Wednesday, July 3, 2024

ಸತ್ಯ | ನ್ಯಾಯ |ಧರ್ಮ

ಇಸ್ಪೀಟ್‌ ಆಡುತ್ತಿದ್ದವರನ್ನು ಬಲಿ ತೆಗೆದುಕೊಂಡ ನದಿ: ಕೃಷ್ಣೆಯಲ್ಲಿ ಮುಳಗಿ 6 ಜನ ಸಾವು

ವಿಜಯಪುರ: ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಸಮೀಪದ ಕೃಷ್ಣಾ ನದಿಯ ಬಲೂಟಿ ಜಾಕ್‌ವೆಲ್‌ನಲ್ಲಿ ಮಂಗಳವಾರ ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಜೂಜಾಡುತ್ತಿದ್ದಾಗ ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ತೆಪ್ಪ ಏರಿ ನದಿಯೊಳಗಡೆ ಹೋಗಿದ್ದರು ಎನ್ನಲಾಗಿದೆ.

ನದಿಯ ದಡದಲ್ಲಿ ಇಸ್ಪೀಟ್ ಆಡುತ್ತಿದ್ದ ಇವರನ್ನು ಬಂಧಿಸಲು ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ಆತುರದಲ್ಲಿ, ಅವರು ಮೀನುಗಾರರು ನದಿಯ ದಡದಲ್ಲಿ ಇಟ್ಟುಕೊಂಡಿದ್ದ ತೆಪ್ಪ ಬಳಸಿಕೊಂಡು ನಡುಗಡ್ಡೆ ಪ್ರವೇಶಿಸಲು ಯತ್ನಿಸಿದ್ದಾರೆ. ಆದರೆ, ಇದ್ದಕ್ಕಿದ್ದಂತೆ, ಬಲವಾದ ಗಾಳಿಗೆ ತೆಪ್ಪ ಅಲುಗಾಡಿದ್ದು, ಅದರಲ್ಲಿದ್ದವರು ನಿಯಂತ್ರಣ ಕಳೆದುಕೊಂಡರು. ಬಿದಿರು ಮತ್ತು ಪಾಲಿಥಿನ್ ಹಾಳೆಗಳಿಂದ ನಿರ್ಮಿಸಲಾಗಿದ್ದ ವೃತ್ತಾಕಾರದ ತೆಪ್ಪ ನದಿ ಮಧ್ಯದಲ್ಲಿ ಮುಗುಚಿ ಬಿದ್ದಿದೆ. ಅದರಲ್ಲಿದ್ದ ಎಂಟು ಜನರಲ್ಲಿ ಇಬ್ಬರು ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ. ಆದರೆ, ಆರು ಮಂದಿ ನೀರಿನಲ್ಲಿ ಮುಳುಗಿದ್ದು, ಈವರೆಗೆ ಇಬ್ಬರ ದೇಹ ಮಾತ್ರ ಪತ್ತೆಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎರಡು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಂಗಳವಾರ ತಡರಾತ್ರಿವರೆಗೂ ಉಳಿದ ಶವಗಳಿಗಾಗಿ ಶೋಧಕಾರ್ಯ ನಡೆದಿದೆ. ಪೊಲೀಸ್ ವರಿಷ್ಠಾಧಿಕಾರಿ ರಿಸಿಕೇಶ್ ಸೋನಾವಾನೆ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು