Wednesday, September 24, 2025

ಸತ್ಯ | ನ್ಯಾಯ |ಧರ್ಮ

ಪ್ರಧಾನಿ ಮನೆ ಮುಂದಿನ ರಸ್ತೆಯಲ್ಲೂ ಗುಂಡಿಗಳಿವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ದೆಹಲಿಯಲ್ಲಿ ಪ್ರಧಾನಿ ಮನೆಯ ಮುಂದೆಯೇ ಎಷ್ಟು ರಸ್ತೆಗುಂಡಿಗಳಿವೆ. ಅದನ್ನು ಬಿಟ್ಟು ಕರ್ನಾಟಕವನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ” ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ದೆಹಲಿ ಒಂದು ಸುತ್ತು ಸುತ್ತಿ ಬಂದೆ. ಅಲ್ಲಿ ಎಷ್ಟು ರಸ್ತೆಗುಂಡಿಗಳಿವೆ ಮತ್ತು ಪ್ರಧಾನಿ ನಿವಾಸದ ರಸ್ತೆಯಲ್ಲಿಯೇ ಎಷ್ಟು ಗುಂಡಿಗಳಿವೆ. ಅದನ್ನೂ ಮಾಧ್ಯಮಗಳು ಪರಿಶೀಲಿಸಬೇಕು” ಎಂದರು.

“ರಸ್ತೆಗುಂಡಿ ಸಮಸ್ಯೆ ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ, ಇದು ಇಡೀ ದೇಶಾದ್ಯಂತ ಇರುವ ಸಮಸ್ಯೆ. ಆದರೆ, ರಾಜ್ಯದ ಬಗ್ಗೆ ಮಾತ್ರ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಎಲ್ಲ ಕಡೆಯೂ ಈ ಸಮಸ್ಯೆ ಇದೆ. ಇದನ್ನು ದೊಡ್ಡ ದೊಡ್ಡ ಐಟಿ ಕಂಪನಿಗಳು ಸೇರಿದಂತೆ ಎಲ್ಲರಿಗೂ ಸ್ಪಷ್ಟಪಡಿಸುತ್ತಿದ್ದೇನೆ” ಎಂದು ಸಮಜಾಯಿಷಿ ನೀಡಿದ ಅವರು, “ಏನೇ ಇರಲಿ, ರಸ್ತೆಗುಂಡಿ ವಿಚಾರವಾಗಿ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ” ಎಂದರು.

‘ಪ್ರತಿದಿನ ಸಾವಿರ ಗುಂಡಿ ಮುಚ್ಚುತ್ತಿದ್ದೇವೆ’

“ಪಾಲಿಕೆವಾರು ಇನ್ನೂರು ಗುಂಡಿಗಳಂತೆ, ಪ್ರತಿದಿನ ನಗರದಾದ್ಯಂತ 1 ಸಾವಿರ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ. ಮಳೆಯ ನಡುವೆಯೂ ನಾವು ಕೆಲಸದಲ್ಲಿ ತೊಡಗಿದ್ದೇವೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

“ಬಿಜೆಪಿ ಕಾಲದಿಂದಲೂ ರಸ್ತೆಗಳನ್ನು ಚೆನ್ನಾಗಿ ಮಾಡಿಕೊಂಡು ಬಂದಿದ್ದರೆ ಇಂತಹ ಪರಿಸ್ಥಿತಿ ಏಕೆ ಬರುತ್ತಿತ್ತು? ಅವರು ಯಾರೂ ಮಾಡಲಿಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿದೆ ಎಂದು ಕಾಣುತ್ತದೆ, ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ” ಎಂದು ತೀಕ್ಷ್ಣವಾಗಿ ಹೇಳಿದರು. ಬಿಹಾರ ಭೇಟಿ ವಿಚಾರ ಕೇಳಿದಾಗ, “ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯನ್ನು ಬುಧವಾರ ಆಯೋಜಿಸಲಾಗಿದೆ” ಎಂದರು.

‘ನಿಮ್ಮ ಮನೆ ಮುಂದೆ ಬೇಕಿದ್ರೆ ಹೊಂಡ ಮಾಡಿಕೊಳ್ಳಿ’: ಸಿ.ಸಿ. ಪಾಟೀಲ್ ತಿರುಗೇಟು

“ರಸ್ತೆಗುಂಡಿಗೂ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಎಳೆದು ತರುತ್ತೀರಿ. ನಿಮಗೆ (ಡಿ.ಕೆ. ಶಿವಕುಮಾರ್‌ಗೆ) ಬೇಕಿದ್ದರೆ ನಿಮ್ಮ ಮನೆ ಮುಂದೆ ಹೊಂಡ ಅಥವಾ ಕೆರೆ ಮಾಡಿಕೊಳ್ಳಿ” ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್ ತಿರುಗೇಟು ನೀಡಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಏನು ಕೇಳಿದರೂ ಮೋದಿ ಮಾಡಿಲ್ಲ, ಬಿಜೆಪಿ ಮಾಡಿಲ್ಲ ಎನ್ನುತ್ತೀರಾ? ನಾವಿದ್ದಾಗ ಮಾಡದಿದ್ದಕ್ಕೇ ನೀವು ಬಂದಿದ್ದೀರಿ. ನೀವು ಹೋಗಲು ತಯಾರಾಗಿ, ನಾವು ಬರುತ್ತೇವೆ” ಎಂದರು. “ಗುಂಡಿಗಳನ್ನು ಎಣಿಸುವ ಸರ್ಕಾರವನ್ನು ನೋಡಿರಲಿಲ್ಲ. ಅಧಿಕಾರಿಗಳನ್ನು ಗುಂಡಿ ಎಣಿಸಲು ಬಿಟ್ಟಿರುವ ಸರ್ಕಾರ ಸ್ವತಂತ್ರ ಭಾರತದಲ್ಲಿ ಇದೇ ಮೊದಲು ಎನಿಸುತ್ತದೆ. ಸೋಮವಾರ ರಾತ್ರಿ ಬಿಡಿಎ ಮುಂದೆ ಮಳೆಯಲ್ಲಿ ಗುಂಡಿ ಮುಚ್ಚುತ್ತಿದ್ದರು. ಅದು ಉಳಿಯುತ್ತದೆಯೇ? ಅಷ್ಟೂ ಪರಿಜ್ಞಾನ ಇಲ್ಲವೇ?” ಎಂದು ಪ್ರಶ್ನಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page