Monday, September 9, 2024

ಸತ್ಯ | ನ್ಯಾಯ |ಧರ್ಮ

ನಾಳೆ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗಿ: ಬಂಗಾಳದ ಪ್ರತಿಭಟನಾನಿರತ ವೈದ್ಯರಿಗೆ ಸುಪ್ರೀಂ ಕೋರ್ಟ್ ಅಲ್ಟಿಮೇಟಮ್

ಹೊಸದಿಲ್ಲಿ: ಕೋಲ್ಕತ್ತಾದ ಟ್ರೈನಿ ವೈದ್ಯರ ಹತ್ಯೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಂಗಾಳದ ವೈದ್ಯರಿಗೆ ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಮರಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಇಲ್ಲವಾದಲ್ಲಿ ವ್ಯತಿರಿಕ್ತ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಅಂತಿಮ ಸೂಚನೆ ನೀಡಿದೆ. ದೇಶವನ್ನೇ ಬೆಚ್ಚಿಬೀಳಿಸಿದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಸೋಮವಾರ ನಡೆಸಿತು. ಪಶ್ಚಿಮ ಬಂಗಾಳದಲ್ಲಿ ವೈದ್ಯರು 28 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಇದರಿಂದಾಗಿ ವೈದ್ಯಕೀಯ ಸೇವೆಗಳು ಸ್ಥಗಿತಗೊಂಡಿದ್ದು, 23 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ವೈದ್ಯರ ಭದ್ರತಾ ಕ್ರಮಗಳಿಗೆ ಹಣ ಮಂಜೂರಾಗಿದ್ದು, ಜಿಲ್ಲಾಧಿಕಾರಿಗಳು ನಿಗಾ ವಹಿಸಲಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಏತನ್ಮಧ್ಯೆ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತೊಮ್ಮೆ ತಮ್ಮ ಪ್ರತಿಭಟನೆಯನ್ನು ನಿಲ್ಲಿಸುವಂತೆ ಬಂಗಾಳದ ವೈದ್ಯರಿಗೆ ಕೇಳಿಕೊಂಡರು. ಮಂಗಳವಾರ ಸಂಜೆ 5 ಗಂಟೆಯೊಳಗೆ ವೈದ್ಯರು ಕರ್ತವ್ಯಕ್ಕೆ ಹಾಜರಾದರೆ ಯಾವುದೇ ಕ್ರಮ ಕೈಗೊಳ್ಳದಂತೆ ಸರಕಾರಕ್ಕೆ ತಿಳಿಸಲಾಗುವುದು ಎಂದರು. ‌

ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರೂ ವೈದ್ಯರು ಕರ್ತವ್ಯದಿಂದ ದೂರ ಉಳಿದರೆ ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. “ವೈದ್ಯರು ಮತ್ತೆ ಕೆಲಸಕ್ಕೆ ಬರಬೇಕೆಂದು ನಾವು ಬಯಸುತ್ತೇವೆ. ಅವರು ಸೇವಾ ವ್ಯವಸ್ಥೆಯಲ್ಲಿದ್ದಾರೆ. ಸೌಲಭ್ಯಗಳನ್ನು ನೀಡುತ್ತೇವೆ. ಆದರೆ ಅವರು ಪ್ರತಿಕ್ರಿಯಿಸಬೇಕು. ವೈದ್ಯರು ಕರ್ತವ್ಯಕ್ಕೆ ಮರಳದಿದ್ದಲ್ಲಿ ಸರಕಾರ ಶಿಸ್ತು ಕ್ರಮ ಕೈಗೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ’’ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page