Wednesday, June 19, 2024

ಸತ್ಯ | ನ್ಯಾಯ |ಧರ್ಮ

“ವರದಿ ಬರುವುದರಲ್ಲಿದೆ.. ಜೈಲಿಗೆ ಹೋಗಲು ರೆಡಿಯಾಗಿ..” : ಬಿಜೆಪಿ ಅಭ್ಯರ್ಥಿ ಸುಧಾಕರ್ ಗೆ ಸಿದ್ದರಾಮಯ್ಯ ಎಚ್ಚರಿಕೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಕೋವಿಡ್ ಕಾಲದ ಭ್ರಷ್ಟಾಚಾರವನ್ನು ಮತ್ತೆ ನೆನಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೇನು ವರದಿ ಬರುವುದರಲ್ಲಿದೆ.. ಜೈಲಿಗೆ ಹೋಗಲು ಸಿದ್ಧರಾಗಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “‘‘ನಾ ಖಾವೂಂಗಾ ನಾ ಖಾನೇ ದೂಂಗಾ’’ ಎಂದು ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರೇ, ಇಂದು ಚಿಕ್ಕಬಳ್ಳಾಪುರಕ್ಕೆ ಬಂದು ನೀವು ಪ್ರಚಾರ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಅವರಿಗೆ ಕೊರೊನಾ ಕಾಲದಲ್ಲಿ ಎಷ್ಟು ನುಂಗಿದ್ದೀರಿ ಎಂದು ಕೇಳಿದ್ರಾ? ಕೊರೊನಾ ಹೆಸರಲ್ಲಿ ಆಗಿನ ಆರೋಗ್ಯ ಸಚಿವ ಡಾ.ಸುಧಾಕರ್ 40,000 ಕೋಟಿ ರೂಪಾಯಿ ನುಂಗಿದ್ದಾರೆ ಎಂದು ಆರೋಪಿಸಿದ್ದು ನಾವಲ್ಲ, ನಿಮ್ಮದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ. ಅಷ್ಟೊಂದು ದುಡ್ಡನ್ನು ಡಾ.ಸುಧಾಕರ್ ಒಬ್ಬರೇ ನುಂಗಿದ್ರಾ? ಒಂದು ಪಾಲು ಮೇಲ್ಗಡೆಗೂ ಹೋಗಿತ್ತಾ?” ಎಂದು ಪ್ರಶ್ನಿಸಿದ್ದಾರೆ.

ಚಾಮರಾಜ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾಯಕ ಜನ ಆಕ್ಷಿಜನ್ ಇಲ್ಲದೆ ನರಳಾಡುತ್ತಿರುವಾಗ ಆರೋಗ್ಯ ಸಚಿವ ಡಾ.ಸುಧಾಕರ್ ನಾಪತ್ತೆಯಾಗಿದ್ದರು. ಆಕ್ಸಿಜನ್ ಇಲ್ಲದೆ ಸಾವಿಗೀಡಾದ 36 ಮಂದಿಯ ಕುಟುಂಬ ರೋಧಿಸುತ್ತಿದ್ದರೆ, ಡಾ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡದೆ ಬೆಂಗಳೂರಿನಲ್ಲಿಯೇ ಕೂತು ‘’ಸತ್ತವರು ಎರಡೇ ಮಂದಿ’’ ಎಂಬ ಉಡಾಫೆಯಿಂದ ಹೇಳಿಕೆ ನೀಡಿ ರಾಜ್ಯದ ಜನರಿಂದ ಛೀಮಾರಿಗೀಡಾಗಿದ್ದರು. ಈ ಸಾಧನೆಯನ್ನೂ ಅವರ ಪ್ರಚಾರದ ಭಾಷಣದಲ್ಲಿ ಹೇಳಬೇಕಾಗಿತ್ತಲ್ಲವೇ ನರೇಂದ್ರ ಮೋದಿಯವರೇ? ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು “ಆರೋಗ್ಯ ಸಚಿವರ ಬ್ರಹ್ಮಾಂಡ ಭ್ರಷ್ಟಾಚಾರದ ಕತೆ ಕೇಳಿ ಇಡೀ ರಾಜ್ಯ ಬೆಚ್ಚಿ ಬಿದ್ದಿತ್ತು. 45 ರೂಪಾಯಿಗೆ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಮಾಸ್ಕ್‌ನ್ನು 485 ರೂ. ಗೆ ಖರೀದಿಸಿದ್ದರು. ತಮಿಳುನಾಡು ಸರ್ಕಾರ ವೆಂಟಿಲೇಟರ್ ಒಂದಕ್ಕೆ ರೂ. 4.78 ಲಕ್ಷ ನೀಡಿದ್ದರೆ ಬಿಜೆಪಿ ಸರ್ಕಾರ 15 ರಿಂದ 18 ಲಕ್ಷ ರೂ. ನೀಡಿ ಖರೀದಿಸಿತ್ತು. 80 ರೂ. ಸ್ಯಾನಿಟೈಸರ್‍‌ಗೆ 250 ರೂ. ಕೊಟ್ಟು ಖರೀದಿಸಿದ್ದರು. ದಾಖಲೆಗಳ ಸಹಿತ ಈ ಭ್ರಷ್ಟಾಚಾರವನ್ನು ನಾವು ಬಯಲಿಗೆಳೆದದ್ದು ನೀವು ಗಮನಿಸಿರಲಿಲ್ಲವೇ?” ಎಂದು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಬೆಡ್ ಕೊರತೆಯ ಕಾರಣ ನೀಡಿ 30 ಸಾವಿರ ಬೆಡ್ ಗಳನ್ನು ನೂರು ದಿನಗಳಿಗಾಗಿ ಒಟ್ಟು 240 ಕೋಟಿ ರೂಪಾಯಿ ಬಾಡಿಗೆ ನೀಡಿ ತರಿಸಿಕೊಂಡಿದ್ದರು. ಬಾಡಿಗೆಗೆ ಪಡೆಯುವ ಬದಲಿಗೆ ಹೊಸ ಬೆಡ್ ಗಳನ್ನು ಖರೀದಿಸಿದ್ದರೆ 21 ಕೋಟಿ ರೂಪಾಯಿಯಷ್ಟೇ ಖರ್ಚಾಗುತ್ತಿತ್ತು. 240 ಕೋಟಿ ರೂಪಾಯಿ ಬೆಡ್ ಬಾಡಿಗೆಯಲ್ಲಿ ಎಷ್ಟು ಪಾಲು ಯಾರ ಜೇಬಿಗೆ ಹೋಗಿತ್ತು ಎಂದು ಡಾ.ಸುಧಾಕರ್ ಅವರನ್ನು ಕೇಳಬೇಕಿತ್ತಲ್ಲಾ ಮೋದಿಯವರೆ? ಎಂದು ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ.

