Tuesday, June 18, 2024

ಸತ್ಯ | ನ್ಯಾಯ |ಧರ್ಮ

ಯುದ್ಧ ನಿಲ್ಲುವುದಿಲ್ಲ: ಕಾರ್ಪೋರೇಟರ್‌ಗಳ ಪ್ರೀತಿ ಮತ್ತು ಇಸ್ರೇಲ್‌ನ ಯುದ್ಧ

ವಾಸ್ತವವಾಗಿ ಯದ್ಧದ ನಿಲುಗಡೆಯನ್ನು ಇಸ್ರೇಲ್‌ ನಿರ್ಧರಿಸುವುದಿಲ್ಲ. ಈ ಯುದ್ಧದ ಹಿಂದೆ ಹತ್ತು ಹಲವು ಶಕ್ತಿಗಳಿವೆ: ಅಮೇರಿಕಾದ ಮಿಲಿಟರಿ ಕೈಗಾರಿಕೆಗಳಿವೆ; ಜಾಗತಿಕ ಕಾರ್ಪೊರೇಟ್‌ ಶಕ್ತಿಗಳಿವೆ, ಪ್ರಭಲವಾದ ಯಹೂದಿ ಲಾಬಿ ಇದೆ, ಅಮೇರಿಕಾದ ಮಿಲಿಟರಿ ಕೈಗಾರಿಕೆಗಳಿಗೆ ಯುದ್ಧ ಅವಶ್ಯಕ, ಅವುಗಳು ಯುದ್ಧ ಭೀತಿಯನ್ನು ನಿರ್ಮಿಸಿ ಮಧ್ಯಪೂರ್ವದಲ್ಲಿ ಶಸ್ತಾಸ್ತ್ರಗಳಿಗೆ ಬೇಡಿಕೆ ಹುಟ್ಟಿಸಿ ಅಗಾಧವಾದ ಸಂಪತ್ತನ್ನು ಸೂರೆ ಗೊಳ್ಳುತ್ತವೆ – ಪ್ರೊ.ಮುಜಾಪ್ಫರ್‌ ಅಸ್ಸಾದಿ, ಮೈಸೂರು.

