ಸ್ವಾತಂತ್ರ್ಯೋತ್ಸವವನ್ನು ಎಲ್ಲರೂ ಸಂಭ್ರಮ ಸಡಗರದಿಂದ ಆಚರಿಸಿ ಎಂದು ಪ್ರಧಾನಿಗಳು ಕರೆಕೊಡುತ್ತಾರೆ! ಸಂಭ್ರಮಿಸುತ್ತಾರೆ! ಆದರೆ ಎಲ್ಲರಿಗೂ ಈ ಸಂಭ್ರಮ ಸಾಧ್ಯವೇ? ದೇಶ ಅಂದರೆ ಮಣ್ಣಲ್ಲ, ಜನರು. ಕುಲ, ಜಾತಿ, ಮತಧರ್ಮ, ಲಿಂಗ ಮೀರಿ ಎಲ್ಲ ಜನರು. ಈ ಎಲ್ಲ ಜನರು ಖುಷಿಯಿಂದಿದ್ದಾಗ, ಎಲ್ಲರನ್ನೂ ಸಮಾನತೆ ಮತ್ತು ಸಹೋದರ ಭಾವದೊಂದಿಗೆ ನೋಡಿಕೊಂಡಾಗ ಮಾತ್ರ ಅಲ್ಲಿ ಸ್ವಾತಂತ್ರ್ಯಕ್ಕೆ, ಸಂಭ್ರಮಕ್ಕೆ ಅರ್ಥ. ಅದು ಈಗ ಇದೆಯೇ? – ಶ್ರೀನಿವಾಸ ಕಾರ್ಕಳ ( ಶ್ರೀನಿ ಕಾಲಂ)
ನಾನು ಹುಟ್ಟುವಾಗ ಸ್ವತಂತ್ರ ಭಾರತಕ್ಕೆ ಕೇವಲ 14 ರ ಹದಿಹರೆಯ. ನಾನು ಶಾಲೆಗೆ ಸೇರುವಾಗ ಕೇವಲ 20 ರ ಯೌವನ. ‘ಸ್ವಾತಂತ್ರ್ಯ ದಿನಾಚರಣೆ’ ಎಂಬ ಪದ ಮೊದಲಿಗೆ ನನ್ನ ಕಿವಿಗೆ ಬಿದ್ದುದು ಶಾಲೆಯಲ್ಲಿ. ಮನೆಯಲ್ಲಿಯಾಗಲೀ, ಶಾಲೆಯಲ್ಲಿಯಾಗಲೀ ನಮಗೆ ಬೇಕಾದಂತೆ ಬದುಕುವ ಯಾವ ಅವಕಾಶವೂ ಇರದ ನಮಗೆ, ಈ ‘ಸ್ವಾತಂತ್ರ್ಯ’ ಎಂಬ ಪದದ ಅರ್ಥವೇ ಆಗುತ್ತಿರಲಿಲ್ಲ. ಸ್ವಾತಂತ್ರ್ಯ ಬಿಡಿ, ಅಮೂರ್ತತೆಯನ್ನು ಕಲ್ಪಿಸಿಕೊಳ್ಳಲಾಗದ ಎಳವೆಯ ದಿನಗಳಲ್ಲಿ ‘ಭಾರತ’ ಎಂದರೇ ಅರ್ಥವಾಗುತ್ತಿರಲಿಲ್ಲ. ಶಂಕರನಾರಾಯಣ, ಸಿದ್ದಾಪುರದಂತೆ ಅದೂ ಒಂದು ಪುಟ್ಟ ಊರು ಎಂದೇ ಅಂದುಕೊಂಡಿದ್ದೆ. ಇನ್ನು, ಸ್ವಾತಂತ್ರ್ಯ, ಸ್ವಾತಂತ್ರ್ಯಕ್ಕಾಗಿ ಹೋರಾಟ, ಬಲಿದಾನ ಇತ್ಯಾದಿ ದೊಡ್ಡ ದೊಡ್ಡ ಪದಗಳು ಅರ್ಥವಾಗುವುದಾದರೂ ಹೇಗೆ?
ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಭಾತ ಫೇರಿ ನಡೆಯುತ್ತಿತ್ತು. ಮೆರವಣಿಗೆಯಲ್ಲಿ ‘ಭಾರತ್ ಮತಾಕೀ ಜೈ’ ಅನ್ನುತ್ತಿದ್ದೆವು (ಅದು ಮಾತಾಕೀ ಎಂದು ಗೊತ್ತಿರಲಿಲ್ಲ). ‘ಝಂಡಾ ಊಂಚಾ ರಹೇ ಹಮಾರಾ ವಿಜಯೀವಿಶ್ವತಿ ರಂಗಾಪ್ಯಾರಾ’ ಎಂದು ಯಾರೋ ಹೇಳಿದ್ದನ್ನು ಅನುಕರಿಸುತ್ತಿದ್ದೆವು (ಅದು ತಿರಂಗಾ ಪ್ಯಾರಾ ಎಂದು ಗೊತ್ತಿರಲಿಲ್ಲ). ಸ್ವಾತಂತ್ರ್ಯ ಹೋರಾಟದ ಬಗ್ಗೆ ಶಿಕ್ಷಕರು ಅಥವಾ ಗಣ್ಯ ಅತಿಥಿಯೊಬ್ಬರಿಂದ ಭಾಷಣ ಇರುತ್ತಿತ್ತು. ನಮ್ಮ ಗಮನವೆಲ್ಲ ಇದ್ದುದು ಮಾತ್ರ ಕಾರ್ಯಕ್ರಮದ ಕೊನೆಯಲ್ಲಿ ವಿತರಿಸಲಾಗುವ ಸಿಹಿತಿನಿಸಿನತ್ತ.
ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿ ಪ್ರಭಾವ
ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಕುರಿತ ಪುಟ್ಟ ಪುಸ್ತಕವೊಂದನ್ನು ಓದಲು ಕೊಡುತ್ತಿದ್ದರು. ಅದರ ಮುಖಪುಟದಲ್ಲಿ ಗಾಂಧಿ ಅಜ್ಜನ ಕೋಲನ್ನು ಪುಟ್ಟ ಮಗುವೊಂದು ಹಿಡಿದುಕೊಂಡು, ಅವರನ್ನು ಕರೆದುಕೊಂಡು ಹೋಗುವ ಚಿತ್ರ ಇತ್ತು. ಗಾಂಧಿಯ ಜೀವನದ ಬಗ್ಗೆ ಅದರಲ್ಲಿ ಸರಳವಾಗಿ ವಿವರಿಸಲಾಗಿತ್ತು. ಗಾಂಧಿ ಅಜ್ಜನನ್ನು ಗುಂಡಿಟ್ಟು ಕೊಂದ ಕತೆ ಕೇಳಿ ನಾವು ಕಣ್ಣೀರಾಗುತ್ತಿದ್ದೆವು. ಗಾಂಧಿಯನ್ನು ಕೊಂದ ನಾಥೂರಾಮ ಗೋಡ್ಸೆ ಮಹಾ ಕೆಟ್ಟವ ಅನಿಸುತ್ತಿತ್ತು, ಆತನ ಬಗ್ಗೆ ಅಸಾಧ್ಯ ಸಿಟ್ಟು ಬರುತ್ತಿತ್ತು.
ಭಾರತದ ಸ್ವಾತಂತ್ರ್ಯ ಹೋರಾಟದ ಕತೆ ಹೇಳುವಾಗ ಶಿಕ್ಷಕರು ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ, ಸುಭಾಸ್ ಚಂದ್ರ ಬೋಸ್, ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಸರೋಜಿನಿ ನಾಯ್ಡು ಮೊದಲಾದವರ ಹೆಸರು ಹೇಳುತ್ತಿದ್ದರು. ಆಗ ಅವರೆಲ್ಲರ ಬಗ್ಗೆ ನಮ್ಮಲ್ಲಿ ಗೌರವ ಭಾವನೆ ಮೂಡುತ್ತಿತ್ತು.
ಆ ಕಾಲದಲ್ಲಿ ನಮ್ಮ ಜತೆ ಇದ್ದ ಶಿಕ್ಷಕರ ಸಹಿತ ಹಿರಿಯರೆಲ್ಲರೂ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ್ದವರು. ಹಾಗಾಗಿ, ಅವರಲ್ಲಿ ಹೆಚ್ಚಿನವರು ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ ಹೀಗೆ ಸ್ವಾತಂತ್ರ್ಯ ಚಳುವಳಿಯನ್ನು ಕಣ್ಣಾರೆ ಕಂಡವರು. ಕೆಲವರಂತೂ ಅದರಲ್ಲಿ ನೇರವಾಗಿ ಭಾಗವಹಿಸಿದವರು. ಹಾಗಾಗಿ, ಸ್ವಾತಂತ್ರ್ಯ ಹೋರಾಟ, ಗಾಂಧಿ ಎಂದಾಕ್ಷಣ ಅವರೆಲ್ಲರೂ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದರು. ಗಾಂಧಿ, ಸ್ವಾತಂತ್ರ್ಯ ಇತ್ಯಾದಿ ವಿಚಾರಗಳಲ್ಲಿ ಅತ್ಯಂತ ಸ್ಫೂರ್ತಿಯುತವಾಗಿ ಮಾತನಾಡುತ್ತಿದ್ದರು.
ಗಾಂಧಿ ಕಾಲದವರಾದುದರಿಂದ ಆ ಹೆಚ್ಚಿನ ಹಿರಿಯರಲ್ಲಿ ಗಾಂಧಿ ಪ್ರಭಾವ ದಟ್ಟವಾಗಿ ಕಾಣುತ್ತಿತ್ತು. ಬಿಳಿಯ ಖಾದಿ ಉಡುಗೆ, ಬಿಳಿಯ ಟೋಪಿ ಧರಿಸುತ್ತಿದ್ದ ಅವರಲ್ಲಿ ಸರಳತೆ, ಪ್ರಾಮಾಣಿಕತೆ, ಸಜ್ಜನಿಕೆ, ಸತ್ಯ, ಅಹಿಂಸೆ ಇತ್ಯಾದಿ ಮಾನವೀಯ ಗುಣಗಳು ಸಾಮಾನ್ಯವಾಗಿತ್ತು. ನೈತಿಕ ಪ್ರಜ್ಞೆಯೊಂದು ಸದಾ ಅವರನ್ನು ಎಚ್ಚರದಲ್ಲಿಡುತ್ತಿತ್ತು. ಸ್ವಾರ್ಥ, ಭ್ರಷ್ಟಾಚಾರ ಕಂಡರಾಗುತ್ತಿರಲಿಲ್ಲ ಅವರಿಗೆ. ಇದರಿಂದಾಗಿಯೇ ಆ ಕಾಲದ ಸಾಮಾಜಿಕ ಸ್ವಾಸ್ಥ್ಯ ಚೆನ್ನಾಗಿತ್ತು.
ಕಾಲ ಬದಲಾಯಿತು
ಕ್ರಮೇಣ ಭಾರತದ ಸ್ವಾತಂತ್ರ್ಯಕ್ಕೆ ವಯಸಾಗುತ್ತಾ ಬಂತು. ಸ್ವಾತಂತ್ರ್ಯ ಯೋಧರು, ಸ್ವಾತಂತ್ರ್ಯ ಪೂರ್ವಕ್ಕೆ ಸೇರಿದವರು ನಿರ್ಗಮಿಸುತ್ತಾ ಹೋದರು. ಸಾರ್ವಜನಿಕ ಬದುಕಿನಲ್ಲಿ, ವಿಶೇಷವಾಗಿ ರಾಜಕೀಯ ಕ್ಷೇತ್ರದಲ್ಲಿ ಗಾಂಧಿ ಪ್ರಭಾವ ಕಡಿಮೆಯಾಗುತ್ತಾ ಹೋಯಿತು. ಸೇವೆಯ ಕ್ಷೇತ್ರ ಅನಿಸಿಕೊಂಡಿದ್ದ ರಾಜಕೀಯ ಕ್ಷೇತ್ರ ಲಾಭದ ಕ್ಷೇತ್ರವಾಯಿತು. ಕೇವಲ ದುಡ್ಡು ಮಾಡುವುದಕ್ಕಾಗಿಯೇ ಭ್ರಷ್ಟರೆಲ್ಲ ರಾಜಕೀಯಕ್ಕೆ ಬರಲಾರಂಭಿಸಿದರು. ಅಧಿಕಾರವೇ ಮುಖ್ಯವಾಯಿತು. ಸೇವಾ ಮನೋಭಾವ ಕಡಿಮೆಯಾಯಿತು.
ಸರ್ವಧರ್ಮ ಸಮಭಾವ, ಸರ್ವೇ ಜನಾಃ ಸುಖಿನೋ ಭವಂತು, ವಸುದೈವ ಕುಟುಂಬಕಂ ಎಂಬ ನಮ್ಮ ಭವ್ಯ ಪರಂಪರೆ, ಇತಿಹಾಸದ ನೆನಪುಗಳನ್ನು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮಹತ್ತ್ವವನ್ನು, ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಜೀವನದ ಕತೆಗಳನ್ನು ಎಳೆಯರಿಗೆ ದಾಟಿಸುವಲ್ಲಿ ನಮ್ಮ ಹಿರಿಯರು ದೊಡ್ಡ ಪ್ರಮಾಣದಲ್ಲಿ ವಿಫಲರಾದರು. ಇದನ್ನು ನಿರಂತರ ಮಾಡಿಕೊಂಡು ಬರೆಬೇಕಾಗಿದ್ದ ಶಿಕ್ಷಣ ಕ್ಷೇತ್ರದ ಆದ್ಯತೆಯೇ ಬದಲಾಯಿತು. ಅದು ಅಕ್ಷರಸ್ಥರನ್ನು ಉತ್ಪಾದಿಸಿತೇ ಹೊರತು, ವಿದ್ಯಾವಂತರನ್ನು ಉತ್ಪಾದಿಸಲಿಲ್ಲ.
ಈಗ ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದೆ. ‘ತೋಟ ಸಿಂಗಾರ ಒಳಗೆ ಗೋಳಿ ಸೊಪ್ಪು’ ಎಂಬಂತೆ ಆಡಂಬರ ಎದ್ದು ಕಾಣಿಸುತ್ತಿದೆ. ಭವ್ಯ ಗುಡಿಯಿದೆ, ಒಳಗೆ ದೇವರಿಲ್ಲ. ಹೊಸ ದುಬಾರಿ ಸಂಸತ್ ಭವನ ಕಟ್ಟಲಾಗಿದೆ, ಅದರೊಳಗೆ ಪ್ರಜಾತಂತ್ರಕ್ಕೆ ಜಾಗವಿಲ್ಲ.
ಗಾಂಧಿ ಈಗ ವಿಲನ್
ಗಾಂಧಿ ಪ್ರೇರಿತ ಸತ್ಯ, ನ್ಯಾಯ, ಅಹಿಂಸೆ, ಪ್ರಾಮಾಣಿಕತೆಯ ಗುಣಗಳು ಈಗ ವಿರಳಾತಿ ವಿರಳ. ಗೋಡ್ಸೆ ಹೀರೋ, ಗಾಂಧಿ ವಿಲನ್. ಗಾಂಧಿಯನ್ನು ಬಹಿರಂಗವಾಗಿಯೇ ನಿಂದಿಸುವ ಮತ್ತು ಗೋಡ್ಸೆಯನ್ನು ಆರಾಧಿಸುವ ಸಿದ್ಧಾಂತ ಈಗ ದೇಶವನ್ನು ಆಳುತ್ತಿದೆ. ‘ಗೋಡ್ಸೆ ಮುರ್ದಾಬಾದ್’ ಎನ್ನಲು ಬಿಜೆಪಿ ಪರಿವಾರದ ನಾಯಕರಿಗೆ ಹೇಳಿ ನೋಡಿ. ಅವರು ಹೇಳುವುದಿಲ್ಲ. ಸ್ವಾತಂತ್ರ್ಯ ಹೋರಾಟದ ಕಾರಣಕ್ಕೆ ಸರಿಸುಮಾರು 10 ವರ್ಷ ಜೈಲಿನಲ್ಲಿದ್ದ ನೆಹರೂ ಅವರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಗೇಟ್ ಪಾಸ್ ನೀಡಲಾಗಿದೆ. ಗಾಂಧಿಯ ನೆನಪುಗಳ ಮೇಲೆ ಸರಕಾರವೇ ಬುಲ್ ಡೋಜರ್ ಓಡಿಸುತ್ತಿದೆ.
ಗಾಂಧಿ ಬಗ್ಗೆ ಒಂದು ಒಳ್ಳೆಯ ಮಾತು ಬರೆಯಿರಿ ಸಾಕು. ನಿಂದನೆಯ ನೂರು ಕಮೆಂಟ್ ಗಳು ಬರುತ್ತವೆ. ಅದೂ, ಏನೇನೂ ಓದಿಕೊಂಡಿರದ, ಏನೇನೂ ಅರಿಯದ, ನಿನ್ನೆ ಮೊನ್ನೆ ಹುಟ್ಟಿದ ಮಕ್ಕಳಂತಿರುವವರಿಂದ.! ಗಾಂಧಿ ಪುಣ್ಯ ಜಯಂತಿಯಂದು, ಗಾಂಧಿ ಜನ್ಮದಿನದಂದು ‘ಗೋಡ್ಸೆ ಜಿಂದಾಬಾದ್’ ಹ್ಯಾಷ್ ಟ್ಯಾಗ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತದೆ. ವಿದೇಶದಲ್ಲಿ ಗಾಂಧಿ ಪ್ರತಿಮೆಯ ಮುಂದೆ ತಲೆಬಾಗುವ ಪ್ರಧಾನಿ ನರೇಂದ್ರ ಮೋದಿಯವರು, ದೇಶದಲ್ಲಿ ಗಾಂಧಿ ಕೊಲೆಗಡುಕನ ಗುರು, ಗಾಂಧಿ ಕೊಲೆಯ ಆರೋಪಿ ಸಾವರ್ಕರ್ ಪ್ರತಿಮೆಯ ಮುಂದೆ ತಲೆಬಾಗುತ್ತಾರೆ.
ಹೊಸ ತಲೆಮಾರಿಗೆ ಸ್ವಾತಂತ್ರ್ಯದ ಮಹತ್ತ್ವದ ಅರಿವಿಲ್ಲ. ಅದು ಹೇಗೆ ಬಂತು ಎಂಬುದು ಗೊತ್ತಿಲ್ಲ. ಪ್ರಜಾತಂತ್ರದ ಬೆಲೆಯ ತಿಳಿವಿಲ್ಲ. ಪ್ರಜಾತಂತ್ರ ಬೇಕೋ ಸರ್ವಾಧಿಕಾರ ಬೇಕೋ ಎಂಬ ಪ್ರಶ್ನೆ ಮುಂದಿಟ್ಟರೆ ಹೊಸ ತಲೆಮಾರಿನ ಹೆಚ್ಚಿನವರು ಸರ್ವಾಧಿಕಾರ ಬೇಕು ಅನ್ನುತ್ತಾರೆ! ಸಮೀಕ್ಷೆಯೊಂದು ಈಗಾಗಲೇ ಇದನ್ನು ಬಹಿರಂಗಪಡಿಸಿದೆ.
ಜನರ ಸಂವಿಧಾನದತ್ತ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಎರಡನೆ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಂಧಿಯನ್ನು ಜೈಲಿಗೆ ಹಾಕಿದ ದೇಶದ್ರೋಹದ ಬ್ರಿಟಿಷ್ ಕಾನೂನನ್ನೇ ಇನ್ನಷ್ಟು ಉಗ್ರಗೊಳಿಸಿ ನಮ್ಮದೇ ಪ್ರಜೆಗಳ ಮೇಲೆಯೆ ಬಳಸಲಾಗುತ್ತಿದೆ. ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಭಾರತ ಸಂವಿಧಾನದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲು ಸಿದ್ಧತೆ ನಡೆದಿದೆ.
ಸ್ವಾತಂತ್ರ್ಯ ನಿಜಕ್ಕೂ ಇದೆಯೇ?
ಸ್ವಾತಂತ್ರ್ಯ ಅಂದರೆ ಏನು? ಸರಳವಾಗಿ ಹೇಳುವುದಾದರೆ, ಬೇರೆಯವರಿಗೆ ತೊಂದರೆ ಮಾಡದೆ, ನಮ್ಮ ಇಷ್ಟದಂತೆ ಬದುಕುವುದು. ನಮಗಿಷ್ಟವಾದುದನ್ನು ತಿನ್ನುವುದು, ನಮಗಿಷ್ಟವಾದ ಉಡುಪು ಧರಿಸುವುದು, ನಮಗಿಷ್ಟವಾದವರನ್ನು ಪ್ರೀತಿಸುವುದು, ಮದುವೆಯಾಗುವುದು. ಇಂತಹ ಒಂದು ಸ್ವಾತಂತ್ರ್ಯ ಸುಮಾರು ಒಂದು ದಶಕದ ಹಿಂದಿನ ವರೆಗೂ ಇತ್ತು. ಅದು ಈಗ ಇದೆಯೇ? ನೀವು ಇಂಥದ್ದೇ ಆಹಾರ ಸೇವಿಸಬೇಕು, ಇಂತಹ ಉಡುಪನ್ನೇ ಧರಿಸಬೇಕು ಎಂದು ಈಗ ಆಗ್ರಹಿಸುತ್ತಿಲ್ಲವೇ? ನೀವು ಮತಧರ್ಮ ಮೀರಿ ಯಾರನ್ನು ಬೇಕಾದರೂ ಮದುವೆಯಾಗಹೊರಟರೆ ಅದಕ್ಕೆ ಮತೀಯ ಸಂಘಟನೆಗಳು ಬಿಡಿ, ಸರಕಾರವೇ ಕಾನೂನುಗಳ ಮೂಲಕ ಅಡ್ಡಿಪಡಿಸುತ್ತಿಲ್ಲವೇ? ಲವ್ ಜಿಹಾದ್ ನಿಷೇಧ, ಮತಾಂತರ ನಿಷೇಧದ ಹೆಸರಿನಲ್ಲಿ ನಡೆಯುತ್ತಿರುವುದು ಏನು?
ದೇಶ ಅಂದರೆ ಮಣ್ಣಲ್ಲ, ಜನರು. ಕುಲ, ಜಾತಿ, ಮತಧರ್ಮ, ಲಿಂಗ ಮೀರಿ ಎಲ್ಲ ಜನರು. ಈ ಎಲ್ಲ ಜನರು ಖುಷಿಯಿಂದಿದ್ದಾಗ, ಎಲ್ಲರನ್ನೂ ಸಮಾನತೆ ಮತ್ತು ಸಹೋದರ ಭಾವದೊಂದಿಗೆ ನೋಡಿಕೊಂಡಾಗ ಮಾತ್ರ ಅಲ್ಲಿ ಸ್ವಾತಂತ್ರ್ಯಕ್ಕೆ, ಸಂಭ್ರಮಕ್ಕೆ ಅರ್ಥ. ಅದು ಈಗ ಇದೆಯೇ?
ಉದ್ಯೋಗಕ್ಕಾಗಿ ಕಾಯುತ್ತಿರುವ ಲಕ್ಷ ಲಕ್ಷ ವಿದ್ಯಾವಂತ ಯುವಜನರಿಗೆ ಯಾವ ಸ್ವಾತಂತ್ರ್ಯ ಸಂಭ್ರಮ? ಬೆಳೆದ ಬೆಳೆ ವಿಫಲವಾಗಿಯೋ ಸೂಕ್ತ ಬೆಲೆ ಸಿಗದೆಯೋ ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವ ರೈತರಿಗೆ ಯಾವ ಸ್ವಾತಂತ್ರ್ಯ ಸಂಭ್ರಮ? ಕಾರ್ಖಾನೆಗಳು ಮುಚ್ಚಿ ಬೀದಿಪಾಲಾಗುತ್ತಿರುವ ಕಾರ್ಮಿಕರಿಗೆ ಯಾವ ಸ್ವಾತಂತ್ರ್ಯ ಸಂಭ್ರಮ?
ಗೋರಕ್ಷಣೆಯ ಹೆಸರಿನಲ್ಲಿ ಬಡಿದು ಸಾಯಿಸಲ್ಪಟ್ಟವರ ಮನೆಯವರಿಗೆ ಯಾವ ಸ್ವಾತಂತ್ರ್ಯ ಸಂಭ್ರಮ? ಹರ್ಯಾಣಾದಲ್ಲಿ ಸರಕಾರವೇ ಬುಲ್ ಡೋಜರ್ ಒಡಿಸಿ ಸಾವಿರಾರು ಮನೆಗಳನ್ನು ಒಡೆದು ಹಾಕಿತಲ್ಲ, ಅಲ್ಲಿ ಬೀದಿಪಾಲಾದವರಿಗೆ ಯಾವ ಸ್ವಾತಂತ್ರ್ಯ ಸಂಭ‍್ರಮ? ಅವರು ಎಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು? ಮಣಿಪುರದಲ್ಲಿ ನೂರುದಿನಗಳಿಗಿಂತಲೂ ಅಧಿಕ ಕಾಲದಿಂದ ಹಿಂಸೆಯ ದಳ್ಳುರಿಯಲ್ಲಿ ಬೆಂದು ಹೋಗುತ್ತಿರುವವರಿಗೆ, ಅಕ್ಲಾಕ, ರೋಹಿತ್ ವೇಮುಲಾನ ಮನೆಯವರಿಗೆ, ಜೈಪುರ ಮುಂಬೈ ರೈಲಿನಲ್ಲಿ ಆರ್ ಪಿ ಎಫ್ ಕಾನ್ ಸ್ಟೇಬಲ್ ನಿಂದ ಗುಂಡೇಟಿಗೆ ಬಲಿಯಾದ ಅಮಾಯಕರ ಮನೆಯವರಿಗೆ, ಹಾತರಸ್ ನ ಯುವತಿಯ ಮನೆಯವರಿಗೆ ಯಾವ ಸ್ವಾತಂತ್ರ್ಯ ಸಂಭ್ರಮ?
‘ಸಂಭ‍್ರಮ’ವೇನೋ ಇದೆ, ಆದರೆ ‘ಸ್ವಾತಂತ್ರ್ಯ’ವೇ ಇಲ್ಲವಾಗಿದೆ
ಉಮರ್ ಖಾಲಿದ್ ಸಹಿತ ಅನೇಕ ವಿದ್ವಜ್ಜನರನ್ನು, ಮಾನವ ಹಕ್ಕುಗಳ ಹೋರಾಟಗಾರರನ್ನು, ಪತ್ರಕರ್ತರನ್ನು ಜೈಲಿನಲ್ಲಿಡಲಾಗಿದೆ. ಮಣಿಪುರ ನೂರಕ್ಕೂ ಹೆಚ್ಚು ದಿನದಿಂದ ಹೊತ್ತಿ ಉರಿಯುತ್ತಿದೆ. ಅಲ್ಲಿ ನಡೆದಿರುವುದು ನೂರೈವತ್ತಕ್ಕೂ ಅಧಿಕ ಸಾವು, ಸಾವಿರಾರು ಮನೆ ಧ್ವಂಸ, ಐವತ್ತು ಸಾವಿರಕ್ಕೂ ಅಧಿಕ ಮಂದಿ ನಿರ್ಗತಿಕರು!
ಇಡೀ ದೇಶವೇ ಸೂತಕದ ಮನೆಯಂತಾಗಿರುವ ಇಂತಹ ಹೊತ್ತಿನಲ್ಲಿ ದೇಶದ ಪ್ರಧಾನಿಗಳು ಸಂತೋಷದಿಂದಿದ್ದಾರೆ, ನಗುತ್ತಿದ್ದಾರೆ, ಹಾಸ್ಯ ಮಾಡುತ್ತಿದ್ದಾರೆ, ಅಪಹಾಸ್ಯ ಮಾಡುತ್ತಿದ್ದಾರೆ, ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿ, ಮನೆ ಮನೆಯಲ್ಲಿ ತ್ರಿವರ್ಣ ಧ‍್ವಜ ಹಾರಿಸಿ, ಸೋಶಿಯಲ್ ಮೀಡಿಯಾದ ಡಿಪಿಯಲ್ಲಿ ತ್ರಿವರ್ಣ ಬಾವುಟ ಹಾಕಿಕೊಳ್ಳಿ ಎಂದು ಕರೆಕೊಡುತ್ತಾರೆ!
ಸ್ವಾತಂತ್ರ್ಯವನ್ನು ಗಳಿಸುವುದು ಎಷ್ಟು ಕಷ್ಟವೋ, ಅದನ್ನು ಉಳಿಸಿಕೊಳ್ಳುವುದು ಅದಕ್ಕಿಂತಲೂ ಹೆಚ್ಚು ಕಷ್ಟ ಎಂಬುದು ಸ್ವಾತಂತ್ರ್ಯದ ಈ 75 ವರ್ಷಗಳಲ್ಲಿ ಅರ್ಥವಾಗುತ್ತಿದೆ. ಪ್ರಜಾತಂತ್ರವನ್ನು, ಸಂವಿಧಾನವನ್ನು, ಸ್ವಾತಂತ್ರ್ಯವನ್ನು ನಾಶಪಡಿಸಲು ಪ್ರಭುತ್ವವೇ ಟೊಂಕ ಕಟ್ಟಿ ನಿಂತಿರುವ ಕಾರಣದಿಂದಲೇ, ಈಗ ಸ್ವಾತಂತ್ರ್ಯ ದಿನೋತ್ಸವದ ಅದ್ದೂರಿ ಕಾರ್ಯಕ್ರಮಗಳಲ್ಲಿ ‘ಸಂಭ‍್ರಮ’ವೇನೋ ಕಾಣುತ್ತಿದೆ, ಆದರೆ ‘ಸ್ವಾತಂತ್ರ್ಯ’ವೇ ಇಲ್ಲವಾಗಿದೆ.
ಶ್ರೀನಿವಾಸ ಕಾರ್ಕಳ
ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.