Monday, June 17, 2024

ಸತ್ಯ | ನ್ಯಾಯ |ಧರ್ಮ

ಭಾರತದ ಆರ್ಥಿಕತೆ ಬಗ್ಗೆ ಆತಂಕದ ವರದಿ ನೀಡಿದ ವಿಶ್ವಬ್ಯಾಂಕ್

ಕೋವಿಡ್ ಎಂಬ ಸಾಂಕ್ರಾಮಿಕ ಜಗತ್ತಿನಲ್ಲಿ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಪ್ರಮುಖವಾಗಿ ಮನುಷ್ಯನ ದೈಹಿಕ ಆರೋಗ್ಯ ಅತ್ಯಂತ ಹೀನಾಯವಾಗಿ ಹೋಯಿತು. ಜೊತೆಗೆ ಯಾರ ಜೀವಕ್ಕೂ ಬೆಲೆ ಇಲ್ಲದಂತೆ ಕಂಡಕಂಡಲ್ಲಿ ಮನುಷ್ಯನ ಹೆಣ ಬೀಳುವಂತಾಯ್ತು. ಎಲ್ಲಕ್ಕಿಂತ ಹೆಚ್ಚಾಗಿ ಜಾಗತಿಕವಾಗಿ ಆರ್ಥಿಕತೆ ಪಾತಾಳಕ್ಕೆ ತಳ್ಳಲ್ಪಟ್ಟಿತು.

ಜಗತ್ತಿನಲ್ಲಿ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟಿನಿಂದ ಕೇವಲ ಎರಡೂವರೆ ವರ್ಷಗಳಲ್ಲಿ ಕಂಡೂ ಕೇಳರಿಯದ ಬಡತನ ಸೃಷ್ಟಿಯಾಯಿತು. ಎಲ್ಲೆಡೆ ಹಸಿವು, ಅಂಧಕಾರ ತಾಂಡವವಾಡಿತು. ಬಡವರಂತೂ ತುತ್ತಿನ ಊಟಕ್ಕೆ ತತ್ವಾರ ಪಡುವಂತಾಯ್ತು. ಎಲ್ಲಾ ರೀತಿಯ ವ್ಯವಹಾರಗಳೂ ನೆಲ ಕಚ್ಚಿದವು. ಸಂಪೂರ್ಣ ಸ್ತಬ್ಧವೇ ಆದ ಜಗತ್ತಿನ ಆರ್ಥಿಕತೆ ಮತ್ತೆ ಮೊದಲಿನ ಹಂತಕ್ಕೆ ಬರಲು ಕೆಲವು ವರ್ಷಗಳೇ ಬೇಕು ಎಂದು ಆರ್ಥಿಕ ತಜ್ಞರು ಊಹಿಸಲ್ಪಟ್ಟರು.

ಜಗತ್ತಿಗೇ ಬಂದ ಬಿಕ್ಕಟ್ಟು ಎಂದು ಭಾರತದ ಆಡಳಿತ ವ್ಯವಸ್ಥೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಇದ್ದ ಪರಿಣಾಮ ಈಗ ಇಡೀ ಜಗತ್ತೇ ಈಗ ಭಾರತದ ದುಸ್ಥಿತಿಯ ಕಡೆ ಆತಂಕದಿಂದ ನೋಡುವಂತಾಗಿದೆ. ವಿಶ್ವಬ್ಯಾಂಕ್ 2022 ಕ್ಕೆ ಕೊಟ್ಟ ವರದಿಯಂತೆ ಕೋವಿಡ್‌ನಿಂದ ಜಾಗತಿಕವಾಗಿ ಸೃಷ್ಟಿಯಾದ ಬಡವರಲ್ಲಿ ಭಾರತೀಯರೇ ಶೇ. 80ರಷ್ಟು ಇದ್ದಾರೆ ಎಂದು ಈ ವರದಿ ಹೇಳಿದೆ. ಸಧ್ಯ ಈ ವರದಿ ದೇಶದ ಹದಗೆಟ್ಟ ಮತ್ತು ಪೂರ್ವಜ್ಞಾನವಿಲ್ಲದ ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿದಂತಾಗಿದೆ.

ಕೋವಿಡ್ ಸಂದರ್ಭ ಮತ್ತು ಕೋವಿಡ್ ನಂತರದ ಈ ದಿನಗಳಲ್ಲಿ ಭಾರತದ ಆರ್ಥಿಕತೆ ಬೆಳೆದಂತೆ ಸಿರಿವಂತರ ಸಂಪತ್ತು ಹೆಚ್ಚುತ್ತಿರುವುದು ಬಡತನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಆ ಮೂಲಕ ಬಡವರ ಅಳಿದುಳಿದ ಸಂಪತ್ತು ಕರಗುತ್ತಿದೆ ಎಂಬುದು ಕೆಲ ಅಂಕಿ ಅಂಶಗಳು ಹೇಳುತ್ತವೆ. ಒಂದು ದೇಶದಲ್ಲಿ ಸಿರಿವಂತರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಆ ದೇಶದಲ್ಲಿ ಬಡತನ ಹೆಚ್ಚುತ್ತಿದೆ ಎಂಬುದರ ಪರೋಕ್ಷ ವಾಕ್ಯದಂತೆ. ಆ ನಿಟ್ಟಿನಲ್ಲಿ ಕೋವಿಡ್ ನಂತರದಲ್ಲಿ ದೇಶದ ಕೆಲವೇ ಕೆಲವು ಸಿರಿವಂತರ ಸಂಖ್ಯೆ ಸಾವಿರ ಪಟ್ಟು ಮೇಲೇರಿದ್ದು ಇಲ್ಲಿ ಗಮನಿಸಬಹುದು.

ವಿಶ್ವಬ್ಯಾಂಕ್ ಕೊಟ್ಟ ವರದಿಯಂತೆ 2020ರಲ್ಲಿ ಕೋವಿಡ್ ಪರಿಸ್ಥಿತಿಯಿಂದ ಜಾಗತಿಕವಾಗಿ ಹೊಸದಾಗಿ 7 ಕೋಟಿ ಜನರು ಬಡತನಕ್ಕೆ ಸಿಲುಕಿದ್ದಾರೆ. ಇದರಲ್ಲಿ ಕೇವಲ ಭಾರತದಲ್ಲೇ 5.6 ಕೋಟಿ ಮಂದಿ ಭಾರತೀಯರು ಈ ಸಂದರ್ಭದಲ್ಲಿ ಆರ್ಥಿಕ ನಷ್ಟಕ್ಕೊಳಗಾಗಿ ಬಡವರಾಗಿದ್ದಾರೆ ಎನ್ನಲಾಗಿದೆ. 2019ರಲ್ಲಿ ಜಾಗತಿಕವಾಗಿ ವಿಪರೀತ ಬಡತನದ ಮಟ್ಟ ಶೇ. 8.4 ಇದ್ದರೆ, ಇದು 2020ರಲ್ಲಿ ಶೇ. 9.3ಕ್ಕೆ ಏರಿತು. ಇನ್ನು, 2020ರಲ್ಲಿ ಹೊಸದಾಗಿ ಬಡತನದ ಗುಂಪಿಗೆ ಸೇರಿದ 7 ಕೋಟಿ ಜನರು ಸೇರಿದಂತೆ ವಿಶ್ವಾದ್ಯಂತ ಬಡವರ ಸಂಖ್ಯೆ 70 ಕೋಟಿಗೂ ಹೆಚ್ಚಿತ್ತು ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

Poverty and Shared Prosperity 2022: Correcting the Course ಎಂಬ ಅಧ್ಯಯನ ವರದಿಯಂತೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ (ಸಿಎಂಐಇ) ಸಂಸ್ಥೆಯ ಗೃಹ ಸಮೀಕ್ಷೆಯ (ಸಿಪಿಎಚ್‌ಎಸ್) ವರದಿಯ ಅಂಶಗಳನ್ನು ಉಪಯೋಗಿಸಿಕೊಂಡಿದೆ. ಭಾರತ ಸರಕಾರದಿಂದ ಅಧಿಕೃತ ಅಂಕಿ ಅಂಶ ಸಿಕ್ಕಿಲ್ಲವಾದ್ದರಿಂದ ಸಿಪಿಎಚ್‌ಎಸ್ ದತ್ತಾಂಶವನ್ನು ಅನಿವಾರ್ಯವಾಗಿ ಉಪಯೋಗಿಸಿಕೊಂಡಿದ್ದೇವೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಅಧಿಕೃತವಾಗಿ ಭಾರತ ಸರ್ಕಾರದಲ್ಲಿ 2011 ರ ಈಚೆಗೆ ಇಲ್ಲಿಯವರೆಗೂ ಬಡತನದ ಅಂಕಿ ಅಂಶಗಳ ಮಾಹಿತಿ ಇಲ್ಲ. 2011 ರಿಂದಲೂ ಭಾರತ ಸರ್ಕಾರ ಈ ಬಗ್ಗೆ ಮಾಹಿತಿ ಕೊಡುವುದನ್ನು ನಿಲ್ಲಿಸಿದೆ. ಹಾಗಾಗಿ ಇದೇ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ (CMIE) ಸಂಸ್ಥೆಯ ಗೃಹ ಸಮೀಕ್ಷೆಯ (CPHS) ವರದಿಯ ಅಂಶಗಳಿಂದ 2011 ರಿಂದ ಈಚೆಗೆ ಭಾರತ ತಕ್ಕ ಮಟ್ಟಿಗೆ ಆರ್ಥಿಕವಾಗಿ ಚೇತರಿಸಿಕೊಳ್ಳುವ ವರದಿ ನೀಡಿತ್ತು. ಆದರೆ ಕೋವಿಡ್ ಹೊಡೆತದ ಪರಿಣಾಮ ಭಾರತ ಬಡತನದ ರೇಖೆಯಲ್ಲಿ ಅತ್ಯಂತ ಕೆಳ ಮಟ್ಟಕ್ಕೆ ತಳ್ಳಲ್ಪಟ್ಟಿದೆ.

