Home ಅಂಕಣ ಬಯಲು ಸಂತೆಯ ಮೌನ – 2 : ರೊಟ್ಟಿ ಬುತ್ತಿಯ ಬಿಚ್ಚಿ…

ಬಯಲು ಸಂತೆಯ ಮೌನ – 2 : ರೊಟ್ಟಿ ಬುತ್ತಿಯ ಬಿಚ್ಚಿ…

0

“..ಈಗ ರೊಟ್ಟಿ ಬುತ್ತಿ ಬಿಚ್ಚುತ್ತಿರುವೆ ಕೂಡಿ ಉನ್ನುವ ಹೊತ್ತು ತಡ ಮಾಡದೆ ಕೈ ಹಾಕಿ. ಹಂಚಿ ತಿಂದ ಖುಷಿ. ರೊಟ್ಟಿ ಬುತ್ತಿಯ ಹೊತ್ತು ತಂದ ಖುಷಿ ನನಗಿದೆ..” ಹಳ್ಳಿ ಸೊಗಡಿನ ಭಾಷೆಯಲ್ಲಿ ಲೇಖಕ ಆನಂದ ಭೋವಿಯವರ “ಬಯಲು ಸಂತೆಯ ಮೌನ” ಅಂಕಣ ಬರಹ

ಮಟ ಮಟ ಮಧ್ಯಾಹ್ನ ರಣ ಬಿಸಿಲಿನ ಕಡತಕ್ಕ ಕರ್ರಗ ಸುಡುತ್ತಿದ್ದ ಮುಖದ ಮ್ಯಾಗ, ನಗೆ ಮೂಡಬೇಕಂದ್ರ ನಮ್ಮೂರಿನಿಂದ ಬರುತ್ತಿದ್ದ ಕೆಂಪು ಬಸ್ಸು ಹಾರ್ನ ಮಾಡಿ. ಕೈಗೆ ಸಿಗುತ್ತಿದ್ದ ರೊಟ್ಟಿ ಗಂಟಿನ ಬುತ್ತಿ ಕಂಡಾಗ ಮಾತ್ರ. ಧಾರವಾಡದ ಕಾಲೇಜು ದಿನಗಳು. ಆಗ ನಮ್ಮೂರಿನ ಮೇಲೆ ಧಾರವಾಡಕ್ಕೆ ಬರುತ್ತಿದ್ದಿದ್ದು ಒಂದೇ ಒಂದು ಬಸ್ಸು . ಮಧ್ಯಾಹ್ನದ ಹೊತ್ತಿಗೆ ಧಾರವಾಡಕ್ಕೆ ಬರುತ್ತಿದ್ದ ಬಸ್ಸಿನ ಡ್ರೈವರನ ಕ್ಯಾಬಿನ ತುಂಬ ನಮ್ಮ ನಮ್ಮ ಹೆಸರಿನ ಚೀಟಿ ಅಂಟಿಸಿಕೊಂಡ ರೊಟ್ಟಿ ಬತ್ತಿಗಳ ರಾಶಿ ರಾಶಿ. ಅದರಲ್ಲಿಯ ನಮ್ಮ ನಮ್ಮ ಗಂಟುಗಳು ಕೈ ಸೇರಿದಾಗ ಹಸಿವು ತೀರಿದಷ್ಟೆ ಖುಷಿ. ಒಮ್ಮೊಮ್ಮೆ ಬರದೇ ಇರುತ್ತಿದ್ದ ಬಸ್ಸು, ಲೇಟಾಗಿ ಗಂಟೆಗಟ್ಟಲೆ ಕಾಯುಸುತ್ತಿದ್ದ ಬಸ್ಸು, ಆ ದಿನಗಳು ನೆನಪಾದರೆ ಈಗ ಮೈ ಜುಮ್ಮೆನ್ನುತ್ತದೆ.