ಯುದ್ಧ ನಿಲ್ಲುವುದಿಲ್ಲ. ಅದು ಮುಂದುವರಿಯುತ್ತದೆ. ಸಮಸ್ಯೆಗೆ ಉತ್ತರ ಈ ಕೂಡಲೇ ದೊರೆಯುವುದಿಲ್ಲ. ಇದು ಹಮಾಸ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧವಲ್ಲ. ಹಮಾಸ್‌ ಒಂದು ತೀವ್ರಗಾಮಿ ಸಂಘಟನೆಯಾಗಿರಬಹುದು, ಭಯೋತ್ಪಾದಕತೆಯನ್ನು ತನ್ನ ತಂತ್ರಗಾರಿಕೆಯ ಅಸ್ತ್ರವನ್ನಾಗಿ ಉಪಯೋಗಿಸಿರಬಹುದು, ಇಸ್ರೇಲ್‌ನ ಅಸ್ತಿತ್ವವನ್ನು ಅದು ಒಪ್ಪದಿರಬಹುದು. ಅದರ ಮುಖ್ಯ ಯೋಜನೆ ಸ್ವತಂತ್ರ ಪಾಲೆಸ್ತೀನ್‌ ರಾಷ್ಟ್ರದ  ಸ್ಥಾಪನೆ. ಹಮಾಸ್ ಎಲ್ಲಾ ಪಾಲೆಸ್ತೀನಿಯರನ್ನು ಪ್ರತಿನಿಧಿಸುವುದಿಲ್ಲ. ಗಾಜಾದಲ್ಲಿ ಹಮಾಸ್‌ ಇದ್ದರೆ, ಹೆಜಬುಲ್ಲಾ ಪಶ್ಚಿಮ ದಂಡೆಯಲ್ಲಿ ಸಕ್ರಿಯವಾಗಿದೆ. ಇದೊಂದು ಎರಡು ರಾಷ್ಟ್ರೀಯತೆಗಳ ನಡುವಿನ ಯುದ್ಧ. ದುರಂತವೆಂದರೆ ಪಾಲೆಸ್ತೀನಿಯರು ಕೇಳುತ್ತಿರುವುದು ಜರ್ಜರಿತವಾಗಿರುವ ತಮ್ಮ ತುಂಡುಭೂಮಿಯ ಪಾಲಲ್ಲ, ಹೊರತು ನೆಲದ ಸ್ವಾತಂತ್ರ್ಯವನ್ನು, ತಮ್ಮ ಅಸ್ತಿತ್ವದ ಗುರುತಿಸುವಿಕೆಯನ್ನು ಪಾಲೆಸ್ತೀನಿಯರು ತಮ್ಮ ಪ್ರದೇಶದಲ್ಲಿಯೇ ನಿರಾಶ್ರಿತರು, ಪರಕೀಯರು ಮತ್ತು ಅನ್ಯರು. ಪಾಲೆಸ್ತೀನ್‌ನನ್ನು ಒಂದು ದೇಶವೆಂದು ಕರೆಯವುದು ಕೂಡ ಕಷ್ಟ. ಸೈನ್ಯಗಳಿಲ್ಲದ, ಯದ್ಧವಿಮಾನಗಳಿಲ್ಲದ, ಟ್ಯಾಂಕ್‌ಗಳಿಲ್ಲದ ಇದೊಂದು ಪುಟ್ಟ ರಾಜಕೀಯ ಪ್ರಾಧಿಕಾರವಿರುವ ಆಂತರಿಕವಾಗಿ ಬೆಳೆದಿರುವ ನಿರಾಶ್ರಿತರ ಪ್ರದೇಶ. ಇದನ್ನು ದೇಶವಿಲ್ಲದ ರಾಷ್ಟ್ರವೆಂದು ಕರೆಯಬಹುದು. ಹಳೆಯ ಒಡಂಬಡಿಕೆಯಲ್ಲಿ “ಸುಣ್ಣ, ನಿಂಬೆಹಣ್ಣಿನ, ಫಲವತ್ತಾದ ಹಸುರಿನಿಂದ ಕೂಡಿದ” ಪ್ರದೇಶವೆಂದು ಬಿಂಬಿತವಾದರೆ, ಇವತ್ತು ಸಾಮೂಹಿಕ ಗೋರಿಗಳ, ಜೀವಂತ ವಿಧವೆಗಳ, ಅಪ್ಪನ ಬರುವಿಕೆಗಾಗಿ ಕಾಯುವ ಮಕ್ಕಳ ಆಕ್ರಂದದ ಪ್ರದೇಶ.

ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ

ಪಾಲೆಸ್ತೀನಿನ ಕುರಿತು ನಮಗೆ ಮೊದಲ ಉಲ್ಲೇಖ ದೊರೆಯುವುದು ಯಹೂದಿಗಳ ಗ್ರಂಥವಾದ ತೊಹ್ರದಲ್ಲಿ ಮತ್ತು ಕ್ರಿಶ್ಚಿಯನ್ನರ ಹಳೆ ಒಡಂಬಡಿಕೆಯಲ್ಲಿ. ಇವುಗಳು ಅಬ್ರಾಮಿನಿಕ್‌ ಅಥವಾ ಸೆಮಿಟಿಕ್‌ ಧರ್ಮಗಳಾದ ಕಾರಣ ಪಾಲೆಸ್ತೀನಿಯನ್ನಿನ ಉಲ್ಲೇಖ ಇವೆರಡರಲ್ಲಿ ಬರುವುದು ಸಹಜ. ಹಳೆಯ ಒಡಂಬಡಿಕೆಯಲ್ಲಿ ಹೆಚ್ಚು ಕಡಿಮೆ 40 ಕಡೆ ಇದರ ಉಲ್ಲೇಖವಾಗುತ್ತದೆ. ಒಂದನೇ ಶತಮಾನದ ಗ್ರೀಕ್‌ನ ಪ್ರಸಿದ್ಧ ಇತಿಹಾಸಕಾರ, ನಾವಿಕ ಹೆರೆಡೊಟಸ್‌ಗೆ ಪಾಲೆಸ್ತೀನ್‌ ಸಿರಿಯಾದ ಭಾಗ, ಮತ್ತೊಮ್ಮೆ ಸಿಸೊತ್ರಿಯ ದಿಗ್ವಿಜಯದ ಸಂಕೇತವಾಗಿ ನಿರ್ಮಿಸಲ್ಪಟ್ಟ ವಿಗ್ರಹಗಳ ಪ್ರದೇಶ. 12 ನೇ ಶತಮಾನದ ಭೂಗೋಳಶಾಸ್ತ್ರಜ್ಞ, ತತ್ವಜ್ಞಾನಿ ಅಲ್‌ ಬೆರುನಿಗೆ ಪಾಲೆಸ್ತೀನ್‌ ಒಂದು ವಿಗ್ರಹ ಆರಾಧಕರ ಪ್ರದೇಶ. ಹೊಸ ಒಡಂಬಡಿಕೆ ಪ್ರಕಾರ ಪಾಲೆಸ್ತೀನಿಯನ್‌ ಎಂಬುದು ಇಮ್ಯಾನುಯಲ್‌ನ ದೇಶ. ಅರಿಸ್ಟಾಟಲ್‌, ಪ್ಲೇಟೋ, ಪ್ಲೀಮಿ ಇತ್ಯಾದಿಯವರ ಕಥನಗಳಲ್ಲಿ ಪಾಲಿಸ್ತೀನ್‌ ಒಂದು ವಾಸ್ತವ, ಅದೊಂದು ಭೌಗೋಳಿಕ ಪ್ರದೇಶ. ಅದು ಒಂದು ದೇಶವಲ್ಲದ ರಾಷ್ಟ್ರೀಯತೆಯನ್ನು ನಿರ್ಮಿಸಿದ್ದು ಒಂದು ಐತಿಹಾಸಿಕ ಸನ್ನಿವೇಶದಲ್ಲಿ, ಅದರಲ್ಲೂ, ಪ್ರಥಮ ಮಹಾಯುದ್ಧ ಜಗತ್ತಿನ ವಿವಿಧೆಡೆ ಹಂಚಿ ಹೋಗಿದ್ದ ಯಹೂದಿಗಳಿಗೆ ನೆಲೆಗಳನ್ನು ಪಾಲೇಸ್ತೀನ್‌ ಪ್ರದೇಶದಲ್ಲಿ ಕಲ್ಪಿಸಿದ ನಂತರವೆಂದೇ ಹೇಳಬೇಕು, ಅದರಲ್ಲೂ ಒಟ್ಟೊಮನ್‌ ಸಾಮ್ರಾಜ್ಯ ಕುಸಿದ ಬಳಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ನ ಕಾರಸ್ಥಾನಗಳು ಬಯಲಾದ ನಂತರ. ಹಿಟ್ಲರ್‌ನ ಜನಾಂಗೀಯ ದೌರ್ಜನ್ಯ ಇಸ್ರೇಲ್ ಸ್ಥಾಪನೆಯನ್ನು ನ್ಯಾಯಬದ್ಧ ಗೊಳಿಸಿತ್ತು. ದುರಂತವೆಂದರೆ ಇಸ್ರೇಲ್‌ ತನ್ನ ಇತಿಹಾಸದಿಂದ ಪಾಠ ಕಲಿಯಲಿಲ್ಲ. ಜನಾಂಗೀಯ ದೌರ್ಜನ್ಯಕ್ಕೆ ಒಳಗಾದ ಇದೇ ಯಹೂದಿಗಳಿಗೆ ಇಂದು ಪಾಲೆಸ್ತೀನ್‌ನ ಅಸ್ತಿತ್ವವೇ ಒಂದು ತಕರಾರು ವಿಷಯ. ಗಾಜಾ ಪ್ರದೇಶ ಹಿಟ್ಲರ್‌ನನ್ನು ನೆನಪಿಸುವ ಆಧುನಿಕ ಕಾಲದ ಕಾನ್ಸಂಟ್ರೇಶನ್‌ ಕ್ಯಾಂಪ್‌. ವಿಚಿತ್ರವೆಂದರೆ ಅರಬ್‌ ಯಹೂದಿಗಳನ್ನು 1920ರ ದಶಕದ ತನಕ ಪಾಲೆಸ್ತೀನಿಯರೆಂದೆ ಕರೆಯಲಾಗಿತ್ತು.

ಜೆರುಸಲೇಂ

ಹಾಗಾದರೆ ಇದು ಧರ್ಮ ಯುದ್ಧವೇ? ಇದು ಕೂಡ ಒಂದು ಮಿಥ್ಯೆ. ಧರ್ಮ ಯುದ್ಧ ನಡೆದದ್ದು ಇತಿಹಾಸದಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಂರ ನಡುವೆ. ಅದನ್ನು ಕ್ರುಸೇಡ್‌ ಯುದ್ಧಗಳೆಂದು ಕರೆಯುತ್ತಾರೆ. ಬಹು ಮುಖ್ಯವಾಗಿ ನಾಲ್ಕು ಯುದ್ಧಗಳು ನಡೆದಿವೆ, ಅದು ಕೂಡ ಪವಿತ್ರ ಭೂಮಿಯಾದ ಜೆರುಸಲೆಂ ಅನ್ನು ಸ್ವಾಧೀನ ಪಡಿಸಲು, ಮಕ್ಕಾಕ್ಕಾಗಿ ಅಲ್ಲ. ಇಸ್ಲಾಂ ಹುಟ್ಟಿದ ಮಕ್ಕಾ ಮದೀನದ ಸುತ್ತಮತ್ತ ಹತ್ತು ಹಲವು ಯಹೂದಿ ಬುಡಕಟ್ಟುಗಳಿದ್ದವು ಎಂದು ಚರಿತ್ರಕಾರರು, ಧರ್ಮಗ್ರಂಥಗಳು ಹೇಳುತ್ತವೆ. ಅವುಗಳ ನಡುವೆ ಸಂಬಂಧಗಳು ಅನ್ಯೋನ್ಯವಾಗಿರಲಿಲ್ಲ. ಪ್ರವಾದಿಯವರ ಪ್ರವಾದಿತನ ಮತ್ತು ರಾಜಕೀಯ ನಾಯಕತ್ವವನ್ನು ಒಪ್ಪದಿದ್ದ ಕಾರಣ ಈ ಧರ್ಮಗಳ ನಡುವೆ ತಗಾದೆಗಳು ಆರಂಭಗೊಂಡವು. ಆದರೆ ಜೂಡಾಯಿಸಂನಿಂದ ಇಸ್ಲಾಂ ಸಾಕಷ್ಟು ಪಡೆದು ಕೊಂಡಿರುವುದನ್ನು ಒಪ್ಪಲೇಬೇಕು. ಅದರಲ್ಲೂ ಕೆಲವು ಧಾರ್ಮಿಕ ಆಚರಣೆಗಳನ್ನು, ಮೌಲ್ಯಗಳನ್ನು. ಈ ಭಿನ್ನಾಭಿಪ್ರಾಯಗಳು ಇವತ್ತಿಗೂ ಇರುವುದು ಸತ್ಯ. ಆದರೆ ಅದೇ ಪಾಲೆಸ್ತೀನ್‌ ಮತ್ತು ಇಸ್ರೇಲ್‌ ಸಂಘರ್ಷಕ್ಕೆ ಕಾರಣವೆನ್ನಲು ಸಾಧ್ಯವಿಲ್ಲ. ವಿಚಿತ್ರವೆಂದರೆ ಇಸ್ರೇಲ್‌ ಈ ದೀರ್ಘಕಾಲಿಕ ಸಂಘರ್ಷಕ್ಕೆ ಮೂರು ಪ್ರಮುಖ ಕಾರಣಗಳನ್ನು ಮುಂದಿಡುತ್ತದೆ:

ಒಂದನೇದಾಗಿ ತೋಹ್ರದ ಗ್ರಂಥದಲ್ಲಿ ಹೇಳಿದಂತೆ ಇಸ್ರೇಲಿಗಳು ಈ ಪ್ರದೇಶದ ಮೂಲ ವಾರಸುದಾರರು ಎಂಬುದನ್ನು ಪಾಲೆಸ್ತೀನಿಯನ್ನರು ತಿರಸ್ಕರಿಸುತ್ತಾರೆ.

ಎರಡನೇದಾಗಿ, ಇಸ್ರೇಲ್‌ ದೇಶ ಪಾಲೆಸ್ತೀನಿಯರ ಭೂ ಪ್ರದೇಶವನ್ನು ಕಬಳಿಸುತ್ತಾ ತನ್ನ ದೇಶವನ್ನು ಸ್ಥಾಪಿಸಿತ್ತು ಮಾತ್ರವಲ್ಲದೇ ಅವರನ್ನು ಅವರ ನೆಲದಲ್ಲಿಯೇ ಪರಕೀಯರನ್ನಾಗಿಸಿತ್ತು.

ಮೂರನೇದಾಗಿ ಯಹೂದಿಗಳ ಧರ್ಮಗ್ರಂಥ “ತೊಹ್ರ”ದಲ್ಲಿ ಹೇಳಿದಂತೆ ಮತ್ತು ಇಸ್ರೇಲ್‌ ವಾದಿಸಿದಂತೆ ಪಾಲೆಸ್ತೀನ್‌ “ ಇಸ್ರೇಲಿ ಅಥವಾ ಯಹೂದಿಗಳಿಗಾಗಿ ಕಾಯ್ದಿರಿಸಿದ, ಆಶ್ವಾಸನೆಯ ಪ್ರದೇಶ”.

ಇವೆಲ್ಲಾ ಕಾರಣಕ್ಕಾಗಿ ಇಸ್ರೇಲ್‌ ಮತ್ತು ಹಮಾಸ್‌ ಯುದ್ಧವನ್ನು ಧರ್ಮ ಯುದ್ಧದ ಚೌಕಟ್ಟಿನಲ್ಲಿ ವಿಶ್ಲೇಷಿಸುತ್ತಾರೆ. ಇದು ಕೂಡ ಪರಿಪೂರ್ಣವಾಗಿ ಸತ್ಯವಲ್ಲ. ಪಾಲೆಸ್ತೀನಿಯನ್‌ ಹೋರಾಟದಲ್ಲಿ ಕ್ರಿಶ್ಚಿಯನ್ನರು, ಡ್ರೂಸರು, ಸಮಿರಾಟಗಳು ಮತ್ತು ಬಹುಸಂಖ್ಯಾತ ಪಾಲೆಸ್ತೀನಿ ಅರಬ್‌ ಮುಸ್ಲಿಂಮರು ಇದ್ದಾರೆ. ಇದು ಅನಿವಾರ್ಯ ಕೂಡ ಹೌದು. ಅತ್ಯಂತ ಹಳೆಯ ಸಾಂಪ್ರದಾಯಿಕ ಚರ್ಚ್‌ ಪಾಲೆಸ್ತೀನ್‌ ನಡುವೆ ಇದೆ. ಕ್ರಿಸ್ತ ಹುಟ್ಟಿದ ಬೆತ್ಲೆಹೆಮ್‌ ಕೂಡ ಇಲ್ಲಿದೆ. 1948 ರ “ನಕ್ಬ”ದ ( ಸಾಮೂಹಿಕ ಉಚ್ಛಾಟನೆ)ಪೂರ್ವ ಮತ್ತು ತದನಂತರ ಕ್ರಿಶ್ಚಿಯನ್ನರು ಪಾಲೆಸ್ತೀನ್‌ನ ರಾಷ್ಟ್ರೀಯ ಐಡೆಂಟಿಟಿಯ ಬೆಳವಣಿಗೆಗೆ,  ಕಲೆ, ರಾಜಕೀಯ ಕಥನಗಳಿಗೆ ಮತ್ತು ಸಂಸ್ಕೃತಿಯ ನಿರ್ಮಾಣಕ್ಕೆ, ಅಲ್ಪಸಂಖ್ಯಾತರಾಗಿದ್ದರೂ ನೀಡಿದ್ದ ಕೊಡುಗೆ ಅನನ್ಯ. 1933-39ರ ಪಾಲೆಸ್ತೀನಿಯನ್ನರ ದಂಗೆಯಲ್ಲಿ ಸಕ್ರಿಯವಾಗಿದ್ದ ಸಕನಕಿ ಶಿಕ್ಷಣ ಆಂದೋಲನವನ್ನು ಆರಂಭಿಸಿದ್ದ, ಯಾಸ್ಸೆರ್‌ ಅರಾಫತ್‌ರ ಫತಾ ಗುಂಪಿನಲ್ಲಿದ್ದ ಮಿಖೆಲ್‌ ಪಾಲೆಸ್ತೀನಿಯನ್‌ ಹೋರಾಟಕ್ಕೆ ಎಡಪಂಥೀಯ ದೃಷ್ಟಿಕೋನವನ್ನು ನೀಡಿದ್ದ, ಅಸಸ್‌ ಸವೇಗ್‌ ಪಾಲೆಸ್ತೀಯನ್ನರಿಗಾಗಿ ಹೊಸ ವಿಶ್ವಕೋಶವನ್ನೇ ಬರೆದ ಮಹಾನಿಸ್ಸಾರ್‌ “ಇಂತಿಫಾದ” ಚಳವಳಿಗೆ ಸ್ತ್ರೀವಾದದ ಚೌಕಟ್ಟುಗಳನ್ನು ನೀಡಿದರು..ಎಡ್ವರ್ಡ್‌ ಸೇದ್‌ ಅಮೇರಿಕದಲ್ಲಿ ನೆಲೆ ನಿಂತು ಪಾಲೆಸ್ತೀನಿಯನ್ನರ ನಷ್ಟವಾದ ಐಡೆಂಟಿಟಿ ಕುರಿತು ಬರೆಯುತ್ತಾ ಹೋದರು.

ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ-ಬೈಡನ್

ಯುದ್ಧ ನಿಲ್ಲಬಹುದೇ? ಎಂಬ ಪ್ರಶ್ನೆಗೆ ಉತ್ತರ ನೀಡುವುದು ಅಷ್ಟು ಸುಲಭವಲ್ಲ. ಹಮಾಸ್‌ ಮೂಲೋತ್ಪಾಟನೆಯಾದರೂ ಯುದ್ಧ ನಿಲ್ಲುವುದಿಲ್ಲ. ಅದರ ಬದಲಿಗೆ ಇನ್ನಷ್ಟು ತೀವ್ರವಾದಿ ಗುಂಪುಗಳು ಹುಟ್ಟಿಕೊಳ್ಳುತ್ತವೆ. ಸ್ವತಂತ್ರ ರಾಷ್ಟ್ರವಾಗಿ ಘೋಷಿಸುವ ತನಕ ಈ ಹೋರಾಟ ಪಾಲೆಸ್ತೀನಿಯರಿಗೆ ಅನಿವಾರ್ಯ. ವಾಸ್ತವವಾಗಿ ಯದ್ಧದ ನಿಲುಗಡೆಯನ್ನು ಇಸ್ರೇಲ್‌ ನಿರ್ಧರಿಸುವುದಿಲ್ಲ. ಈ ಯುದ್ಧದ ಹಿಂದೆ ಹತ್ತು ಹಲವು ಶಕ್ತಿಗಳಿವೆ: ಅಮೇರಿಕಾದ ಮಿಲಿಟರಿ ಕೈಗಾರಿಕೆಗಳಿವೆ; ಜಾಗತಿಕ ಕಾರ್ಪೊರೇಟ್‌ ಶಕ್ತಿಗಳಿವೆ, ಪ್ರಭಲವಾದ ಯಹೂದಿ ಲಾಬಿ ಇದೆ, ಅಮೇರಿಕಾದ ಮಿಲಿಟರಿ ಕೈಗಾರಿಕೆಗಳಿಗೆ ಯುದ್ಧ ಅವಶ್ಯಕ, ಅವುಗಳು ಯುದ್ಧ ಭೀತಿಯನ್ನು ನಿರ್ಮಿಸಿ ಮಧ್ಯಪೂರ್ವದಲ್ಲಿ ಶಸ್ತಾಸ್ತ್ರಗಳಿಗೆ ಬೇಡಿಕೆ ಹುಟ್ಟಿಸಿ, ಅಗಾಧವಾದ ಸಂಪತ್ತನ್ನು ಸೂರೆ ಗೊಳ್ಳುತ್ತವೆ. ಮಧ್ಯಪೂರ್ವದ ತೈಲ ಸರಬರಾಜಿನ ಮೇಲೆ ಅಮೇರಿಕಾದ ಹಿಡಿತವನ್ನು ಇನ್ನಷ್ಟು ಗಟ್ಟಿ ಗೊಳಿಸುತ್ತದೆ. ಯುದ್ಧವು ಔಷಧಿ, ಮಾಧ್ಯಮ, ವಾಣಿಜ್ಯ ಕಂಪನಿಗಳ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸುತ್ತದೆ, ಲಾಭವನ್ನು ತರುತ್ತದೆ. ಆದಕಾರಣ ಇವುಗಳು ಯುದ್ಧವನ್ನು ಪ್ರೀತಿಸಿದರೆ ಆಶ್ಚರ್ಯವಿಲ್ಲ. ವಿಶ್ವದ ಹೆಚ್ಚಿನ ಕಾರ್ಪೋರೇಟ್‌ ಕಂಪನಿಗಳ ಮಾಲಿಕತ್ವ, ಅಮೇರಿಕಾದ ರಾಜಕೀಯ ಶಕ್ತಿ, ಅಮೇರಿಕಾದ ಆರ್ಥಿಕ ತಳಹದಿ ಇರುವುದೇ ಬೆರಳೆಣಿಕೆಯ ಯಹೂದಿಗಳ ಹಿಡಿತದಲ್ಲಿ.-ಸಾಮಾಜಿಕ ಜಾಲ ತಾಣ, ಪತ್ರಿಕೋದ್ಯಮ. ಹಣಕಾಸು, ಸಂಗೀತ, ಸಿನೆಮಾ, ಟಿ.ವಿ, ವ್ಯಾಪಾರ, ವಾಣಿಜ್ಯ, ಆಹಾರ ಇತ್ಯಾದಿ., ಒಂದು ಲೆಕ್ಕಾಚಾರದಂತೆ ಯಹೂದಿಗಳ 6 ಕಂಪನೆಗಳು ಜಗತ್ತಿನ 96 ಶೇಕಡಾದಷ್ಟು ಮಾಧ್ಯಮ ರಂಗದ ಮೇಲೆ ತಮ್ಮ ಹಿಡಿತನವನ್ನು ಸಾಧಿಸಿವೆ. ಆದ ಕಾರಣ ಯುದ್ಧ ಮುಂದುವರಿದರೆ ಆಶ್ಚರ್ಯವಿಲ್ಲ.

ಪ್ರೊ.ಮುಜಾಪ್ಫರ್ಅಸ್ಸಾದಿ, ಮೈಸೂರು.

ಅಪೂರ್ವ ವಿದ್ವಾಂಸರು, ಚಿಂತಕರು, ಸಂಘಟಕರು, ಹೋರಾಟಗಾರರು.

Related Articles

ಇತ್ತೀಚಿನ ಸುದ್ದಿಗಳು