ಕೋವಿಡ್ ನ ನಂತರ ಹವಾಮಾನ ವೈಪರೀತ್ಯ ಕೂಡಾ ಜಾಗತಿಕ ಮಟ್ಟದಲ್ಲಿ ಬಡತನ ಹೆಚ್ಚಾಗಲು ಕಾರಣ ಎಂಬ ಅಂಶ ಗಮನಾರ್ಹ. ಇದರ ಜೊತೆಗೆ ರಷ್ಯಾ – ಉಕ್ರೇನ್ ಯುದ್ಧ ಕೂಡಾ ಬಡತನದ ತೀವ್ರತೆ ಹೆಚ್ಚಾಗಲು ಕಾರಣ ಎಃಬ ಅಂಶ ವರದಿಯಾಗಿದೆ. 2030 ರ ಅವಧಿಗೆ ಜಾಗತಿಕವಾಗಿ ಕಡು ಬಡತನ ನಿರ್ಮೂಲನೆ ಎಂಬ ಗುರಿ ಇಡಲಾಗಿತ್ತು. ಆದರೆ ವಿಶ್ವಬ್ಯಾಂಕ್ ನ ಈ ವರದಿ ನೋಡಿದರೆ 2030 ಕ್ಕೆ ಕಡುಬಡತನ ನಿರ್ಮೂಲನೆ ನಿಚ್ಚಳವಾಗಿ ಅಸಾಧ್ಯ ಎನ್ನಲಾಗಿದೆ.

ವಿಶ್ವಬ್ಯಾಂಕ್ ನ ಸಲಹೆಯಂತೆ ಸರ್ಕಾರ ಬಡ ಮಧ್ಯಮ ವರ್ಗಗಳಿಗೆ ಹೊರೆಯಾಗದಂತೆ ನೀತಿಗಳನ್ನು ರೂಪಿಸಬೇಕು. ಸಾರ್ವಜನಿಕ ಮೂಲಗಳಿಂದ ಆದಾಯ ಸೃಷ್ಟಿಸಿಕೊಳ್ಳಬೇಕು. ಶ್ರೀಮಂತರ ತೆರಿಗೆ ಸಾಲ ಬಡ್ಡಿ ಮನ್ನಾ ಮಾಡುವುದನ್ನು ನಿಲ್ಲಿಸಿ, ಈಗಾಗಲೇ ಶ್ರೀಮಂತರ ಬಾಕಿ ಉಳಿದಿರುವ ತೆರಿಗೆಯನ್ನು ವಸೂಲಿ ಮಾಡಬೇಕು. ಜೊತೆಗೆ ಶ್ರೀಮಂತರ ಉದ್ದಿಮೆಗಳ ಮೇಲೆ ಹೆಚ್ಚು ತೆರಿಗೆ ಪ್ರಮಾಣದಲ್ಲಿ ಹೆಚ್ಚು ಮಾಡಬೇಕು ಎಂದು ವಿಶ್ವಬ್ಯಾಂಕ್ ಸಲಹೆ ನೀಡಿದೆ.

ಭಾರತದ ಮಟ್ಟಿಗೆ ಆಡಳಿತ ವ್ಯವಸ್ಥೆ ವಿಶ್ವಬ್ಯಾಂಕ್ ಸಲಹೆಗೆ ವ್ಯತಿರಿಕ್ತವಾಗಿದ್ದು ಚೇತರಿಕೆ ಕಾಣುವ ಯಾವುದೇ ಲಕ್ಷಣಗಳು ಇಲ್ಲ ಎಂದೇ ಹೇಳಬಹುದು. ಈಗಿನ ಸರ್ಕಾರ ಕಾರ್ಪೊರೇಟ್ ಉದ್ಯಮಿಗಳ ಪರವಾಗಿ ಎಲ್ಲಾ ರೀತಿಯಲ್ಲೂ ಪೂರಕವಾಗಿ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳದ ಹೊರತು ಆರ್ಥಿಕ ಚೇತರಿಕೆ ಅಸಾಧ್ಯ ಎಂದೇ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು