ದೆಹಲಿ: ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ಜನಾಂಗೀಯ ಹತ್ಯೆ ನಡೆಸುತ್ತಿರುವಾಗ ಭಾರತ ಸರ್ಕಾರ ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಇಸ್ರೇಲ್ ಜನಾಂಗೀಯ ಹತ್ಯೆಗೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಇದುವರೆಗೂ 60,000ಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಿದ್ದು, ಅವರಲ್ಲಿ 18,430 ಮಕ್ಕಳು ಇದ್ದಾರೆ ಎಂದು ಹೇಳಿದರು. ಇಸ್ರೇಲ್ ನೂರಾರು ಜನರನ್ನು ಹಸಿವಿನಿಂದ ಸಾಯಿಸುತ್ತಿದೆ, ಮೃತರಾದವರಲ್ಲಿ ಹೆಚ್ಚಿನವರು ಮಕ್ಕಳೇ ಆಗಿದ್ದು, ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಈ ಅಪರಾಧಗಳ ಬಗ್ಗೆ ಮೌನ ಮತ್ತು ಉದಾಸೀನತೆ ತೋರುವುದು ಅಪರಾಧ. ಐವರು ಅಲ್ ಜಜೀರಾ ಪತ್ರಕರ್ತರ ಕ್ರೂರ ಹತ್ಯೆ ಪ್ಯಾಲೆಸ್ತೀನ್‌ನಲ್ಲಿ ನಡೆದ ಮತ್ತೊಂದು ಭೀಕರ ಅಪರಾಧ ಎಂದು ಅವರು ಸೋಷಿಯಲ್ ಮೀಡಿಯಾ ಪೋಸ್ಟಿನಲ್ಲಿ ಹೇಳಿದ್ದಾರೆ.
ಗಾಜಾದಲ್ಲಿ ಪತ್ರಕರ್ತರಿಗೆ ವಸತಿ ನೀಡುತ್ತಿದ್ದ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತರು ಮೃತಪಟ್ಟಿದ್ದರು. ಐವರು ಅಲ್ ಜಜೀರಾ ಪತ್ರಕರ್ತರನ್ನು ಕ್ರೂರವಾಗಿ ಕೊಲೆ ಮಾಡಿರುವುದು ಪ್ಯಾಲೆಸ್ತೀನ್ ನೆಲದ ಮೇಲೆ ನಡೆದ ಘೋರ ಅಪರಾಧ ಎಂದು ಹೇಳಿದರು.
ಸತ್ಯಕ್ಕಾಗಿ ಹೋರಾಡುವವರ ಧೈರ್ಯವನ್ನು ಇಸ್ರೇಲ್‌ನ ಹಿಂಸೆ ಮತ್ತು ದ್ವೇಷ ಎಂದಿಗೂ ಮುರಿಯಲು ಸಾಧ್ಯವಿಲ್ಲ ಎಂದು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಅಧಿಕಾರಕ್ಕೆ ಮತ್ತು ವ್ಯಾಪಾರಕ್ಕೆ ಗುಲಾಮರಾದ ಮಾಧ್ಯಮ ಜಗತ್ತಿನಲ್ಲಿ ಈ ಧೀರರು ನಿಜವಾದ ಪತ್ರಿಕೋದ್ಯಮ ಯಾವುದು ಎಂಬುದನ್ನು ನೆನಪಿಸಿದರು, ಅವರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಅವರು ಹೇಳಿದರು. ಇಸ್ರೇಲ್‌ನ ದೌರ್ಜನ್ಯಗಳ ವಿರುದ್ಧ ಪ್ರಿಯಾಂಕಾ ತಮ್ಮ ಧ್ವನಿ ಎತ್ತಿರುವುದರ ಜೊತೆಗೆ ಪ್ಯಾಲೆಸ್ತೀನ್ ಜನರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.