Home ಕ್ರೀಡೆ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಅಗತ್ಯವಿದೆ – ಪರಿಸರವಾದಿ ವಿಕ್ರಮ್ ಹುರುಡಿ

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಅಗತ್ಯವಿದೆ – ಪರಿಸರವಾದಿ ವಿಕ್ರಮ್ ಹುರುಡಿ

0

ಹಾಸನ: ಉತ್ತರ ಭಾರತದ ಹಿಮಾಲಯ ಪರ್ವತಗಳು ಹೇಗೆ ಮಹತ್ವದ್ದೋ, ದಕ್ಷಿಣ ಭಾರತಕ್ಕೆ ಪಶ್ಚಿಮ ಘಟ್ಟಗಳು ಅಷ್ಟೇ ಮಹತ್ವದವು. ಪಶ್ಚಿಮ ಘಟ್ಟಗಳು ದಕ್ಷಿಣ ಭಾರತದ ನೀರಿನ ಟ್ಯಾಂಕ್‌ನಂತಿದ್ದು, ನದಿಗಳ ಉಗಮಸ್ಥಾನವಾಗಿವೆ. ನೈರುತ್ಯ ಮಾರುತಗಳನ್ನು ತಡೆದು ಮಳೆ ಸುರಿಸುವ ಮೂಲಕ ದೇಶದ ಕೃಷಿ ಹಾಗೂ ಜಲ ಸಂಪನ್ಮೂಲಕ್ಕೆ ಪ್ರಮುಖ ಕೊಡುಗೆ ನೀಡುತ್ತಿವೆ. ಹೀಗಾಗಿ ಪಶ್ಚಿಮ ಘಟ್ಟಗಳನ್ನು ಸ್ವಾರ್ಥಕ್ಕಾಗಿ ಬಲಿ ಕೊಡದೆ ಸಂರಕ್ಷಿಸಬೇಕು ಎಂದು ಪರಿಸರವಾದಿ ವಿಕ್ರಮ್ ಹುರುಡಿ ಒತ್ತಾಯಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟಗಳಲ್ಲಿ ಸುಮಾರು 3,500ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು ಹಾಗೂ ಸಾವಿರಾರು ಜೀವ ಸಂಕುಲಗಳು ಅಸ್ತಿತ್ವದಲ್ಲಿದ್ದು, ಅಪರೂಪದ ಜೀವ ವೈವಿಧ್ಯವನ್ನು ಹೊಂದಿವೆ. ಜಗತ್ತಿನ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದರು.

ಗುಜರಾತ್‌ನ ಕಚ್ ಪ್ರದೇಶದಿಂದ ಆರಂಭವಾಗಿ ಆರು ರಾಜ್ಯಗಳ ಮೂಲಕ ಕನ್ಯಾಕುಮಾರಿವರೆಗೆ ವಿಸ್ತರಿಸಿರುವ ಪಶ್ಚಿಮ ಘಟ್ಟಗಳು ಸುಮಾರು 59,940 ಚದರ ಕಿ.ಮೀ. ವ್ಯಾಪ್ತಿ ಹೊಂದಿವೆ. ಇದರಲ್ಲಿ ಕರ್ನಾಟಕದಲ್ಲೇ ಸುಮಾರು 20,668 ಚದರ ಕಿ.ಮೀ. ಪ್ರದೇಶವಿದೆ. ಈ ಪ್ರದೇಶದ ಜೀವ ವೈವಿಧ್ಯ ಅತ್ಯಂತ ವಿಶಿಷ್ಟವಾಗಿದ್ದು, ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಮಾಧವ ಗಾಡ್ಗಿಲ್ ಸಮಿತಿ 2011ರ ಆಗಸ್ಟ್ 30ರಂದು ವರದಿ ಸಲ್ಲಿಸಿತ್ತು. ವರದಿಗೆ ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳಿಂದ ಸುಮಾರು 1,750 ಆಕ್ಷೇಪಣೆ ಹಾಗೂ ಸಲಹೆಗಳು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲು 2012ರ ಆಗಸ್ಟ್ 17ರಂದು ಕಸ್ತೂರಿ ರಂಗನ್ ಸಮಿತಿಯನ್ನು ರಚಿಸಲಾಯಿತು. ಸಮಿತಿ 2013ರ ಏಪ್ರಿಲ್ 15ರಂದು ತನ್ನ ವರದಿ ಸಲ್ಲಿಸಿತು ಎಂದು ತಿಳಿಸಿದರು.

ಮಾಧವ ಗಾಡ್ಗಿಲ್ ಅವರು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದರೆ, ಕಸ್ತೂರಿ ರಂಗನ್ ಸಮಿತಿ ಉಪಗ್ರಹ ಆಧಾರಿತ ಅಧ್ಯಯನದ ಮೂಲಕ ಪಶ್ಚಿಮ ಘಟ್ಟ ಪ್ರದೇಶಗಳನ್ನು ಗುರುತಿಸಿ ವರದಿ ಸಿದ್ಧಪಡಿಸಿದೆ ಎಂದು ವಿಕ್ರಮ್ ಹುರುಡಿ ಹೇಳಿದರು. ಕಸ್ತೂರಿ ರಂಗನ್ ವರದಿಯಲ್ಲಿ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಮರಳು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಲಾಗಿದೆ. ಹೆಚ್ಚಿನ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳು ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳಿಗೂ ನಿರ್ಬಂಧ ವಿಧಿಸುವಂತೆ ಸೂಚಿಸಲಾಗಿದೆ. ಕಾಫಿ, ಅಡಿಕೆ ಹಾಗೂ ರಬ್ಬರ್‌ನಂತಹ ಈಗಾಗಲೇ ಇರುವ ತೋಟಗಾರಿಕೆ ಚಟುವಟಿಕೆಗಳನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಮುಂದುವರಿಸಬಹುದಾಗಿದೆ. ಶಾಲೆ, ಆಸ್ಪತ್ರೆ, ಸಣ್ಣ ಕಟ್ಟಡಗಳು ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಅಂಶಗಳೂ ವರದಿಯಲ್ಲಿವೆ. ಹೊಸ ರಸ್ತೆ, ದೊಡ್ಡ ಪ್ರಮಾಣದ ಪರಿಸರ ಹಾನಿಕಾರಕ ಚಟುವಟಿಕೆಗಳಿಗೆ ನಿಯಂತ್ರಣ ವಿಧಿಸುವ ಅಗತ್ಯವನ್ನು ವರದಿ ಒತ್ತಿಹೇಳುತ್ತದೆ ಎಂದು ಅವರು ವಿವರಿಸಿದರು.

You cannot copy content of this page

Exit mobile version