ಆ ರೊಟ್ಟಿಯ ಚೂರು ನಮ್ಮ ಹಸಿವಿಗೆ ಅಮೃತದ ಪಾಯಸವಾಗಿತ್ತು. ಒಣಗಿದ ಗಂಟಲಿಗೆ ಇಳಿದು ನೆಮ್ಮದಿ ನೀಡುತ್ತಿತ್ತು. ರೊಟ್ಟಿಬುತ್ತಿ ಹೊತ್ತು ತರುತ್ತಿದ್ದ ಬಸ್ಸು ನಮ್ಮ ಪಾಲಿನ ಅನ್ನಪೂರ್ಣೇಶ್ವರಿ ತರಹ ಆಗಿತ್ತು. ಬಸ್ಸು ಕೈ ಕೊಟ್ಟಾಗ ನಮಗಾಗುತ್ತಿದ್ದ ಸಂಕಟ. ಮೊದಲೆ ಸುಡುತ್ತಿದ್ದ ಬಿಸಿಲು ನಮ್ಮನ್ನ ಇನ್ನಷ್ಟು ಸುಟ್ಟು ಕೊತ ಕೊತ ಕುದಿಯಿಸುತ್ತಿತ್ತು. ಆದರೂ ನಮ್ಮನ್ನು ಸದಾ ಕಾಪಾಡಿದ್ದು ಆ ರೊಟ್ಟಿ ಗಂಟು ಮಾತ್ರ. ರಾತ್ರಿಯ ಹೊತ್ತು ಮುಂಜಾನೆಯ ಪಲ್ಯ ಹಳಸಿ ಹೋಗಿದ್ದರೂ, ರೊಟ್ಟಿ ಮೋಸ ಮಾಡುತ್ತಿರಲಿಲ್ಲ. ಊಳಿದ ರೊಟ್ಟಿಯ ತುಂಡನ್ನು ಪಕ್ಕದ ಹೊಟೇಲ್‌ ನಲ್ಲಿ ಚಿಲ್ಲರೆ ದುಡ್ಡಲ್ಲಿ ತಂದ ಸಾಂಬಾರಿನಲ್ಲಿ ಎದ್ದಿ ಎದ್ದಿ ತಿನ್ನುವಾಗ ಪಟ್ಟ ತೃಪ್ತಿ ವರ್ಣಿಸಲು ಅಸಾಧ್ಯ. ಮುಂದೆ ಮೈಸೂರಿನಲ್ಲಿ ಶಿಕ್ಷಕರ ತರಭೇತಿಯ ಕೊರ್ಸ ವ್ಯಾಸಂಗ ಮಾಡುತಿರುವಾಗ ಊರಿಗೆ ಬಂದಾಗಲೊಮ್ಮೆ ಚೀಲಗಟ್ಟಲೆ ರೊಟ್ಟಿ ಕಟ್ಟಿಕೊಂಡು ಹೋಗುತ್ತಿದ್ದೇವು. ಆ ಕಡೆಯ ಸ್ನೇಹಿತರೆಲ್ಲಾ ಖಡಕ್‌ ರೊಟ್ಟಿಯನ್ನು ಹಪ್ಪಳದಂತೆ ಬಾವಿಸಿ ಕುರಂ ಕುರಂ ತಿಂದು ರೊಟ್ಟಿಯ ಚಪಲಕ್ಕೆ ಬಿದ್ದವರಂತೆ,ತಿಂಗಳುಗಟ್ಟಲೆ ತಿನ್ನಲು ತಂದ ರೊಟ್ಟಿಯನ್ನು ತಾಸಿನೊಳಗೆ ಖಾಲಿ ಮಾಡಿ ನಮಗೆ ಕಣ್ಣೀರು ತರಿಸಿದ್ದು ಇದೆ.

ರೊಟ್ಟಿ ಅಂದ್ರ ಯಾರಿಗೆ ಇಷ್ಟ ಇಲ್ಲ ಹೇಳಿ. ನಮ್ಮ ಬದುಕಿನುದ್ದಕ್ಕೂ ರೊಟ್ಟಿಯ ಮೋಹದಲ್ಲಿ ಬೆಳೆದವರು ನಾವು. ಬಿಸಿ ಬಿಸಿ ರೊಟ್ಟಿಯ ರುಚಿ ನಾಲಿಗೆಯ ಆಸೆಗಳನೆಲ್ಲಾ ತೀರಿಸಿದೆ. ಉತ್ತರ ಕರ್ನಾಟಕದ ಭಾಗದ ಜನರ ಪ್ರಮುಖ ಆಹಾರವಾಗಿ ರೊಟ್ಟಿ ನಮ್ಮ ಮನೆಗಳನೆಲ್ಲಾ ಆವರಿಸಿದೆ. ಸುಟ್ಟು ಕರಕಲಾದಷ್ಟು ನಮ್ಮೆಲ್ಲರ ಆರೋಗ್ಯವನ್ನು ಗಟ್ಟಿಯಾಗಿಸಿದ ಕೀರ್ತಿ ರೊಟ್ಟಿಯದು. ಹಂಗ ಬುತ್ತಿಯು ಸಹ ತನ್ನದೆ ವೈಶಿಷ್ಯ ಹೊಂದಿದ್ದು ವಿಚಿತ್ರ. ಈಗಲೂ ನಮ್ಮ ಭಾಗದ ರೈತಾಪಿ ಜನಗಳ ಕೈಯಲ್ಲಿ ರೊಟ್ಟಿ ಬುತ್ತಿಯ ನೋಡಬಹುದು. ರೈತ ಮಹಿಳೆಯ ತಲೆ ಮೇಲೆ ಶಿವನ ಜಡೆಯ ಹೆಣೆದಂತೆ ಬುತ್ತಿಗಂಟು ನಲಿಯುತ್ತಿರುತ್ತದೆ. ಬುತ್ತಿ ಕಟ್ಟಲು ಯಾವುದೇ ಡಬ್ಬಿ, ಕ್ಯಾರಿಯರ್‌ ಬೇಕಿಲ್ಲ. ಅಂಗೈ ಅಗಲದ ಎಲೆಯಂತೆ ಅರಳಿರುವ ರೊಟ್ಟಿಯನ್ನು ತಬ್ಬಿಕೊಳ್ಳಲು ಮಾಸಿದ ಬಟ್ಟೆಯ ತುಣಕೊಂದು ಇದ್ದರೆ ಸಾಕು. ನಮಗೆ ಬೇಕಾದ ಪಲ್ಯ , ಹಿಂಡಿ , ಕಾಳುಗಳನೆಲ್ಲಾ ರೊಟ್ಟಿ ತನ್ನ ಉದರದಲ್ಲಿಟ್ಟು ಕಾಪಾಡುತ್ತದೆ. ಹೀಗೆ ಕಟ್ಟಿದ ಬುತ್ತಿಗಂಟು ತಲೆಯೇರಿ. ಕೈ ಹಿಡಿದು ಉರು ಕೇರಿ, ಹೊಲ, ಗದ್ದೆ, ಬೆಟ್ಟಗುಡ್ಡ ಎಲ್ಲಿಗಾದರೂ ಜೊತೆಗೆ ಗಂಟುಬಿದ್ದ ಸಂಗಾತಿಯಂತೆ ನಮ್ಮ ಬೆನ್ನು ಬೀಳುತ್ತದೆ. ರೈತ, ಕಾರ್ಮಿಕ. ಬಡವ ಶ್ರೀಮಂತನಲ್ಲದೆ ಪ್ರತಿಯೊಬ್ಬರ ಹಸಿವು ತೀರಿಸುವ ಕಾಯಕದಲ್ಲಿ ನಿರತವಾಗಿದೆ. ಹಂಗ ರೊಟ್ಟಿ ತಿನ್ನಾಕ ತಾಟು ಬೇಡುವ ಜನರು ಕಡಿಮೆ. ಕೈಯಾಗ ರೊಟ್ಟಿ ಹಿಡಕೊಂಡು ಮನೆ ತುಂಬ ಓಡಾಡಿ ತುತ್ತು ಮುರಿದು ತಿಂದು ಬೆಳೆದವರೆ ನಾವೆಲ್ಲರು.

ರೊಟ್ಟಿಯ ತಟ್ಟಿ ತಟ್ಟಿ ನೋಯತಾವ ನನ್ನ ರೊಟ್ಟಿ ಬೆಳವಳ ನಾಡಿಗೆ ನನ್ನ್ಯಾಕ ಕೊಟ್ಟಿ. ಮಲೆನಾಡಿನ ಹೆಣ್ಣು ಮಗಳು ತನ್ನ ನಸೀಬನ್ನು ಜರೆದ ಜಾನಪದ ಹಾಡಿದೆ. ಆದರೆ ಇದೆ ಹಾಡನ್ನು ಬಯಲು ಸೀಮೆಯ ತಾಯಂದಿರು ಹಾಡಲಾರರೇನೋ… ಯಾಕಂದ್ರ ಈ ರೊಟ್ಟಿ ಮತ್ತು ಹೆಣ್ಣು ಮಕ್ಕಳು ಬಿಡಿಸಲಾರದ ಅವಿನಾಭಾವ ಸಂಬಂಧ. ಅವರು ಬದುಕು ಆರಂಭವಾಗುವುದೆ ರೊಟ್ಟಿಯ ಜೊತೆ. ಬೆಳಿಗ್ಗೆ ಬೆಳಿಗ್ಗೆ ನಮ್ಮ ಊರುಗಳಲ್ಲಿ ತಟ್ಟ ತಟ್ಟ ರಾಗಬದ್ದವಾದ ಸಪ್ಪಳ ಇರದಿದ್ದರ ನಾವ ಏನೋ ಕಳೆದುಕೊಂಡಂಗ. ಪ್ರತಿಯೊಬ್ಬ ತಾಯಿ ತನ್ನ ಮಗಳಿಗೆ ಪ್ರಿತಿಯಿಂದ ಕಲಿಸಿದ ಕಲೆ ಇದು. ರೊಟ್ಟಿ ಬಡಿಯುವ ಸಂಗೀತದ ಗುನು ಗುನು ಅವರ ಬಾಲ್ಯ, ಯೌವನ ವೃದ್ದಾಪದ ಬಾವಗೀತೆಯಾಗಿ ತೇಲಿಹೋಗಿದೆ.

ಆದರ ರೊಟ್ಟಿ ಮಾಡುವ ಕಲೆ ಅಥವಾ ತಾಳ್ಮೆ ಗಂಡುಮಕ್ಕಳಿಗೆ ಒಲಿಯಲೇ ಇಲ್ಲ. ನಳ ಮಹಾರಾಜನು ಸಹ ರೊಟ್ಟಿ ಮಾಡದೆ ಇರಬಹುದು. ಹೇಣ್ತನದ ತಾಯಿಗುಣ, ನಾಜೂಕತೆ ಜೋಳದ ಹಿಟ್ಟಿನಲ್ಲಿ ಬೆರೆತು ಅದಕ್ಕೆ ಬಡಿಯುವಾಗ ಮೃದುತ್ವ ನೀಡಿರಬಹುದು. ಅವರ ಬೆವರಿನ ಶ್ರಮದ ತಾಕತ್ತಿಗೆ ಬೇಯುವ ರೊಟ್ಟಿ ನಾಚಿದ ಗಲ್ಲದಂತೆ ಉಬ್ಬಿ ಅರಳುತ್ತದೆ. ಅದಕ್ಕೆ ಅವ್ವನ ರೊಟ್ಟಿಯ ಸಿವಿ ಹೊಗಳದ ಯಾವ ಮಗನು ಇಲ್ಲ.

