ನಮ್ಮ ಕುಟುಂಬದ ಉದ್ಯೋಗ, ಅನ್ನದ ಮೂಲಾಧಾರವೇ ಜಾತ್ರೆಗಳು. ಜಾತ್ರೆಯಲ್ಲಿ ಸ್ಟೇಷನರಿ ಅಂಗಡಿ ಹಾಕಿ ವ್ಯಾಪಾರ ಮಾಡೋರು ನಾವು. ದಿನಾಲೂ ಶಾಲೆಗೆ ಹೋಗಿ ಸಾಯಂಕಾಲ ಆದ್ರೆ ಸಾಕು ನಾನು ಮತ್ತು ಅಕ್ಕ ಜಾತ್ರೆಗೆ ಹೋಗುತ್ತಿದ್ದೆವು. ಪ್ರತಿದಿನ ಬೆಳಿಗ್ಗೆ ಜಾತ್ರೆಯಿಂದ ಮನೆಗೆ ಬಂದು ಶಾಲೆಗೆ ಹೋಗುತ್ತಿದ್ದೆವು. ನಾಲ್ಕನೇ ತರಗತಿವರೆಗೆ ನನಗೆ ಅಆಇಈ ನೇ ಬರ್ತಿರಲಿಲ್ಲ… ಅಲೆಮಾರಿ ಸಮುದಾಯದ ಹುಡುಗನೊಬ್ಬ ಶಾಲೆ ಓದಿದ ಕಥೆ-ವ್ಯಥೆ ಹೀಗಿದೆ.
ನನ್ನ ತಂದೆ ಹನುಮಂತಪ್ಪ. ತಾಯಿ ಕಮಲಮ್ಮ. ನಾನು ಉಮೇಶ. ಒಂದನೇ ತರಗತಿಗೆ ನನ್ನನ್ನು ಮತ್ತು ಅಕ್ಕ ಲಕ್ಷ್ಮಿಯನ್ನು ಖಾಲಿ 25 ರೂ. ಅಡ್ಮಿಷನ್ ಫೀಸ್ ಕಟ್ಟಿ ಅಪ್ಪ ಸರಕಾರಿ ಶಾಲೆಲಿ ಹಚ್ಚಿದರು. ಟೈ, ಬೆಲ್ಟ್, ಫೀಸ್ 25 ರೂ. ಮರುದಿನ ನಮ್ಮ ಅಪ್ಪ ಒಂದು ಪಾಟಿ, ಪೆನ್ಸಿಲ್, ಬ್ಯಾಗ್ ಕೊಡಿಸಿದರು. ಶಾಲೆಯಲ್ಲಿ ಪ್ರೇಯರ್ ಮಾಡಿ ಎಲ್ಲರೂ ಲೈನ್ ಮಾಡಿ ಹೋಗುತ್ತಿದ್ದರೆ, ನಾನು ಒಬ್ಬನೇ ಹೋಗುತ್ತಿದ್ದೆ. ನರಸಪ್ಪ ಸರ್ ನನಗೆ ಮೊದಲ ಬಾರಿ ಭುಜಕ್ಕೆ ಹೊಡೆದರು. ಒಂದು ದಿನ ನಲಿ ಕಲಿ ಕಲಿಸುತ್ತಿದ್ದಾಗ ಚಂದ್ರಮ್ಮ ಟೀಚರ್ ಅದೆ ಹೊತ್ತಿಗೆ ಸಾಹೇಬ್ರು ಬಂದ್ರು ಎಂದು ಹೇಳಿದರು. ನಾನು ನಲಿ ಕಲಿ ಮಾಡುವುದು ಬಿಟ್ಟು ಸಾಹೇಬ್ರನ ನೋಡೋಕೆ ಹೋದೆ. ಆ ಟೀಚರ್ ತಲೆಗೆ ಹೊಡೆದು ಒಳಗೆ ಹೋಗು ಎಂದರು. ನನಗೆ ಸರಿಯಾಗಿ ನೆನಪಿಲ್ಲ, ನನಗೆ ತಿಳಿದ ಮಟ್ಟಿಗೆ ಒಂದನೇ ತರಗತಿಯಲ್ಲಿ ಅನ್ಸುತ್ತೆ ಕಸಬಾ ಲಿಂಗಸೂಗೂರು ಜಾತ್ರೆಯಲ್ಲಿ ರಸ್ತೆ ದಾಟಬೇಕಾದರೆ ಬೈಕ್ ಗುದ್ದಿ ಕಾಲಿಗೆ ಏಟಾಗಿತ್ತು. ಆದ ಕಾರಣ ಶಾಲೆಗೆ ಸರಿಯಾಗಿ ಹಾಜರಾಗಲು ಆಗಿರಲಿಲ್ಲ. ನನ್ನ ಕಾಲನ್ನು ಸರಿ ಮಾಡಿದ್ದು ಅಂಕಲಿಮಠ ಪಕ್ಕದ ಊರಾದ ವ್ಯಾಕರನಾಳದಲ್ಲಿ ನಾಟಿ ಔಷಧಿ ನೀಡುವ ಜನಪದ ವೈದ್ಯ.
ನನ್ನ ಕಾಲು ಸರಿ ಆದ ತಕ್ಷಣ ಮತ್ತೆ ನಾನು ಶಾಲೆಗೆ ಹೋಗಬೇಕಾಯಿತು. ಅಷ್ಟರಲ್ಲೇ ದುರಾದೃಷ್ಟವೋ ಏನೋ ಒಂದು ದಿನ ಬೇಸಿಗೆಯಲ್ಲಿ ಮನೆಯ ಮುಂದಿನ ವಠಾರದಲ್ಲಿ ರಾತ್ರಿ ಮಲಗಿಕೊಂಡಿದ್ದಾಗ ತಲೆಗೆ ನಾಯಿ ಕಡ್ದು ಬಿಡ್ತು. ನಾಯಿ ಕಡ್ದಾಗ ಹೊಚ್ಚಿಕೊಂಡಿದ್ದ ಕೌದಿಯ ತುಂಬೆಲ್ಲ ನನ್ನ ರಕ್ತ ತುಂಬಿತ್ತು. ನಮ್ಮ ಓಣಿ ಮಂದಿಗೆ ಕನಸು ಬಿದ್ದಿತ್ತೋ ಏನೂ ಗೊತ್ತಿಲ್ಲ ಬಹಳ ಜನ ಬಂದಿದ್ದರು! ನನ್ನನ್ನು ರಾತ್ರಿಯಲ್ಲಿಯೇ ನಮ್ಮ ಊರಿನ ಹಟ್ಟಿ ಚಿನ್ನದ ಗಣಿ ಕಂಪನಿ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಅಲ್ಲಿಯ ವೈದ್ಯರು ಎರಡು ಸೂಜಿ(ಇಂಜೆಕ್ಷನ್) ಹಾಕಿ ತಾಲೂಕು ಲಿಂಗಸುಗೂರು ಆಸ್ಪತ್ರೆಗೆ ಕಳಿಸಿದರು. ನನಗೆ ಆ್ಯಕ್ಸಿಡೆಂಟ್ ಆದಾಗ ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೆ. ಬೆಳಗ್ಗೆ ಅಮ್ಮ ಮತ್ತು ಬಸವರಾಜ ಅಣ್ಣ ಆಸ್ಪತ್ರೆಗೆ ಬಂದು ಆಪರೇಷನ್ ಮಾಡಿಸಿದರು. ವೈದ್ಯರು ತಲೆಗೆ ಹೊಲಿಗೆ ಹಾಕುತ್ತಿರುವಾಗ ನಾನು ಬರೀ ಕಣ್ಣು ಪಿಳಪಿಳ ಅಂತ ಬಿಟ್ಕೊಂಡು ಮಲಗಿದ್ದೆ. ಮೂರು ತಿಂಗಳವರೆಗೆ ಕನ್ನಡಿ ನೋಡ್ಕೋಬಾರದು, ಬಿಸಿಲು ಕಾಣಬಾರದು, ಟಿವಿ ನೋಡಬಾರದು, ಪತ್ಯೆ ಮಾಡಬೇಕು, ಜೋಳದ ರೊಟ್ಟಿ ಮತ್ತು ಗಟ್ಟಿ ಬೇಳೆ ತಿನ್ನಬೇಕು, ಅನ್ನ ಕೂಡ ತಿನ್ನಬಾರದು ಎಂದು ಹೇಳಿ ಮನೆಗೆ ಕಳಿಸಿದರು. ಮನೆಯಲ್ಲಿ ನಾಲಿಗೆ ಕೇಳದಾದಾಗ ಕದ್ದು ಮುಚ್ಚಿ ಎಲ್ಲ ತಿಂದು ಅಮ್ಮನಿಂದ ಬೈಸಿಕೊಂಡಿದ್ದೆ.
ಈಗ ನೋಡಿ ಶಾಲೆಯ ವಿಷಯಕ್ಕೆ ಬರೋಣ. ಎರಡನೇ ತರಗತಿಯಲ್ಲಿ ಪರೀಕ್ಷೆ ಇದ್ದಾಗ ದಕ್ಷಿಣ ಭಾರತದ ಪವಿತ್ರ ಕ್ಷೇತ್ರ ಎನಿಸಿಕೊಂಡ ಶ್ರೀ ಗುರುಗುಂಟಾ ಅಮರೇಶ್ವರ ಜಾತ್ರೆಯಲ್ಲಿ ಇದ್ದೆ. ನಮ್ಮ ಕುಟುಂಬದ ಉದ್ಯೋಗ, ಅನ್ನದ ಮೂಲಾಧಾರವೇ ಜಾತ್ರೆಗಳು. ಜಾತ್ರೆಯಲ್ಲಿ ಚಿಲ್ಲರೆ ವ್ಯಾಪಾರಿಗಳಾಗಿ ಸ್ಟೇಷನರಿ ಅಂಗಡಿಯನ್ನು ಜೀವನೋಪಾಯಕ್ಕೆ ಹಾಕುತ್ತೇವೆ. ನನ್ನಕ್ಕ ಲಕ್ಷ್ಮೀ ಎಕ್ಸಾಂ ಬರಿಯೋಕೆ ಹೋದಳು. ನನ್ನನ್ನೂ ಕರೆದಳು. ನನಗೆ ಊರಿಗೆ ಹೋಗೋಕೆ ಮನಸ್ಸಿರಲಿಲ್ಲ. ಅದ್ಕೆ ಎಕ್ಸಾಂಗೆ ಹಾಜರಾಗಲಿಲ್ಲ. ಮೂರನೇ ತರಗತಿ ಪ್ರಾರಂಭವಾದಾಗ ಶಾಲೆಗೆ ಹೋದೆ. ಎರಡನೇ ಕ್ಲಾಸ್ ಟೀಚರ್ ಅವರ ಹೆಸರು ನೆನಪಿಲ್ಲ ಅವರು ಯಾಕೆ ಪರೀಕ್ಷೆ ಬರೆದಿಲ್ಲ ಅಂತ ತಲೆಗೆ ಒಂದು ಏಟು ಹೊಡೆದು ಮೂರನೇ ತರಗತಿಗೆ ಕಳಿಸಿದರು. ನಾನು ಅಕ್ಕ ಒಂದೇ ಕಡೆ ಕುಳಿತು ಕೊಳ್ಳುತ್ತಿದ್ದೆವು. ನಾನು ಹಸಿದಡ್ಡ. ನನಗೆ ನಾಲ್ಕನೇ ತರಗತಿಯವರೆಗೆ ಬರೆಯೋಕೆನೇ ಬರುತ್ತಿರಲಿಲ್ಲ. ನಾಲ್ಕನೇ ತರಗತಿಯಲ್ಲಿ ನಾನೇ ಬರೆಯೋದು ರೂಢಿಸಿಕೊಂಡೆ. ಸರಕಾರಿ ಶಾಲೆಯಲ್ಲಿ ನಮಗೆ ಏನೂ ಹೇಳಿಕೊಡುತ್ತಿರಲಿಲ್ಲ. ಆದರೆ ದಿನಾಲೂ ಅಮ್ಮ ಎರಡು ರೂಪಾಯಿ ಕೊಡುತ್ತಿದ್ದರು. ಆ ಆಸೆಗೆ ಶಾಲೆಗೆ ಹೋಗುತ್ತಿದ್ದೆ.
ನಮ್ಮ ಕುಟುಂಬದಲ್ಲಿ ಅರೆ ಅಲೆಮಾರಿತನ ಬೇರೂರಿ ಬಿಟ್ಟಿದೆ. ಜಾತ್ರೆಯಲ್ಲಿ ಸ್ಟೇಷನರಿ ಅಂಗಡಿ ಹಾಕಿ ವ್ಯಾಪಾರ ಮಾಡೋರು ನಾವು. ನಾನು ಕೂಡ ವ್ಯಾಪಾರ ಮಾಡುತ್ತೇನೆ. ನಾವು ದಿನಾಲೂ ಶಾಲೆಗೆ ಹೋಗಿ ಸಾಯಂಕಾಲ ಆದ್ರೆ ಸಾಕು ಜಾತ್ರೆಗೆ ಹೋಗುತ್ತಿದ್ದೆವು. ಅಲ್ಲೆ ನಮ್ಮೂರಿನ ಅಕ್ಕಪಕ್ಕದ ಊರಿನಲ್ಲಿ ಜಾತ್ರೆಯಿರುತ್ತಿತ್ತು. ಪ್ರತಿದಿನ ಬೆಳಿಗ್ಗೆ ಜಾತ್ರೆಯಿಂದ ಮನೆಗೆ ಬಂದು ಶಾಲೆಗೆ ಹೋಗುತ್ತಿದ್ದೆವು. ಸಾಯಂಕಾಲ ಶಾಲೆ ಬಿಟ್ಟ ನಂತರ ನಾನು ಮತ್ತು ಅಕ್ಕ ಮತ್ತೆ ಪಕ್ಕದ ಊರಿನ ಜಾತ್ರೆಗೆ ಹೋಗೋರು. ಆದರೆ ನನಗೆ ಅಆಇಈನೇ ಬರುತ್ತಿರಲಿಲ್ಲವಾದ್ರೂ ಅಕ್ಕ ಉಸ್ಯಾರು ಇದ್ದಳು. ನಾನೇ ದಡ್ಡ ಅಂದ್ರೆ ದಡ್ಡ. ಶಾಲೆಯಲ್ಲಿ ಹರಟೆ ಹೊಡೆದು ಸಾಯಂಕಾಲ ಜಾತ್ರೆಗೆ ಹೋಗುತ್ತಿದ್ದೆ. ನಾನು ಕಲಿಯುವ ಸರಕಾರಿ ಶಾಲೆಯಲ್ಲಿ ಏನೂ ಹೋಂವರ್ಕ್ ಕೊಡುತ್ತಿರಲಿಲ್ಲ. ಹಾಗಾಗಿ ನನಗೆ ಈ ಶಾಲೆಯಲ್ಲಿ ಏನೂ ಕಲಿಯಲಾಗಲಿಲ್ಲ. ನಾನೇ, ಪ್ರಯತ್ನ ಮಾಡಿ ನನ್ನ ಹೆಸರು ಮತ್ತು ಅಪ್ಪನದು ಬರೆಯಲು ಕಲಿತುಕೊಂಡೆ. ನನ್ನ ಆಧಾರ್ ಕಾರ್ಡ್ ನೋಡಿ ಅದರಲ್ಲಿ ಇದ್ದ ಹಾಗೆ ಬರೆದು ಬರೆದು ರೂಢಿ ಮಾಡಿಕೊಂಡೆ.
ಐದನೇ ತರಗತಿ ಮುಗಿತಾ ಬಂತು. ನನ್ನ ಹಸಿಹಸಿ ದಡ್ಡತನ ನೋಡಿ ಅಣ್ಣ ಶಿವರಾಜ ಇವನನ್ನು ಹೀಗೆಯೇ ಸರಕಾರಿ ಶಾಲೆಯಲ್ಲಿಯೇ ಬಿಟ್ಟರೆ ಕಲಿಯಲ್ಲ ಅನ್ಕೊಂಡು ಸೀದಾ ಪ್ರೈವೇಟ್ ಶಾಲೆಗೆ ಹಚ್ಚೋಣವೆಂದು ತೀರ್ಮಾನಿಸಿದ. ಹಾಗೆಯೇ ಟಿಸಿ ಕೇಳಿದರೆ ಶಾಲೆಯಲ್ಲಿ ಕೊಡಲ್ಲ ಅಂದಿದ್ದಾರೆ. ಹತ್ತಾರು ಬಾರೀ ಶಾಲೆಗೆ ಅಡ್ಡಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಅಮ್ಮ ಶಾಲೆಗೆ ಬಂದು ಹೆಡ್‌ಮೇಡಂಗೆ “ಶಾಲೆಗಚ್ಚಿ ಐದು ವರ್ಷವಾಯಿತು, ಐದು ಅಕ್ಷರ ಕಲಿಸಿಲ್ಲ. ನಿಮ್ಮ ಶಾಲೆ ಬೇಡ ನೀವು ಟಿಸಿ ಕೊಡಿ ಅಂದಾಗ ಅಲ್ಲಿಯೇ ಇದ್ದ ಮತ್ತೊಬ್ಬ ಶಿಕ್ಷಕಿ ನಿಮ್ಮ ಮಕ್ಕಳಿಗೆ ಇವಾಗಿನಿಂದ ಮುಂದೆ ಕೂಡಿಸಿ ಕೊಂಡು ಕಲಿಸುತ್ತೇವೆ. ಟಿಸಿ ಕೇಳಬೇಡಿ ಅಂದರು. ಆಗ ಅಮ್ಮ “ಐದು ವರ್ಷದಿಂದ ಕಲಿಸಲಾರದವರು ಇವಾಗ ಕಲಿಸುತ್ತಾರಂತೆ.. ನೀವು ಬೇಡ ನಿಮ್ಮ ಶಾಲೆಯೂ ಬೇಡ ಮೊದಲು ಟಿಸಿ ಕೊಡಿ ಅಂತ ಸ್ವಲ್ಪ ಜೋರಾಗಿ ಮಾತಾಡಿ ಟಿಸಿ ತಂದರು. ಒಂದನೇ ತರಗತಿಯಿಂದ 5ನೇ ತರಗತಿಯವರಿಗೆ ಕಲ್ತಿದ್ದು ಸರಕಾರಿ ಶಾಲೆಯಲ್ಲಿ. ಆಗ ನನ್ನ ಜೊತೆ ಓದುತ್ತಿದ್ದ 20 ಸಹಪಾಠಿಗಳಲ್ಲಿ ಓದು ಮುಂದುವರಿಸಿದೋರು ಬರೀ ಇಬ್ಬರು. ನನ್ನ ಗೆಳೆಯರಲ್ಲಿ ಇಬ್ಬರು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಗಾರೆ ಕೆಲಸ, ಇನ್ನೂ ಮಿಕ್ಕವರು ಎಲ್ಲೆಲ್ಲೋ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಪ್ರಾಥಮಿಕ ಶಿಕ್ಷಣವನ್ನು ಕಲಿಯುವಾಗ ನನ್ನೂರಿನಲ್ಲಿ ಚಿನ್ನ ಅಗೆಯುತ್ತಿದ್ದರೂ ಅದೊಂದು ಗ್ರಾಮವೇ ಆಗಿತ್ತು. ಈಗದು ಪಟ್ಟಣವಾಗಿದೆ. ಊರು ಅಭಿವೃದ್ಧಿಯಾಗಿದೆ!
ಸರಕಾರಿ ಶಾಲೆಯಲ್ಲಿ ಐದು ವರ್ಷದ ನನ್ನ ಜೀವನ ಕತೆಯಿದು…
ಎಸ್ ಕೆ ಉಮೇಶ
ರಾಯಚೂರು ಜಿಲ್ಲೆಯ ಲಿಂಗಸಗೂರಿನ ಹಟ್ಟಿ ಚಿನ್ನದ ಗಣಿಯವರಾದ ಇವರು ಅಲೆಮಾರಿ ಸಮುದಾಯಕ್ಕೆ ಸೇರಿದವರು. ಪ್ರಸ್ತುತ ಧಾರವಾಡದ ಕೆಇ ಬೋರ್ಡ್ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಾರೆ.