Monday, July 28, 2025

ಸತ್ಯ | ನ್ಯಾಯ |ಧರ್ಮ

ಊಹಾಪೋಹಕ್ಕೆ ಕಿವಿಗೊಡದಿರಿ ; ‘ಶಕ್ತಿ ಯೋಜನೆ’ ಮುಂದಿನ 10 ವರ್ಷಕ್ಕೂ ಜಾರಿಯಲ್ಲಿರಲಿದೆ : ಸಚಿವ ರಾಮಲಿಂಗಾರೆಡ್ಡಿ

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ‘ಗ್ಯಾರಂಟಿ’ ಯೋಜನೆಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ ಜಾರಿಯಾದ ಎರಡೇ ತಿಂಗಳಿಗೆ ಸ್ಥಗಿತವಾಗಿದೆ ಎಂಬ ಸುದ್ದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಶಕ್ತಿ ಯೋಜನೆ ನಿಲ್ಲಿಸಲಾಗುತ್ತಿದೆ ಎಂಬ ಸುದ್ದಿ ಕೇವಲ ಊಹಾಪೋಹ ಅಷ್ಟೆ. ಇದಕ್ಕೆ ಕಿವಿಗೊಡದಿರಿ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟಿ ಯೋಜನೆಯಾಗಿರುವ ಶಕ್ತಿ ಯೋಜನೆ ಜಾರಿಯಾದ ಮೊದಲ ದಿನದಿಂದಲೇ ಹೆಚ್ಚು ಜನಮನ್ನಣೆ ಗಳಿಸಿತ್ತು. ವಿಶೇಷವಾಗಿ ರಾಜ್ಯದ ಮಹಿಳೆಯರು ಯೋಜನೆ ಜಾರಿಗೆ ಬಂದ ದಿನದಿಂದ ಇದರ ಸದುಪಯೋಗ ಪಡಿಸಿಕೊಂಡಿದ್ದರು. ಈ ಯೋಜನೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕೂಡಾ ಹೆಚ್ಚು ಲಾಭದಾಯಕವಾಗಿದೆ ಎಂಬುದಕ್ಕೆ ಶಕ್ತಿ ಯೋಜನೆ ಕಾರಣವಾಗಿದೆ.

ಆದರೆ ಕೆಲವು ದಿನಗಳಿಂದ ಶಕ್ತಿ ಯೋಜನೆ ಇನ್ನು ಕೆಲವೇ ದಿನಗಳು ಮಾತ್ರ ಎಂಬ ಸುದ್ದಿ ರಾಜ್ಯದ ಮಹಿಳೆಯರಿಗೆ ಹೆಚ್ಚು ಆತಂಕ ಸೃಷ್ಟಿಸಿತ್ತು. ‘ಶಕ್ತಿ ಯೋಜನೆ ಸ್ಥಗಿತಗೊಳಿಸಲು ಹೈಕೋರ್ಟ್ ಆದೇಶ ನೀಡಿದೆ, ಈ ಕಾರಣ ಆಗಸ್ಟ್ 15 ರಿಂದ ಈ ಯೋಜನೆ ಕೊನೆಗೊಳ್ಳಲಿದೆ’ ಎಂಬ ವಿವರ ಇದ್ದ ಸಂದೇಶಗಳು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ಬಗ್ಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ರವರು ಇದು ಸುಳ್ಳು ಸುದ್ದಿ ಎಂದು ಪ್ರತಿಕ್ರಿಯಿಸಿದ ಬೆನ್ನಲ್ಲೇ, ‘ಸರ್ಕಾರದ ಜನಪರ ಕಾರ್ಯ ಸಹಿಸದ ವಿರೋಧಿಗಳು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಆದರೇ ಅದು ಸುಳ್ಳು. ಯಾವುದೇ ಮಹಿಳೆಯರು ಆತಂಕ, ಭಯ ಪಡುವ ಅಗತ್ಯವಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

‘ಇನ್ನೂ ರಾಜ್ಯದಲ್ಲಿ 10 ವರ್ಷಗಳ ಕಾಲ ನಮ್ಮದೇ ಸರ್ಕಾರವಿರಲಿದೆ. 10 ವರ್ಷಗಳ ಕಾಲವೂ ಶಕ್ತಿ ಯೋಜನೆ ಮುಂದುವರೆಯುತ್ತದೆ. ಮಹಿಳೆಯರು ಯಾರೂ ಕೂಡ ಪಾಸ್ ಪಡೆಯುವ ಅಗತ್ಯವಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಹೀಗಾಗಿ ಶಕ್ತಿ ಯೋಜನೆ ಮುಂದುವರೆಯುತ್ತೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page