“ವೈದ್ಯರು ಇಲ್ಲದೆ, ಬೆಡ್ ಇಲ್ಲದೆ, ಆಕ್ಸಿಜನ್ ಇಲ್ಲದೆ, ಔಷಧಿ ಇಲ್ಲದೆ ರಾಜ್ಯದಲ್ಲಿ ಕೊರೊನಾ ಸೋಂಕಿತರು ನರಳಾಡುತ್ತಿದ್ದಾಗ ನೀವು ಕೊರೊನಾ ಓಡಿಸಲು ತಟ್ಟೆ ಬಡಿಯಲು ಹೇಳಿದಿರಿ. ಆರೋಗ್ಯ ಸಚಿವ ಡಾ.ಸುಧಾಕರ್ ಅವರು ತಮ್ಮ ಐಷಾರಾಮಿ ಮನೆಯ ಈಜುಕೊಳದಲ್ಲಿ ಮಕ್ಕಳೊಡನೆ ನೀರಾಟ ಆಡುತ್ತಿದ್ದರು. ಇಂತಹ ಅಸಮರ್ಥ, ಭ್ರಷ್ಟ ಮಾಜಿ ಸಚಿವನ ಪರವಾಗಿ ನೀವು ಪ್ರಚಾರಕ್ಕೆ ಬಂದು ಹೋದಿರಿ ಎಂದರೆ ಅವರ ಎಲ್ಲ ಕುಕೃತ್ಯಗಳಿಗೆ ನಿಮ್ಮ ಅಖಂಡ ಆಶೀರ್ವಾದದ ಬಲ ಇದೆ ಎಂದು ತಿಳಿದುಕೊಳ್ಳಬಹುದೇ ಮೋದಿ ಅವರೇ?” ಎಂದು ಹೇಳಿದ್ದಾರೆ.

ಹಾಗೆಯೇ ಸಂಸದ ತೇಜಸ್ವಿ ಸೂರ್ಯ ಮೇಲಿರುವ ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆಯ ಬಗ್ಗೆಯೂ ಪ್ರಸ್ತಾಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ “ನಿಮ್ಮ ಪಕ್ಷದ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಪರಸ್ಪರ ಷಾಮೀಲಾಗಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸೇರಿ ಬೆಡ್ ದಂಧೆ ಮಾಡಿದ್ದರು. ನಿಮ್ಮ ಪಕ್ಷದ ನಾಯಕರು ಡಿ.ಜೆ ಹಳ್ಳಿಯ ಕೊರೊನಾ ವೈರಸ್ ನಲ್ಲಿ ಹಿಂದೂ-ಮುಸ್ಲಿಮ್ ಧರ್ಮಗಳ ತಳಿಗಳನ್ನು ಹುಡುಕಿ ಕೋಮುಗಲಭೆಗೆ ಕಿಡಿ ಹಾರಿಸಿದರು. ಕರ್ನಾಟಕದಲ್ಲಿ ಹೆಚ್ಚು ಜನರು ಸಾವಿಗೀಡಾದದ್ದು ಕೋರೊನಾ ವೈರಸ್ ನಿಂದ ಅಲ್ಲ, ಡಾ.ಸುಧಾಕರ್ ಅವರ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದಿಂದ ನರೇಂದ್ರ ಮೋದಿಯವರೇ” ಎಂದು ಕೇಳಿದ್ದಾರೆ.

“ಕೊರೊನಾ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಡಿಸಿ ಜನರ ಮುಂದಿಟ್ಟಾಗ ರೋಷಾವೇಶದಿಂದ ಡಾ.ಸುಧಾಕರ್ ಅವರು ಆರೋಪ ಸಾಬೀತಾದ್ರೆ ಸಾರ್ವಜನಿಕವಾಗಿ ನೇಣು ಹಾಕ್ಕೋತೀನಿ ಎಂದು ಸವಾಲು ಹಾಕಿದ್ದರು. ಕೊರೊನಾ ಭ್ರಷ್ಟಾಚಾರದ ತನಿಖೆಗಾಗಿಯೇ ನಿವೃತ್ತಿ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗ ಮಾಡಿದ್ದೆವು. ನೇಣು ಹಾಕ್ಕೊಳೋದೇನು ಬೇಡ, ಈಗ ಅವರು ಜೈಲಿಗೆ ಹೋಗೋಕೆ ರೆಡಿಯಾಗಿದ್ದರೆ ಸಾಕು.” ಖಡಕ್ ಸಂದೇಶ ರವಾನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು