Thursday, June 20, 2024

ಸತ್ಯ | ನ್ಯಾಯ |ಧರ್ಮ

ಟ್ರಾಫಿಕ್, ಅಪಘಾತ ಸಮಸ್ಯೆ ಪರಿಹರಿಸಲು ಹಂಪ್ಸ್ ಮೊರೆ ಹೋದ ಟ್ರಾಫಿಕ್ ಪೊಲೀಸರು!

ಬೆಂಗಳೂರಿನ ಟ್ರಾಫಿಕ್ ಅಂದ್ರೆ ಅದೊಂದು ನರಕಯಾತನೆ. ಬೆಂಗಳೂರಿನಲ್ಲಿ 10 ಕಿಲೋಮೀಟರ್ ವ್ಯಾಪ್ತಿಯನ್ನು ಕ್ರಮಿಸಬೇಕಾದರೆ ಅಂದಾಜು ಒಂದೂವರೆ ಗಂಟೆಗೂ ಮೀರಿ ಪಯಣಿಸುವುದು ಬೆಂಗಳೂರಿಗರಿಗೆ ಮಾಮೂಲಿನಂತೆ ಬಂದು ಹೋಗಿದೆ. ಇನ್ನು ಮಳೆ ಸಮಯದಲ್ಲಂತೂ ಕೇಳಲೇಬೇಡಿ. ಟ್ರಾಫಿಕ್ ಸಮಸ್ಯೆಯ ಜೊತೆಗೆ ಹೊಂಡ ಗುಂಡಿ, ಅವೈಜ್ಞಾನಿಕ ಹಂಪ್ ಗಳು ಮತ್ತು ಅಜಾಗರುಕತೆಯಿಂದ ಆಗಬಹುದಾದ ಅಪಘಾತ ಮತ್ತು ಜೀವಹಾನಿಯದ್ದು ಇನ್ನೊಂದು ಸಮಸ್ಯೆ.

ಬೆಂಗಳೂರು ಟ್ರಾಫಿಕ್ ಪೊಲೀಸರು ಇಂತಹ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಕ್ಕಾಗಿ ಬಿಬಿಎಂಪಿಗೆ ಪ್ರಸ್ತಾವನೆಯೊಂದನ್ನ ಮುಂದಿಟ್ಟಿದ್ದಾರೆ. ಹೆಚ್ಚು ಅಪಘಾತ ಸಂಭವಿಸುವ ಬೆಂಗಳೂರಿನ 524 ಕಡೆಗಳಲ್ಲಿ ರೋಡ್ ಹಂಪ್ ಅಳವಡಿಕೆಗೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರು  ನಗರದ ಒಟ್ಟು 39 ಸಂಚಾರಿ ಪೊಲೀಸ್ ಠಾಣೆಗಳಿಂದ ಪ್ರತ್ಯೇಕವಾಗಿ ಈ ಪ್ರಸ್ತಾವನೆಗಳು ಸಲ್ಲಿಕೆ ಮಾಡಲಾಗಿದೆ.

ಟ್ರಾಫಿಕ್ ದಟ್ಟಣೆ ಹೆಚ್ಚಾಗಿ ಕಂಡುಬರುವ ಜಯನಗರ, ಕೆಂಗೇರಿ, ಹುಳಿಮಾವು, ಆರ್.ಟಿ.ನಗರ, ಬಾಣಸವಾಡಿ, ಹೂಡಿ, ಮಹದೇವಪುರ, ಜೆಪಿ ನಗರ, ಹುಲಸೂರು ಗೇಟ್, ಜಾಲಹಳ್ಳಿ, ರಾಜಾಜಿನಗರ ಸೇರಿದಂತೆ ನಗರದ ಪ್ರಮುಖ ರಸ್ತೆ, ಕೂಡುರಸ್ತೆ, ಸಿಗ್ನಲ್ ಗಳ ಆಸುಪಾಸುಗಳಲ್ಲಿ ಹಂಪ್ಸ್ ಗಳನ್ನು ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಆದರೆ ಇದೇ ಟ್ರಾಫಿಕ್ ಪೊಲೀಸರ ಅಂಕಿ ಅಂಶಗಳ ಪ್ರಕಾರ ಕಳೆದ 3 ವರ್ಷಗಳ ಅವಧಿಯಲ್ಲಿ ಅವೈಜ್ಞಾನಿಕ ಹಂಪ್ಸ್ ನಿರ್ಮಾಣದಿಂದ ಆದ ಅಪಘಾತಗಳಲ್ಲಿ ಪ್ರತೀ ವರ್ಷ ಏರಿಕೆ ಕಂಡಿದೆ. ಅದರಲ್ಲಿ ಹಂಪ್ಸ್ ಗಳು ಇರುವ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಇಡದೇ ಇರುವುದು, ಹಂಪ್ಸ್ ಗಳನ್ನು ಗುರುತಿಸುವ ಅಡ್ಡಪಟ್ಟಿಗಳನ್ನು ಬರೆಯದೇ ಇರುವುದು, ಅಗತ್ಯ ಇಲ್ಲದ ಕಡೆಗಳಲ್ಲಿ ಹಂಪ್ಸ್ ನಿರ್ಮಾಣ ಇಂತಹ ಪ್ರಮುಖ ಕಾರಣಗಳಿಂದ ಆದ ರಸ್ತೆ ಅಪಘಾತಗಳೇ ಹೆಚ್ಚು. ಬಹುತೇಕರು ಪ್ರಾಣ ಕಳೆದುಕೊಂಡದ್ದೂ ಇದೆ.

ಅವುಗಳಲ್ಲಿ 2019 ರಲ್ಲಿ 832 ಅಪಘಾತಗಳು ಸಂಭವಿಸಿದ್ದು, 819 ಸಾವಿನ ಪ್ರಕರಣ ದಾಖಲಾಗಿದೆ. 2021 ರಲ್ಲಿ 652 ಅಪಘಾತ ಪ್ರಕರಣ ದಾಖಲಾಗಿದ್ದು 618 ಸಾವಿನ ಪ್ರಕರಣ ದಾಖಲಾಗಿದೆ. ಇನ್ನು 2022 ರ ಸೆಪ್ಟೆಂಬರ್ ತಿಂಗಳ ವರೆಗೂ 656 ಅಪಘಾತ ಪ್ರಕರಣ ದಾಖಲಾಗಿದ್ದು ಈಗಾಗಲೇ 632 ಸಾವಿನ ಪ್ರಕರಣ ದಾಖಲಾಗಿದೆ. 2019 ಕ್ಕಿಂತ 2021 ರಲ್ಲಿ ಕಡಿಮೆ ಅಪಘಾತ ಮತ್ತು ಸಾವು ಸಂಭವಿಸಿದ್ದರೂ ಆ ಸಂದರ್ಭದಲ್ಲಿ ಹೆಚ್ಚು ಲಾಕ್ಡೌನ್ ಇದ್ದ ಕಾರಣ, ವಾಹನ ದಟ್ಟಣೆ ಕಡಿಮೆ ಎಂದೂ ಅಂದಾಜಿಸಲಾಗಿದೆ‌.

ಟ್ರಾಫಿಕ್ ಪೊಲೀಸರು ಅಪಘಾತ ಮತ್ತು ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಈ ಮಾರ್ಗ ಉಪಯೋಗಿಸಿರುವುದು ಎಷ್ಟು ಸರಿ ಅಥವಾ ತಪ್ಪು ಎಂಬುದನ್ನ ಅಂದಾಜಿಸುವುದು ಎಷ್ಟು ಮುಖ್ಯವೋ ಅದರ ದುಪ್ಪಟ್ಟು ತಲೆ ಕೆಡಿಸಿಕೊಳ್ಳಬೇಕಾದದು ಬೆಂಗಳೂರಿನ ರಸ್ತೆಗಳ ಹೊಂಡ ಗುಂಡಿಗಳ ಬಗ್ಗೆ. ಬೆಂಗಳೂರಿನ ಟ್ರಾಫಿಕ್ ಗಳಲ್ಲಿ ಹಂಪ್ಸ್ ಗಳ ಕಾರಣಕ್ಕೆ ಅಪಘಾತ ಸಂಭವಿಸುವುದಕ್ಕಿಂತ, ಅತಿಯಾದ ಹೊಂಡ ಗುಂಡಿಗೆ ಬಿದ್ದು ಜೀವ ಕಳೆದುಕೊಂಡವರ ಸಂಖ್ಯೆಯೇ ಹೆಚ್ಚು. ಟ್ರಾಫಿಕ್ ಪೊಲೀಸರು ಮತ್ತು ಬಿಬಿಎಂಪಿ ಆದಷ್ಟು ಬೇಗನೆ ಬೆಂಗಳೂರು ರಸ್ತೆಗಳಲ್ಲಿ ಇರುವ ಹೊಂಡ ಗುಂಡಿಗಳನ್ನು ಮುಚ್ಚದೇ ಹೋದರೆ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಮತ್ತಷ್ಟು ಏರಿಕೆ ಕಾಣಲಿದೆ.

Related Articles

ಇತ್ತೀಚಿನ ಸುದ್ದಿಗಳು