ತಟ್ಟ ತಟ್ಟ ಬಡದರ ರೊಟ್ಟಿ ಆಗುವದಿಲ್ಲ. ಹಿಟ್ಟು ಹದವಾಗಬೇಕು. ಜಿಗುಟು ತರಿಸಲು ಬಿಸಿನೀರಿನ ಮಿಶ್ರಣವಾಗಬೇಕು. ಬಿಸಿನೀರು ಬೆರೆತ ಹಿಟ್ಟನ್ನು ಹದಗೇಡದಂತೆ ನಾದಬೇಕು. ರಪ ರಪ ಬೀಳುವ ಒಂದೊಂದು ಪೆಟ್ಟು ಸಮನಾಗಿ ಏರುಪೇರಾಗದಂತೆ ಬಿಳುತ್ತಿರಬೇಕು. ರೊಟ್ಟಿ ಬಡಿಯಲಿಕ್ಕೇಂದೆ ಇರುವ ಕಲ್ಲಿನ ಅಥವಾ ಕಟ್ಟಿಗೆಯ ಕಾಮನಗಿ ಮೇಲೆ ರೊಟ್ಟಿ ತಿರುಗಿ ತಿರುಗಿ ಬಗಾಟ ಬುಗರಿ ಆಡಬೇಕು. ಕಾಯ್ದ ಹಂಚಿನ ಮೇಲೆ ತನ್ನ ಮೈಯನೆಲ್ಲಾ ಸುಟ್ಟುಕೊಳ್ಳಬೇಕು. ತೆವೆಯ ತುದಿಗೆ ತಾಕದಂತೆ ತಿರುಗಿ ತಿರುಗಿ ಬೀಳಬೇಕು. ಬಿಳಿ ಪುರಿಯಂತೆ ಗಲ್ಲ ಉಬ್ಬಿಸಿ ನಗಬೇಕು. ಮುಗಚಿ ಹಾಕಿದ ಮೇಲೆ ಬುಟ್ಟಿಯ ಸೇರಿ ತನ್ನ ಕಾವು ಆರಿಸಿಕೊಳ್ಳಬೇಕು.

ಇಷ್ಟೆಲ್ಲ ಇದ್ರೂ ನಮ್ಮ ಜನ ರೊಟ್ಟಿ ಬಡಿಯುವದರಲ್ಲಿ ಶತ ಶತಮಾನಗಳನ್ನು ದಾಟಿ ಬಂದಿದ್ದಾರೆ. ಮರದೊಳಗಿನ ಹೂವು ಕಿತ್ತು ಇಟ್ಟಷ್ಟೆ ಸಲೀಸಾಗಿ ತೆವೆಯ ಮೇಲಿನ ರೊಟ್ಟಿಯನ್ನು ತಿರುವಿ ಹಾಕುತ್ತಾರೆ. ರೊಟ್ಟಿ ಹೊತ್ತಿ ಹೋದ್ರ ʼʼ ಹೊತ್ತಿದ ರೊಟ್ಟಿ ತಿಂದ್ರ ಸಾವಕಾರ ಅಕ್ಕಿʼʼ ಅಂತೇಳಿ ಆಸೆ ಹುಟ್ಟಿಸಿ ರೊಟ್ಟಿ ತಿನ್ನಿಸಿ ಖುಷಿಪಡುತ್ತಾರೆ.

