Home ದೇಶ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ: ಎರಡನೇ ಹಂತದ ಮತದಾನ ಆರಂಭ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ: ಎರಡನೇ ಹಂತದ ಮತದಾನ ಆರಂಭ

0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಆರಂಭವಾಗಿದೆ. ಮತದಾನ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿದೆ. ಪಿರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಶ್ರೀನಗರ, ಬುದ್ಗಾಮ್, ರಾಜೌರಿ, ಪೂಂಚ್, ಗಂದರ್ಬಾಲ್ ಮತ್ತು ರಿಯಾಸಿ ಜಿಲ್ಲೆಗಳ 26 ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯುತ್ತಿದೆ.

ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬಿಜೆಪಿ ಜಮ್ಮು ಮತ್ತು ಕಾಶ್ಮೀರ ಮುಖ್ಯಸ್ಥ ರವೀಂದರ್ ರೈನಾ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಸೇರಿದಂತೆ ಹಲವು ಪ್ರಮುಖ ನಾಯಕರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಒಮರ್ ಅಬ್ದುಲ್ಲಾ ಗಂದರ್‌ಬಾಲ್ ಮತ್ತು ಬುದ್ಗಾಮ್ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಸೆಂಟ್ರಲ್ ಶಾಲ್ತೆಂಗ್ ಕ್ಷೇತ್ರದಲ್ಲಿ ಹಮೀದ್ ಕರ್ರಾ ಮತ್ತು ನೌಶೆರಾ ಬದಲಿಗೆ ರವೀಂದರ್ ರೈನಾ ನಿಂತಿದ್ದಾರೆ.

ಈ ಹಂತದಲ್ಲಿ 25.78 ಲಕ್ಷ ಮತದಾರರು 239 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. 3,502 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಅವುಗಳಲ್ಲಿ 1,056 ಮತಗಟ್ಟೆಗಳು ನಗರ ಪ್ರದೇಶದಲ್ಲಿ ಮತ್ತು 2,446 ಗ್ರಾಮೀಣ ಪ್ರದೇಶದಲ್ಲಿವೆ.

ಇದೇ ತಿಂಗಳ 18ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ.61.38ರಷ್ಟು ಮತದಾನವಾಗಿದೆ. ಉಳಿದ 40 ಸ್ಥಾನಗಳಿಗೆ ಅಕ್ಟೋಬರ್ 1 ರಂದು ಕೊನೆಯ ಸುತ್ತಿನ ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಹೊರಬೀಳಲಿದೆ.

You cannot copy content of this page

Exit mobile version