Friday, June 14, 2024

ಸತ್ಯ | ನ್ಯಾಯ |ಧರ್ಮ

ನ್ಯಾಯಾಂಗವು ಲಿಂಗತ್ವ ಸೂಕ್ಷ್ಮತೆ ಬೆಳೆಸಿಕೊಳ್ಳುವ ತುರ್ತಿದೆ : ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್

“ಲಾಯರ್ ಆಗಿದ್ದ ನನ್ನ ದಿವಂಗತ ಪತ್ನಿ ಒಮ್ಮೆ ಒಂದು ಲಾ ಫರ್ಮ್‌ಗೆ ಕೆಲಸಕ್ಕಾಗಿ ಹೋದಾಗ, ಕೆಲಸದ ಸಮಯ ಎಷ್ಟುಎಂದು ಕೇಳಿದರು. ಆಗ ಸಂಸ್ಥೆಯವರು 24×7 ಮತ್ತು 365 ದಿನಗಳು ಎಂದು ಹೇಳಿದರು. ನನ್ನ ಪತ್ನಿ ಕುಟುಂಬ ಇರುವವರ ಕಥೆ ಏನು ಎಂದು ಕೇಳಿದಾಗ, ಮನೆಕೆಲಸಗಳನ್ನು ಮಾಡಬಲ್ಲ ಗಂಡನನ್ನು ಹುಡುಕಿ ಮತ್ತು ಕುಟುಂಬಕ್ಕೆ ಸಮಯವಿಲ್ಲ ಎಂದರಂತೆ”

ಇದು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ದಿವಂಗತರಾಗಿರುವ ತಮ್ಮ ಪತ್ನಿಯನ್ನು ನೆನಪಿಸಿಕೊಂಡ ರೀತಿ. ಅಗಸ್ಟ್‌ 27, 2023 ರಂದು ನಡೆದ ಬೆಂಗಳೂರಿನ NSLSI ( National Law School of India University) ನ 31ನೇ ಘಟಿಕೋತ್ಸವದಲ್ಲಿ ಸಿಜೆಐ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಕೀಲ ವೃತ್ತಿಯ ಸವಾಲುಗಳ ಬಗ್ಗೆ ಮಾತನಾಡಿದರು.

“ಕಳೆದ ವರ್ಷ ಐವರಲ್ಲಿ ನಾಲ್ವರು ಮಹಿಳಾ ಕಾನೂನು ಗುಮಾಸ್ತರು ‘ಸರ್ ನನಗೆ ಮುಟ್ಟಿನ ನೋವಿದೆ’ ಎಂದು ಹೇಳುವುದು ಸಾಮಾನ್ಯವಾಗಿ ಹೋಗಿತ್ತು. ‘ದಯವಿಟ್ಟು ಮನೆಯಿಂದಲೇ ಕೆಲಸ ಮಾಡಿ ಮತ್ತು ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ’ ಎಂದು ನಾನು ಹೇಳುತ್ತಿದ್ದೆ. ಈ ಸಮಸ್ಯೆಗಳು ಅಸ್ತಿತ್ವದಲ್ಲಿಯೇ ಇಲ್ಲ ಎಂಬಂತೆ ವರ್ತಿಸಲು ಸಾಧ್ಯವಿಲ್ಲ,” ಎಂದು ಅವರು ಭಾಷಣದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. ಕೆಲಸ ಮಾಡುವ ಪರಿಸರ ಮಹಿಳಾ ಸ್ನೇಹಿಯಾಗಿರುವ ಅಗತ್ಯತೆಯ ಬಗೆ ವಿವರಿಸಿದರು,

ಸುಪ್ರೀಂ ಕೋರ್ಟ್‌ನ ಮಹಿಳೆಯರ ಶೌಚಾಲಯಗಳಲ್ಲಿ ಇತ್ತೀಚೆಗೆ ಸ್ಯಾನಿಟರಿ ನ್ಯಾಪ್‌ಕಿನ್ ಡಿಸ್ಪೆನ್ಸರ್‌ಗಳನ್ನು ಅಳವಡಿಸಲಾಗಿದೆ. ನಾವು ನಮ್ಮ ಸಂಸ್ಥೆಗಳಲ್ಲಿ ಸಮಾನ-ಅವಕಾಶಗಳನ್ನು ಕಲ್ಪಿಸಬೇಕಾದರೆ ಇಂತಹ ಮಾತುಕತೆಗಳು ನಡೆಯಬೇಕು” ಎಂದು ಅವರು ಹೇಳಿದರು.

ಇತ್ತೀಚೆಗೆ ಬಿಡುಗಡೆಯಾದ ಜೆಂಡರ್ ಸ್ಟೀರಿಯೊಟೈಪಿಂಗ್ ಕುರಿತ ಸುಪ್ರೀಂ ಕೋರ್ಟ್ ಕೈಪಿಡಿಯ ಬಗ್ಗೆ ಸಿಜೆಐ ಪ್ರಸ್ತಾಪಿಸಿ, “ನಾವು ಮಹಿಳೆಯನ್ನು ‘ಗೃಹಿಣಿ’ ಎಂದು ಏಕೆ ಕರೆಯಬಾರದು ಎಂಬ ಬಗ್ಗೆ ನಮ್ಮ ನ್ಯಾಯಾಧೀಶರನ್ನು ಸಂವೇದನಾಶೀಲಗೊಳಿಸಲು ಪ್ರಯತ್ನಿಸಿದ್ದೇವೆ. ಈ ನಿಯಮಗಳು ನಮ್ಮ ನ್ಯಾಯಾಧೀಶರಲ್ಲಿ ಅರಿವನ್ನು ಮೂಡಿಸುತ್ತವೆ. ಆಧುನಿಕ ಭಾರತದಲ್ಲಿ ಇನ್ನು ಮುಂದೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ,” ಎಂದರು.

ಸಿಜೆಐ ಚಂದ್ರಚೂಡ್ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಮಹತ್ವದ ತೀರ್ಪುಗಳನ್ನು ನೀಡಿದವರು. ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ, ವ್ಯಭಿಚಾರದ ಬಗೆಗಿನ ಆದೇಶಗಳು, ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ, ಮತ್ತು ಅವಿವಾಹಿತ ಮಹಿಳೆಯರ ಕಾನೂನಾತ್ಮಕ ಗರ್ಭಪಾತ ಮೊದಲಾದ ಮಹತ್ವದ ನಿರ್ಧಾರಗಳ ಮೂಲಕ ಹೆಸರಾದವರು. ಮಣಿಪುರದ ಮಹಿಳೆಯೋರ್ವರ ಬೆತ್ತಲೆ ಮೆರವಣಿಗೆಯ ವಿಚಾರಣೆಯನ್ನು ಆರಂಭಿಸಿದವವರು.

“ಇತ್ತೀಚೆಗೆ ಹೃದಯವಿದ್ರಾವಕವಾದ ಕಥೆಯೊಂದನ್ನು ನಾನು ಕೇಳಿದೆ. ಒಬ್ಬ ಯುವ ವಿದ್ಯಾರ್ಥಿ ಕಾನೂನು ಕಚೇರಿಯಲ್ಲಿ ಇಂಟರ್ನ್‌ಶಿಪ್‌ಗಾಗಿ ಬಂದಾಗ ಮೇಲ್ವಿಚಾರಕರು ಅವನ ಜಾತಿಯನ್ನು ಕೇಳಿದರು. ನಂತರ ಇಂಟರ್ನ್‌ಶಿಪ್‌ಗೆ ಬರಬೇಡಿ ಎಂದರು. ಈ ಘಟನೆ ನನ್ನಲ್ಲಿ ಹತಾಶೆಯನ್ನು ಹುಟ್ಟಿಸಿತು. ವಕೀಲರಾದ ನಾವು ಸಮಾಜ ಮತ್ತು ಅನ್ಯಾಯಗಳ ಬಗ್ಗೆ ಸೂಕ್ಷ್ಮವಾಗಿ ತಿಳಿದಿರುತ್ತೇವೆ. ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಸಾಂವಿಧಾನಿಕ ಮೌಲ್ಯಗಳನ್ನು ಪಾಲಿಸುವುದು ಮತ್ತು ಎತ್ತಿಹಿಡಿಯುವುದು ನಮ್ಮ ಕರ್ತವ್ಯ. ಅದು ಸಾಮಾನ್ಯ ನಾಗರಿಕನಿಗಿಂತ ಹೆಚ್ಚಿನದಾಗಿದೆ.ಆದರೂ, ಕೆಲವು ವಕೀಲರು ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವುದನ್ನು ಬಿಟ್ಟು ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ ಎಂಬುದನ್ನು ಈ ಘಟನೆ ತೋರಿಸುತ್ತದೆ, ”ಎಂದು ಅವರು ವಕೀಲಿ ವೃತ್ತಿಯಲ್ಲಿ ನಡೆಯುವ ಜಾತಿ ತಾರತಮ್ಯದ ಬಗ್ಗೆ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು