?  ಈಗ ಸಮಯ ಬಂದಿದೆ. ನಾವು ಗಂಭಿರವಾಗಿ ಯೋಚಿಸುವ ಸಮಯ ಬಂದಿದೆ.

 ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಬ್ಬ ವ್ಯಕ್ತಿ ನಡೆದ. ಅವನೊಂದಿಗೆ ಲಕ್ಷಾಂತರ ಮಂದಿ ನಡೆದರು. ಯಾವ ಸಂದೇಶ ಹೊತ್ತು ನಡೆದರು? ಸಮತೆ, ಏಕತೆಯ ಭಾವನೆಯೊಂದಿಗೆ ನಡೆದರು. ಈಗ ನಿಮ್ಮ ಸಂಸದರು ರಾಹುಲ್ ದೇಶಕ್ಕೆ ಅಪಮಾನ ಮಾಡಿದರು, ಒಂದು ವರ್ಗಕ್ಕೆ ಅಪಮಾನ ಮಾಡಿದರು ಎನ್ನುತ್ತಿದ್ದಾರೆ. ಮೂರು ಸಾವಿರ ಮೈಲು ನಡೆದ ವ್ಯಕ್ತಿ ಎಲ್ಲರೂ ಸಮಾನವಾಗಿರಬೇಕು ಎನ್ನುವ ವ್ಯಕ್ತಿ ದೇಶಕ್ಕೆ ಅವಮಾನ ಮಾಡಲು ಸಾಧ್ಯವೇ? 

ಈತ ಏನು ಮಾಡುತ್ತಿದ್ದಾನೆ? ಈತ ನಿಮ್ಮ ಧ್ವನಿಯನ್ನು ಎತ್ತಿ ಮಾತಾಡುತ್ತಿದ್ದಾನೆ. ಏನು ಹೇಳುತ್ತಿದ್ದಾನೆ?  ಬಡವರಿಗೆ ಅವರ ಹಕ್ಕು ಕೊಡಿ, ಯುವಕರಿಗೆ ಅವರ ಹಕ್ಕು ಕೊಡಿ, ಮಹಿಳೆಯರಿಗೆ ಅವರ ಹಕ್ಕು ಕೊಡಿ ಎಂದು ಕೇಳುತ್ತಿದ್ದಾನೆ. ಇದು ನಮ್ಮ ಹಕ್ಕಿನ ಹೋರಾಟ. ಇದು ಒಬ್ಬ ರಾಹುಲ್ ಗಾಂಧಿಯ ಪ್ರಶ್ನೆ ಅಲ್ಲ.  ಇದು ಪ್ರಜಾಸತ್ತೆಯ ಸವಾಲು. ಪ್ರಜಾಸತ್ತೆ ಎಂದರೇನು? ಪ್ರಶ್ನೆ ಮಾಡು ಉತ್ತರ ಪಡೆ. ಇದು ಪ್ರಜಾ ಸತ್ತೆ. ನಿಮಗೆ ಸಮಸ್ಯೆ ಇದ್ದರೆ ಪ್ರಶ್ನೆ ಮಾಡಿ. ಬೆಲೆ ಏರಿಕೆ ಯಾಕಿದೆ? ನಿರುದ್ಯೋಗ ಯಾಕಿದೆ.

ಈ ಪ್ರಶ್ನೆಯನ್ನೆ ಹತ್ತಿಕ್ಕಲಾಗುತ್ತಿದೆ.

 ಸುಳ್ಳುಗಳನ್ನು ಹರಿಬಿಡಲಾಗುತ್ತಿದೆ. ರಾಹುಲ್ ಗಾಂಧಿ ಜಗತ್ತಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಓದಿ ಬಂದಿದ್ದಾನೆ. ಆತನನ್ನು ಪಪ್ಪು ಎಂಬಂತೆ ಬಿಂಬಿಸಲಾಗುತ್ತಿದೆ. ಈ ಮಾಧ್ಯಮ ಗೆಳೆಯರ ಸಹಾಯದಿಂದ  ಈತನನ್ನು ಪಪ್ಪು ಎಂದು ಬಿಂಬಿಸಲಾಗಿದೆ. ಆದರೆ ಈ ಪಪ್ಪು ಯಾತ್ರೆ ಹೊರಟ. ಈತ ಪಪ್ಪೂ ಅಲ್ಲ ಎಂದು ಖಚಿತವಾಯಿತು. ಘನತೆಯ ವ್ಯಕ್ತಿ. ಜನರೊಡನೆ ಬೆರೆಯುತ್ತಿದ್ದಾನೆ. ಜನರ ಸಮಸ್ಯೆ ಆಲಿಸುತ್ತಿದ್ದಾನೆ. ಜನರು ಈತನ ಜೊತೆ ನಡೆಯುತ್ತಿದ್ದಾರೆ. ಆಗ ಗಾಬರಿ ಹುಟ್ಟಿದೆ. ರಾಹುಲ್ ಸಂಸತ್ತಿನಲ್ಲಿ ಎತ್ತುವ ಪ್ರಶ್ನೆಗಳಿಗೆ ಉತ್ತರವಿಲ್ಲದೇ ಗಾಬರಿಗೊಂಡಿದ್ದಾರೆ.

 ಏನು ಮಾಡಿದರು.?

 ಒಬ್ಬ ವ್ಯಕ್ತಿಯನ್ನು ತಡೆಯಲು ಇಷ್ಟೆಲ್ಲಾ ಮಾಡಬೇಕಾಗಿ ಬಂತು. ನಿಮಗೆ ಗೊತ್ತಾ? ಸೂರತ್ ನಲ್ಲಿ ಈ ಕೇಸು ಹಾಕಿದ ಮನುಷ್ಯ  ಸ್ವತಃ ಒಂದು ವರ್ಷ ಕಾಲ ಈ ಕೇಸಿಗೆ ತಡೆ  ಕೋರಿ ಸುಮ್ಮನಿದ್ದ. ತನ್ನದೇ ಕೇಸಿಗೆ ತಡೆ ಕೋರಿದ್ದ. ರಾಹುಲ್ ಗಾಂಧಿ ಬಾಷಣ ಮಾಡಿದ ಹದಿನೈದು ದಿನಕ್ಕೆ ಆ ವ್ಯಕ್ತಿ ಮತ್ತೆ ಹಾಜರಾಗಿ ಕೇಸು ಈಗ ನಡೆಯಲಿ ಎನ್ನುತ್ತಾನೆ. ಒಂದೇ ತಿಂಗಳ ಒಳಗೆ ಜಜ್ ಹೇಳುತ್ತಾರೆ  ರಾಹುಲ್ ಗೆ  ಎರಡು ವರ್ಷಗಳ ಶಿಕ್ಷೆ ಅಂತ. ಈ ದೇಶದಲ್ಲಿ ಎಷ್ಟು ಪ್ರಕರಣಗಳಿವೆ ಗೊತ್ತಾ ನಿಮಗೆ? ಹತ್ತಾರು ವರ್ಷಗಳ ಕಾಲ ಪ್ರಕರಣಗಳು ಹಾಗೇ ಬಿದ್ದಿವೆ. ಅದನ್ನು ಕೇಳುವವರಿಲ್ಲ.

 ಈ ದೇಶದ ಪ್ರಧಾನ ಮಂತ್ರಿ ಪುಕ್ಕಲ..  ಹೀಗೆ ಹೇಳಿದ್ದಕ್ಕೆ ನಮ್ಮನ್ನೂ ಜೈಲಿಗೆ ಹಾಕಿ . ಆದರೆ ಸತ್ಯವೇನೆಂದರೆ ಈ ದೇಶದ ಪ್ರಧಾನಿ ಅಂಜುಬುರುಕ. ಅಧಿಕಾರದ ಹುದ್ದೆಯ ಹಿಂದೆ ಅಡಗಿ ಕೂತಿದ್ದಾರೆ. ಈ ಪ್ರಧಾನಿ ಅಹಂಕಾರಿ.  ಈ ದೇಶದ ಪುರಾತನ ಪರಂಪರೆ ಏನೆಂದರೆ ಅಹಂಕಾರಿ ರಾಜನಿಗೆ ಜನರೇ ಉತ್ತರ ಕೊಡುತ್ತಾರೆ. ಅಹಂಕಾರಿ ರಾಜನನ್ನು ಜನ ಗುರುತಿಸುತ್ತಾರೆ. ಈ ದೇಶ ಹೃದಯದಿಂದ ಆಲಿಸುತ್ತೆ. ಹೃದಯದಿಂದ ಮಾತಾಡುತ್ತೆ. ಸತ್ಯವನ್ನು ಗುರುತಿಸುತ್ತೆ.

 ನೆನಪಿಡಿ. ಇಂದಿನಿಂದ  ಎಲ್ಲವೂ ಬದಲಾಗುತ್ತೆ. ಮಾಧ್ಯಮ ಮಿತ್ರರೇ ನಿಮಗೆ ಹೇಳಬಯಸುತ್ತೇನೆ. ನಿಮ್ಮ  ಮೇಲೆ ಎಷ್ಟು ಒತ್ತಡ ಇದೆ, ಇದನ್ನು ಬರೀರಿ ಅದನ್ನು ಬರೆಯಿರಿ ಎಂಬ ಒತ್ತಡ ಇದೆ ; ನನಗೆ ಗೊತ್ತು. ಆದರೆ ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈ ದೇಶದ ಪ್ರಜಾಸತ್ತೆ ಅಪಾಯದಲ್ಲಿದೆ. ನೀವು ಪತ್ರಕರ್ತರಾದಾಗ ನಿಮ್ಮ ಎದೆಯಲ್ಲೂ  ಸತ್ಯವನ್ನು ಹೇಳಬೇಕೆಂಬ ಬಯಕೆ ಇತ್ತು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ನೀವು ಗಟ್ಟಿಯಾಗಿ ನಿಂತು ಹೇಳಿ. ನಾವೆಲ್ಲಾ ಒಂದಾಗಬೇಕಿದೆ. ಯಾಕೆಂದರೆ ದೇಶ ಅಪಾಯದಲ್ಲಿದೆ. ಈ ದೇಶದ ಸಂಪತ್ತೆಲ್ಲವನ್ನೂ ಒಬ್ಬನಿಗೆ ಧಾರೆ ಎರೆಯಲಾಗುತ್ತಿದೆ. ಆತನ ರಕ್ಷಣೆಗೆ ಇಡೀ ಸರಕಾರ ಟೊಂಕ ಕಟ್ಟಿ ನಿಲ್ಲುತ್ತಿದೆ. ಇದನ್ನು ನೀವು ಗುರುತಿಸದೇ ಇದ್ದರೆ ದೇಶ ಇನ್ನಷ್ಟು ಅಪಾಯಕ್ಕೆ ತುತ್ತಾಗಲಿದೆ. ಎಷ್ಟು ಜನ ಈ ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಬಸಿದರೋ, ಅವರೆಲ್ಲ ಈ ಅದಾನಿಗೋಸ್ಕರ ರಕ್ತ ಬಸಿದರೇ?

ದೇಶವಾಸಿಗಳೇ, ಕಣ್ಣು ತೆರೆಯಿರಿ. ಭಯ ಪಡಬೇಡಿ. ಈ ದೇಶದ ಸತ್ಯಕ್ಕೋಸ್ಕರ ಹೋರಾಡಿ. ಈ ದೇಶದ ಏಕತೆಗಾಗಿ ಹೋರಾಡಿ

ಭಾಷಣದ ಸಾರಾಂಶ : ಕೆ.ಪಿ ಸುರೇಶ

Related Articles

ಇತ್ತೀಚಿನ ಸುದ್ದಿಗಳು