ಆದರ ಈಗೀಗ ರೊಟ್ಟಿಯು ಕಮರ್ಶಿಯಲ್‌ ಆಗೈತಿ. ರೊಟ್ಟಿ ಮಾಡಾಕ ದೊಡ್ಡ ದೊಡ್ಡ ಮಿಶನ್‌ ಬಂದಾವು. ಮೊದ ಮೊದಲು ಈ ಯಂತ್ರ ಬಂದಾಗ ಅವು ಹೇಂಗ ರೊಟ್ಟಿ ಬಡಿತ್ತಾವಂತ ಆಶ್ಚರ್ಯದಿಂದ ನೋಡಿದ್ದೆ ನೋಡಿದ್ದು. ಆದರ ಸೇಂಡಗಿ ತಿರುವಿ ಹಾಕುವಂಗ, ತಿರುಗು ಗಾಲಿಯಂಗ ದುಂಡ ದುಂಡಗ ರೊಟ್ಟಿ ಹೊರಗ ಬಂದಾಗ ಸ್ವಾದ ಇಲ್ಲದ ನುಚ್ಚ ತಿಂದಂಗ ಮಂಗನಂತಾಗಿದ್ದೀವಿ. ತಾಯಿಯ ಉಸಿರಿನ ಬೆವರಿನ ಪೆಟ್ಟು ಬೀಳದ ರೊಟ್ಟಿ ತಿನ್ನಾಕ ಮುನಿಸಿಕೊಂಡಿದ್ದು ಇದೆ. ಆದರ ಇಂದ ಅವ ರೊಟ್ಟಿ ನಮ್ಮ ಮನಿ ಬುಟ್ಟಿಯೊಳಗ ಗೂಡು ಕಟ್ಯಾವು. ಸುಡು ಸುಡು ರೊಟ್ಟಿ ಕೈಯಾಗ ಹಿಡಕೊಂಡು ಬೆಣ್ಣೆಯನ್ನು ರೊಟ್ಟಿಯೊಳಗ ಕರಗಿಸಿ ಕೆಂಪು ಕಾರ ಬೆರಿಸಿ ತಿನ್ನುವ ದಿನಗಳು ಈಗ ನೆನಪು ಮಾತ್ರ. ಈ ಹಾಳೆಯಂತ ತೆಳುವಾದ ರೊಟ್ಟಿ ಈಗೀಗ ನಮ್ಮನ್ನು ಆಕ್ರಮಿಸಿರುವದಂತು ಸತ್ಯ.

ಮೊನ್ನೆ ಮೊನ್ನೆ ರೊಟ್ಟಿ ಜಾತ್ರೆಗೆ ಹೋಗಿದ್ದೆ. ರೊಟ್ಟಿ ಜಾತ್ರೆಯ ತುಂಬ ಮಹಿಳೆಯರ ಸಡಗರ. ನೆತ್ತಿಮ್ಯಾಲ ಹೊತ್ತ ಬುಟ್ಟಿಗಟ್ಟಲೆ ರೊಟ್ಟಿಯನ್ನು ಸಂತಸದಿಂದ ಹಂಚುತ್ತಿದ್ದ ಅವರ ಉತ್ಸಾಹ ಎಂದಿಗೂ ಬತ್ತಲಾರದು. ಬನಶಂಕರಿಯ ಜಾತ್ರೆಯೊಳಗ ಖಡಕ ಮೊಸರ ಸುರಿವಿ ಖಟಕ್‌ ರೊಟ್ಟಿ ನೀಡಿದ ಜೋಗತಿಯ ನೆನಪಾಯಿತು.

ನಾವೀಗ ಮನುಷ್ಯನ ಆರೋಗ್ಯಕ್ಕ ಇದು ಒಳ್ಳೆಯದು ಅದು ಒಳ್ಳೆಯದು ಅನ್ನುವ ಧಾವಂತದಲ್ಲಿದ್ದೇವೆ. ವಿಟಾಮಿನ್‌, ಪೋಷಕಾಂಶ, ಪ್ರೋಟಿನ್‌ ಅದು ಇದು ಅಂತ ಏನೇನ ತಿಂತೇವಿ ಅನ್ನುವುದು ದೇವರಿಗೆ ಗೊತ್ತು. ಅಕ್ಕಿರೊಟ್ಟಿ, ಸಜ್ಜಿರೊಟ್ಟಿ, ರಾಗಿರೊಟ್ಟಿ, ಗೊಂಜಾಳರೊಟ್ಟಿ,ಗೋಧಿ ಚಪಾತಿ ಇದರಾಗೂ ಸಾಕಷ್ಟ ಪ್ರಕಾರದ ರೊಟ್ಟಿ ಇರಬಹುದು. ಆದರೂ ಈ ಜವಾರಿ ಬಿಳಿ ಜೋಳದ ರೊಟ್ಟಿ ನಮಗ ಬರಿ ಆಹಾರ ಆಗದ ಬದುಕು ಆಗಿರುವುದಂತು ಸತ್ಯ.

ಕಪ್ಪು ಮಣ್ಣಿನ ಎರಿ ಹೋಲದ ತುಂಬ ತೂಗಾಡುತ್ತಿದ್ದ ಜೋಳದ ತೆನೆದಂಟು. ಚಿಲಿಪಿಲಿ ಗುಟ್ಟು ಹಕ್ಕಿಯನ್ನುಕೂಗಿ ಕರೆಯುತ್ತಿದ್ದ ಕಾಲ ಮರೆಯಾಗುತ್ತಿದೆ. ಈಗೀಗ ರೈತನು ಸಹ ಹಣದ ಹಿಂದೆ ಬಿದ್ದಿದ್ದಾನೆ. ಜೋಳದ ಜಾಗದಲ್ಲಿ ಕಬ್ಬು,ಹತ್ತಿ, ಉಳಾಗಡ್ಡಿ ಮತ್ತು ಮೆಕ್ಕೆಜೋಳದ ತೂಕದ ಯಂತ್ರಗಳು ಸದ್ದು ಮಾಡುತ್ತಿವೆ. ʼʼಗೋಧಿ ಕೊಟ್ಟು ಜೋಳ ತಗೊಂಡ್ರುʼʼ ಅನ್ನುವ ಮಾತೊಂದಿತ್ತು. ಅಂದರ ಎಲ್ಲರ ಮನೆಯ ಪಡಶಾಲೆಯ ನಿಟ್ಟಾಗಿದ್ದ ಜೋಳ ಬೆಲೆ ಕಟ್ಟಿಕೊಳ್ಳದೆ ಸರಳವಾಗಿ ದೊರೆಯುವ ಆಹಾರ ಬೆಳೆಯಾಗಿತ್ತು. ಆದರ ಈಗ ಜೋಳ ಹುಡಕಾಕ ನಾವ ಮತ್ತ ಅದರ ತವರು ಮನೆ ಆಪ್ರಿಕಾ ಖಂಡಕ್ಕ ಹೋಗಬೇಕಾಗಬಹುದು ಏನೋ..?

ಗಾಳಿಯಂಗ ಹಾರಿ ಈ ನೆಲದ ಸೊಗಡಿನ ಸುಗಂಧವನ್ನು ಬಾನೆತ್ತರ ಹಾರಿಸುತ್ತಿರುವ ಜೋಳ ನಮ್ಮ ರಕ್ತದ ತುಂಬೆಲ್ಲಾ ಬೆರತಿದೆ. ನಮ್ಮ ಸುಖ ದುಃಖದ ಸಂಗಾತಿಯಾಗಿ ಸುಡುವ ಹಂಚಿನ ಬೇಗುದಿಯೊಂದಿಗೆ ಹಸಿದ ನಮ್ಮ ನೋವನೆಲ್ಲಾ ತೀರಿಸಿದೆ. ರೊಟ್ಟಿ ಬಡಿಯುವ ಕೈ ದೇಶವನೆಲ್ಲಾ ಆಳಬಹುದಂತೆ. ರೊಟ್ಟಿ ಬಡಿಯುವ ಹೆಣ್ಣು ಮಗಳು ಕೊನೆಯ ರೊಟ್ಟಿಯನ್ನು ಮಾಳಿಗೆಯ ಹಂಚಿನ ಮ್ಯಾಲಿಟ್ಟು, ಹಾರಿ ಬರುವ ಹಕ್ಕಿ ಕೂಗಿ ಕರೆಯುವ ಅದರ ಬಳಗ ನೋಡಿ ಖುಷಿ ಪಟ್ಟಿದ್ದಾಳೆ. ಈಗ ರೊಟ್ಟಿ ಬುತ್ತಿ ಬಿಚ್ಚುತ್ತಿರುವೆ ಕೂಡಿ ಉನ್ನುವ ಹೊತ್ತು ತಡ ಮಾಡದೆ ಕೈ ಹಾಕಿ. ಹಂಚಿ ತಿಂದ ಖುಷಿ. ರೊಟ್ಟಿ ಬುತ್ತಿಯ ಹೊತ್ತು ತಂದ ಖುಷಿ ನನಗಿದೆ.

You cannot copy content of this page

Exit mobile version